
ನವದೆಹಲಿ, ಜೂನ್ 17: ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಿಗೆ ಕೆಲ ನಿಯಮ ಬದಲಾವಣೆ ಆಡಲಾಗಿದೆ. ಜುಲೈ ನಂತರ ಸೇರ್ಪಡೆಯಾಗುವ ಸರ್ಕಾರಿ ಉದ್ಯೋಗಿಗಳಿಗೆ ಆ ವರ್ಷದ ಡ್ರೆಸ್ ಅಲೋಯನ್ಸ್ ಪೂರ್ಣವಾಗಿ ಸಿಕ್ಕೋದಿಲ್ಲ. ಮುಂದಿನ ವರ್ಷದ ಜೂನ್ವರೆಗೆ ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಭತ್ಯ ಕೊಡಲಾಗುತ್ತದೆ. ಈ ವಿಚಾರವನ್ನು ಇಂದು ಮಂಗಳವಾರ ಕೇಂದ್ರ ಸಂವಹನ ಸಚಿವಾಲಯ ಹೇಳಿದೆ.
ಡ್ರೆಸ್ ಅಲೋಯನ್ಸ್ ಅನ್ನು ಯೂನಿಫಾರ್ಮ್ ಅಲೋಯನ್ಸ್ ಅಥವಾ ಸಮವಸ್ತ್ರ ಭತ್ಯೆ ಎಂದಲೂ ಕರೆಯಲಾಗುತ್ತದೆ. ಹಿಂದೆ ಕ್ಲೋಥಿಂಗ್ ಅಲೋಯನ್ಸ್, ಇನಿಶಿಯಲ್ ಎಕ್ವಿಪ್ಮೆಂಟ್ ಅಲೋಯನ್ಸ್, ಕಿಟ್ ಮೈಂಟೆನನ್ಸ್ ಅಲೋಯನ್ಸ್, ರೋಬ್ ಅಲೋಯನ್ಸ್, ಶೂ ಅಲೋಯನ್ಸ್ ಮತ್ತಿತರ ವಿವಿಧ ಭತ್ಯೆಗಳಿದ್ದುವು. 2017ರಲ್ಲಿ ಹಣಕಾಸು ಸಚಿವಾಲಯವು ಎಲ್ಲಾ ಭತ್ಯೆಗಳನ್ನು ಒಟ್ಟುಗೂಡಿಸಿ ಸಮವಸ್ತ್ರ ಭತ್ಯೆಯನ್ನು ಜಾರಿಗೆ ತಂದಿತು.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ಭತ್ಯೆ ನೀಡಲಾಗುತ್ತದೆ. ಇದು ತುಟ್ಟಿಭತ್ಯೆಗೆ ಪ್ರತ್ಯೇಕವಾಗಿ ಇರುವ ಅಲೋಯನ್ಸ್. ಕೆಲಸಕ್ಕೆ ಸಮವಸ್ತ್ರ ಧರಿಸಬೇಕಾದ ಸೇನೆ, ಪೊಲೀಸ್, ರೈಲ್ವೆ, ಚಾಲಕ, ನರ್ಸ್ ಇತ್ಯಾದಿಯಲ್ಲಿನ ಉದ್ಯೋಗಿಗಳಿಗೆ, ತಮ್ಮ ಸಮವಸ್ತ್ರಕ್ಕೆ ಅವರು ಮಾಡುವ ವೆಚ್ಚವನ್ನು ಭರಿಸಲು ಸರ್ಕಾರ ನೀಡುವ ಧನ ಸಹಾಯವೇ ಈ ಭತ್ಯೆ.
ಇದನ್ನೂ ಓದಿ: ಟಿಸಿಎಸ್ ಉದ್ಯೋಗಿಗಳಿಗೆ 35ಕ್ಕೂ ಹೆಚ್ಚು ದಿನ ಬೆಂಚ್ ಟೈಮ್ ಇಲ್ಲ; ಇದರಿಂದ ಅನುಕೂಲವೇನು?
ಸದ್ಯ ಪ್ರತೀ ವರ್ಷ ಜುಲೈನಲ್ಲಿ ಇಡೀ ವರ್ಷದ ಸಮವಸ್ತ್ರ ಭತ್ಯೆಯನ್ನು ನೀಡಲಾಗುತ್ತದೆ. ಎಲ್ಲರಿಗೂ ಈ ಭತ್ಯೆ ಸಮವಾಗಿರುವುದಿಲ್ಲ. ಇಲಾಖಾವಾರು ವ್ಯತ್ಯಾಸ ಇರುತ್ತದೆ. ಸೇನಾಧಿಕಾರಿಗಳಿಗೆ ವರ್ಷಕ್ಕೆ 20,000 ರೂ ಭತ್ಯೆ ಇರುತ್ತದೆ. ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು, ಎಂಎನ್ಎಸ್ ಅಧಿಕಾರಿಗಳು, ದೆಹಲಿ ಎಸಿಪಿ ಮುಂತಾದವರಿಗೆ 10,000 ರೂ ವಾರ್ಷಿಕ ಭತ್ಯೆ ಇರುತ್ತದೆ. ಡ್ರೈವರ್, ರೈಲ್ ಟ್ರ್ಯಾಕ್ಮೆನ್ ಮೊದಲಾದವರಿಗೆ 5,000 ರೂ ಡ್ರೆಸ್ ಅಲೋಯನ್ಸ್ ಸಿಗುತ್ತದೆ.
