ಕೊರೊನಾ ಎರಡನೇ ಅಲೆಗೆ ಭಾರತದ ಷೇರು ಮಾರುಕಟ್ಟೆ ಸೋಮವಾರ (ಏಪ್ರಿಲ್ 12, 2021) ತತ್ತರಿಸಿಹೋಗಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 1500ಕ್ಕೂ ಹೆಚ್ಚು ಪಾಯಿಂಟ್ ಕುಸಿದು, 48,000ಕ್ಕಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 466ಕ್ಕೂ ಹೆಚ್ಚು ಪಾಯಿಂಟ್ ಕುಸಿದು, 14,368 ಪಾಯಿಂಟ್ನೊಂದಿಗೆ ವ್ಯವಹಾರ ನಡೆಸುತ್ತಿತ್ತು. ಇದು ಬೆಳಗ್ಗೆ 11.45ರ ಹೊತ್ತಿಗಿನ ಅಪ್ಡೇಟ್ ಆಗಿದೆ. ಸೋಮವಾರ ಬೆಳಗ್ಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ 6 ಲಕ್ಷ ಕೋಟಿ ರೂಪಾಯಿ ಕೊಚ್ಚಿಹೋಗಿದೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 1.7 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದರೆ, 900 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತದಲ್ಲಿ ಕೋವಿಡ್- 19 ಸಕ್ರಿಯ ಪ್ರಕರಣಗಳ ಸಂಖ್ಯೆ 12 ಲಕ್ಷದ ಗಡಿ ದಾಟಿದೆ.
ಬಿಎಸ್ಇಯಲ್ಲಿನ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಬೆಳಗ್ಗೆ 9.30ರ ಸಮಯಕ್ಕೆ 203.59 ಲಕ್ಷ ಕೋಟಿ ರೂಪಾಯಿಗೆ ಕುಸಿಯಿತು. ಅಂದಹಾಗೆ ಶುಕ್ರವಾರದ ದಿನದ ಕೊನೆಗೆ ಮಾರ್ಕೆಟ್ ವ್ಯವಹಾರ ಮುಗಿಯುವ ಹೊತ್ತಿಗೆ 209.64 ಲಕ್ಷ ಕೋಟಿ ಇತ್ತು. ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಒಳಗೊಂಡ ಎಲ್ಲ ಷೇರುಗಳು ಕುಸಿತದ ಹಾದಿಯಲ್ಲಿದ್ದವು. ಇಂಡಸ್ಇಂಡ್ ಬ್ಯಾಂಕ್ ಶೇ 8, ಬಜಾಜ್ ಫೈನಾನ್ಸ್ ಶೇ 7.66, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 7.51, ಮಹೀಂದ್ರಾ ಅಂಡ್ ಮಹೀಂದ್ರಾ ಶೇ 4.83, ಬಜಾಜ್ ಫಿನ್ಸರ್ವ್ ಶೇ 4.60 ಕುಸಿತ ಕಂಡಿವೆ.
ಇಂಥ ಸನ್ನಿವೇಶದ ಮಧ್ಯೆ ಫಾರ್ಮಾಸ್ಯುಟಿಕಲ್ ವಲಯದ ಷೇರುಗಳಾದ ಸಿಪ್ಲಾ, ಡಿವೀಸ್ ಲ್ಯಾಬ್ಸ್, ಡಾ ರೆಡ್ಡೀಸ್ ಲ್ಯಾಬ್ಸ್ ಮತ್ತು ಎಫ್ಎಂಸಿಜಿ ವಲಯದ ಬ್ರಿಟಾನಿಯಾ ಕಂಪೆನಿ ಷೇರುಗಳು ಏರಿಕೆ ಕಂಡಿವೆ. ಇನ್ನು ಎನ್ಪಿಎ ಹೆಚ್ಚಾಗಬಹುದು ಎಂಬ ಆತಂಕದಲ್ಲಿ ನಿಫ್ಟಿ ಬ್ಯಾಂಕ್ ಸೂಚ್ಯಂಕವು 1536.05 ಅಥವಾ ಶೇ 4.73ರಷ್ಟು ಭಾರೀ ಪ್ರಮಾಣದಲ್ಲಿ ಕುಸಿತ ಕಂಡು, ನಾಲ್ಕು ತಿಂಗಳ ಕನಿಷ್ಠ ಮಟ್ಟವನ್ನು ಮುಟ್ಟಿದೆ.
