ಕರ್ನಾಟಕದಿಂದ ಹೊಸ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್ ನೀತಿ; ಬೇರೆ ಬೇರೆ ಜಿಲ್ಲೆಗಳಲ್ಲಿ ಟೆಕ್ ವಲಯ ಅಭಿವೃದ್ಧಿಗೆ ಯೋಜನೆ

|

Updated on: Nov 19, 2024 | 5:21 PM

Bengaluru Tech Summit 2024: ಕರ್ನಾಟಕದಲ್ಲಿ ಹೆಚ್ಚು ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳ ಸ್ಥಾಪನೆಗೆ ಉತ್ತೇಜಿಸಲು ಸರ್ಕಾರ ಹೊಸ ನೀತಿ ಜಾರಿಗೆ ತಂದಿದೆ. ಬೆಂಗಳೂರಿನಾಚೆ ಜಿಸಿಸಿಗಳನ್ನು ಸ್ಥಾಪಿಸಿದರೆ ಸರ್ಕಾರ ಒಂದಷ್ಟು ನೆರವು ಒದಗಿಸಲಿದೆ. 500 ಹೊಸ ಜಿಸಿಸಿಗಳು, 3.5 ಹೊಸ ಉದ್ಯೋಗಗಳ ಸೃಷ್ಟಿಯು ಈ ನೀತಿಯ ಗುರಿಯಾಗಿದೆ.

ಕರ್ನಾಟಕದಿಂದ ಹೊಸ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್ ನೀತಿ; ಬೇರೆ ಬೇರೆ ಜಿಲ್ಲೆಗಳಲ್ಲಿ ಟೆಕ್ ವಲಯ ಅಭಿವೃದ್ಧಿಗೆ ಯೋಜನೆ
ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್
Follow us on

ಬೆಂಗಳೂರು, ನವೆಂಬರ್ 19: ಇಲ್ಲಿ ನಡೆಯುತ್ತಿರುವ 27ನೇ ಟೆಕ್ ಸಮಿಟ್​ನಲ್ಲಿ (Bengaluru Tech Summit 2024) ಕರ್ನಾಟಕವು ಹೊಸ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್ (ಜಿಸಿಸಿ) ನೀತಿಯನ್ನು ಅನಾವರಣಗೊಳಿಸಿದೆ. ರಾಜ್ಯದಲ್ಲಿ 500 ಹೊಸ ಕೇಪಬಿಲಿಟಿ ಸೆಂಟರ್​ಗಳನ್ನು ಸ್ಥಾಪಿಸುವುದು ಮತ್ತು ಮೂರೂವರೆ ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಈ ನೀತಿಯ ಗುರಿಯಾಗಿದೆ. ಅಷ್ಟೇ ಅಲ್ಲ, ಬೆಂಗಳೂರಿನಲ್ಲೇ ದಟ್ಟವಾಗಿ ಹಬ್ಬಿರುವ ಟೆಕ್ ವಲಯವನ್ನು ಬೇರೆ ಬೇರೆ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಕರ್ನಾಟಕದಲ್ಲಿ ಸದ್ಯ 875 ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳಿವೆ. ಇವುಗಳಿಂದ ರಾಜ್ಯದ ಆರ್ಥಿಕತೆಗೆ 22.2 ಬಿಲಿಯನ್ ಡಾಲರ್​ನಷ್ಟು ಕೊಡುಗೆ ಸಿಗುತ್ತಿದೆ. ಆರು ಲಕ್ಷ ಜನರಿಗೆ ಇವು ಉದ್ಯೋಗ ಒದಗಿಸಿವೆ. 2029ರ ವೇಳೆಗೆ 875ರ ಜೊತೆಗೆ ಇನ್ನೂ 500 ಜಿಸಿಸಿಗಳನ್ನು ಸ್ಥಾಪನೆಯಾಗಬೇಕು. ಈ ಸೆಂಟರ್​ಗಳಿಂದ ರಾಜ್ಯದ ಆರ್ಥಿಕತೆಗೆ 50 ಬಿಲಿಯನ್ ಡಾಲರ್ ಕೊಡುಗೆ ಸಿಗುವಂತಾಗಬೇಕು ಎನ್ನುವ ಗುರಿ ಇದೆ.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿಟ್ 2024: ನಿಪುಣ ಕರ್ನಾಟಕ ಯೋಜನೆಗೆ ಕೈಜೋಡಿಸಿದ ಟೆಕ್ ಕಂಪನಿಗಳು; ಮೈಕ್ರೋಸಾಫ್ಟ್, ಇಂಟೆಲ್, ಐಬಿಎಂನಿಂದ 1 ಲಕ್ಷ ಯುವಕರಿಗೆ ತರಬೇತಿ

ಮೈಸೂರು, ಮಂಗಳೂರು ಮೊದಲಾದೆಡೆ ಜಿಸಿಸಿ ಸ್ಥಾಪನೆ?

