ನವದೆಹಲಿ: ಷೇರು ವಹಿವಾಟಿನ ಪ್ಲಾಟ್ಫಾರ್ಮ್ ಆಗಿರುವ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸಂಸ್ಥೆ (BSE Company) ಇದೀಗ ತನ್ನದೇ ಷೇರುಗಳನ್ನು ಹೆಚ್ಚಿನ ಬೆಲೆ ಕೊಟ್ಟು ಮರುಖರೀದಿಸುತ್ತಿದೆ (Share Buyback). ಟೆಂಡರ್ ಮೂಲಕ 375 ಕೋಟಿ ರೂವರೆಗೆ ಷೇರು ಮರುಖರೀದಿ ಪ್ರಕ್ರಿಯೆಗೆ ಬಿಎಸ್ಇ ಮಂಡಳಿ ಜುಲೈ 6ರಂದು ಅನುಮೋದನೆ ನೀಡಿದೆ. ಜುಲೈ 6ರಂದು ಇದ್ದುದಕ್ಕಿಂತ ಶೇ. 19ರಷ್ಟು ಹೆಚ್ಚು ಬೆಲೆಗೆ ಷೇರು ಮರುಖರೀದಿಗೆ ಮಂಡಳಿ ಒಪ್ಪಿಗೆ ಕೊಟ್ಟಿದೆ. ಅಂದರೆ, ಜುಲೈ 6ರ ಅಂತ್ಯದಲ್ಲಿ ಬಿಎಸ್ಇ ಷೇರುಬೆಲೆ 705.40 ರೂ ಇದೆ. ಈಗ 816 ರೂಗೆ ಬಿಎಸ್ಇ ತನ್ನ ಷೇರುಗಳನ್ನು ಖರೀದಿಸಲಿದೆ.
ಟೆಂಡರ್ ಮೂಲಕ ಈ ಪ್ರಕ್ರಿಯೆ ನಡೆಯಲಿದೆ. ಮರುಖರೀದಿ ಸಮಿತಿ ಅಥವಾ ಬಯ್ಬ್ಯಾಕ್ ಕಮಿಟಿ ಈ ಟೆಂಡರ್ ದಿನಾಂಕವನ್ನು ನಿಗದಿಪಡಿಸಲಿದೆ. ಒಟ್ಟು 375 ಕೋಟಿ ರೂ ಮೊತ್ತದ ಷೇರುಗಳನ್ನು ಖರೀದಿಸಲಾಗುತ್ತದೆ. ಬಿಎಸ್ಇ ಕಂಪನಿಯ ಒಟ್ಟು ಷೇರುಗಳಲ್ಲಿ ಶೇ. 3.39ರಷ್ಟನ್ನು ಅದು ಮರುಖರೀದಿಸುತ್ತದೆ. 45,93,137 ಈಕ್ವಿಟಿ ಷೇರುಗಳನ್ನು ಬಿಎಸ್ಇ ಖರೀದಿಸುತ್ತಿರುವುದರಿಂದ ಒಟ್ಟು ಸಾರ್ವಜನಿಕ ವಹಿವಾಟಿಗೆ ಲಭ್ಯ ಇರುವ ಷೇರುಗಳ ಸಂಖ್ಯೆ ಕಡಿಮೆ ಆಗುತ್ತದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮುಂಬೈನಲ್ಲಿ 1875ರಲ್ಲಿ ಸ್ಥಾಪನೆಯಾಗಿದ್ದು. ಪ್ರೇಮಚಂದ್ ರಾಯಚಂದ್ ಅವರು ಶುರುಮಾಡಿದ ಇದು ಭಾರತ ಮಾತ್ರವಲ್ಲ ಏಷ್ಯಾದ ಮೊದಲ ಸ್ಟಾಕ್ ಎಕ್ಸ್ಚೇಂಜ್ ಎನಿಸಿದೆ. ವಿಶ್ವದ 10ನೇ ಅತ್ಯಂತ ಹಳೆಯ ಷೇರುವಿನಿಮಯ ಕೇಂದ್ರವೂ ಅದು. ಬಿಎಸ್ಇ ಎಂಬುದು ಸ್ವತಃ ಒಂದು ಕಂಪನಿ. 2017ರಲ್ಲಿ ಇದು ತನ್ನ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಯಿತು. ಹೀಗೆ ಷೇರುಪೇಟೆಯಲ್ಲಿ ಲಿಸ್ಟ್ ಆದ ಮೊದಲ ಭಾರತೀಯ ಸ್ಟಾಕ್ ಎಕ್ಸ್ಚೇಂಜ್ ಕೂಡ ಅದಾಗಿದೆ.
ಇದೂ ಸೇರಿ ಒಟ್ಟು 5,300ಕ್ಕೂ ಹೆಚ್ಚು ಕಂಪನಿಗಳು ಬಿಎಸ್ಇನಲ್ಲಿ ಲಿಸ್ಟ್ ಆಗಿವೆ. ಇವೆಲ್ಲಾ ಕಂಪನಿಗಳ ಷೇರುಸಂಪತ್ತು 280 ಲಕ್ಷ ಕೋಟಿಗೂ ಅಧಿಕ. ವಿಶ್ವದಲ್ಲಿ ಅತಿಹೆಚ್ಚು ಷೇರುಸಂಪತ್ತು ಇರುವ ಟ್ರೇಡಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಬಿಎಸ್ಇ ಒಂದು. ಭಾರತದಲ್ಲಿರುವ ಇನ್ನೊಂದು ಪ್ರಮುಖ ಸ್ಟಾಕ್ ಎಕ್ಸ್ಚೇಂಜ್ ಪ್ಲಾಟ್ಫಾರ್ಮ್ ಎಂದರೆ ಎನ್ಎಸ್ಇ. ಅದು ಹೆಚ್ಚು ಉನ್ನತ ತಂತ್ರಜ್ಞಾನದಿಂದ ಕೂಡಿದ್ದಾಗಿದೆ. ಹಲವು ಕಂಪನಿಗಳು ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ಷೇರುಗಳನ್ನು ಲಿಸ್ಟ್ ಮಾಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