ನವದೆಹಲಿ, ಮಾರ್ಚ್ 24: ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗೆ (general elections) ವಿವಿಧ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರಲು ಪಣತೊಟ್ಟಿದೆ. ಅಪ್ ಕೀ ಬಾರ್ 400 ಕೀ ಬಹಾರ್ ಎಂಬ ಸ್ಲೋಗನ್ ದಟ್ಟವಾಗುತ್ತಿದೆ. ಬಿಜೆಪಿ, ಅದರಲ್ಲೂ ಮೋದಿಗೆ ವಿದೇಶಗಳಲ್ಲಿರುವ ಭಾರತೀಯ ಸಮುದಾಯಗಳ ಜನರು ಸತತವಾಗಿ ಬೆಂಬಲ ಕೊಡುತ್ತಾ ಬಂದಿದ್ದಾರೆ. ಅಂತೆಯೇ ಈ ಬಾರಿ ವಿದೇಶಗಳಲ್ಲೂ ಮೋದಿ ಪರ ಕಲರವ ಕೇಳಿಬರತೊಡಗಿದೆ. ಆಸ್ಟ್ರೇಲಿಯಾದ ‘ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ (Overseas friends of BJP) ಸಂಘಟನೆಯು ‘ಮೋದಿ ಫಾರ್ 2024’ (Modi for 2024) ಎನ್ನುವ ಅಭಿಯಾನ ನಡೆಸುತ್ತಿದೆ. ಏಳು ಪ್ರಮುಖ ನಗರಗಳಲ್ಲಿ ಈ ಆಂದೋಲನ ನಡೆಯಲಿದೆ.
ಪಿಎಂ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟಕ್ಕೆ ವಿದೇಶಗಳಲ್ಲಿ ಬೆಂಬಲ ತೋರಿಸಲು ಈ ಪ್ರಚಾರ ನಡೆಯುತ್ತಿದೆ. ಸಿಡ್ನಿ ಹಾರ್ಬರ್ ಬ್ರಿಡ್ಜ್, ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಪರ್ತ್ ಆಪ್ಟಸ್ ಸ್ಟೇಡಿಯಂ, ಬ್ರಿಸ್ಬೇನ್ ಗಾಬ್ಬಾ ಸ್ಟೇಡಿಯಂ, ಗೋಲ್ಡ್ ಕೋಸ್ಟ್ನ ಸರ್ಫರ್ಸ್ ಪ್ಯಾರಡೈಸ್, ಕ್ಯಾನ್ಬೆರಾದ ಮೌಂಟ್ ಏನ್ಸ್ಲೀ, ಅಡಿಲೇಡ್ನ ನೇವಲ್ ಮೆಮೋರಿಯಲ್ ಗಾರ್ಡನ್ನಲ್ಲಿ ದೊಡ್ಡ ಪ್ರಚಾರ ಕಾರ್ಯಕ್ರಮ ಆರಂಭಿಸಲಾಗಿದೆ.
ಇತ್ತೀಚೆಗೆ ಬ್ರಿಟನ್ ದೇಶದಲ್ಲಿರುವ ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಸಂಘಟನೆ ನರೇಂದ್ರ ಮೋದಿಗೆ ಚುನಾವಣೆಯಲ್ಲಿ ಬೆಂಬಲವಾಗಿ ಲಂಡನ್ನಲ್ಲಿ ಕಾರ್ ರ್ಯಾಲಿ ನಡೆಸಿತ್ತು. 250 ಕಾರುಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇಲ್ಲಿ ಜನರು ಭಾರತದ ರಾಷ್ಟ್ರಧ್ವಜ ಮತ್ತು ಬಿಜೆಪಿಯ ಧ್ವಜಗಳನ್ನು ಹಿಡಿದುಕೊಂಡಿದ್ದರು.
ಇದನ್ನೂ ಓದಿ: ಇದು ‘ಮೋದಿ ಕಿ ಗ್ಯಾರಂಟಿ’; ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಧನ್ಯವಾದ ಸಲ್ಲಿಸಿದ ಭೂತಾನ್ ಪಿಎಂ
ಬ್ರಿಟನ್ನ ಹಿರಿಯ ಸಂಸದ ಬಾಬ್ ಬ್ಲ್ಯಾಕ್ಮ್ಯಾನ್ ಈ ಸಂದರ್ಭದಲ್ಲಿ ಮಾತನಾಡಿ, ಎನ್ಡಿಎ ಮೈತ್ರಿಕೂಟ ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ. ಇಲ್ಲಿ ನಾವು ಮತ್ತು ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭಾರತ ಹಾಗೂ ಬ್ರಿಟನ್ ಮಧ್ಯೆ ಗೆಳೆತನ ಹೆಚ್ಚು ಗಾಢವಾಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ನಡೆಯುತ್ತದೆ. ಜೂನ್ 4ರಂದು ಮತ ಎಣಿಕೆ ಆಗಲಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Sun, 24 March 24