ಕರ್ನಾಟಕದಲ್ಲಿರುವ ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿವೆ. ನಗರದ ಮೇಲೆ ಒತ್ತಡ ಕಡಿಮೆ ಮಾಡಲು ಮತ್ತು ರಾಜ್ಯದ ಇತರ ಪ್ರದೇಶಗಳಲ್ಲೂ ಅಭಿವೃದ್ಧಿ ತರಬೇಕೆಂಬ ಉದ್ದೇಶದಿಂದ ಜಿಸಿಸಿಗಳನ್ನು ಬೇರೆ ಕೆಲ ರಾಜ್ಯಗಳಲ್ಲೂ ಸ್ಥಾಪನೆಗೆ ಉತ್ತೇಜಿಸಲು ಸರ್ಕಾರ ನೀತಿ ರೂಪಿಸಿದೆ. ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ, ತುಮಕೂರು ಮತ್ತು ಶಿವಮೊಗ್ಗ ನಗರಗಳನ್ನು ಜಿಸಿಸಿ ಸ್ಥಾಪನೆಗೆ ಗುರುತಿಸಲಾಗಿದೆ.

ಇಲ್ಲಿ ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳನ್ನು ಸ್ಥಾಪಿಸುವ ಸಂಸ್ಥೆಗಳಿಗೆ ಸರ್ಕಾರ ವಿಶೇಷ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಲಿದೆ. ಶೇ 50ರಷ್ಟು ಇಂಟರ್ನ್​ಶಿಪ್ ಸ್ಟೈಪೆಂಡ್ ಅನ್ನು ಭರಿಸುವುದು, ಇನ್ನೋವೇಶನ್ ಲ್ಯಾಬ್ ಮತ್ತು ಟೆಕ್ನಾಲಜಿ ಸೆಂಟರ್​ಗಳಿಗೆ ಫಂಡಿಂಗ್ ಮಾಡುವುದು ಇತ್ಯಾದಿ ನೆರವನ್ನು ಸರ್ಕಾರ ನೀಡಲಿದೆ. ಇದು ಬೆಂಗಳೂರಿನ ಆಚೆ ಸ್ಥಾಪನೆಯಾಗುವ ಜಿಸಿಸಿಗಳಿಗೆ ಸರ್ಕಾರ ನೀಡುವ ಉತ್ತೇಜನವಾಗಿದೆ.

ಇದನ್ನೂ ಓದಿ: ಚಿಪ್ ತಯಾರಿಕೆಯಲ್ಲಿ ರಾಸಾಯನಿಕ, ಖನಿಜ, ಅನಿಲಗಳ ಬಳಕೆ; ಭಾರತಕ್ಕೆ ಭರ್ಜರಿ ಅವಕಾಶ

ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್​ಗಳು

ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್ ನೀತಿಯ ಭಾಗವಾಗಿ ಕರ್ನಾಟಕ ಸರ್ಕಾರವು ಮೂರು ತಂತ್ರಜ್ಞಾನ ಪಾರ್ಕ್​ಗಳ ಅಭಿವೃದ್ಧಿಗೊಳಿಸುವ ಯೋಜನೆಯನ್ನೂ ಹೊರಹಾಕಿದೆ. ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ಸ್ ಎನ್ನಲಾಗುವ ಮೂರು ಟೆಕ್ನಾಲಜಿ ಪಾರ್ಕ್​ಗಳಲ್ಲಿ ಒಂದು ಬೆಂಗಳೂರಿನಲ್ಲಿ ಇರಲಿದೆ. ಇನ್ನೆರಡು ಟೆಕ್ ಪಾರ್ಕ್​ಗಳು ಬೇರೆ ನಗರಗಳಲ್ಲಿ ಇರಲಿವೆ.

ಏನಿದು ಕೇಪಬಿಲಿಟಿ ಸೆಂಟರ್​?

ಗ್ಲೋಬಲ್ ಕೇಪಬಿಲಿಟಿ ಸೆಂಟರ್​ವೊಂದು ಬೇರೆ ಸಂಸ್ಥೆಯ ಅಂಗವಾಗಿರುತ್ತದೆ. ಮಾತೃಸಂಸ್ಥೆಗೆ ಅಗತ್ಯವಾಗಿರುವ ಸೇವೆಗಳನ್ನು ಈ ಜಿಸಿಸಿ ಒದಗಿಸುತ್ತದೆ. ರಿಸರ್ಚ್, ಐಟಿ ಸಪೋರ್ಟ್ ಇತ್ಯಾದಿ ಯಾವುದೇ ಸೇವೆಯು ಇದರ ವ್ಯಾಪ್ತಿಗೆ ಬರುತ್ತದೆ. ವಿದೇಶಗಳಲ್ಲಿರುವ ಪ್ರತಿಭಾ ಸಮೂಹವನ್ನು ಬಳಸಿಕೊಳ್ಳಲು ಮತ್ತು ಕಡಿಮೆ ವೆಚ್ಚದಲ್ಲಿ ಸೇವೆ ಪಡೆಯಲು ಒಂದು ಕಂಪನಿಗೆ ಜಿಸಿಸಿ ಅನುಕೂಲ ಮಾಡಿಕೊಡುತ್ತದೆ. ಒಂದು ರೀತಿಯಲ್ಲಿ ಇದು ತನ್ನದೇ ಕಂಪನಿಗೆ ಹೊರಗುತ್ತಿಗೆ ಕೊಟ್ಟಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