DA Hike Today: ಸರ್ಕಾರಿ ನೌಕರರಿಗೆ ಖುಷಿ ಸುದ್ದಿ; ಡಿಎ ಹೆಚ್ಚಳಕ್ಕೆ ಇಂದೇ ಘೋಷಣೆ ಸಾಧ್ಯತೆ; ಹಳೆಯ ಬಾಕಿಯೂ ಸಿಗುತ್ತಾ?

7th Pay Commission Update: ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಿಸುವ ನಿರ್ಧಾರಕ್ಕೆ ಸಮ್ಮತಿಸಬಹುದು ಎನ್ನುವ ವರದಿಗಳಿವೆ. ಡಿಆರ್ ಕೂಡ ಶೇ. 4ರಷ್ಟು ಹೆಚ್ಚಾಗಲಿದೆ. ಆದರೆ, ಡಿಎ ಡಿಆರ್​ನ ಹಿಂದಿನ ಬಾಕಿ ಈಗ ಸಂದಾಯ ಆಗುವುದು ಅನುಮಾನ.

DA Hike Today: ಸರ್ಕಾರಿ ನೌಕರರಿಗೆ ಖುಷಿ ಸುದ್ದಿ; ಡಿಎ ಹೆಚ್ಚಳಕ್ಕೆ ಇಂದೇ ಘೋಷಣೆ ಸಾಧ್ಯತೆ; ಹಳೆಯ ಬಾಕಿಯೂ ಸಿಗುತ್ತಾ?
ಸರ್ಕಾರಿ ನೌಕರರು

Updated on: Mar 15, 2023 | 11:38 AM

ನವದೆಹಲಿ: ತುಟ್ಟಿ ಭತ್ಯೆ (Dearness Allowance) ಹೆಚ್ಚಳ, ಹಿಂದಿನ ಬಾಕಿ ಹಣದ (DA Arrears) ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರಿಗೆ ಇಂದು ಖುಷಿಯ ಸುದ್ದಿ ಸಿಗಬಹುದು. ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ (DR- Dearness Relief) ಹೆಚ್ಚಳ ಮಾಡಿ ಇಂದೇ ಪ್ರಕಟಿಸಬಹುದು ಎಂಬಂತಹ ಸುದ್ದಿ ದಟ್ಟವಾಗಿದೆ. ಹೋಳಿ ಬಳಿಕ ಡಿಎ ಹೆಚ್ಚಳ ಘೋಷಿಸಬಹುದು ಎನ್ನಲಾಗಿತ್ತು. ಇದೀಗ ಹೋಳಿ ಮುಗಿದಿದೆ. ಹಲವು ವರದಿಗಳು ಮಾರ್ಚ್ 15, ಬುಧವಾರ, ಅಂದರೆ ಇಂದು ಕೇಂದ್ರ ಸಂಪುಟ ಸಭೆಯ ಬಳಿಕ ತುಟ್ಟಿ ಭತ್ಯೆ ಹೆಚ್ಚಿಸುವ ನಿರ್ಧಾರ ಘೋಷಣೆ ಆಗಬಹುದು ಎಂದಿವೆ. ಡಿಎ ಶೇ. 4ರಷ್ಟು ಹೆಚ್ಚಾಗಬಹುದು. ಜೊತೆಗೆ ಡಿಆರ್ (ಡಿಯರ್ನೆಸ್ ರಿಲೀಫ್) ಕೂಡ ಶೇ. 4ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಡಿಎ, ಅಂದರೆ ತುಟ್ಟಿ ಭತ್ಯೆಯು ಹಾಲಿ ಉದ್ಯೋಗದಲ್ಲಿರುವ ಕೇಂದ್ರ ಸರ್ಕಾರಿ ನೌಕರರ ಸಂಬಳಕ್ಕೆ ಅನ್ವಯ ಆಗುತ್ತದೆ. ಡಿಆರ್ ಎಂಬುದು ನಿವೃತ್ತ ಸರ್ಕಾರಿ ನೌಕರರ ಪಿಂಚಣಿಗೆ ಸೇರ್ಪಡೆಯಾಗುತ್ತದೆ. ಸದ್ಯ ಸರ್ಕಾರಿ ನೌಕರರ ಸಂಬಳದಲ್ಲಿ ಶೇ. 38ರಷ್ಟು ಡಿಎ ಇದ್ದು, ಅದೀಗ ಶೇ. 42ಕ್ಕೆ ಹೆಚ್ಚಾಗುತ್ತದೆ. 2023, ಜನವರಿ 1ರಿಂದ ಇದು ಅನ್ವಯವಾಗುವಂತೆ ಜಾರಿಗೆ ಬರುತ್ತದೆ.

ಡಿಎ ಯಾಕೆ ಕೊಡಲಾಗುತ್ತದೆ?

