AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Loss: ಝೂಮ್​ ಮೀಟಿಂಗ್​ನಲ್ಲೇ 900ಕ್ಕೂ ಹೆಚ್ಚು ಜನರ ಕೆಲಸ ಹೋಗುವ ಸುದ್ದಿ ಹೇಳಿದ ಸಿಇಒ; ಹೇಗಿದೆ ಉದ್ಯೋಗ ಮಾರುಕಟ್ಟೆ?

ಕಂಪೆನಿಯೊಂದರ ಸಿಇಒ ಝೂಮ್​ ಮೀಟಿಂಗ್ ಮೂಲಕವೇ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೆಗೆಯುವ ಬಗ್ಗೆ ತಿಳಿಸಿದ್ದಾರೆ. ಭಾರತದಲ್ಲಿ ಉದ್ಯೋಗ ಮಾರುಕಟ್ಟೆ ಹೇಗಿದೆ ಎಂಬ ವಿಶ್ಲೇಷಣೆ ಇಲ್ಲಿದೆ.

Job Loss: ಝೂಮ್​ ಮೀಟಿಂಗ್​ನಲ್ಲೇ 900ಕ್ಕೂ ಹೆಚ್ಚು ಜನರ ಕೆಲಸ ಹೋಗುವ ಸುದ್ದಿ ಹೇಳಿದ ಸಿಇಒ; ಹೇಗಿದೆ ಉದ್ಯೋಗ ಮಾರುಕಟ್ಟೆ?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Dec 06, 2021 | 11:54 AM

Share

ಒಂದು ತಿಂಗಳ ಸಂಬಳ ಬರುವುದು ನಿಧಾನವಾದರೆ ಹೇಗಪ್ಪಾ ಮನೆ ಸಂಭಾಳಿಸುವುದು ಎಂಬ ಚಿಂತೆ ಕಾಡುತ್ತದೆ. ಅಂಥದ್ದರಲ್ಲಿ ಒಂದು ಆನ್​ಲೈನ್​ ಮೀಟಿಂಗ್​ನಲ್ಲಿ ಏಕಾಏಕಿ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೆಗೆದುಬಿಟ್ಟರೆ ಹೇಗಾಗಬಹುದು? ಕಳೆದ ಬುಧವಾರ Better.comನ 900ಕ್ಕೂ ಹೆಚ್ಚು ಸಿಬ್ಬಂದಿಯನ್ನು ಅದರ ಸಿಇಒ ಝೂಮ್​ ವೆಬಿನಾರ್​ ಮೂಲಕವೇ ಕೆಲಸದಿಂದ ತೆಗೆದಿದ್ದಾರೆ ಎಂದು ಸಿಎನ್​ಎನ್ ವರದಿ ಮಾಡಿದೆ. ಸಿಇಒ ವಿಶಾಲ್ ಗರ್ಗ್​ ಆ ವೇಳೆ ಮಾತನಾಡುತ್ತಾ, ಕಂಪೆನಿಯ ಒಟ್ಟು ಸಿಬ್ಬಂದಿ ಸಂಖ್ಯೆಯಲ್ಲಿ ಶೇ 9ರಷ್ಟು ತೆಗೆಯಲಾಗುವುದು ಎಂದಿದ್ದಾರೆ. ಒಂದು ವೇಳೆ ನಿಮಗೂ ಆ ಕರೆ ಬಂದಲ್ಲಿ ಕೆಲಸದಿಂದ ತೆಗೆಯುವಂಥ ದುರದೃಷ್ಟ ಗುಂಪಿನಲ್ಲಿ ನೀವು ಭಾಗವಾಗಲಿದ್ದೀರಿ ಎಂದು ಗರ್ಗ್​ ಹೇಳಿರುವುದಾಗಿ ವರದಿಯಾಗಿದೆ.

