ಸಿಮೆಂಟ್ ಉದ್ಯಮದಲ್ಲಿ ಸಂಚಲನ: 5 ವರ್ಷಗಳಲ್ಲಿ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳಿಸುವ ಗುರಿ ಘೋಷಿಸಿದ ಅದಾನಿ

ಮುಂದಿನ ವರ್ಷಗಳಲ್ಲಿ ಸಿಮೆಂಟ್​ ಬೇಡಿಕೆಯು ನಿರಂತರವಾಗಿ ಏರಿಕೆ ಕಾಣಲಿದೆ. ಲಾಭಗಳಿಕೆ ಅವಕಾಶಗಳು ಮುಕ್ತವಾಗಿವೆ ಎಂದು ಹೇಳಿದರು.

ಸಿಮೆಂಟ್ ಉದ್ಯಮದಲ್ಲಿ ಸಂಚಲನ: 5 ವರ್ಷಗಳಲ್ಲಿ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳಿಸುವ ಗುರಿ ಘೋಷಿಸಿದ ಅದಾನಿ
ಉದ್ಯಮಿ ಗೌತಮ್ ಅದಾನಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 20, 2022 | 10:51 AM

ಮುಂಬೈ: ಒಂದಲ್ಲ ಒಂದು ಕಾರಣಕ್ಕೆ ಭಾರತದ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸುವ ಅದಾನಿ ಎಂಟರ್​ಪ್ರೈಸಸ್​ನ ಅಧ್ಯಕ್ಷ ಗೌತಮ್ ಅದಾನಿ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದ್ದಾರೆ. ಭಾರತದ ಸಿಮೆಂಟ್ ವಲಯದಲ್ಲಿ ದೃಢ ಹೆಜ್ಜೆ ಊರಿರುವ ಅಂಬುಜಾ ಸಿಮೆಂಟ್ಸ್​ ಮತ್ತು ಎಸಿಸಿ ಕಂಪನಿಗಳು ಇದೀಗ ಅದಾನಿ ಹಿಡಿತಕ್ಕೆ ಸಿಕ್ಕಿವೆ. ಈ ಕಂಪನಿಗಳ ಮಾಲೀಕತ್ವ ಹೊಂದಿದ್ದ ಸ್ವಿಡ್ಜರ್​ಲೆಂಡ್ ಮೂಲದ ಕಂಪನಿಯೊಂದಿಗೆ 6.5 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಒಪ್ಪಂದವನ್ನು ಪೂರ್ಣಗೊಳಿಸಿರುವ ಅದಾನಿ, ಮುಂದಿನ ಐದು ವರ್ಷಗಳಲ್ಲಿ ಈ ಎರಡೂ ಕಂಪನಿಗಳ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು 140 ದಶಲಕ್ಷ ಟನ್​ಗೆ ಹೆಚ್ಚಿಸುವ ಗುರಿ ಘೋಷಿಸಿದ್ದಾರೆ. ದೇಶದ ಅತ್ಯಂತ ಲಾಭದಾಯಕ ಕಂಪನಿಗಳಾಗಿ ಅಂಬುಜಾ ಮತ್ತು ಎಸಿಸಿ ಹೊರಹೊಮ್ಮಲಿವೆ ಎಂದು ಅದಾನಿ ವಿಶ್ವಾಸ ಪ್ರದರ್ಶಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಭಾರತದ ಅರ್ಥಿಕ ಪ್ರಗತಿ ಹೆಚ್ಚಾಗುತ್ತದೆ. ಸರ್ಕಾರವೂ ಮೂಲಸೌಕರ್ಯ ಒದಗಿಸಲು ಹೆಚ್ಚು ಖರ್ಚು ಮಾಡಲಿದೆ. ಭಾರತದ ಸಿಮೆಂಟ್ ಬೇಡಿಕೆಯು ಹಲವು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಿದರು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕ ದೇಶವಾಗಿದ್ದರೂ, ನಮ್ಮ ತಲಾವಾರು ಸಿಮೆಂಟ್ ಬಳಕೆಯು ಕೇವಲ 250 ಕೆಜಿ ಮಾತ್ರವಾಗಿದೆ. ಚೀನಾದ ಸಿಮೆಂಟ್ ಬಳಕೆ ಪ್ರಮಾಣವು 1,600 ಕೆಜಿ ಇದೆ. ಸಿಮೆಂಟ್ ಕ್ಷೇತ್ರದ ಬೆಳವಣಿಗೆಗೆ ಮುಕ್ತ ಅವಕಾಶಗಳಿದ್ದು, ದೀರ್ಘಕಾಲೀನ ಸರಾಸರಿ ಬೆಳವಣಿಗೆಯು ಜಿಡಿಪಿಗಿಂತಲೂ 1.2 ರಿಂದ 1.5 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದರು.