ಡಿಎ ಎಂದರೆ ಡಿಯರ್ನೆಸ್ ಅಲೋಯನ್ಸ್, ಅಥವಾ ತುಟ್ಟಿ ಭತ್ಯೆ. ಪ್ರತೀ ವರ್ಷವೂ ದೈನಂದಿನ ಬಳಕೆಯ ವಸ್ತುಗಳ ಬೆಲೆ ಸಾಕಷ್ಟು ಹೆಚ್ಚುತ್ತಿರುತ್ತದೆ. ಸಂಬಳದಲ್ಲಿ ಕೆಲಸ ಮಾಡುವ ನೌಕರರಿಗೆ ಈ ಬೆಲೆ ಏರಿಕೆಯ ಬಿಸಿ ಅಷ್ಟಾಗಿ ತಾಕಬಾರದು ಎಂಬ ಉದ್ದೇಶದಿಂದ ಆಗಾಗ್ಗೆ ಡಿಎ ಹೆಚ್ಚಳ ಮಾಡಲಾಗುತ್ತಿರುತ್ತದೆ. ಈಗ ಶೇ. 38ರಷ್ಟು ಡಿಎ ಇದೆ ಎಂದರೆ ಅದು ನೌಕರನ ಮೂಲ ಸಂಬಳದ ಶೇ. 38ರಷ್ಟು ಮೊತ್ತವಾಗುತ್ತದೆ. ಉದಾಹರಣೆಗೆ ನೌಕರನ ಬೇಸಿಕ್ ಸ್ಯಾಲರಿ 25,000 ರೂ ಇದ್ದರೆ ಅವರಿಗೆ ಶೇ. 38ರಷ್ಟು ಡಿಎ ಎಂದರೆ ಅದು 9,500 ರೂ ಆಗುತ್ತದೆ. ಡಿಎ ಶೇ. 42ಕ್ಕೆ ಹೆಚ್ಚಳವಾದರೆ ಇದೇ ನೌಕರನಿಗೆ ಸಿಗುವ ಡಿಎ 10,500 ರೂ ಆಗುತ್ತದೆ. ಸಾಮಾನ್ಯವಾಗಿ ಸರ್ಕಾರ ಪ್ರತೀ ವರ್ಷ ಎರಡು ಬಾರಿ ಡಿಎ ಮತ್ತು ಡಿಆರ್ ಹೆಚ್ಚಳ ಮಾಡುತ್ತದೆ.

ಇದನ್ನೂ ಓದಿSamosa Shop: 30 ಲಕ್ಷ ಸಂಬಳದ ಕೆಲಸ ಬಿಟ್ಟು, ಮನೆ ಮಾರಿ ಸಮೋಸಾ ಮಾರುತ್ತಿರುವ ಬೆಂಗಳೂರಿನ ದಂಪತಿ; ಇವರ ಸಂಪಾದನೆ ಕೇಳಿದರೆ ಶಾಕ್ ಆಗುತ್ತೀರಿ…

ಫಿಟ್ಮೆಂಟ್ ಫ್ಯಾಕ್ಟರ್

ಇದೇ ವೇಳೆ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂಬಂತಹ ಬಹಳ ದೊಡ್ಡ ಸುದ್ದಿ ಇದೆ. ಫಿಟ್ಮೆಂಟ್ ಫ್ಯಾಕ್ಟರ್ ಎಂಬುದು ಸಂಬಳ ಹೆಚ್ಚಿಸುವ ಒಂದು ಕ್ರಮ. ಸದ್ಯ ಫಿಟ್ಮೆಂಟ್ ಫ್ಯಾಕ್ಟರ್ 2.57 ಇದೆ. ಇದನ್ನು 3.68ಕ್ಕೆ ಏರಿಸಬೇಕೆಂಬ ಒತ್ತಾಯ ಇದೆ. ಇದು ಜಾರಿಗೆ ಬಂದಲ್ಲಿ ನೌಕರರ ಸಂಬಳ ಬಹಳ ಹೆಚ್ಚಾಗುತ್ತದೆ. ಆದರೆ ಇಂದೇ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ.

ಅರಿಯರ್ಸ್ ಸಿಕ್ಕಲ್ಲ

ಸರ್ಕಾರಿ ನೌಕರರಿಗೆ ಡಿಎ ಖುಷಿ ಒಂದು ಕಡೆಯಾದರೆ ಹಳೆಯ ಡಿಎ ಬಾಕಿ ಹಣವನ್ನು ಸರ್ಕಾರ ಇನ್ನೂ ಸಂದಾಯ ಮಾಡಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಮಾರ್ಚ್ 13ರಂದು ಕೇಂದ್ರ ಸಚಿವ ಪಂಕಜ್ ಚೌಧರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹಳೆಯ ಡಿಎ ಬಾಕಿ ಹಣ ಈಗಲೇ ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ7th Pay Commission: ಶೀಘ್ರದಲ್ಲೇ ಡಿಎ ಮತ್ತು ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ ಸಾಧ್ಯತೆ; ಏನಿದು ಫಿಟ್ಮೆಂಟ್ ಏರಿಕೆ?

2020 ಜನವರಿ 1, 2020 ಜುಲೈ 1 ಮತ್ತು 2021 ಜನವರಿ 1, ಈ ಮೂರು ಬಾರಿ ಸರ್ಕಾರ ಡಿಎ ಹೆಚ್ಚಿಸಿತ್ತು. ಆ ಹೆಚ್ಚಳ ಇನ್ನೂ ಕಾಗದಲ್ಲೇ ಇದ್ದು ಇನ್ನೂ ಜಾರಿಗೆ ಬಂದಿಲ್ಲ. ಕೋವಿಡ್​ನಿಂದ ಆರ್ಥಿಕತೆ ಕುಂಠಿತಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಈ ಅರಿಯರ್ಸ್ ಅನ್ನು ತಡೆಹಿಡಿದಿತ್ತು. ಈಗಲೂ ಕೂಡ ಆರ್ಥಿಕ ಹಿನ್ನಡೆ ಕಾರಣಕ್ಕೆ ಅರಿಯರ್ಸ್ ನೀಡುವುದನ್ನು ಮುಂದಕ್ಕೆ ಹಾಕಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