ನವದೆಹಲಿ, ನವೆಂಬರ್ 30: ಬೈಜುಸ್ನ ದುರಂತಗಳ ಸರಮಾಲೆ ಮುಂದುವರಿಯುತ್ತಲೇ ಇದೆ. ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಜರ್ಝರಿತವಾಗಿರುವ ಬೈಜುಸ್ನ ಮೌಲ್ಯ (Valuation of Byju’s) ಈಗ ನೆಲಕಚ್ಚಿದೆ. ಒಂದು ಕಾಲದಲ್ಲಿ ಭಾರತದ ಸ್ಟಾರ್ಟಪ್ ಸೂಪರ್ಸ್ಟಾರ್ ಎನಿಸಿದ್ದ ಬೈಜುಸ್ ಈಗ ದಯನೀಯ ಸ್ಥಿತಿಗೆ ಜಾರಿದೆ. ಅದರ ಒಂದು ಹೂಡಿಕೆದಾರ ಪ್ರೋಸುಸ್ (Prosus) ಈಗ ಬೈಜುಸ್ನ ಮೌಲ್ಯಮಾಪನವನ್ನು ಮತ್ತಷ್ಟು ತಗ್ಗಿಸಿದೆ. ಬೈಜುಸ್ ಸಂಸ್ಥೆಯ ಮೌಲ್ಯ 3 ಬಿಲಿಯನ್ ಡಾಲರ್ಗಿಂತಲೂ ಕಡಿಮೆ ಎಂದು ಪ್ರೋಕಸ್ ವರದಿ ಕೊಟ್ಟಿದೆ. ಕಳೆದ ವರ್ಷವಷ್ಟೇ ಬೈಜುಸ್ನ ಮೌಲ್ಯ 22 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು. ಈಗ ಒಂದೇ ವರ್ಷದಲ್ಲಿ ಶೇ. 86ರಷ್ಟು ಮೌಲ್ಯ ಕಳೆದುಕೊಂಡಿದೆ ಬೈಜುಸ್.
ಪ್ರೋಸುಸ್, ಬ್ಲ್ಯಾಕ್ರಾಕ್ ಮೊದಲಾದ ಬೈಜುಸ್ ಷೇರುದಾರರು ಕಳೆದ ಒಂದು ವರ್ಷದಿಂದಲೂ ಕೂಡ ಮೌಲ್ಯ ಕಡಿತಗೊಳಿಸುತ್ತಲೇ ಬಂದಿವೆ. 22 ಬಿಲಿಯನ್ ಡಾಲರ್ ಇದ್ದ ಬೈಜುಸ್ನ ಮೌಲ್ಯ ಮಾರ್ಚ್ ತಿಂಗಳಲ್ಲಿ 11 ಬಿಲಿಯನ್ ಡಾಲರ್, ಮೇ ತಿಂಗಳಲ್ಲಿ 8 ಬಿಲಿಯನ್ ಡಾಲರ್, ಜೂನ್ ತಿಂಗಳಲ್ಲಿ 5 ಬಿಲಿಯನ್ ಡಾಲರ್ಗೆ ಕಡಿತಗೊಳಿಸಲಾಗಿದೆ. ಇದೀಗ 3 ಬಿಲಿಯನ್ ಡಾಲರ್ಗೆ ಬೈಜುಸ್ ಕುಸಿದಿದೆ.
ಬೈಜುಸ್ ಸಂಸ್ಥೆ ಬಹಳ ವಿಳಂಬವಾಗಿ ಬಿಡುಗಡೆ ಮಾಡಿದ 2021-22ರ ಹಣಕಾಸು ವರ್ಷದ ತನ್ನ ಆದಾಯದ ವರದಿಯಲ್ಲಿ, ಅದು ಸಾಕಷ್ಟು ಆದಾಯವೃದ್ಧಿ ಕಂಡಿದೆಯಾದರೂ ಲಾಭ ಕಾಣದೇ 2,250 ಕೋಟಿ ರೂ ನಷ್ಟ ಅನುಭವಿಸಿರುವುದು ತಿಳಿದುಬಂದಿದೆ. ಹಣಕಾಸು ವರದಿ ವಿಳಂಬಗೊಂಡ ಪರಿಣಾಮ ಬೈಜುಸ್ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಯಿತು. ಸಾಲ ಕೊಟ್ಟವರು ಬೈಜುಸ್ ತಲೆ ಮೇಲೆ ಕೂತಿದ್ದಾರೆ.
ಇದನ್ನೂ ಓದಿ: UPI: ತಪ್ಪಾಗಿ ಯುಪಿಐನಲ್ಲಿ ಹಣ ಕಳುಹಿಸಿದ್ದೀರಾ? ಬರಲಿದೆ 4 ಗಂಟೆ ನಿಯಮ; ಸಿಗಲಿದೆ ಹಣ ಹಿಂಪಡೆಯುವ ದಾರಿ
ಬೈಜುಸ್ನ ಆನ್ಲೈನ್ ಕೋಚಿಂಗ್ ತರಗತಿಗಳು ಕೋವಿಡ್ ಸಂದರ್ಭದಲ್ಲಿ ಸೂಪರ್ ಹಿಟ್ ಆಗಿದ್ದವು. ಶಾಲೆಗಳು ಮರಳಿ ಆರಂಭಗೊಂಡ ಬಳಿಕ ಬೈಜುಸ್ ಬಿಸಿನೆಸ್ ಬಹಳ ಕಡಿಮೆ ಆಗಿದೆ. ಪೈಪೋಟಿ ಹೆಚ್ಚಿದೆ. ಇದರ ಜೊತೆಗೆ ವಿವಿಧ ಕಾನೂನು ಹೋರಾಟಗಳು, ತೆರಿಗೆ ಸಂಕಷ್ಟಗಳು ಬೈಜುಸ್ ಅನ್ನು ಎಡಬಿಡದೆ ಕಾಡುತ್ತಿವೆ. ದೊಡ್ಡ ದೊಡ್ಡ ಅಧಿಕಾರಿಗಳು ಕೆಲಸ ಬಿಟ್ಟು ಹೋಗಿದ್ದಾರೆ. ಒಟ್ಟಾರೆಯಾಗಿ ಬೈಜುಸ್ ಎಂಬ ಸ್ಟಾರ್ಟಪ್ ಸ್ಟಾರ್ ಇವತ್ತು ದಿಕ್ಕೆಟ್ಟು ಕೂತಿದೆ.
ಇದೇ ವೇಳೆ, ಫೆಮಾ ನಿಯಮ ಉಲ್ಲಂಘನೆ ಆರೋಪದ ಪ್ರಕರಣದಲ್ಲಿ ಬೈಜುಸ್ಗೆ ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿದೆ. ಬೈಜುಸ್ ಒಂದಷ್ಟು ಶುಲ್ಕ ಪಾವತಿಸಬೇಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Thu, 30 November 23