
ನವದೆಹಲಿ, ಫೆಬ್ರುವರಿ 2: ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಕಳವಳ ಮತ್ತು ಟೀಕೆ ಮಾಡುತ್ತಲೇ ಬಂದಿರುವ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳ ವಿರುದ್ಧ ಸರ್ಕಾರ ಹರಿಹಾಯಲು ಹೊಸ ಅಸ್ತ್ರ ಸಿಕ್ಕಿದೆ. ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ (Elon Musk) ಅವರು ಭಾರತದ ಆರ್ಥಿಕ ಉನ್ನತಿಯನ್ನು ಪುಷ್ಟೀಕರಿಸಿ ಮಾಡಿರುವ ಟ್ವೀಟ್ವೊಂದು ಈಗ ಸರ್ಕಾರಕ್ಕೆ ಹೊಸ ಶಸ್ತ್ರವಾಗಿ ಪರಿಣಮಿಸಿದೆ.
‘ಭಾರತೀಯರಲ್ಲದವರು ನೀಡುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ. ರಾಹುಲ್ ಗಾಂಧಿಗೆ ತಿಳಿಹೇಳಲು ಇಲಾನ್ ಮಸ್ಕ್ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದೇನೆ. ಸರ್ಕಾರವನ್ನು ಟೀಕಿಸುವುದು ಪ್ರಜಾತಾಂತ್ರಿಕ ಹಕ್ಕು ಹೌದಾದರೂ ಭಾರತವನ್ನು ಹೀಯಾಳಿಸುವುದು ತರವಲ್ಲ. ಭಾರತದ ಸಾಧನೆಯನ್ನು ಯಾವತ್ತೂ ಹಂಗಿಸಬೇಡಿ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕೀರೆನ್ ರೀಜಿಜು ಟ್ವೀಟ್ ಮಾಡಿದ್ದಾರೆ.
ಕಿರೆನ್ ರಿಜಿಜು ಅವರ ಟ್ವೀಟ್
ನಿನ್ನೆ ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಅವರು ವಿದ್ಯಾರ್ಥಿಗಳ ಗುಂಪೊಂದಿಗೆ ಸಂವಾದ ನಡೆಸುತ್ತಿದ್ದಾಗ ಇಲಾನ್ ಮಸ್ಕ್ ಅವರ ಟ್ವೀಟ್ ಅನ್ನು ಪ್ರಸ್ತಾಪಿಸಿದರು. ಭಾರತದ ಆರ್ಥಿಕ ಶಕ್ತಿಯು ಇಲಾನ್ ಮಸ್ಕ್ ಅವರ ಗಮನ ಸೆಳೆದಿರುವ ಸಂಗತಿಯನ್ನು ಅವರು ಎತ್ತಿತೋರಿಸಿದರು.
ಇದನ್ನೂ ಓದಿ: ಬಜೆಟ್ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ಗಳ ಹವಾ
2026ರಲ್ಲಿ ಜಾಗತಿಕ ಜಿಡಿಪಿ ಹೆಚ್ಚಳದಲ್ಲಿ ಅತಿಹೆಚ್ಚು ಕೊಡುಗೆ ನೀಡಲಿರುವ ದೇಶಗಳ ಪಟ್ಟಿಯೊಂದನ್ನು ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಅಕೌಂಟ್ನಿಂ ಟ್ವೀಟ್ ಮಾಡಲಾಗಿದೆ. ಚೀನಾ ಶೇ. 26.6 ಕೊಡುಗೆಯೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತ ಶೇ. 17 ಕೊಡುಗೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಶೇ. 9.9ರಷ್ಟು ಮಾತ್ರ ಕೊಡುಗೆ ನೀಡಲಿದ್ದು, ಮೂರನೇ ಸ್ಥಾನದಲ್ಲಿದೆ. ಐಎಂಎಫ್ನ ಡಾಟಾ ಆಧರಿಸಿ ಈ ಪಟ್ಟಿ ಮಾಡಲಾಗಿದೆ.
ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ನ ಈ ಟ್ವೀಟ್ ಅನ್ನು ಇಲಾನ್ ಮಸ್ಕ್ ಹಂಚಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ‘ಅಧಿಕಾರದ ಸಮತೋಲನ ಬದಲಾಗುತ್ತಿದೆ’ ಎಂದು ನಿಗೂಢವೆನಿಸುವ ಹೇಳಿಕೆ ನೀಡಿದ್ದಾರೆ. ಅಮೆರಿಕದ ಶಕ್ತಿಯನ್ನು ಚೀನಾ ಮತ್ತು ಭಾರತ ಹಿಂದಿಕ್ಕಿರುವುದನ್ನು ಇಲಾನ್ ಮಸ್ಕ್ ಗುರುತಿಸಿದಂತಿತ್ತು ಆ ಟ್ವೀಟ್.
‘ಇಂಥದ್ದೊಂದು ಶಕ್ತಿಯನ್ನು ಭಾರತ ಈಗ ಸಂಪಾದಿಸಿದೆ. ಚೀನಾ ನಂತರ ನಾವಿದ್ದೇವೆ. ಸದ್ಯ ಅಂತರ ಹೆಚ್ಚಿರಬಹುದು. ಆದರೆ ನಾವದನ್ನು ತುಂಬುತ್ತೇವೆ’ ಎಂದು ನಿರ್ಮಲಾ ಸೀತಾರಾಮನ್ ಅವರು ವಿಶ್ವಾಸದಿಂದ ಹೇಳಿದ್ದಾರೆ.
ಇಲಾನ್ ಮಸ್ಕ್ ಅವರ ಟ್ವೀಟ್
ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ
ಭಾರತದ್ದು ಸತ್ತ ಆರ್ಥಿಕತೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಅನುಮೋದಿಸಿದ್ದ ರಾಹುಲ್ ಗಾಂಧಿ, ನಿನ್ನೆಯ ಬಜೆಟ್ ಅನ್ನೂ ಲೇವಡಿ ಮಾಡಿದ್ದಾರೆ. ‘ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳದ ಈ ಬಜೆಟ್ ಭಾರತದ ನಿಜವಾದ ಬಿಕ್ಕಟ್ಟುಗಳಿಗೆ ಕುರುಡಾಗಿದೆ’ ಎಂದು ಟೀಕಿಸಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್, ‘ಯಾವ ತಪ್ಪು ಸರಿಪಡಿಸಿಕೊಳ್ಳುವ ಬಗ್ಗೆ ಅವರು ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ಆರ್ಥಿಕತೆ ಹಾಗೂ ಅದರ ಮೂಲಾಂಶಗಳು ಪ್ರಬಲವಾಗಿವೆ’ ಎಂದು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