ನವದೆಹಲಿ, ಆಗಸ್ಟ್ 22: ಕೇಂದ್ರ ಸರ್ಕಾರಿ ಉದ್ಯೋಗಿಗಳು ನಿರೀಕ್ಷಿಸುತ್ತಿರುವ ಡಿಎ ಹೆಚ್ಚಳದ (DA Hike) ಘೋಷಣೆ ಈ ತಿಂಗಳು ಮಾಡುವ ಸಾಧ್ಯತೆ ಇಲ್ಲ. ವರದಿಗಳ ಪ್ರಕಾರ ಮುಂದಿನ ತಿಂಗಳು (ಸೆಪ್ಟೆಂಬರ್) ಡಿಎ ಮತ್ತು ಡಿಆರ್ ಪ್ರಕಟಿಸಬಹುದು ಎನ್ನಲಾಗಿದೆ. ಆದರೆ, ಸರ್ಕಾರದಿಂದ ಇನ್ನೂ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಪಿಟಿಐ ಸುದ್ದಿಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಜುಲೈ ತಿಂಗಳ ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ 3 ಪ್ರತಿಶತ ಅಂಕಗಳಷ್ಟು ಹೆಚ್ಚಾಗಬಹುದು. ಹಿಂದಿನ ಪರಿಷ್ಕರಣೆಯಲ್ಲಿ ಡಿಎ ಮತ್ತು ಡಿಆರ್ ಅನ್ನು 4 ಪ್ರತಿಶತ ಅಂಕಗಳಷ್ಟು ಹೆಚ್ಚಿಸಲಾಗಿತ್ತು. ಇದರೊಂದಿಗೆ ಡಿಎ ಮತ್ತು ಡಿಆರ್ ಶೇ. 42ರಷ್ಟಿದೆ. ಈ ಬಾರಿ 3 ಪ್ರತಿಶತಗಳಷ್ಟು ಹೆಚ್ಚಾದರೆ ತುಟ್ಟಿಭತ್ಯೆ ಶೇ. 45ಕ್ಕೆ ಏರಲಿದೆ.
ಪ್ರತೀ ವರ್ಷವೂ ಅಗತ್ಯವಸ್ತುಗಳ ಬೆಲೆ ಏರಿಕೆ ಪರಿಗಣಿಸಿ ಸರ್ಕಾರ ತನ್ನ ಉದ್ಯೋಗಿಗಳಿಗೆ ವರ್ಷದಲ್ಲಿ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಪರಿಷ್ಕರಿಸುತ್ತದೆ. ಬೆಲೆ ಏರಿಕೆ ಬಿಸಿ ತಾಕದಿರಲೆಂದು ತುಟ್ಟಿಭತ್ಯೆ ಸೌಲಭ್ಯ ಒದಗಿಸಲಾಗುತ್ತದೆ. ನೌಕರರ ಮೂಲ ವೇತನಕ್ಕೆ ನಿರ್ದಿಷ್ಟ ಪ್ರಮಾಣದಷ್ಟು ಹಣವನ್ನು ಡಿಎ ಅಥವಾ ಡಿಆರ್ ಅಗಿ ನೀಡಲಾಗುತ್ತದೆ.
ಕಾರ್ಮಿಕ ಇಲಾಖೆ ಪ್ರತೀ ತಿಂಗಳು ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ (ಸಿಪಿಐ-ಐಡಬ್ಲ್ಯು) ಪ್ರಕಟಿಸುತ್ತದೆ. ಇದರ ಇತ್ತೀಚಿನ ದತ್ತಾಂಶದ ಆಧಾರದ ಮೇಲೆ ತುಟ್ಟಿಭತ್ಯೆ ಎಷ್ಟೆಂದು ನಿರ್ಧರಿಸಲಾಗುತ್ತದೆ. ಈ ಬಾರಿಯೂ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಿಸಬೇಕೆಂಬ ಬೇಡಿಕೆ ಮತ್ತು ನಿರೀಕ್ಷೆ ಇತ್ತಾದರೂ ಅಂತಿಮವಾಗಿ ಶೇ. 3ರಷ್ಟು ಮಾತ್ರ ಡಿಎ ಹೆಚ್ಚಿಸುವುದೆಂದು ನಿರ್ಧರಿಸಿರುವುದು ತಿಳಿದುಬಂದಿದೆ. ಹಣಕಾಸು ಸಚಿವಾಲಯದ ವೆಚ್ಚ ವಿಭಾಗವು ಡಿಎ ಹೆಚ್ಚಳದ ಪ್ರಸ್ತಾವವನ್ನು ಕೇಂದ್ರ ಸಂಪುಟದ ಮುಂದಿಡಲಿದೆ. ಇದಕ್ಕೆ ಅನುಮೋದನೆ ದೊರೆತರೆ ಡಿಎ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ಡಿಎ ಬಿಡುಗಡೆ ಆದರೆ ಅದು ಜುಲೈ ತಿಂಗಳಿಂದ ಅನ್ವಯ ಆಗುತ್ತದೆ.
ಇದನ್ನೂ ಓದಿ: ಟಾಟಾ ಗ್ರೂಪ್ ಮಾಲಕತ್ವದ ಕ್ಯಾರಟ್ಲೇನ್ ಕಂಪನಿಯ ಉದ್ಯೋಗಿಗಳಿಗೆ ಸಿಗಲಿದೆ 340 ಕೋಟಿ ರೂ ಮೊತ್ತದ ಪಾಲು
ಡಿಎ ಎಂಬುದು ಡಿಯರ್ನೆಸ್ ಅಲೋಯನ್ಸ್ ಅಥವಾ ತುಟ್ಟಿಭತ್ಯೆಯಾಗಿದ್ದು ಇದು ಹಾಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯ ಆಗುತ್ತದೆ. ಇನ್ನು ಡಿಆರ್ ಎಂಬುದು ನಿವೃತ್ತ ಸರ್ಕಾರಿ ನೌಕರರ ಪಿಂಚಣಿಗೆ ಅನ್ವಯ ಆಗುತ್ತದೆ. ಸರ್ಕಾರ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಎ ಪರಿಷ್ಕರಿಸುತ್ತದೆ. ಜನವರಿ ಮತ್ತು ಜುಲೈ ತಿಂಗಳಿಂದ ಈ ಹೆಚ್ಚಳಗಳು ಅನ್ವಯ ಆಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