ಅತ್ಯಂತ ಮೌಲ್ಯಯುತ ಸಂಸ್ಥೆಗಳ ಪಟ್ಟಿ; ಟಾಪ್ 10ರಲ್ಲಿ ಅದಾನಿ ಎಂಟರ್ಪ್ರೈಸಸ್
ಷೇರು ಮಾರುಕಟ್ಟೆ ವಹಿವಾಟಿನ ಕಳೆದ ಆರು ಸೆಷನ್ಗಳಲ್ಲಿ ಅದಾನಿ ಎಂಟರ್ಪ್ರೈಸಸ್ ಷೇರು ಮೌಲ್ಯ ಶೇಕಡಾ 15ರಷ್ಟು ಹೆಚ್ಚಳವಾಗಿದೆ. ಪರಿಣಾಮವಾಗಿ ಅತ್ಯಂತ ಮೌಲ್ಯಯುತ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ ಕಂಪನಿ ಸ್ಥಾನ ಪಡೆದಿದೆ.
ಮುಂಬೈ: ಷೇರು ಮಾರುಕಟ್ಟೆ ವಹಿವಾಟಿನ ಕಳೆದ ಆರು ಸೆಷನ್ಗಳಲ್ಲಿ ಅದಾನಿ ಎಂಟರ್ಪ್ರೈಸಸ್ (Adani Enterprises) ಷೇರು ಮೌಲ್ಯ ಶೇಕಡಾ 15ರಷ್ಟು ಹೆಚ್ಚಳವಾಗಿದೆ. ಪರಿಣಾಮವಾಗಿ ಅತ್ಯಂತ ಮೌಲ್ಯಯುತ ಸಂಸ್ಥೆಗಳ ಪಟ್ಟಿಯಲ್ಲಿ (Most Valued Listed Firms) ಅಗ್ರ 10ರಲ್ಲಿ ಕಂಪನಿ ಸ್ಥಾನ ಪಡೆದಿದೆ. ಸೋಮವಾರದ ಇಂಟ್ರಾ-ಡೇ ಟ್ರೇಡಿಂಗ್ನಲ್ಲಿ ಕಂಪನಿಯ ಷೇರು ಮೌಲ್ಯ ಗರಿಷ್ಠ ಮಟ್ಟ ತಲುಪಿತ್ತು. ಪ್ರತಿ ಷೇರಿನ ಮುಖಬೆಲೆ 4,015 ರೂ.ಗೆ ತಲುಪಿತ್ತು. ಇಂದು (ನವೆಂಬರ್ 8, ಮಂಗಳವಾರ) ಗುರುನಾನಕ್ ಜಯಂತಿ ಪ್ರಯುಕ್ತ ಷೇರುಮಾರುಕಟ್ಟೆ ರಜೆ ಇದ್ದುದರಿಂದ ಷೇರು ಮೌಲ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹೀಗಾಗಿ ಕಂಪನಿ ಮೋಸ್ಟ್ ವ್ಯಾಲ್ಯೂಡ್ ಲಿಸ್ಟೆಡ್ ಫರ್ಮ್ಸ್ನಲ್ಲಿ ಸ್ಥಾನ ಉಳಿಸಿಕೊಂಡಿದೆ.
ಬಿಎಸ್ಇನಲ್ಲಿ ದಿನದ ವಹಿವಾಟಿನ ಅಂತ್ಯದ ವೇಳೆಗೆ ಅದಾನಿ ಎಂಟರ್ಪ್ರೈಸಸ್ ಷೇರಿನ ಬೆಲೆ 3,961 ರೂ. ಆಗಿತ್ತು. ಹಿಂದನ ಕ್ಲೋಸಿಂಗ್ ಸೆಷನ್ಗಿಂತ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 3.4ರ ವೃದ್ಧಿ ಕಂಡುಬಂದಿತ್ತು.
