BRS Boycott: ಭಾರತ್ ರಾಷ್ಟ್ರ ಸಮಿತಿಯಿಂದ ಇಂದು ರಾಷ್ಟ್ರಪತಿ ಭಾಷಣ ಬಹಿಷ್ಕಾರ, ಎಎಪಿಯೂ ಬೆಂಬಲ?

President Address In Budget Session: ಕೇಂದ್ರ ಸರ್ಕಾರದ ಆಡಳಿತ ಎಲ್ಲಾ ರೀತಿಯಿಂದಲೂ ವಿಫಲವಾಗಿದೆ. ಈ ಕಾರಣಕ್ಕೆ ರಾಷ್ಟ್ರಪತಿಗಳ ಭಾಷಣ ಬಾಯ್ಕಾಟ್ ಮಾಡುತ್ತಿರುವುದಾಗಿ ಕೇಶವರಾವ್ ಹೇಳಿದ್ದಾರೆ. ಅಲ್ಲದೇ ಎಎಪಿ ಕೂಡ ಈ ಬಹಿಷ್ಕಾರ ನಿರ್ಧಾರಕ್ಕೆ ಬೆಂಬಲ ನೀಡುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

BRS Boycott: ಭಾರತ್ ರಾಷ್ಟ್ರ ಸಮಿತಿಯಿಂದ ಇಂದು ರಾಷ್ಟ್ರಪತಿ ಭಾಷಣ ಬಹಿಷ್ಕಾರ, ಎಎಪಿಯೂ ಬೆಂಬಲ?
ಕೆ ಚಂದ್ರಶೇಖರ್ ರಾವ್
Image Credit source: PTI
Edited By:

Updated on: Jan 31, 2023 | 8:15 AM

ಹೈದರಾಬಾದ್: ಸಂಸತ್​ನಲ್ಲಿ ಬಜೆಟ್ ಅಧಿವೇಶನ (Budget Session) ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ರಾಷ್ಟ್ರಪತಿಗಳ ಭಾಷಣವನ್ನು ಭಾರತ್ ರಾಷ್ಟ್ರ ಸಮಿತಿ (Bharat Rashtra Samiti) ಬಹಿಷ್ಕರಿಸುವ ಸಾಧ್ಯತೆ ಇದೆ. ಬಿಆರ್​ಎಸ್ ನಾಯಕ ಕೆ ಕೇಶವರಾವ್ ನಿನ್ನೆ ಸೋಮವಾರ ಈ ಬಗ್ಗೆ ಮಾತನಾಡಿ, ತಮ್ಮ ಪಕ್ಷವು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸುತ್ತದೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ಆಡಳಿತ ಎಲ್ಲಾ ರೀತಿಯಿಂದಲೂ ವಿಫಲವಾಗಿದೆ. ಈ ಕಾರಣಕ್ಕೆ ರಾಷ್ಟ್ರಪತಿಗಳ ಭಾಷಣ ಬಾಯ್ಕಾಟ್ ಮಾಡುತ್ತಿರುವುದಾಗಿ ಕೇಶವರಾವ್ ಹೇಳಿದ್ದಾರೆ. ಅಲ್ಲದೇ ಎಎಪಿ ಕೂಡ ಈ ಬಹಿಷ್ಕಾರ ನಿರ್ಧಾರಕ್ಕೆ ಬೆಂಬಲ ನೀಡುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಭಾರತ್ ರಾಷ್ಟ್ರ ಸಮಿತಿ ಇತ್ತೀಚಿನವರೆಗೂ ತೆಲಂಗಾಣ ರಾಷ್ಟ್ರ ಸಮಿತಿ ಹೆಸರನ್ನು ಹೊಂದಿತ್ತು. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಹೋರಾಡಲು ಅಸ್ತಿತ್ವಕ್ಕೆ ಬಂದಿದ್ದ ಟಿಆರ್​ಎಸ್ ಈಗ ರಾಷ್ಟ್ರಮಟ್ಟದಲ್ಲಿ ಬೆಳೆಯಲು ಯೋಜಿಸಿದೆ. ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಕೂಡ ರಾಷ್ಟ್ರ ರಾಜಕೀಯದಲ್ಲಿ ಆಸಕ್ತಿ ತೋರುತ್ತಿದ್ದಾರೆ. ಈ ಕಾರಣಕ್ಕೆ ತಮ್ಮ ಟಿಆರ್​ಎಸ್ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಲು ಭಾರತ್ ರಾಷ್ಟ್ರ ಸಮಿತಿ ಎಂದು ಪಕ್ಷದ ಹೆಸರು ಬದಲಿಸಲಾಗಿದೆ.

ಕಾಂಗ್ರೆಸ್ ಪಕ್ಷ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಹಲವು ಪ್ರಾದೇಶಿಕ ಪಕ್ಷಗಳ ಮುಖಂಡರು ರಾಷ್ಟ್ರಮಟ್ಟದಲ್ಲಿ ಮುಂಚೂಣಿಗೆ ಬರುವ ಪ್ರಯತ್ನದಲ್ಲಿದ್ದಾರೆ. ಎನ್​ಸಿಪಿಯ ಶರದ್ ಪವಾರ್, ಎಎಪಿಯ ಅರವಿಂದ್ ಕೇಜ್ರಿವಾಲ್, ಟಿಎಂಸಿಯ ಮಮತಾ ಬ್ಯಾನರ್ಜಿ, ಬಿಆರ್​ಎಸ್​ನ ಕೆ ಚಂದ್ರಶೇಖರ್ ರಾವ್, ಜೆಡಿಯುನ ನಿತೀಶ್ ಕುಮಾರ್ ಅವರು ಪ್ರಮುಖರು.

ಚಂದ್ರಶೇಖರ್ ರಾವ್ ಈಗಾಗಲೇ ಜೆಡಿಎಸ್​ನ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಎದುರು ಎಲ್ಲಾ ಪ್ರಮುಖ ವಿಪಕ್ಷಗಳ ಮಹಾ ಮೈತ್ರಿ ಏರ್ಪಡಿಸುವ ನಿಟ್ಟಿನಲ್ಲಿ ಅವರು ಗಮನ ಹರಿಸಿರುವುದು ತಿಳಿದುಬಂದಿದೆ.

ಇಂದು ಆರ್ಥಿಕ ಸಮೀಕ್ಷೆ ವರದಿ ಮಂಡನೆ

ನಾಳೆ ಬುಧವಾರ ಬಜೆಟ್ ಮಂಡನೆಯಾಗುತ್ತಿದೆ. ಅದಕ್ಕೆ ಒಂದು ದಿನ ಮುನ್ನ, ಇಂದು ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಮೊದಲು ಸಂಸತ್​ನಲ್ಲಿ ಉಭಯ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ಅದಾದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯ ವರದಿಯನ್ನು ಅಧಿವೇಶನದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಫೆಬ್ರುವರಿ 13ರವರೆಗೂ ಬಜೆಟ್ ಅಧಿವೇಶನ ಸಂಸತ್​ನಲ್ಲಿ ನಡೆಯಲಿದೆ.