ಸ್ವತಃ ಮ್ಯಾನೇಜರ್​ಗಳೇ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಅಂದಹಾಗೆ ನ್ಯೂಯಾರ್ಕ್ ಮೂಲದ ಈ ಕಂಪೆನಿಯ ಸಿಇಒ ತುಂಬ ಭಾವುಕರಾಗಿದ್ದಂಥ ಝೂಮ್ ಮೀಟಿಂಗ್ ಅದು. ಈ ರೀತಿ ಎರಡನೇ ಬಾರಿಗೆ ಇಂಥ ನಿರ್ಧಾರ ಕೈಗೊಳ್ಳಬೇಕಿದೆ ಎಂದಿದ್ದಾರೆ. ಹಾರ್ವರ್ಡ್ ಬಿಜಿನೆಸ್ ರೀವ್ಯೂವ್ (HBR) ಪ್ರಕಾರ, ಕೊವಿಡ್​-19 ಉದ್ಯೋಗ ಮಾರುಕಟ್ಟೆಗೆ ಎಂದೂ ಮಾಯದಂಥ ಗಾಯ ಮಾಡಿದೆ. ಮ್ಯಾನೇಜರ್​ ಹಂತದಲ್ಲಿ ಇರುವವರಿಗೆ ತಮಗಿಂತ ಕೆಳಗೆ ಕೆಲಸ ಮಾಡುವವರನ್ನು ತೆಗೆದುಹಾಕುವ ಒತ್ತಡ ಮಾತ್ರ ಅಲ್ಲ, ಸ್ವತಃ ತಮ್ಮ ಹುದ್ದೆ ಉಳಿಯುವುದೋ ಇಲ್ಲವೋ ಎಂಬ ಆತಂಕ ಸಹ ಇದೆ.

ಕೊವಿಡ್​-19ನಿಂದಾಗಿ ಉದ್ಯೋಗ ನಷ್ಟ ಅನುಭವಿಸುತ್ತಿರುವ ಕ್ಷೇತ್ರಗಳನ್ನು ಪಟ್ಟಿ ಮಾಡುತ್ತಾ ಹೋದರೆ ಒಂದು ಕ್ಷಣ ಗಾಬರಿ ಎನಿಸುತ್ತದೆ. ಹೋಟೆಲ್, ಆತಿಥ್ಯ, ಪ್ರವಾಸೋದ್ಯಮ, ಮನರಂಜನೆ, ಈವೆಂಟ್ ಮ್ಯಾನೇಜ್​ಮೆಂಟ್, ವಾಹನದ ಬಿಡಿ ಭಾಗಗಳ ಉದ್ಯಮ, ವಿಮಾನ ಯಾನ…ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೋಟೆಲ್​, ಆತಿಥ್ಯ (ಹಾಸ್ಪಿಟಾಲಿಟಿ) ಅತಿ ದೊಡ್ಡ ಪೆಟ್ಟು ತಿಂದಿರುವ ಉದ್ಯಮಗಳು. ವ್ಯಾಪಾರವೇ ಆಗುತ್ತಿಲ್ಲವಾದ್ದರಿಂದ ವೆಚ್ಚ ಕಡಿತದ ಭಾಗವಾಗಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿರುವವರು, ದೀರ್ಘಾವಧಿ ವೇತನರಹಿತ ರಜಾ ನೀಡಿರುವವರು ಒಂದು ಕಡೆಯಾದಲ್ಲಿ, ವಹಿವಾಟನ್ನೇ ನಿಲ್ಲಿಸಿರುವವರ ಸಂಖ್ಯೆ ಕೂಡ ಜಾಸ್ತಿ ಇದೆ. ಸರ್ಕಾರದಿಂದ ಸಹ ಉದ್ಯೋಗ ಭರ್ತಿ ಮಾಡುವುದನ್ನು ಬಹುತೇಕ ನಿಲ್ಲಿಸಲಾಗಿದೆ.

