LIC IPO: ಎಲ್ಐಸಿ ಲಿಸ್ಟಿಂಗ್ ಮೇ 17ಕ್ಕೆ; ಹಂಚಿದ್ದಕ್ಕಿಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬರಬಹುದೇ ಇನ್ಷೂರೆನ್ಸ್ ಕಂಪೆನಿ
ಎಲ್ಐಸಿ ಲಿಸ್ಟಿಂಗ್ ಮೇ 17ನೇ ತಾರೀಕಿನಂದು ಇದೆ. ಈ ಷೇರು ರಿಯಾಯಿತಿ ದರದಲ್ಲೇ ಮಾರುಕಟ್ಟೆಗೆ ಬರಬಹುದು ಎಂಬ ನಿರೀಕ್ಷೆ ಇದೆ.
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಲಿಸ್ಟಿಂಗ್ ಮೇ 17ನೇ ತಾರೀಕಿನಂದು ಆಗುತ್ತಿದೆ. ಇದರ ಸಬ್ಸ್ಕ್ರಿಪ್ಷನ್ ಮೇ 4ನೇ ತಾರೀಕಿನ 9ನೇ ತಾರೀಕಿನ ತನಕ ಇತ್ತು. ಇದಕ್ಕೆ ಮಾರುಕಟ್ಟೆಯಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದಿತ್ತು. ಲಿಸ್ಟಿಂಗ್ ನಂತರದಲ್ಲಿ ಸರ್ಕಾರಿ ಸ್ವಾಮ್ಯದ ಈ ಕಂಪೆನಿ 6 ಲಕ್ಷ ಕೋಟಿ ರೂಪಾಯಿ ಮೌಲ್ಯಮಾಪನದ ಜತೆಗೆ ಐದನೇ ಅತಿದೊಡ್ಡ ಕಂಪೆನಿ ಆಗಿದೆ. ಆದರೆ ಎಲ್ಐಸಿಯ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಬಿಟ್ಟುಕೊಡುತ್ತಿರುವ ಸುಳಿವು ಗಮನಿಸಿದರೆ ಐಪಿಒ ವಿತರಣೆ ಬೆಲೆಗಿಂತ ಕಡಿಮೆಗೆ ಲಿಸ್ಟಿಂಗ್ ಆಗುವಂತಿದೆ. ಮೇ 12ನೇ ತಾರೀಕಿನಂದು ಎಲ್ಐಸಿ ಐಪಿಒ ಹಂಚಿಕೆ ಮುಕ್ತಾಯಗೊಂಡಿದೆ.
ಇಂದಿನ ಎಲ್ಐಸಿ ಗ್ರೇ ಮಾರ್ಕೆಟ್ ಪ್ರೀಮಿಯಂ
ಎಲ್ಐಸಿಯ ಅನ್ಲಿಸ್ಟೆಡ್ ಷೇರುಗಳು ಭಾನುವಾರದಂದು 936ಕ್ಕೆ ವಹಿವಾಟು ಆಗುತ್ತಿತ್ತು. ಐಪಿಒ ಮೇಲ್ಸ್ತರದ ದರ ಬ್ಯಾಂಡ್ಗಿಂತ 13 ರೂಪಾಯಿ ಕಡಿಮೆಗೆ ವಹಿವಾಟು ಆಗುತ್ತಿತ್ತು. ಇದು ಸತತ ನಾಲ್ಕನೇ ದಿನ ಎಲ್ಐಸಿ ಜಿಎಂಪಿ ನಕಾರಾತ್ಮಕವಾಗಿ ವಹಿವಾಟು ನಡೆಸಿತು. ಎಲ್ಐಸಿ ಐಪಿಒ ದರದ ಬ್ಯಾಂಡ್ ಪ್ರತಿ ಈಕ್ವಿಟಿ ಷೇರಿಗೆ 902ರಿಂದ 949 ರೂಪಾಯಿ ನಿಗದಿ ಆಗಿತ್ತು. ಸದ್ಯದ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಮೈನಸ್ 13 ಇದ್ದು, ಕಳೆದ ವಾರ ಇದ್ದ ಮೈನಸ್ 25 ಇತ್ತು.
ಹೂಡಿಕೆದಾರರಿಗೆ ಇದರ ಅರ್ಥ ಏನು?