ರೂಪಾಯಿ ಮೌಲ್ಯ 9 ತಿಂಗಳ ಕನಿಷ್ಠ ಮಟ್ಟಕ್ಕೆ
ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 75.14ರಲ್ಲಿ ವಹಿವಾಟು ನಡೆಸಿತು. ಇದು 9 ತಿಂಗಳ ಕನಿಷ್ಠ ಮಟ್ಟವಾಗಿದೆ. ಶುಕ್ರವಾರದ ದಿನದ ಕೊನೆಗೆ ರೂಪಾಯಿ ಮೌಲ್ಯ 74.74 ಇತ್ತು.
ಭಾರತದ ಕಾರ್ಪೊರೇಟ್ ಗಳಿಕೆಯ ಋತು ಇಂದಿನಿಂದ ಸಾಫ್ಟ್ವೇರ್ ಸೇವೆ ಒದಗಿಸುವ ಸಂಸ್ಥೆ ಟಿಸಿಎಸ್ನಿಂದ ಆರಂಭವಾಗಲಿದೆ. ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ಟಿಸಿಎಸ್ ಘೋಷಿಸುವ ನಿರೀಕ್ಷಿ ಇದೆ. ಇದರ ಹೊರತುಪಡಿಸಿ ಫೆಬ್ರವರಿಯ ಕೈಗಾರಿಕಾ ಉತ್ಪಾದನೆ, ಮಾರ್ಚ್ ತಿಂಗಳ ಗ್ರಾಹಕ ದರ ಸೂಚ್ಯಂಕದ ಹಣದುಬ್ಬರ ಇಂದು ಬಿಡುಗಡೆಯಾಗಲಿದೆ. ಮಾರ್ಚ್ ತಿಂಗಳ ಸಗಟು ದರ ಸೂಚ್ಯಂಕ ಹಣದುಬ್ಬರವು ಬುಧವಾರದಂದು ಘೋಷಣೆ ಆಗಲಿದೆ.
ಫಾರ್ಮಾ ಮತ್ತು ಐಟಿ ವಲಯಗಳಿಗೆ ಉತ್ತೇಜನ
ಆರೋಗ್ಯ ಸ್ಥಿತಿಯಲ್ಲಿನ ಸವಾಲು, ರೂಪಾಯಿ ಮೌಲ್ಯದ ಕುಸಿತದಿಂದ ಫಾರ್ಮಾ ಮತ್ತು ಐಟಿ ವಲಯಗಳಿಗೆ ಉತ್ತೇಜನವಾಗಿದೆ. ಮಾರುಕಟ್ಟೆಯು ಇಳಿಜಾರಿನ ಹಾದಿಯಲ್ಲಿ ಇದ್ದರೂ ಈ ಎರಡು ವಲಯಗಳು ಉತ್ತಮವಾಗಿ ಇರುವ ಸಾಧ್ಯತೆ ಹೆಚ್ಚಿದೆ. ಇನ್ನು ಆರ್ಥಿಕತೆ ಮೇಲೆ ಹೆಚ್ಚಿನ ಅವಲಂಬನೆ ಇರುವ ಷೇರುಗಳು ಒತ್ತಡದಲ್ಲಿ ಇರಲಿದೆ.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
(Due to corona second wave Indian stock market witness a bloodbath on Monday. Investors lost Rs 6 lakh crore of wealth. Rupee value at 9 month low. )