UPI: ತಪ್ಪಾಗಿ ಯುಪಿಐನಲ್ಲಿ ಹಣ ಕಳುಹಿಸಿದ್ದೀರಾ? ಬರಲಿದೆ 4 ಗಂಟೆ ನಿಯಮ; ಸಿಗಲಿದೆ ಹಣ ಹಿಂಪಡೆಯುವ ದಾರಿ
4-Hour Time Limit To Reverse Transaction: ಯುಪಿಐ ಮೂಲಕ ತಪ್ಪಾಗಿ ಬೇರೆಯವರಿಗೆ ಹಣ ಕಳುಹಿಸಿ ಮರಳಿ ಪಡೆಯಲಾಗುತ್ತಿಲ್ಲ ಎಂದು ಪರಿತಪಿಸುವ ಕಾಲ ಹೋಗಲಿದೆ. ಹೊಸ ಖಾತೆಗೆ 2,000 ರೂಗಿಂತ ಹೆಚ್ಚಿನ ಮೊತ್ತದ ಹಣವನ್ನು ಕಳುಹಿಸಿದಾಗ 4 ಗಂಟೆಯೊಳಗೆ ಅದನ್ನು ಮರಳಿ ಪಡೆಯುವ ಸೌಲಭ್ಯ ಒದಗಿಸುವ ಪ್ರಸ್ತಾಪ ಸರ್ಕಾರ ಮಾಡಿದೆ. ಸದ್ಯಕ್ಕೆ ಆರ್ಬಿಐ ಮತ್ತು ವಿವಿಧ ಬ್ಯಾಂಕುಗಳು, ಗೂಗಲ್ ಪೇ, ರೇಜರ್ ಪೇ ಮೊದಲಾದ ಸಂಬಂಧಿತ ಉದ್ಯಮದವರ ಮಧ್ಯೆ ಈ ನಿಟ್ಟಿನಲ್ಲಿ ಚರ್ಚೆಗಳಾಗುತ್ತಿವೆ.
ನವದೆಹಲಿ, ನವೆಂಬರ್ 30: ಡಿಜಿಟಲ್ ಪಾವತಿ (digital payment) ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಆದಷ್ಟೂ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ನಿರಂತರ ಪ್ರಯತ್ನ ನಡೆದಿದೆ. ಯುಪಿಐ ಮೂಲಕ ತಪ್ಪಾಗಿ ಬೇರೆ ಐಡಿಗೆ ಹಣ ಕಳುಹಿಸಿ, ಅದನ್ನು ಮರಳಿ ಪಡೆಯಲು ಸಾಧ್ಯವಾಗದ ಸಾಕಷ್ಟು ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬರುತ್ತಲೇ ಇದೆ. ಇಂಥದ್ದೊಂದು ದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳುತ್ತಿದೆ. ಡಿಜಿಟಲ್ ಪಾವತಿ ಮಾಡಿದ 4 ಗಂಟೆಯೊಳಗೆ ಹಣ ಹಿಂಪಡೆಯುವ ಅವಕಾಶ ಕೊಡುವ (reverse transaction) ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬಹುದು. ಇದು ಕೇವಲ ಯುಪಿಐ ಮಾತ್ರವಲ್ಲ, ಇತರ ಡಿಜಿಟಲ್ ವಹಿವಾಟುಗಳಾದ ಐಎಂಪಿಎಸ್, ಆರ್ಟಿಜಿಎಸ್ನಲ್ಲೂ 4 ಗಂಟೆ ಮಿತಿಯ (4-hour time limit) ಈ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ.
ಮೊದಲ ಬಾರಿಗೆ ಒಂದು ಖಾತೆಗೆ 2,000 ರೂಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಿದಾಗ 4 ಗಂಟೆಯ ಮಿತಿಯನ್ನು ಸೇರಿಸಲು ಉದ್ದೇಶಿಸಲಾಗಿದೆ. ಸರ್ಕಾರ ಹಾಗೂ ಉದ್ಯಮದ ಸಂಬಂಧಿತರ ಮಧ್ಯೆ ನಡೆಯುವ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಗುವುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಿವಿಧ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು, ಗೂಗಲ್, ರೇಜರ್ಪೇ ಮೊದಲಾದ ಟೆಕ್ ಕಂಪನಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: Jeevan Utsav: ಎಲ್ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?
4 ಗಂಟೆ ಟೈಮ್ ಲಿಮಿಟ್ ಹೇಗೆ ಕೆಲಸ ಮಾಡುತ್ತೆ?
ಎನ್ಇಎಫ್ಟಿಯಲ್ಲಿ ಕಳುಹಿಸಲಾದ ಹಣ ರವಾನೆಯಾಗಲು ಕೆಲ ಗಂಟೆಗಳಾಗಬಹುದು. ಅದೇ ರೀತಿ 4 ಗಂಟೆ ಕಾಲಮಿತಿಯ ಸೌಲಭ್ಯ ಮಾಡುವ ಪ್ರಸ್ತಾಪ ಇದೆ. ಉದಾಹರಣೆಗೆ, ನೀವು ಈ ಹೊಸ ಯುಪಿಐ ಐಡಿಗೆ ಅಥವಾ ನಂಬರ್ಗೆ ಮೊದಲ ಬಾರಿಗೆ ಹಣ ಕಳುಹಿಸುತ್ತೀರಿ. ಆ ಹಣ ತತ್ಕ್ಷಣ ವರ್ಗಾವಣೆ ಆಗದೇ 4 ಗಂಟೆವರೆಗೂ ಉಳಿದಿರುತ್ತದೆ. ನೀವು ತಪ್ಪಾಗಿ ಹಣ ಕಳುಹಿಸಿದ್ದರೆ ಅದನ್ನು ಮರಳಿ ಪಡೆಯುವ ಅವಕಾಶ ಇರುತ್ತದೆ. ಸದ್ಯ 2,000 ರೂ ಮೇಲ್ಪಟ್ಟ ಹಣದ ವಹಿವಾಟಿನಲ್ಲಿ ಈ ಅವಕಾಶ ಕೊಡಲಾಗಿದೆ.
‘…ಮೊದಲಿಗೆ ಎಲ್ಲಾ ಮೊತ್ತಕ್ಕೂ ಈ ಕಾಲಮಿತಿಯನ್ನು ಅಳವಡಿಸಬೇಕು ಎಂದಿದ್ದೆವು. ಆದರೆ, ಆ ರೀತಿ ಮಾಡಿದರೆ ದಿನಸಿ ಮಾರಾಟದಂತಹ ಸಣ್ಣ ವಹಿವಾಟುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ವಿಚಾರವು ಉದ್ಯಮದವರೊಂದಿಗೆ ಔಪಚಾರಿಕವಾಗಿ ಚರ್ಚಿಸುವಾಗ ಗಮನಕ್ಕೆ ಬಂದಿತು. ಹೀಗಾಗಿ, ಎರಡು ಸಾವಿರ ರೂಗಿಂತ ಕಡಿಮೆ ಮೊತ್ತದ ವಹಿವಾಟನ್ನು ಇದರಿಂದ ಹೊರತಾಗಿಸಲು ನಿರ್ಧರಿಸಿದೆವು,’ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Thu, 30 November 23