ಗ್ರೇ ಮಾರ್ಕೆಟ್ ಎಂಬುದು ಅನಧಿಕೃತ ಮಾರ್ಕೆಟ್. ಷೇರು ಅಧಿಕೃತವಾಗಿ ವಿನಿಮಯ ಕೇಂದ್ರದಲ್ಲಿ ಲಿಸ್ಟಿಂಗ್ ಆಗುವ ಮುನ್ನ ವೈಯಕ್ತಿಕವಾಗಿ ಐಪಿಒ ಷೇರುಗಳ ಖರೀದಿ/ಮಾರಾಟ ಮಾಡಬಹುದು. ಗ್ರೇ ಮಾರ್ಕೆಟ್ ಪ್ರೀಮಿಯಂ ಎಂಬುದು ಪ್ರೀಮಿಯಂ ಮೊತ್ತವಾಗಿರುತ್ತದೆ, ಐಪಿಒ ಷೇರುಗಳು ಗ್ರೇ ಮಾರ್ಕೆಟ್ನಲ್ಲಿ ವಹಿವಾಟು ನಡೆಸುತ್ತದೆ. ಲಿಸ್ಟಿಂಗ್ ದಿನದ ವಹಿವಾಟು ಹೇಗೆ ನಡೆಯುತ್ತದೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ವಿಶ್ಲೇಷಕರ ಪ್ರಕಾರ, ವಿದೇಶೀ ಮತ್ತು ಸಾಂಸ್ಥಿಕ ಹೂಡಿಕೆದಾರರಿಂದ ಪ್ರೋತ್ಸಾಹಕರವಾದ ಪ್ರತಿಕ್ರಿಯೆ ದೊರೆತಿಲ್ಲ. ಇದೇ ಕಾರಣಕ್ಕೆ ಮುಖ್ಯವಾಗಿ ಗ್ರೇ ಮಾರ್ಕೆಟ್ನಲ್ಲಿ ಬೇಡಿಕೆ ಕುದುರಿಲ್ಲ. ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆ ಮಾರಾಟದ ಒತ್ತಡವು ಪರಿಸ್ಥಿತಿ ಹದಗೆಡಲು ಕಾರಣ ಆಗಿದೆ.
ಷೇರು ಮಾರುಕಟ್ಟೆ ತಜ್ಞರು ಹೇಳುವಂತೆ, ಗ್ರೇ ಮಾರ್ಕೆಟ್ ಪ್ರೀಮಿಯಂ ಎಂಬುದು ಸಾರ್ವಜನಿಕ ವಿತರಣೆಯ ಯಶಸ್ಸು ಅಥವಾ ವೈಫಲ್ಯದ ಆದರ್ಶ ಸೂಚಕ ಏನಲ್ಲ. ಜಿಎಂಪಿ ಎಂಬುದು ಅನಧಿಕೃತ ಹಾಗೂ ಅನಿಯಂತ್ರಿತ ಡೇಟಾ. ಗ್ರೇ ಮಾರ್ಕೆಟ್ನಲ್ಲಿನ ಬೇಡಿಕೆ ಹೇಗಿದೆ ಎಂಬುದನ್ನು ನೋಓಡುವ ಬದಲಿಗೆ ಹೂಡಿಕೆದಾರರು ಕಂಪೆನಿಯ ಬ್ಯಾಲೆನ್ಸ್ಶೀಟ್ ನೋಡಬೇಕು, ಆಗಷ್ಟೇ ಆ ಕಂಪೆನಿಯ ಮೂಲಭೂತ ಚಿತ್ರಣ ದೊರೆಯುವುದಕ್ಕೆ ಸಾಧ್ಯ.
ಲಿಸ್ಟಿಂಗ್ ದಿನವೇ ಲಾಭ ಬಂದಲ್ಲಿ ಮಾರಿಬಿಡಬೇಕಾ?
ಈ ತನಕದ ಚಿತ್ರಣ ಹೇಗಿದೆ ಅಂದರೆ, ಯಾರಿಗೆ ರಿಯಾಯಿತಿ ದರದಲ್ಲಿ ಐಪಿಒ ಹಂಚಿಕೆ ಆಗಿಲ್ಲವೋ ಅವರಿಗೆ ಲಾಭ ಸಿಗುವುದು ಕಷ್ಟ ಇದೆ. ಕಳೆದ ಹಲವು ದಿನದಿಂದ ಜಿಎಂಪಿ ನೆಗೆಟಿವ್ ಆಗಿಯೇ ಇದೆ. ಪಾಲಿಸಿದಾರರು, ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಿರುವುದರಿಂದ ಲಾಭ ಆಗಬಹುದು. ಬಹುತೇಕರ ಅಭಿಪ್ರಾಯದಂತೆ ಲಿಸ್ಟಿಂಗ್ ರಿಯಾಯಿತಿಯಲ್ಲೇ ಆಗುತ್ತದೆ. ರೀಟೇಲ್ ಹೂಡಿಕೆದಾರರು, ಪಾಲಿಸಿದಾರರು ಅಲ್ಪ ಪ್ರಮಾಣದ ಲಾಭವನ್ನು ಕಾಣಬಹುದು. ಪಾಲಿಸಿದಾರರಿಗೆ ಪ್ರತಿ ಷೇರಿಗೆ 60 ರೂಪಾಯಿ, ರೀಟೇಲ್ ಹೂಡಿಕೆದಾರರು ಮತ್ತು ಎಲ್ಐಸಿ ಸಿಬ್ಬಂದಿಗೆ ಪ್ರತಿ ಷೇರಿಗೆ 45 ರೂಪಾಯಿ ರಿಯಾಯಿತಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Mon, 16 May 22