BSNL Masterplan: ಜಿಯೋ, ಏರ್ಟೆಲ್ ಪ್ರಾಬಲ್ಯ ತಡೆಯಲು ಬಿಎಸ್​ಎನ್​ಎಲ್​ನಿಂದ ಭರ್ಜರಿ ‘ವೊಡಾಫೋನ್’ ಐಡಿಯಾ

|

Updated on: Feb 20, 2024 | 11:23 AM

Telecom survival war: ಜಿಯೋ ಮತ್ತು ಏರ್ಟೆಲ್ ಎದುರು ಪೈಪೋಟಿಯಲ್ಲಿ ನಿಲ್ಲಲು ಹವಣಿಸುತ್ತಿರುವ ಬಿಎಸ್​ಎನ್​ಎಲ್ ಈ ನಿಟ್ಟಿನಲ್ಲಿ ವೊಡಾಫೋನ್ ಐಡಿಯಾ ನೆರವು ಪಡೆಯಲು ಆಸಕ್ತವಾಗಿದೆ. ವೊಡಾಫೋನ್ ಐಡಿಯಾದ 4ಜಿ ನೆಟ್ವರ್ಕ್ ಅನ್ನು ಬಳಸಲು ಅವಕಾಶ ದೊರಕಿಸಿಕೊಡುವಂತೆ ಕೋರಿ ಕೇಂದ್ರ ಸಚಿವರಿಗೆ ಬಿಎಸ್​ಎನ್​ಎಲ್ ಪ್ರಸ್ತಾಪ ಸಲ್ಲಿಸಿದೆ. ಟಿಸಿಎಸ್​ನಿಂದ ಬಿಎಸ್​ಎನ್​ಎಲ್​ಗೆ ದೇಶಾದ್ಯಂತ 4ಜಿ ನೆಟ್ವರ್ಕ್ ಅಳವಡಿಕೆ ಆಗುವವರೆಗೂ ವೊಡಾಫೋನ್ ಐಡಿಯಾದ ನೆಟ್ವರ್ಕ್ ಬಳಕೆಗೆ ಮನವಿ ಮಾಡಲಾಗಿದೆ.

BSNL Masterplan: ಜಿಯೋ, ಏರ್ಟೆಲ್ ಪ್ರಾಬಲ್ಯ ತಡೆಯಲು ಬಿಎಸ್​ಎನ್​ಎಲ್​ನಿಂದ ಭರ್ಜರಿ ‘ವೊಡಾಫೋನ್’ ಐಡಿಯಾ
ಬಿಎಸ್​ಎನ್​ಎಲ್
Follow us on

ನವದೆಹಲಿ, ಫೆಬ್ರುವರಿ 20: ದೇಶದ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳ ಪ್ರಾಬಲ್ಯ ಎದುರಿಸಲು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ (BSNL) ಹೊಸ ಲೆಕ್ಕಾಚಾರ ಹಾಕಿದೆ. ಜಿಯೋ ಮತ್ತು ಏರ್ಟೆಲ್ ಎದುರು ಪೈಪೋಟಿ ನೀಡಲು ಪರದಾಡುತ್ತಿರುವ ಬಿಎಸ್​ಎನ್​ಎಲ್, ಇದೀಗ ತನ್ನಂತಹುದೇ ಸ್ಥಿತಿಯಲ್ಲಿರುವ ವೊಡಾಫೋನ್ ಐಡಿಯಾ (Vodafone-Idea) ಜೊತೆ ಕೈಜೋಡಿಸಲು ಬಯಸುತ್ತಿದೆ. ವೊಡಾಫೋನ್ ಐಡಿಯಾದ 4ಜಿ ನೆಟ್ವರ್ಕ್ ಬಳಕೆಗೆ ಅವಕಾಶ ಪಡೆಯಲು ಈಗ ಬಿಎಸ್​ಎನ್​ಎಲ್ ಪ್ರಯತ್ನಿಸುತ್ತಿದೆ. ಈ ಮೂಲಕ ಬಿಎಸ್​ಎನ್​ಎಲ್ ಗ್ರಾಹಕರು ಬೇರೆ ಕಡೆ ವಲಸೆ ಹೋಗುವುದನ್ನು ತಪ್ಪಿಸುವುದು ಮಾಸ್ಟರ್ ಪ್ಲಾನ್ ಆಗಿದೆ. ಬಿಎಸ್​ಎನ್​ಎಲ್​ನ ಉದ್ಯೋಗಿಗಳ ಒಕ್ಕೂಟ ಇಂಥದ್ದೊಂದು ಪ್ರಸ್ತಾಪವನ್ನು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರಲ್ಲಿ ಸಲ್ಲಿಸಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.

ವೊಡಾಫೋನ್​ನ 4ಜಿ ನೆಟವರ್ಕ್ ಬಳಕೆಯಿಂದ ಬಿಎಸ್​ಎನ್​ಎಲ್​ಗೆ ಏನು ಪ್ರಯೋಜನ?

ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಒಂದು ಕಾಲದಲ್ಲಿ ಪ್ರಮುಖ ಟೆಲಿಕಾಂ ಕಂಪನಿಯಾಗಿತ್ತು. ಆದರೆ, ಟೆಕ್ನಾಲಜಿ ಅಪ್​ಗ್ರೇಡ್ ಆಗದೇ ಇದ್ದ ಪರಿಣಾಮ ಇವತ್ತು ಬಹಳಷ್ಟು ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್​ಎನ್​ಎಲ್ ನೆಟ್ವರ್ಕ್ ಇನ್ನೂ 3ಜಿ ಹಂತ ದಾಟಿ 4ಜಿಗೆ ಬಂದಿಲ್ಲ. ಹೀಗಾಗಿ, ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ.

