900ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದ ರೀತಿಗೆ Better.comನ ಸಿಇಒ ವಿಶಾಲ್ ಗರ್ಗ್ ಕ್ಷಮೆಯನ್ನು ಯಾಚಿಸಿದ್ದಾರೆ. ಕಳೆದ ವಾರ ಝೂಮ್ ಕರೆ ಮೂಲಕ 900 ಜನರನ್ನು ವಜಾಗೊಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಆ ಕ್ರಮವನ್ನು ಕೈಗೊಂಡ ರೀತಿಗೆ ಕ್ಷಮೆ ಯಾಚಿಸಿದ್ದಾರೆ. ಸಾಫ್ಟ್‌ಬ್ಯಾಂಕ್ ಬೆಂಬಲಿತ ಈ ಕಂಪೆನಿಯು ವಿಡಿಯೋ ಕರೆಯಲ್ಲಿ ಸುಮಾರು ಶೇ 9ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ತೀವ್ರ ಟೀಕೆಗೆ ಒಳಗಾದ ವಿಶಾಲ್ ಗರ್ಗ್, ವಜಾ ಮಾಡುವ ಸುದ್ದಿಯನ್ನು ತಿಳಿಸಿದ ರೀತಿಯಲ್ಲಿ ಪ್ರಮಾದ ಆಗಿದೆ ಎಂದು ಹೇಳಿದ್ದಾರೆ.
“ಈ ಸುದ್ದಿಯನ್ನು ತಿಳಿಸಿದ ವಿಧಾನವು ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ,” ಎಂದು ಗಾರ್ಗ್ ಮಂಗಳವಾರದ ಪತ್ರದಲ್ಲಿ ತಿಳಿಸಿದ್ದಾರೆ. ಅಮೆರಿಕ ಮತ್ತು ಭಾರತದಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರದ ಹಿಂದಿನ ಕಾರಣಗಳು ಮಾರುಕಟ್ಟೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಎಂದು ಅವರು ಉಲ್ಲೇಖಿಸಿದ್ದಾರೆ.
Better.com ಮೇ ತಿಂಗಳಲ್ಲಿ ಬ್ಲಾಂಕ್-ಚೆಕ್ ಫರ್ಮ್ ಅರೋರಾ ಅಕ್ವಿಸಿಷನ್ ಕಾರ್ಪ್‌ನೊಂದಿಗಿನ ವಿಲೀನದ ಮೂಲಕ ಐಪಿಒಗೆ ಹೋಗುವುದಾಗಿ ಹೇಳಿತು. ಈ ಮೂಲಕ ಮೌಲ್ಯವು 7.7 ಶತಕೋಟಿ ಡಾಲರ್ ಆಗಿದೆ. ಈ ತಿಂಗಳ ಆರಂಭದಲ್ಲಿ, ಸಾಫ್ಟ್‌ಬ್ಯಾಂಕ್ ನೀಡಿದ ಮಾತಿನಂತೆಯೇ 1.5 ಬಿಲಿಯನ್ ಡಾಲರ್ನ ಅರ್ಧದಷ್ಟನ್ನು Better.comಗೆ ಒದಗಿಸಲು ನಿಯಮಗಳನ್ನು ತಿದ್ದುಪಡಿ ಮಾಡಲಾಯಿತು. ಬೇರೆ ಕಂಪೆನಿಯ ಜತೆಗೆ ವ್ಯವಹಾರ ಮುಗಿಯುವ ತನಕ ಕಾಯದೆ ತಕ್ಷಣವೇ ಒದಗಿಸುವುದಾಗಿ ಹೇಳಿದೆ. Better.com 2016ರಲ್ಲಿ ಸ್ಥಾಪನೆಯಾಯಿತು. ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಮನೆಮಾಲೀಕರಿಗೆ ಅಡಮಾನ ಮತ್ತು ವಿಮಾ ಉತ್ಪನ್ನಗಳನ್ನು ಒದಗಿಸುತ್ತದೆ.
ಇದನ್ನೂ ಓದಿ: Job Loss: ಝೂಮ್ ಮೀಟಿಂಗ್ನಲ್ಲೇ 900ಕ್ಕೂ ಹೆಚ್ಚು ಜನರ ಕೆಲಸ ಹೋಗುವ ಸುದ್ದಿ ಹೇಳಿದ ಸಿಇಒ; ಹೇಗಿದೆ ಉದ್ಯೋಗ ಮಾರುಕಟ್ಟೆ?