LIC Stock Market Debut: 949 ರೂ.ಗೆ ಹಂಚಿದ್ದ ಎಲ್​ಐಸಿ ಷೇರು ಶೇ 9ರಷ್ಟು ಕಡಿಮೆಗೆ 867 ರೂಪಾಯಿಯಲ್ಲಿ ಮಾರುಕಟ್ಟೆ ಲಿಸ್ಟಿಂಗ್

| Updated By: Digi Tech Desk

Updated on: May 17, 2022 | 11:36 AM

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಷೇರು ವಿತರಣೆ ಬೆಲೆಗಿಂತ ಶೇ 9ರಷ್ಟು ರಿಯಾಯಿತಿಯಲ್ಲಿ 867 ರೂಪಾಯಿಗೆ ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ. ಆ ಬಗ್ಗೆ ವಿವರ ಇಲ್ಲಿದೆ.

LIC Stock Market Debut: 949 ರೂ.ಗೆ ಹಂಚಿದ್ದ ಎಲ್​ಐಸಿ ಷೇರು ಶೇ 9ರಷ್ಟು ಕಡಿಮೆಗೆ 867 ರೂಪಾಯಿಯಲ್ಲಿ ಮಾರುಕಟ್ಟೆ ಲಿಸ್ಟಿಂಗ್
ಸಾಂದರ್ಭಿಕ ಚಿತ್ರ
Follow us on

ಎಲ್​ಐಸಿ ಲಿಸ್ಟಿಂಗ್ (LIC Listing) ಬಗ್ಗೆ ಇದ್ದ ಆತಂಕ ನಿಜವಾಗಿದೆ. ಮೇ 17ನೇ ತಾರೀಕಿನ ಮಂಗಳವಾರದಂದು ಬಿಎಸ್​ಇಯಲ್ಲಿ 867.20 ರೂಪಾಯಿಗೆ ಲಿಸ್ಟ್ ಆಗಿರುವ ಈ ಷೇರು, ಶೇ 8.62 ಅಥವಾ 81.80 ರೂಪಾಯಿ ಕಡಿಮೆಗೆ ಮಾರುಕಟ್ಟೆಗೆ ಬಂದಿದೆ. ಅಂದಹಾಗೆ ಈ ಐಪಿಒ ಅನ್ನು ಪ್ರತಿ ಷೇರಿಗೆ 949 ರೂಪಾಯಿಯಂತೆ ಹಂಚಲಾಗಿತ್ತು. ಆ ನಂತರ ಅಲ್ಲಿನ ಹಂತದಿಂದ ಶೇ 5ರಷ್ಟು ಚೇತರಿಸಿಕೊಂಡು, 912 ರೂಪಾಯಿಗೆ, ಆದರೆ ಆಗಲೂ ಹಂಚಿಕೆ ಬೆಲೆಯಾದ 949 ರೂಪಾಯಿಗಿಂತ ಶೇ 4ರಷ್ಟು ಕೆಳಗಿನ ದರಕ್ಕೆ ವಹಿವಾಟು ನಡೆಸಿತು. ಇನ್ನು ಎನ್​ಎಸ್​ಇಯಲ್ಲಿ 872 ರೂಪಾಯಿಗೆ ಪದಾರ್ಪಣೆ ಮಾಡಿತು. ಆ ಮೂಲಕ ವಿತರಣೆ ಬೆಲೆಗಿಂತ ಶೇ 8.11ರಷ್ಟು ಕಡಿಮೆಗೆ ಮಾರುಕಟ್ಟೆಯಲ್ಲಿ ಲಿಸ್ಟ್ ಆಯಿತು. ಇದಾದ ಮೇಲೆ ಚೇತರಿಸಿಕೊಂಡು, 914.75 ರೂಪಾಯಿ ತಲುಪಿತು.

