
ನವದೆಹಲಿ, ಅಕ್ಟೋಬರ್ 16: ಎಲೆಕ್ಟ್ರಿಕ್ ವಾಹನಗಳು ಹಾಗೂ ಬ್ಯಾಟರಿಗಳ ತಯಾರಿಕೆಗೆ ಭಾರತ ಸಬ್ಸಿಡಿ ನೀಡುತ್ತಿರುವುದನ್ನು ಪ್ರಶ್ನಿಸಿ ಚೀನಾ (China) ವಿಶ್ವ ವ್ಯಾಪಾರ ಸಂಘಟನೆಯಾದ ಡಬ್ಲ್ಯುಟಿಒಗೆ ದೂರು ನೀಡಿದೆ. ಭಾರತ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದ ಅದರ ದೇಶೀಯ ಉದ್ಯಮಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಚೀನಾದ ಉತ್ಪನ್ನಗಳಿಗೆ ಅನನುಕೂಲವಾಗುತ್ತದೆ. ಈ ರೀತಿ ಸಬ್ಸಿಡಿಗಳನ್ನು ನೀಡುವುದು ಜಾಗತಿಕ ವ್ಯಾಪಾರ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂಬುದು ಚೀನಾ ಎತ್ತಿರುವ ತಗಾದೆ.
ಚೀನಾ ಈ ಸಬ್ಸಿಡಿ ವಿಚಾರದಲ್ಲಿ ಡಬ್ಲ್ಯುಟಿಒದಲ್ಲಿ ಭಾರತದ ವಿರುದ್ಧ ಮಾತ್ರವಲ್ಲ, ಟರ್ಕಿ, ಕೆನಡಾ, ಯೂರೋಪ್ ಯೂನಿಯನ್ ವಿರುದ್ಧವೂ ಇದೇ ರೀತಿಯಲ್ಲಿ ದೂರು ನೀಡಿದೆ. ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ವಿಶ್ವದಲ್ಲೇ ಚೀನಾ ಮುಂಚೂಣಿಯಲ್ಲಿದೆ. ವಿಶ್ವದ ಇವಿ ಮಾರುಕಟ್ಟೆಯಲ್ಲಿ ಚೀನಾ ಪೂರ್ಣ ಪ್ರಾಬಲ್ಯ ಸಾಧಿಸಿದೆ. ಚೀನಾದ ಇವಿ ಮಾರುಕಟ್ಟೆಯಲ್ಲಿ ಈಗ ಮೊದಲಿನಷ್ಟು ವೇಗದಲ್ಲಿ ಬೆಳೆಯುತ್ತಿಲ್ಲವಾದ್ದರಿಂದ ಇತರ ಮಾರುಕಟ್ಟೆಗಳಲ್ಲಿ ಸುಲಭ ಪ್ರವೇಶಕ್ಕೆ ಚೀನಾ ಇದಿರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಅದು ಡಬ್ಲ್ಯುಟಿಒ ಅಸ್ತ್ರ ಬಳಸಲು ಯತ್ನಿಸುತ್ತಿರಬಹುದು.
ಇದನ್ನೂ ಓದಿ: ರಷ್ಯನ್ ತೈಲ ಖರೀದಿಸಲ್ಲ ಅಂತ ಟ್ರಂಪ್ಗೆ ಮೋದಿ ಭರವಸೆ ಕೊಟ್ಟರಾ? ಇಲ್ಲಿದೆ ಭಾರತದ ನಿಲುವು
ಭಾರತದ ಇವಿ ಮಾರುಕಟ್ಟೆ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ದೇಶೀಯ ಇವಿ ಕಾರು ತಯಾರಕರನ್ನು ಉತ್ತೇಜಿಸಲು ಸರ್ಕಾರ ಪಿಎಲ್ಐ ಸ್ಕೀಮ್ ಮೂಲಕ ಸಬ್ಸಿಡಿ ಒದಗಿಸುತ್ತಿದೆ. ಇದರಿಂದ ಚೀನಾದ ಇವಿ ಉತ್ಪನ್ನಗಳ ಬೆಲೆ ಅನುಕೂಲತೆಗಳು ಭಾರತೀಯ ಮಾರುಕಟ್ಟೆಯಲ್ಲಿ ಸಿಗದೇ ಹೋಗಬಹುದು ಎನ್ನುವ ಆತಂಕ ಚೀನಾದ್ದು.
ಭಾರತದ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಪ್ರತಿಕ್ರಿಯಿಸಿದ್ದು, ಚೀನಾದ ಆಕ್ಷೇಪಗಳನ್ನು ವಿವರವಾಗಿ ಅವಲೋಕಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಈ ವರ್ಷ ಬಿಗ್ ಕ್ರ್ಯಾಷ್; ಕರೆನ್ಸಿಗೆ ಇರಲ್ಲ ಮೌಲ್ಯ; ಚಿನ್ನ, ಬೆಳ್ಳಿ, ಬಿಟ್ಕಾಯಿನ್ನಂತಹ ಆಸ್ತಿಗಳಿಗೆ ಉಳಿಗಾಲ: ಕಿಯೋಸಾಕಿ
ಭಾರತದ ಜೊತೆ ಸಮಾಲೋಚನೆಗೆ ಚೀನಾ ಡಬ್ಲ್ಯುಟಿಒದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಡಬ್ಲ್ಯುಟಿಒ ನಿಯಮಗಳ ಬಳಿಕ ವಿವಿಧ ದೇಶಗಳ ನಡುವೆ ವ್ಯಾಪಾರ ನಿಯಮಗಳಲ್ಲಿ ವ್ಯಾಜ್ಯ ಕಾಣಿಸಿದಾಗ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಆ ದೇಶಗಳ ನಡುವೆ ಮಾತುಕತೆ ಅಥವಾ ಸಮಾಲೋಚನೆ ನಡೆಯಬೇಕು. ಅದು ಮೊದಲ ಹೆಜ್ಜೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