ಇದನ್ನೂ ಓದಿ: 16ನೇ ಹಣಕಾಸು ಆಯೋಗದ ಸದಸ್ಯ ನಿರಂಜನ್ ರಾಜಾಧ್ಯಕ್ಷ ಹೊರಕ್ಕೆ; ವೈಯಕ್ತಿಕ ಕಾರಣದಿಂದ ಹಿಂದೆ ಸರಿದ ಸದಸ್ಯ

ಇನ್ನೊಂದೆಡೆ ವೊಡಾಫೋನ್ ಐಡಿಯಾ ಬಳಿ ಉತ್ತಮವಾದ 4ಜಿ ನೆಟ್ವರ್ಕ್ ಇದೆ. ಆದರೆ, ಬೇರೆ ಬೇರೆ ಕಾರಣಕ್ಕೆ ಅದೂ ಕೂಡ ಅದರ ಗ್ರಾಹಕರು ಜಿಯೋ, ಏರ್ಟೆಲ್​ಗೆ ವಲಸೆ ಹೋಗುವುದು ತಪ್ಪಿಲ್ಲ. ಈಗ ವೊಡಾಫೋನ್ ಐಡಿಯಾದ 4ಜಿ ನೆಟ್ವರ್ಕ್ ಅನ್ನು ಬಳಕೆ ಮಾಡಲು ಬಿಎಸ್​ಎನ್​ಎಲ್​ಗೆ ಅವಕಾಶ ದೊರಕಿಸಿಕೊಟ್ಟರೆ ಅದರಿಂದ ಎರಡೂ ಟೆಲಿಕಾಂ ಕಂಪನಿಗಳಿಗೆ ಅನುಕೂಲವಾಗುತ್ತದೆ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ಬಿಎಸ್​ಎನ್​ಎಲ್ ಎಂಪ್ಲಾಯೀ ಯೂನಿಯನ್​ನ ಪ್ರಧಾನ ಕಾರ್ಯದರ್ಶಿ ಪಿ ಅಭಿಮನ್ಯು ವಿವರಿಸಿದ್ದಾರೆ.

ಅಲ್ಲದೇ, ವೊಡಾಫೋನ್ ಐಡಿಯಾದಲ್ಲಿ ಸರ್ಕಾರದ ಷೇರುಪಾಲು ಶೇ. 33.1ರಷ್ಟಿರುವುದರಿಂದ ಅದರ 4ಜಿ ನೆಟ್ವರ್ಕ್ ಬಳಕೆಗೆ ಅವಕಾಶ ಕೊಡಿಸುವುದು ಕಷ್ಟವೇನಲ್ಲ ಎಂದು ಅಭಿಮನ್ಯು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಟಿಸಿಎಸ್​ನಿಂದ ಬಿಎಸ್​ಎನ್​ಎಲ್​ಗೆ 4ಜಿ ಅಳವಡಿಕೆ

ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಈಗಾಗಲೇ 5ಜಿ ಅಳವಡಿಕೆ ಮಾಡುತ್ತಿವೆ. ಆದರೆ, ಈ ರೇಸ್​ನಲ್ಲಿ ಬಿಎಸ್​ಎನ್​ಎಲ್ ತೀರಾ ಹಿಂದುಳಿದಿದೆ. 3ಜಿಯಲ್ಲೇ ಇರುವ ಬಿಎಸ್​ಎನ್​ಎಲ್ ಈಗ 4ಜಿಗೆ ಅಪ್​ಗ್ರೇಡ್ ಆಗುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಬಿಎಸ್​ಎನ್​ಎಲ್​ಗೆ 4ಜಿ ನೆಟ್ವರ್ಕ್ ಅಳವಡಿಕೆ ಮಾಡುತ್ತಿದೆ. ದೇಶಾದ್ಯಂತ ಇನ್ನೂ ಪೂರ್ಣವಾಗಿ ಇದರ ಅಳವಡಿಕೆ ಆಗಿಲ್ಲ. ಹೀಗಾಗಿ, ಬಹಳಷ್ಟು ಬಿಎಸ್​ಎನ್​ಎಲ್ ಗ್ರಾಹಕರು ಜಿಯೋ ಅಥವಾ ಏರ್ಟೆಲ್ ಕಡೆಗೆ ವಾಲುತ್ತಿದ್ದಾರೆ.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ: ಒಬ್ಬ ಸಾಧಾರಣ ವೈಟರ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಇಂಟರೆಸ್ಟಿಂಗ್ ಕಥೆ

ಟಿಸಿಎಸ್​​ನಿಂದ 4ಜಿ ನೆಟ್ವರ್ಕ್ ಪೂರ್ಣ ಆಗುವವರೆಗೂ ವೊಡಾಫೋನ್ ಐಡಿಯಾದ 4ಜಿ ನೆಟ್ವರ್ಕ್ ಅನ್ನು ಬಳಸುವುದರಿಂದ ಗ್ರಾಹಕರ ವಲಸೆಯನ್ನು ತತ್​ಕ್ಷಣಕ್ಕೆ ತಡೆಯಬಹುದು. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ ಎಂಬುದು ಬಿಎಸ್​ಎನ್​ಎಲ್​ನ ಲೆಕ್ಕಾಚಾರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