ಪರಿಷ್ಕೃತ ನೀತಿ ಪ್ರಕಾರ, 2025ರ ಜುಲೈನ ನಂತರ ನೇಮಕಾತಿ ಆದವರಿಗೆ ಮುಂದಿನ ವರ್ಷದ ಜೂನ್ವರೆಗಿನ ಅವರ ಸೇವಾವಧಿಗೆ ಅನುಗುಣವಾಗಿ ಭತ್ಯೆ ಸಿಗುತ್ತದೆ. ಅದರ ಸೂತ್ರ ಹೀಗಿದೆ:
ಕೈಗೆ ಸಿಗುವ ಭತ್ಯೆ = (ಎ ÷ 12) × ಬಿ
ಇಲ್ಲಿ ಎ ಎಂದರೆ ಉದ್ಯೋಗಿಗೆ ನಿಗದಿತವಾಗಿರುವ ವಾರ್ಷಿಕ ಸಮವಸ್ತ್ರ ಭತ್ಯೆ. ಇನ್ನು, ಬಿ ಎಂದರೆ ಕೆಲಸಕ್ಕೆ ಸೇರಿದ ದಿನದಿಂದ ಜೂನ್ವರೆಗೆ ತಿಂಗಳುಗಳ ಸಂಖ್ಯೆ.
ಇದನ್ನೂ ಓದಿ: ಬರಲಿವೆ ಹೊಸ ಎಸಿ ನಿಯಮಗಳು; ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಗೆ ಇಳಿಸುವಂತಿಲ್ಲ; ಗರಿಷ್ಠ ಉಷ್ಣಾಂಶಕ್ಕೂ ಮಿತಿ
ಉದಾಹರಣೆಗೆ, ನಿಮಗೆ ವರ್ಷಕ್ಕೆ 10,000 ಸಮವಸ್ತ್ರ ಭತ್ಯೆ ಎಂದು ನಿಗದಿಯಾಗಿರುತ್ತದೆ. ನೀವು 2025ರ ಸೆಪ್ಟೆಂಬರ್ನಲ್ಲಿ ನೇಮಕಾತಿ ಆಗಿರುತ್ತೀರಿ. ಆಗ ಲೆಕ್ಕಾಚಾರ ಹೀಗೆ ಹಾಕಬಹುದು.
(10000÷12) × 10 = 8,333
ಹಿಂದಿನ ನಿಯಮ ಇದ್ದಿದ್ದರೆ ನಿಮಗೆ ಪೂರ್ಣ 10,000 ರೂ ಭತ್ಯೆ ಸಿಗುತ್ತಿತ್ತು. ಹೊಸ ನಿಯಮದಲ್ಲಿ ನಿಮಗೆ 8,333 ರೂ ಸಿಗುತ್ತದೆ. ಇದು ಉದಾಹರಣೆಗೆ ಮಾತ್ರ. ಹಾಗೂ ಈ ವರ್ಷ ಜುಲೈ ನಂತರ ನೇಮಕಾತಿ ಆದವರಿಗೆ ಅನ್ವಯ ಆಗುವ ನಿಯಮ. ಮುಂದಿನ ವರ್ಷದಿಂದ ನಿಮಗೆ ಪೂರ್ಣ ನಿಗದಿತ ಸಮವಸ್ತ್ರ ಭತ್ಯೆ ಸಿಗುತ್ತಾ ಹೋಗುತ್ತದೆ. 2025ರ ಜೂನ್ಗಿಂತ ಮೊದಲು ನೇಮಕಾತಿ ಆದವರಿಗೆ ಹಿಂದಿನ ನಿಯಮ ಅನ್ವಯ ಆಗುತ್ತದೆ. ಅಂದರೆ, ಅವರು ನೇಮಕಗೊಂಡ ವರ್ಷದಲ್ಲಿ ಎಷ್ಟೇ ತಿಂಗಳು ಕೆಲಸ ಮಾಡಿರಲಿ, ಪೂರ್ಣ ಸಮವಸ್ತ್ರ ಭತ್ಯೆ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