ಕೊವಿಡ್ ಪೂರ್ವದ ಸ್ಥಿತಿಗೆ ಬರುವುದು ಅನುಮಾನ ಇನ್ನು ಚಿತ್ರಮಂದಿರಗಳಿಗೆ ತೆರಳುವುದಕ್ಕೆ ಜನರು ಈಗಲೂ ಭಯ ಪಡುತ್ತಾರೆ. ಮತ್ತೆ ಬರುತ್ತಾರೋ ಇಲ್ಲವೋ ಎಂಬ ಆತಂಕ ಆ ಕ್ಷೇತ್ರದಲ್ಲೇ ಇರುವ ಹಲವರಲ್ಲಿದೆ. ಅದಕ್ಕೆ ಪೂರಕವೇನೋ ಎಂಬಂತೆ ಒಟಿಟಿಗಳ ಜನಪ್ರಿಯತೆ ಜಾಸ್ತಿ ಆಗುತ್ತಿದೆ. ಭಾರತದಲ್ಲಿ ಮದುವೆಗಳು ಹಾಗೂ ಶುಭ ಸಮಾರಂಭಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುತ್ತವೆ. ಅಡುಗೆಯವರಿಂದ ಮೊದಲುಗೊಂಡು, ಹೂವಿನ ಅಲಂಕಾರ, ವಿಡಿಯೋಗ್ರಫಿ- ಫೋಟೋಗ್ರಫಿ ಸೇರಿದಂತೆ ಇತರ ಸಂಬಂಧಿತ ಖರ್ಚುಗಳ ಮೂಲಕ ಉದ್ಯೋಗ ಸೃಷ್ಟಿ ಆಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೊವಿಡ್ ಪೂರ್ವದ ಸ್ಥಿತಿಗೆ ಬರುವುದು ಅನುಮಾನವೇ ಎಂಬಂತಾಗಿದೆ.

ಆದರೆ, ಕೊವಿಡ್ ಲಸಿಕೆ ಹಾಕುತ್ತಿರುವ ವೇಗದಿಂದ ಹಾಗೂ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವುದರಿಂದ ಭರವಸೆ ಮೂಡಿದೆ. ಕಟ್ಟಡ ನಿರ್ಮಾಣ, ರಿಯಲ್​ ಎಸ್ಟೇಟ್, ಕೃಷಿ, ಮಾಹಿತಿ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಚಟುವಟಿಕೆ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಇವುಗಳ ಮೇಲೆ ಆಧಾರಪಟ್ಟ ಉದ್ಯಮಗಳೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಪೈಕಿ ಕೆಲವದರ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದು ಹಣದುಬ್ಬರ. ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ, ವಿಪರೀತ ಏರಿಳಿತಗಳು ಅನಿಶ್ಚಿತತೆ ತಂದಿದೆ. ವಾಹನೋದ್ಯಮದಲ್ಲಿ ಚಿಪ್​ಗಳ ಕೊರತೆ, ಉತ್ಪಾದನಾ ವಲಯದಲ್ಲಿ ವಿದ್ಯುತ್​ ದರ ಹೆಚ್ಚಳ ಸೇರಿ ಇತರ ಸವಾಲುಗಳು ಎದುರಾಗಿರುವುದರಿಂದ ಉದ್ಯೋಗ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ.

ವರ್ಕ್​ ಫ್ರಮ್​ ಹೋಮ್ ಟ್ರೆಂಡ್ ಬಂದಿದ್ದರಿಂದ ಬ್ರಾಡ್​ಬ್ಯಾಂಡ್, ಇಂಟರ್​ನೆಟ್​ ಸಲಕರಣೆಗಳು, ಹೋಮ್​ ಆಫೀಸ್ ಪೀಠೋಪಕರಣಗಳು ಇಂಥವಕ್ಕೆ ಬೇಡಿಕೆ ಬಂದಿದ್ದು ಹೌದು.

