ಬೆಂಗಳೂರು ಟೆಕ್ ಸಮಿಟ್ 2024: ನಿಪುಣ ಕರ್ನಾಟಕ ಯೋಜನೆಗೆ ಕೈಜೋಡಿಸಿದ ಟೆಕ್ ಕಂಪನಿಗಳು; ಮೈಕ್ರೋಸಾಫ್ಟ್, ಇಂಟೆಲ್, ಐಬಿಎಂನಿಂದ 1 ಲಕ್ಷ ಯುವಕರಿಗೆ ತರಬೇತಿ
Nipuna Karnataka initiative to develop skilled workers: ಬೆಂಗಳೂರು ಟೆಕ್ ಸಮಿಟ್ನಲ್ಲಿ ಕರ್ನಾಟಕ ಸರ್ಕಾರ 5 ಟೆಕ್ ಕಂಪನಿಗಳ ಜೊತೆ ಎಂಒಯು ಒಪ್ಪಂದ ಮಾಡಿಕೊಂಡಿದೆ. ಮೈಕ್ರೋಸಾಫ್ಟ್, ಇಂಟೆಲ್, ಐಬಿಎಂ, ಅಕ್ಸೆಂಚರ್ ಮತ್ತು ಬಿಎಫ್ಎಸ್ಐ ಕನ್ಸಾರ್ಟಿಯಂ ಜೊತೆ ಸರ್ಕಾರ ಒಪ್ಪಂದಕ್ಕೆ ಸಹಿಹಾಕಿದೆ. ನಿಪುಣ ಕರ್ನಾಟಕ ಯೋಜನೆ ಅಡಿ ಈ ಕಂಪನಿಗಳು ಒಂದು ವರ್ಷದಲ್ಲಿ 1 ಲಕ್ಷ ಮಂದಿಗೆ ವಿವಿಧ ಟೆಕ್ ಕೌಶಲ್ಯಗಳ ತರಬೇತಿ ಒದಗಿಸಲಿವೆ.
ಬೆಂಗಳೂರು, ನವೆಂಬರ್ 19: ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳು ಕರ್ನಾಟಕ ಸರ್ಕಾರದ ನಿಪುಣ ಯೋಜನೆಗೆ ಕೈಜೋಡಿಸಿವೆ. ಬೆಂಗಳೂರು ಟೆಕ್ ಸಮಿಟ್ 2024 ವೇಳೆ ಟೆಕ್ ಕಂಪನಿಗಳ ಜೊತೆ ಕರ್ನಾಟಕ ಸರ್ಕಾರ ಐದು ತಿಳಿವಳಿಕೆ ಒಪ್ಪಂದಗಳನ್ನು (ಎಂಒಯು) ಮಾಡಿಕೊಂಡಿದೆ. ನಿಪುಣ ಕರ್ನಾಟಕ ಯೋಜನೆ ಅಡಿಯಲ್ಲಿ ಆಗಿರುವ ಈ ಒಪ್ಪಂದದ ಪ್ರಕಾರ ತಂತ್ರಜ್ಞಾನ ಕಂಪನಿಗಳು ಮುಂದಿನ ಒಂದು ವರ್ಷದಲ್ಲಿ ಒಂದು ಲಕ್ಷ ಯುವಕ ಮತ್ತು ಯುವತಿಯರಿಗೆ ಆಧುನಿಕ ತಂತ್ರಜ್ಞಾನಗಳ ಬಗ್ಗೆ ತರಬೇತಿಗೆ ನೆರವಾಗಲಿವೆ.
ಟೆಕ್ ವಲಯಕ್ಕೆ ಅಗತ್ಯವಾಗಿರುವ ಕೌಶಲ್ಯವಂತ ವೃತ್ತಿಪರರನ್ನು ನಿರ್ಮಿಸುವ ಉದ್ದೇಶದಿಂದ ಸರ್ಕಾರವು ನಿಪುಣ ಕರ್ನಾಟಕ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಅಡಿ ತರಬೇತಿ ಪಡೆದವರಲ್ಲಿ ಕನಿಷ್ಠ ಶೇ. 70ರಷ್ಟು ಮಂದಿಗೆ ಉದ್ಯೋಗಾವಕಾಶ ಸಿಗಬೇಕೆಂಬುದು ಆಶಯ.
