Crorepati: ವರ್ಷಕ್ಕೆ ಶೇ. 15 ವೃದ್ಧಿ; 15 ವರ್ಷದಲ್ಲಿ 1.38 ಕೋಟಿ ಹಣ ನಿಮ್ಮದಾಗಿಸಿಕೊಳ್ಳಿ; ಇದು ಹೇಗೆ ಸಾಧ್ಯ?
Happy Investment Tips: 15 ವರ್ಷದಲ್ಲಿ 1 ಕೋಟಿಗೂ ಹೆಚ್ಚು ಹಣ ನಿಮ್ಮ ಕೈ ಸೇರಲು ತಿಂಗಳಿಗೆ 15 ಸಾವಿರ ರೂ ಹೂಡಿಕೆ ಮಾಡಿದರೂ ಸಾಕು. ಇದು ಹೇಗೆ ಸಾಧ್ಯ? ಹಣಕಾಸು ತಜ್ಞರು ಮುಂದಿಡುವ 15-15-15 ಸೂತ್ರ ವರ್ಕೌಟ್ ಆಗುತ್ತದೆ.
ನಿಮ್ಮ ಬಳಿ ಲಕ್ಷ್ಮೀ ಒಲಿದು ಬರಬೇಕೆಂದರೆ ಮೂರು ಅಂಶಗಳು ಬಹಳ ಮುಖ್ಯ. ಮೊದಲನೆಯದು ಹಣ ಸಂಪಾದನೆ. ವ್ಯವಹಾರವೋ, ಕೆಲಸವೋ ಹೇಗಾದರೂ ಸರಿ ಹಣ ಸಂಪಾದನೆ ಮಾಡಬೇಕು. ಎರಡನೆಯದು, ಹಣ ಉಳಿತಾಯ. ನೀವು ಉಳಿಸಿದ ಪ್ರತೀ ಹಣವೂ ಗಳಿಕೆಗೆ ಸಮ (Every Money Earned Is Every Money Saved) ಎನ್ನುತ್ತಾರೆ ಅನುಭವಿಗಳು. ನಿಮ್ಮ ಆದಾಯದಲ್ಲಿ ಅರ್ಧದಷ್ಟನ್ನಾದರೂ ಹಣವನ್ನು ನೀವು ಉಳಿಸಬೇಕು. ಮೂರನೆಯದು, ನಿಮ್ಮ ಉಳಿತಾಯ ಹಣವನ್ನು ಬೆಳೆಸುವುದು. ಇದು ಹಣವನ್ನು ಲಾಭದಾಯಕ ಯೋಜನೆಗಳಲ್ಲಿ (Investment Schemes) ಹೂಡಿಕೆ ಮಾಡುವ ಮೂಲಕ ಆಗಬಹುದು. ಹಣ ಬೆಳೆಸುವ ವಿಷಯದಲ್ಲಿ ತಜ್ಞರು 15-15-15 ಎಂಬ ಹಣಕಾಸು ಸೂತ್ರ ಮುಂದಿಟ್ಟಿದ್ದಾರೆ. ಇದರ ಪ್ರಕಾರ ನೀವು ಹೆಜ್ಜೆ ಇಟ್ಟರೆ ಬಹಳ ವೇಗವಾಗಿ ಹಣವೃದ್ಧಿಸಿ ನಿಮ್ಮ ಜೀವನದಲ್ಲಿ ಸಮೃದ್ಧಿ ನೆಲಸುವಂತೆ ಮಾಡಬಹುದು.
ಏನಿದು 15-15-15 ಸೂತ್ರ?
ಈ ಸೂತ್ರ ಸಾಂಕೇತಿಕ ಮಾತ್ರ. ಇದನ್ನು ನಿಮ್ಮ ನಿಮ್ಮ ಸಾಮರ್ಥ್ಯ, ಅಗತ್ಯಕ್ಕೆ ತಕ್ಕಂತೆ ವಿವಿಧ ಸ್ತರಗಳಲ್ಲಿ ಅನ್ವಯ ಮಾಡಿಕೊಳ್ಳಬಹುದು. ಈ ಸೂತ್ರದ ಪ್ರಕಾರ ವಾರ್ಷಿಕವಾಗಿ ಶೇ. 15ರಷ್ಟು ಆದಾಯ ಕೊಡಬಲ್ಲ ಹೂಡಿಕೆ ಯೋಜನೆಗಳಲ್ಲಿ ತಿಂಗಳಿಗೆ 15 ಸಾವಿರ ರುಪಾಯಿ ಹೂಡಿಕೆ ಮಾಡುತ್ತಾ ಹೋಗಬೇಕು. 15 ವರ್ಷದ ಬಳಿಕ ನಿಮ್ಮ ಹಣ 1 ಕೋಟಿ ರುಪಾಯಿಗೂ ಹೆಚ್ಚು ಆಗುತ್ತದೆ. ನಿರ್ದಿಷ್ಟ ಮೊತ್ತ ಹೇಳಬೇಕೆಂದರೆ 1.38 ಕೋಟಿ ರುಪಾಯಿ ನಿಮ್ಮ ಬಳಿ ಉಳಿದಿರುತ್ತದೆ.