ಇತ್ತ ಭಾರತದ ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ದಿನವಾದ ಮಂಗಳವಾರ ಸಹ ಏರಿಕೆ ದಾಖಲಿಸಿದ್ದು, ಹೂಡಿಕೆದಾರರ ಗಮನ ಎಲ್​ಐಸಿ ಲಿಸ್ಟಿಂಗ್ ಕಡೆ ಇದೆ. ಈ ಮಧ್ಯೆ ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆಯ ಕುಸಿತ ಕಂಡಿದೆ. ಅಂದಹಾಗೆ ದಶಕಗಳಲ್ಲೇ ಗರಿಷ್ಠ ಮಟ್ಟದ ಹಣದುಬ್ಬರ ದರದ ಗರಿಷ್ಠ ಮಟ್ಟದಿಂದ ಹೊರಬರಲುಪ್ರಮುಖ ಕೇಂದ್ರ ಬ್ಯಾಂಕ್​ಗಳು ಆಕ್ರಮಣಕಾರಿಯಾಗಿ ಬಡ್ಡಿ ದರ ಏರಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಸ್ಟ್ಯಾಗ್​ಫ್ಲೇಷನ್ (ಆರ್ಥಿಕತೆಯಲ್ಲಿ ಹೆಚ್ಚಿನ ಹಣದುಬ್ಬರ, ಇದರ ಜತೆಗೆ ಅತಿ ಹೆಚ್ಚಿನ ನಿರುದ್ಯೋಗ ಮತ್ತು ನಿಶ್ಚಲವಾದ ಬೇಡಿಕೆಯಿಂದ ಸೃಷ್ಟಿಯಾಗುವ ಸ್ಥಿತಿ) ಬಗ್ಗೆ ಹೂಡಿಕೆದಾರರು ಚಿಂತೆಗೆ ಗುರಿ ಆಗಿದ್ದಾರೆ.

ಎಲ್​ಐಸಿ ಸಾರ್ವಜನಿಕ ವಿತರಣೆಯನ್ನು ಮೇಲ್​ಸ್ತರದ ದರ ಬ್ಯಾಂಡ್​ಗೆ (ರೂ. 902ರಿಂದ 949), ಅಂದರೆ 949 ರೂಪಾಯಿಗೆ ಮಾಡಲಾಗಿತ್ತು. ಈ ಮೂಲಕ ಸರ್ಕಾರವು ಎಲ್​ಐಸಿಯಲ್ಲಿನ ತನ್ನ ಶೇ 3.5ರಷ್ಟು ಪಾಲನ್ನು ಮಾರಿ, 21,000 ಕೋಟಿ ರೂಪಾಯಿ ಸಂಗ್ರಹಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣದ ಹೊರತಾಗಿಯೂ ಎಲ್​ಐಸಿ ಐಪಿಒಗೆ ಸಾರ್ವಜನಿಕರಿಂದ ಭರ್ಜರಿ ಸ್ಪಂದನೆ ಬಂದಿತ್ತು. ಈ ಆಫರ್ ಹತ್ತಿರ ಹತ್ತಿರ 3 ಪಟ್ಟು ಬೇಡಿಕೆ ಪಡೆದಿತ್ತು. ಅದರಲ್ಲಿ ಅತಿ ಹೆಚ್ಚು ಬಿಡ್, ಅಂದರೆ ಆರು ಪಟ್ಟು ಹೆಚ್ಚು ಹೆಚ್ಚು ಬೇಡಿಕೆ ಸಲ್ಲಿಸಿದ್ದವರು ಎಲ್​ಐಸಿ ಪಾಲಿಸಿದಾರರು.

ಈ ವರದಿ ಸಿದ್ಧವಾಗುವ ಹೊತ್ತಿಗೆ ಎನ್​ಎಸ್​ಇಯಲ್ಲಿ ಷೇರು ಶೇ 4.75ರಷ್ಟು ಅಥವಾ 45.10 ರೂಪಾಯಿ ಕಡಿಮೆಗೆ, 903.90 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO: ಪ್ರತಿ ಷೇರಿಗೆ 949ರ ದರದಲ್ಲಿ ಎಲ್​ಐಸಿ ಐಪಿಒ ಮೂಲಕ 20,560 ಕೋಟಿ ರೂಪಾಯಿ ಸಂಗ್ರಹ

Published On - 10:55 am, Tue, 17 May 22