ಆರು ಸೆಷನ್ಗಳಲ್ಲಿ ಭರ್ಜರಿ ಜಿಗಿತ
ಕಳೆದ ಆರು ವಹಿವಾಟಿನ ಅವಧಿಯಲ್ಲಿ ಅದಾನಿ ಎಂಟರ್ಪ್ರೈಸಸ್ ಷೇರು ಮೌಲ್ಯದಲ್ಲಿ ಒಟ್ಟಾರೆ ಶೇಕಡಾ 19.2ರಷ್ಟು ವೃದ್ಧಿಯಾಗಿದೆ. ಈ ವರ್ಷದಲ್ಲಿ ಒಟ್ಟಾರೆಯಾಗಿ ಶೇಕಡಾ 131.7ರ ವೃದ್ಧಿ ದಾಖಲಿಸಿದೆ. 2020ರ ಮಾರ್ಚ್ನಲ್ಲಿ ಕಂಪನಿಯ ಷೇರುಗಳು ತಲಾ 120 ರೂ.ನಂತೆ ಮಾರಾಟವಾಗಿದ್ದವು. ಇದೀಗ ಶೇಕಡಾ 3,200ರ ಜಿಗಿತ ಕಂಡಿವೆ.
ಇದನ್ನೂ ಓದಿ: Stock Market: ಷೇರುಪೇಟೆ ವಹಿವಾಟಿಗೆ ಇಂದು ಬಿಡುವು; ಕಾರಣವೇನು?
ಕಂಪನಿಯ ಒಟ್ಟಾರೆ ಮಾರುಕಟ್ಟೆ ಬಂಡವಾಳ ಈಗ 4.52 ಟ್ರಿಲಿಯನ್ ರೂ.ಗೆ ತಲುಪಿದೆ. ನಿರೀಕ್ಷೆಗೂ ಮೀರಿ ಕಂಪನಿ ಆದಾಯ ಗಳಿಸಿದ್ದೇ ಅತ್ಯಂತ ಮೌಲ್ಯಯುತ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಮುಖ್ಯ ಕಾರಣವಾಗಿದೆ.
ನಿವ್ವಳ ಲಾಭದಲ್ಲೂ ಭಾರಿ ಹೆಚ್ಚಳ
ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಅದಾನಿ ಎಂಟರ್ಪ್ರೈಸಸ್ ನಿವ್ವಳ ಲಾಭದಲ್ಲಿ ಶೇಕಡಾ 117ರಷ್ಟು ಹೆಚ್ಚಳವಾಗಿತ್ತು. ಕಂಪನಿಯು 460 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇದೇ ಅವಧಿಯಲ್ಲಿ ಕಳೆದ ವರ್ಷ 212 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. 38,180 ಕೋಟಿ ರೂ. ಆದಾಯ ಗಳಿಸಿದ್ದರೆ, ಒಟ್ಟು ವೆಚ್ಚ 37,770 ಕೋಟಿ ರೂ. ಆಗಿತ್ತು.
ಅದಾನಿ ಸಮೂಹದ ಇತರ ಕಂಪನಿಗಳ ಷೇರುಗಳ ಸ್ಥಿತಿಗತಿ
ಅದಾನಿ ಪೋರ್ಟ್ಸ್ ಷೇರುಗಳ ಮೌಲ್ಯದಲ್ಲಿ ಶೇಕಡಾ 17, ಅದಾನಿ ಗ್ರೀನ್ ಎನರ್ಜಿ ಷೇರು ಮೌಲ್ಯದಲ್ಲಿ ಶೇಕಡಾ 62, ಅದಾನಿ ಟ್ರಾನ್ಸ್ಮಿಷನ್ ಷೇರು ಮೌಲ್ಯದಲ್ಲಿ ಶೇಕಡಾ 92, ಅದಾನಿ ಟೋಟಲ್ ಗ್ಯಾಸ್ ಷೇರು ಮೌಲ್ಯದಲ್ಲಿ ಶೇಕಡಾ 121, ಅದಾನಿ ವಿಲ್ಮರ್ ಷೇರು ಮೌಲ್ಯದಲ್ಲಿ ಶೇಕಡಾ 190ರಷ್ಟು ಹೆಚ್ಚಳವಾಗಿದೆ.
ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Tue, 8 November 22