ಇದನ್ನೂ ಓದಿ: International Consumer Day: ಇನ್ಷೂರೆನ್ಸ್ ಕ್ಲೈಮ್ಗೆ ಆಸ್ಪತ್ರೆಗೆ ದಾಖಲಾಗಲೇಬೇಕಾ? ಗ್ರಾಹಕರ ವೇದಿಕೆ ಕೊಟ್ಟ ತೀರ್ಪಿದು
ಆದರೆ, ಇಲ್ಲಿ ಪ್ರಮುಖವಾಗಿ ಗಮನದಲ್ಲಿರಿಸಬೇಕಾದದ್ದು ನೀವು ಯಾವ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸಿಕೊಳ್ಳುತ್ತೀರಿ, ಅದು ಎಷ್ಟು ಫಲ ಕೊಡುತ್ತದೆ ಎಂಬುದು. ಹಣದುಬ್ಬರ (Inflation) ಇತ್ಯಾದಿ ಬೆಲೆ ಏರಿಕೆಯ ಅಂಶಗಳನ್ನು ಗಣಿಸಿದಾಗ ವರ್ಷಕ್ಕೆ ಶೇ. 15ರಷ್ಟಾದರೂ ಹಣ ವೃದ್ಧಿ ಮಾಡುವಂತಹ ಹೂಡಿಕೆ ಯೋಜನೆಗಳು ಬಹಳ ಮುಖ್ಯ. ಸದ್ಯ ಇರುವ ಇಂತಹ ಓಡುವ ಕುದುರೆಗಳೆಂದರೆ ರಿಯಲ್ ಎಸ್ಟೇಟ್, ಚಿನ್ನ, ಷೇರುಗಳು.
ನೀವು ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡಬಹುದು. ಅಥವಾ ಮ್ಯೂಚುವಲ್ ಫಂಡ್ ಮೂಲಕವಾದರೂ ಹೂಡಿಕೆ ಮಾಡಬಹುದು. ಅದಕ್ಕಾಗಿ ಹಲವು ಎಸ್ಐಪಿ (SIP- ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಇವೆ. ಯಾವ ಎಸ್ಐಪಿ ಎಷ್ಟು ಲಾಭದಾಯಕ ಎಂಬುದನ್ನು ಗಮನಿಸಿ ಅಂಥವುಗಳ ಮೇಲೆ ಹೂಡಿಕೆ ಮಾಡುತ್ತಾ ಹೋಗಬೇಕು.
ಹೂಡಿಕೆಗೆಂದು ತಿಂಗಳಿಗೆ ಕೇವಲ 15 ಸಾವಿರ ರೂ ಮಾತ್ರ ಬಳಸುತ್ತೀರಿ ಎಂದಾದರೆ 15 ವರ್ಷದಲ್ಲಿ ಕೋಟ್ಯಾಧಿಪತಿ ಆಗಬೇಕೆಂದರೆ ನಿಮ್ಮ ಹೂಡಿಕೆ ಹಣ ಶೇ. 15ರ ದರದಲ್ಲಿ ಬೆಳೆಯುವುದು ಅವಶ್ಯಕ. ಪ್ರತೀ ವರ್ಷ ನಿಮ್ಮ ಹೂಡಿಕೆ ಮೊತ್ತ ಹೆಚ್ಚಿಸಿಕೊಂಡರೆ ಇನ್ನೂ ಹೆಚ್ಚು ಸಂಪತ್ತಿನ ಒಡೆಯರಾಗಬಹುದು. ಮಕ್ಕಳ ಶಿಕ್ಷಣ, ಮನೆ ಖರೀದಿ ಇತ್ಯಾದಿಗೆ ಪ್ರತ್ಯೇಕವಾಗಿ ನೀವು ಹೂಡಿಕೆ ಮಾಡಬಲ್ಲಿರೆಂದರೆ ನಿಮ್ಮ ನಿವೃತ್ತಿ ಜೀವನ ಇನ್ನೂ ಆರಾಮದಾಯಕವಾಗಿರುತ್ತದೆ.