ಮಾಧ್ಯಮ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ ಆದರೆ, ಯಾವಾಗ ರಿಯಲ್ ಎಸ್ಟೇಟ್​, ವಾಹನೋದ್ಯಮ ಇತರ ಆರ್ಥಿಕ ಚಟುವಟಿಕೆಗಳು ಇಳಿಕೆ ಆಯಿತೋ ಆ ಸಂದರ್ಭದಲ್ಲಿ ಮುದ್ರಣ ಮಾಧ್ಯಮಗಳು ಅತಿ ದೊಡ್ಡ ನಷ್ಟ ಅನುಭವಿಸಿದವು. ಪ್ರಸಾರ ಸಂಖ್ಯೆ ಮೇಲೂ ಭಾರೀ ಪ್ರಭಾವ ಬೀರಿತು. ವೆಚ್ಚವನ್ನು ತಗ್ಗಿಸುವುದಕ್ಕೆ ಪುಟಗಳ ಸಂಖ್ಯೆ ಕಡಿಮೆ ಮಾಡುವುದು, ಸಿಬ್ಬಂದಿ ಸಂಖ್ಯೆ ಕಡಿತ, ವೇತನ ಕಡಿತದಂಥ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಕೊವಿಡ್​ ಕಾಣಿಸಿಕೊಂಡ ಮೇಲೆ ಪತ್ರಿಕೋದ್ಯಮ ತೊರೆದು ಬೇರೆ ಬೇರೆ ವೃತ್ತಿ-ವ್ಯಾಪಾರಗಳನ್ನು ಆರಂಭಿಸಿದವರು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತದೆ. ಅದೇ ಸಮಯದಲ್ಲಿ ಈಗಲೂ ಕೆಲಸಕ್ಕಾಗಿ ಹುಡುಕುತ್ತಿರುವವರೂ ಇದ್ದಾರೆ.

ಯಾವ ಪ್ರಮಾಣದಲ್ಲಿ ಉದ್ಯೋಗ ನಷ್ಟ ಆಗುತ್ತಿದೆ ಎಂಬುದರ ಅಂಕಿ-ಅಂಶಗಳನ್ನು ಖಾಸಗಿಯಾಗಿ ಸಮೀಕ್ಷೆ ಮೂಲಕ ಮತ್ತು ಕೇಂದ್ರ ಸರ್ಕಾರದಿಂದ ತಿಳಿಸಬೇಕಾಗುತ್ತದೆ. ಪಿಎಫ್​ನಿಂದ ಹಣ ವಿಥ್​ಡ್ರಾದ ಕಾರಣದ ಮೂಲಕ ಸಹ ಕೆಲ ಮಟ್ಟಿಗೆ ಉದ್ಯೋಗ ನಷ್ಟದ ಬಗ್ಗೆ ತಿಳಿಯಬಹುದು. ಆದರೆ ಅಸಂಘಟಿತ ವಲಯ ತುಂಬ ದೊಡ್ಡದಾದ್ದರಿಂದ ನಿಖರವಾದ ಅಂಕಿ-ಅಂಶ ದೊರೆಯುವುದಿಲ್ಲ. ಇನ್ನು ಈಗ ವೃತ್ತಿ ಜೀವನ ಆರಂಭಿಸಬೇಕು ಅಂತಿರುವವರಿಗೆ ಕೆಲಸ ಸಿಗುತ್ತಿದೆ. ಆದರೆ ಉತ್ತಮ ವೇತನ ದೊರೆಯುತ್ತಿಲ್ಲ ಎಂದು ದೂರುವವರು ಹೆಚ್ಚಾಗುತ್ತಿದ್ದಾರೆ.

ಇದನ್ನೂ ಓದಿ: Job Loss Insurance: ಉದ್ಯೋಗ ನಷ್ಟಕ್ಕೂ ಇದೆ ವಿಮೆ; ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು

Published On - 11:42 am, Mon, 6 December 21