ಇದನ್ನೂ ಓದಿ: ಬ್ಯಾಂಕುಗಳಲ್ಲಿ ಸಾಲದರ ಹೆಚ್ಚಾಯಿತು; ಇನ್ನೂ ಬಹಳಷ್ಟು ಕಡಿಮೆ ಆಗಬೇಕು: ನಿರ್ಮಲಾ ಸೀತಾರಾಮನ್
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ವೇಳೆ ಆದ ಈ ತಿಳಿವಳಿಕೆ ಒಪ್ಪಂದಗಳ ಪ್ರಕಾರ ಮೈಕ್ರೋಸಾಫ್ಟ್ ಸಂಸ್ಥೆ ಡೀಪ್ ಟೆಕ್ ಬಗ್ಗೆ 10,000 ವ್ಯಕ್ತಿಗಳಿಗೆ ಒಂದು ವರ್ಷ ತರಬೇತಿ ಕೊಡಲಿದೆ. ಇನ್ನು, ಇಂಟೆಲ್ ಸಂಸ್ಥೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ 20,000 ವ್ಯಕ್ತಿಗಳಿಗೆ ತರಬೇತಿ ಕೊಡಲಿದೆ. ಐಬಿಎಂ, ಅಕ್ಸೆಂಚರ್ ಮತ್ತು ಬಿಎಫ್ಎಸ್ಐ ಕನ್ಸಾರ್ಟಿಯಂಗಳೂ ಬೇರೆ ಬೇರೆ ಟೆಕ್ ಕೌಶಲ್ಯಗಳ ತರಬೇತಿ ಕೊಡಲಿವೆ.
ಐಬಿಎಂ ಸಂಸ್ಥೆ ಎಐ ಮತ್ತು ಕ್ಲೌಡ್ ಟೆಕ್ನಾಲಜಿಯಲ್ಲಿ ಒಂದು ವರ್ಷದಲ್ಲಿ 50,000 ಮಂದಿಗೆ ತರಬೇತಿ ಕೊಡಲಿದೆ. ಅಕ್ಸೆಂಚರ್ ಸಂಸ್ಥೆಯು ಸೈಬರ್ ಸೆಕ್ಯೂರಿಟಿ, ಕ್ವಾಂಟಂ ಕಂಪ್ಯೂಟಿಂಗ್ ಇತ್ಯಾದಿ ಎಮರ್ಜಿಂಗ್ ಟೆಕ್ನಾಲಜಿಗಳಲ್ಲಿ ತರಬೇತಿ ಕೊಡಲಿದೆ.
ನಿಪುಣ ಕರ್ನಾಟಕ ಯೋಜನೆಗೆ ಕೈಜೋಡಿಸಿದ ಟೆಕ್ ಕಂಪನಿಗಳು
- ಮೈಕ್ರೋಸಾಫ್ಟ್: 10,000 ಮಂದಿಗೆ ಡೀಪ್ ಟೆಕ್ ತರಬೇತಿ.
- ಇಂಟೆಲ್: 20,000 ಮಂದಿಗೆ ಎಐ ತರಬೇತಿ
- ಅಕ್ಸೆಂಚರ್: 10,000 ಮಂದಿಗೆ ಎಮರ್ಜಿಂಗ್ ಟೆಕ್ನಾಲಜಿಯ ತರಬೇತಿ
- ಐಬಿಎಂ: 50,000 ಮಂದಿಗೆ ಎಐ ಮತ್ತು ಕ್ಲೌಡ್ ಟೆಕ್ನಾಲಜಿಯಲ್ಲಿ ತರಬೇತಿ
- ಬಿಎಫ್ಎಸ್ಐ ಕನ್ಸಾರ್ಟಿಯಂ: 10,000 ಮಂದಿಗೆ ಹಣಕಾಸು ಸೇವಾ ತಂತ್ರಜ್ಞಾನದಲ್ಲಿ ತರಬೇತಿ.
ಇದನ್ನೂ ಓದಿ: ದಿನಸಿ ಅಂಗಡಿಗಳಿಗೆ ಮುಳುವಾಗುತ್ತಿವೆಯಾ ಕ್ವಿಕ್ ಕಾಮರ್ಸ್ ಕಂಪನಿಗಳು? ರಾಜಕೀಯ ಅಪಾಯ ಗುರುತಿಸಿದ ಉದ್ಯಮಿ ಉದಯ್ ಕೋಟಕ್
ಬೆಂಗಳೂರು ಟೆಕ್ ಸಮಿಟ್ 2024 ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದೆ. ಇಲ್ಲಿ ಸರ್ಕಾರದ ಜೊತೆಗೆ ಒಪ್ಪಂದಗಳು ಮಾತ್ರವಲ್ಲದೆ, ವಿವಿಧ ವರ್ಕ್ಶಾಪ್, ಪ್ರಾಡಕ್ಟ್ ಬಿಡುಗಡೆ, ಸೆಮಿನಾರ್ ಇತ್ಯಾದಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಅಮೆರಿಕ, ರಷ್ಯಾ, ಕೊರಿಯಾ, ಜಪಾನ್, ಇಸ್ರೇಲ್ ಮೊದಲಾದ ಹಲವು ದೇಶಗಳಿಂದ ತಂತ್ರಜ್ಞಾನ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಅನಾವರಣಗೊಳಿಸಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