Adani FPO: ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ಇಂದೇ ಕೊನೆ; ಷೇರು ಖರೀದಿಗೆ ಶೇ 7-12 ರಿಯಾಯಿತಿ
ಕಳೆದ ಶುಕ್ರವಾರ (ಜನವರಿ 27) ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ಆರಂಭಗೊಂಡಿತ್ತು. ಹೊಸ ಷೇರುಗಳ ಬಿಡುಗಡೆ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದ್ದು, ದೇಶದ ಅತಿದೊಡ್ಡ ಪ್ರಮಾಣದ ಎಫ್ಪಿಒ ಇದಾಗಿದೆ.
ಮುಂಬೈ: ಅದಾನಿ ಸಮೂಹದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅದಾನಿ ಎಂಟರ್ಪ್ರೈಸಸ್ (Adani Enterprises) ಎಫ್ಪಿಒ (Follow-On Public Offer) ಇಂದು ಕೊನೆಯಾಗುತ್ತಿದ್ದು, ಶೇ 7-12 ರಿಯಾಯಿತಿ ದರದಲ್ಲಿ ಕಂಪನಿ ಷೇರುಗಳು ಖರೀದಿಗೆ ಲಭ್ಯವಿರಲಿವೆ. ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ವರದಿಯ ಪರಿಣಾಮ ಕಂಪನಿಯ ಷೇರು ಮೌಲ್ಯದಲ್ಲಿ ಕಳೆದ ವಾರ ಕುಸಿತವಾಗಿದ್ದರೂ ಸೋಮವಾರದ ವಹಿವಾಟಿನ ಕೊನೆಯಲ್ಲಿ ಶೇ 4.2ರ ಚೇತರಿಕೆ ಕಂಡುಬಂದಿತ್ತು. ದಿನದ ವಹಿವಾಟಿನ ಅಂತ್ಯದಲ್ಲಿ ಕಂಪನಿಯ ಷೇರು ಬೆಲೆ 2,878 ರೂ. ಆಗಿತ್ತು. ಎಫ್ಪಿಒಗೆ ನಿಗದಿ ಮಾಡಿರುವ 3,112-3,276 ರೂ.ಗಿಂತ ಶೇ 7-12ರ ರಿಯಾಯಿತಿಯಲ್ಲಿ ಷೇರುಗಳು ದೊರೆಯಲಿವೆ ಎಂದು ಷೇರು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಶುಕ್ರವಾರದ ವಹಿವಾಟಿನಲ್ಲಿ ಅದಾನಿ ಎಂಟರ್ಪ್ರೈಸಸ್ ಷೇರು ಮೌಲ್ಯದಲ್ಲಿ ಶೇ 18ರಷ್ಟು ಕುಸಿತವಾಗಿತ್ತು. ಬುಧವಾರ ಶೇ 1.18ರಷ್ಟು ಕುಸಿತ ದಾಖಲಾಗಿತ್ತು. ಅದಾನಿ ಕಂಪನಿಗಳ ಪೈಕಿ ನಾಲ್ಕು ಕಂಪನಿಗಳ ಷೇರು ಮೌಲ್ಯದಲ್ಲಿ ಸೋಮವಾರ ಕುಸಿತವಾಗಿತ್ತು. ಆದರೆ, ಅದಾನಿ ಎಂಟರ್ಪ್ರೈಸಸ್, ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಷೇರು ಮೌಲ್ಯದಲ್ಲಿ ಶೇ 1.65 ಮತ್ತು ಶೇ 1.1 ರ ವೃದ್ಧಿ ದಾಖಲಾಗಿತ್ತು. ಆದರೆ ಒಟ್ಟಾರೆಯಾಗಿ ಸಮೂಹದ ಮಾರುಕಟ್ಟೆ ಬಂಡವಾಳದಲ್ಲಿ 1.36 ಲಕ್ಷ ಕೋಟಿ ಕುಸಿತವಾಗಿದೆ. ಇದರೊಂದಿಗೆ ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಅದಾನಿ ಸಮೂಹದ ಸಂಪತ್ತು ಒಟ್ಟು 5.56 ಲಕ್ಷ ಕೋಟಿ ಕರಗಿದಂತಾಗಿದೆ.
ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಅದಾನಿ
ಕಂಪನಿಗಳ ಸಂಪತ್ತು ಗಣನೀಯವಾಗಿ ಕುಸಿದ ಬೆನ್ನಲ್ಲೇ ಗೌತಮ್ ಅದಾನಿ ಸಂಪತ್ತಿನಲ್ಲಿಯೂ ಭಾರೀ ಕುಸಿತವಾಗಿದೆ. ಫೋರ್ಬ್ಸ್ ಬಿಲಿಯನೇರ್ಗಳ ಪಟ್ಟಿಯಲ್ಲಿ ಅವರು ಸೋಮವಾರ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ನಿವ್ವಳ ಸಂಪತ್ತಿನ ಮೌಲ್ಯ 8.1 ಶತಕೋಟಿ ಡಾಲರ್ ಆಗಿದೆ.
ಇದನ್ನೂ ಓದಿ: IMF on India Growth: ಭಾರತದ ಆರ್ಥಿಕತೆ ಉಜ್ವಲವಾಗಿದೆ; ಭಾರತದ ಪ್ರಗತಿ ಬಗ್ಗೆ ಭರವಸೆ ಹೆಚ್ಚಿಸಿದ ಐಎಂಎಫ್ ವರದಿ
ಕಳೆದ ಶುಕ್ರವಾರ (ಜನವರಿ 27) ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ಆರಂಭಗೊಂಡಿತ್ತು. ಹೊಸ ಷೇರುಗಳ ಬಿಡುಗಡೆ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದ್ದು, ದೇಶದ ಅತಿದೊಡ್ಡ ಪ್ರಮಾಣದ ಎಫ್ಪಿಒ ಇದಾಗಿದೆ. ಎಷ್ಟು ಮೊತ್ತ ಸಂಗ್ರಹವಾಗಲಿದೆ ಎಂಬುದು ಇಂದಿನ (ಜನವರಿ 31) ವಹಿವಾಟಿನ ಕೊನೆಯಲ್ಲಿ ತಿಳಿದುಬರಲಿದೆ.
ಏನಿದು ಎಫ್ಪಿಒ?
ಎಫ್ಪಿಒ ಇದರ ವಿಸ್ತೃತ ರೂಪ ‘ಫಾಲೋ ಆನ್ ಪಬ್ಲಿಕ್ ಆಫರಿಂಗ್’. ಇದು ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆಗಿಂತ ಭಿನ್ನ. ಆರಂಭಿಕ ಸಾರ್ವಜನಿಕ ಕೊಡುಗೆ ಎಂದರೆ ಕಂಪನಿಯೊಂದು ಷೇರುಗಳನ್ನು ಮಾರಾಟ ಮಾಡುವ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸುವ ಹಂತ. ಸರಳವಾಗಿ ಹೇಳುವುದಾದರೆ ಇದರ ನಂತರದ ಹಂತವೇ ಎಫ್ಪಿಒ. ಕಂಪನಿಯೊಂದು ಐಪಿಒ ಮೂಲಕ ಷೇರು ಮಾರಾಟ ಮಾಡಿದ ನಂತರದಲ್ಲಿ, ಮತ್ತಷ್ಟು ಬಂಡವಾಳ ಸಂಗ್ರಹಕ್ಕಾಗಿ ಹೆಚ್ಚುವರಿಯಾಗಿ ಷೇರುಗಳನ್ನು ಬಿಡುಗಡೆ ಮಾಡುವುದೇ ‘ಫಾಲೋ ಆನ್ ಪಬ್ಲಿಕ್ ಆಫರಿಂಗ್ ಅಥವಾ ಎಫ್ಪಿಒ’. ಉದ್ಯಮದ ವಿಸ್ತರಣೆಗಾಗಿ, ಸಾಲ ತೀರಿಸಲು ಮತ್ತು ಇತರ ಮುಖ್ಯ ಉದ್ದೇಶಗಳಿಗಾಗಿ ದೊಡ್ಡ ಮಟ್ಟದ ಬಂಡವಾಳ ಸಂಗ್ರಹಣೆ ಗುರಿಯೊಂದಿಗೆ ಕಂಪನಿಗಳು ಎಫ್ಪಿಒ ಹಮ್ಮಿಕೊಳ್ಳುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Tue, 31 January 23