ಎರಡೂ ಸಿಮೆಂಟ್ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡ ಬೆಳವಣಿಗೆಯನ್ನು ‘ಐತಿಹಾಸಿಕ’ ಎಂದು ಕರೆದಿರುವ ಅವರು, ಈ ಖರೀದಿಯು ಮೂಲಸೌಕರ್ಯ ಮತ್ತು ನಿರ್ಮಾಣ ಸಾಮಗ್ರಿಗಳ ಕ್ಷೇತ್ರದಲ್ಲಿ ಇತ್ತೀಚಿನ ಮಹತ್ವದ ಬೆಳವಣಿಗೆಯಾಗಿದೆ. ಕೇವಲ ನಾಲ್ಕು ತಿಂಗಳಲ್ಲಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವುದು ಒಂದು ದಾಖಲೆಯೇ ಆಗಿದೆ ಎಂದು ಅದಾನಿ ವಿವರಿಸಿದರು. ಮೂಲಸೌಕರ್ಯ ಮತ್ತು ವಸತಿ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಯೋಜಿಸುವ ಮೂಲಕ ಭಾರತದ ಆರ್ಥಿಕತೆಯಲ್ಲಿ ಬಲವಾದ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಸಿಮೆಂಟ್​ ಬೇಡಿಕೆಯು ನಿರಂತರವಾಗಿ ಏರಿಕೆ ಕಾಣಲಿದೆ. ಲಾಭಗಳಿಕೆ ಅವಕಾಶಗಳು ಮುಕ್ತವಾಗಿವೆ ಎಂದು ಹೇಳಿದರು.

ಅಂಬುಜಾ ಮತ್ತು ಎಸಿಸಿ ಸಿಮೆಂಟ್ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ, ಅದಾನಿ ಗ್ರೂಪ್ ವಾರ್ಷಿಕ 70 ದಶಲಕ್ಷ ಟನ್ ಸ್ಥಾಪಿತ ಉತ್ಪಾದನಾ ಸಾಮರ್ಥ್ಯದೊಂದಿಗೆ ದೇಶದ ಎರಡನೇ ಅತಿದೊಡ್ಡ ಸಿಮೆಂಟ್ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಈ ಎರಡೂ ಕಂಪನಿಗಳು ಇದೀಗ ದೇಶದ ಸಿಮೆಂಟ್ ಮಾರುಕಟ್ಟೆಯ ಸುಮಾರು ಶೇ 14ರಷ್ಟು ಭಾಗವನ್ನು ನಿರ್ವಹಿಸುತ್ತಿದೆ. ಆದಿತ್ಯ ಬಿರ್ಲಾ ಗ್ರೂಪ್​ನ ಅಲ್ಟ್ರಾಟೆಕ್ ದೇಶದ ಅತಿದೊಡ್ಡ ಸಿಮೆಂಟ್ ಉತ್ಪಾದನಾ ಕಂಪನಿಯಾಗಿದೆ. ಇದು ವಾರ್ಷಿಕ 115 ದಶಲಕ್ಷ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಶೇ 25ರಷ್ಟು ಮಾರುಕಟ್ಟೆ ಪಾಲು ತನ್ನದಾಗಿಸಿಕೊಂಡಿದೆ. 2030ರ ಹೊತ್ತಿಗೆ ಅಲ್ಟ್ರಾಟೆಕ್ ತನ್ನ ಸಾಮರ್ಥ್ಯವನ್ನು 200 ದಶಲಕ್ಷ ಟನ್​ಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಒಳ್ಳೇ ಸುದ್ದಿಯ ಹಿನ್ನೆಲೆಯಲ್ಲಿ ಅಂಬುಜಾ ಸಿಮೆಂಟ್​ ಕಂಪನಿಯ ಷೇರುಗಳು ಸೋಮವಾರ ಒಂದೇ ದಿನ ಶೇ 9.42ರ ಏರಿಕೆ ದಾಖಲಿಸಿ ವಿಜೃಂಭಿಸಿದವು.

ಅದಾನಿ ಗ್ರೂಪ್ ವಿಶ್ವದ ಅತಿದೊಡ್ಡ ಸೌರ ವಿದ್ಯುತ್ ಕಂಪನಿಯನ್ನು ಹೊಂದಿದೆ. ಹಲವು ವಿಮಾನ ನಿಲ್ದಾಣಗಳು, ಬಂದರು, ಲಾಜಿಸ್ಟಿಕ್ಸ್​, ಎಲ್​ಪಿಜಿ, ಎಲ್​ಎನ್​ಜಿ, ನಗರಗಳಿಗೆ ಕೊಳವೆಮಾರ್ಗದ ಮೂಲಕ ಅಡುಗೆ ಅನಿಲ ವಿತರಿಸುವ ಉದ್ಯಮಗಳನ್ನು ನಿರ್ವಹಿಸುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada