ಸಿಗರೇಟ್ ಇತ್ಯಾದಿಗೆ ಸಿನ್ ಟ್ಯಾಕ್ಸ್; ಆದ್ರೆ ಮದ್ಯಕ್ಕೆ ಇಲ್ಲ, ಯಾಕೆ?

Why alcohol not in the list of goods having sin tax: ಸರ್ಕಾರ ಸೆಪ್ಟೆಂಬರ್ 22ರಿಂದ ಶೇ. 18 ಮತ್ತು ಶೇ. 28ರ ಜಿಎಸ್​ಟಿ ಸ್ಲ್ಯಾಬ್​ಗಳನ್ನು ರದ್ದು ಮಾಡಿದೆ. ಶೇ. 8 ಮತ್ತು ಶೇ. 18 ಅನ್ನು ಉಳಿಸಿಕೊಂಡಿದೆ. ಲಕ್ಷುರಿ ವಸ್ತುಗಳು, ಹಾನಿಕಾರಕ ವಸ್ತುಗಳಿಗೆ ಶೇ. 40ರಷ್ಟು ಸಿನ್ ಟ್ಯಾಕ್ಸ್ ಹಾಕುತ್ತಿದೆ. ಸಿಗರೇಟು, ಕಾರ್ನೊಬೇಟೆಡ್ ಡ್ರಿಂಕ್ಸ್ ಇತ್ಯಾದಿಗಳು ಸಿನ್ ಟ್ಯಾಕ್ಸ್ ವ್ಯಾಪ್ತಿಯಲ್ಲಿವೆ. ಆದರೆ, ಮದ್ಯದ ಉತ್ಪನ್ನಗಳು ಅದರಲ್ಲಿಲ್ಲ. ಯಾಕೆ?

ಸಿಗರೇಟ್ ಇತ್ಯಾದಿಗೆ ಸಿನ್ ಟ್ಯಾಕ್ಸ್; ಆದ್ರೆ ಮದ್ಯಕ್ಕೆ ಇಲ್ಲ, ಯಾಕೆ?
ಆಲ್ಕೋಹಾಲ್

Updated on: Sep 04, 2025 | 5:04 PM

ನವದೆಹಲಿ, ಸೆಪ್ಟೆಂಬರ್ 4: ಕೇಂದ್ರ ಸರ್ಕಾರ ಜಿಎಸ್​ಟಿ 2.0 ಸಿಸ್ಟಂ ಜಾರಿಗೆ ತರುತ್ತಿದೆ. ಶೇ. 12 ಮತ್ತು ಶೇ. 28 ದರಗಳನ್ನು ರದ್ದುಗೊಳಿಸಲಾಗಿದೆ. ಸಿನ್ ಗೂಡ್ ಅಥವಾ ಐಷಾರಾಮಿ ಹಾಗೂ ಅನಾರೋಗ್ಯಕ ವಸ್ತುಗಳಿಗೆ ಶೇ. 28ರ ಜಿಎಸ್​ಟಿ (GST) ಜೊತೆಗೆ ಹೆಚ್ಚುವರಿಯಾಗಿ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತಿತ್ತು. ಈ ಸೆಸ್ ಅನ್ನು ರದ್ದುಗೊಳಿಸಿ ಶೇ. 40ರ ಸಿನ್ ಟ್ಯಾಕ್ಸ್ ರಚಿಸಲಾಗಿದೆ. ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳು ಸಿನ್ ಗೂಡ್ಸ್ ವರ್ಗಕ್ಕೆ ಸೇರಿದ್ದು ಶೇ. 40ರಷ್ಟು ಟ್ಯಾಕ್ಸ್ ಎದುರಿಸಲಿವೆ. ಆದರೆ, ಈ ಪಟ್ಟಿಯಲ್ಲಿ ಆಲ್ಕೋಹಾಲ್ ಉತ್ಪನ್ನಗಳಿಲ್ಲದಿರುವುದನ್ನು ಗಮನಿಸಿರಬಹುದು. ಅದಕ್ಕೆ ಕಾರಣ ಇದೆ.

ಸಿನ್ ಟ್ಯಾಕ್ಸ್ ಅನ್ವಯ ಆಗುವ ಸರಕುಗಳು

ಆರೋಗ್ಯಕ್ಕೆ ಹಾನಿ ಮಾಡುವ ವಸ್ತುಗಳು ಹಾಗೂ ಅತ್ಯವಶ್ಯವಲ್ಲದ ಐಷಾರಾಮಿ ವಸ್ತುಗಳನ್ನು ಸಿನ್ ಗೂಡ್ಸ್ ಅಥವಾ ಪಾಪದ ಸರಕುಗಳೆಂದು ವರ್ಗೀಕರಿಸಲಾಗಿದೆ. ಇವುಗಳಿಗೆ ಗರಿಷ್ಠ ಜಿಎಸ್​ಟಿ ವಿಧಿಸಲಾಗುತ್ತಿದೆ. ಹೊಸ ಸಿಸ್ಟಂ ಪ್ರಕಾರ ಇವುಗಳಿಗೆ ಪ್ರತ್ಯೇಕವಾಗಿ ಶೇ. 40ರಷ್ಟು ಸಿನ್ ಟ್ಯಾಕ್ಸ್ ಹಾಕಲಾಗುತ್ತದೆ. ಈ ಕೆಲ ಸಿನ್ ಗೂಡ್​ಗಳ ಪಟ್ಟಿ ಇಲ್ಲಿದೆ:

  • 350 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕು
  • 1,200 ಸಿಸಿ ಎಂಜಿನ್ ಅಥವಾ 4 ಮೀಟರ್ ಉದ್ದಕ್ಕಿಂತ ಹೆಚ್ಚಿರುವ ಕಾರುಗಳು
  • ಕೋಲಾ, ಸ್ಪ್ರೈಟ್, ಫಾಂಟಾ ಇತ್ಯಾದಿ ಏರೇಟೆಡ್ ವಾಟರ್ ಹಾಗೂ ಹಣ್ಣಿನ ಜ್ಯೂಸ್​ಗಳು
  • ಸಿಗರೇಟ್, ಸಿಗಾರ್, ಪಾನ್ ಮಸಾಲ ಇತ್ಯಾದಿ ತಂಬಾಕು ಉತ್ಪನ್ನಗಳು
  • ಐಪಿಎಲ್ ಕ್ರಿಕೆಟ್, ಕ್ಯಾಸಿನೋ, ರೇಸ್ ಕ್ಲಬ್, ಬೆಟ್ಟಿಂಗ್, ಲಾಟರಿ ಇತ್ಯಾದಿ ಮನರಂಜನೆ ಹಾಗೂ ಆಟಗಳು

ಇದನ್ನೂ ಓದಿ: ದೊಡ್ಡ ವಾಹನಗಳಿಗೆ ಟ್ಯಾಕ್ಸ್ ಶೇ. 40ಕ್ಕೆ ಹೆಚ್ಚಾದರೂ ಬೆಲೆಯಲ್ಲಿ ಇಳಿಕೆ; ಹೇಗಿದೆ ವಾಹನಗಳ ಮೇಲೆ ಹೊಸ ಜಿಎಸ್​ಟಿ ದರ?

ಮದ್ಯ ಅಥವಾ ಆಲ್ಕೋಹಾಲ್​ಗೆ ಇಲ್ಲ ಸಿನ್ ಟ್ಯಾಕ್ಸ್

ಮದ್ಯದ ಉತ್ಪನ್ನಗಳಿಗೆ ಸಿನ್ ಟ್ಯಾಕ್ಸ್ ಹಾಕಿಲ್ಲ. ಮೊದಲಿಗೆ ಈ ಆಲ್ಕೋಹಾಲ್ ಡ್ರಿಂಕ್​ಗಳನ್ನು ಜಿಎಸ್​ಟಿ ವ್ಯಾಪ್ತಿಯಿಂದಲೇ ಹೊರಗಿಡಲಾಗಿದೆ. ಈಗಷ್ಟೇ ಅಲ್ಲ, ಜಿಎಸ್​ಟಿ ಜಾರಿಗೆ ಬಂದಾಗಿನಿಂದಲೂ ಆಲ್ಕೋಹಾಲ್​ಗೆ ಜಿಎಸ್ಟಿ ಹಾಕಿದ್ದಿಲ್ಲ. ಇದಕ್ಕೆ ಕಾರಣ ಮದ್ಯವು ರಾಜ್ಯ ಸರ್ಕಾರಗಳಿಗೆ ಇರುವ ಪ್ರಮುಖ ಆದಾಯ ಮೂಲವಾಗಿರುವುದು.

ಆಲ್ಕೋಹಾಲ್​ಗೆ ಜಿಎಸ್​ಟಿ ಬದಲು ಅಬಕಾರಿ ಸುಂಕ ಅಥವಾ ಎಕ್ಸೈಸ್ ಡ್ಯೂಟಿಯನ್ನು ವಿಧಿಸಲಾಗುತ್ತದೆ. ಇದು ರಾಜ್ಯ ಸರ್ಕಾರಗಳಿಗೆ ಇರುವ ಅಧಿಕಾರ. ರಾಜ್ಯ ಸರ್ಕಾರಗಳು ಮದ್ಯೋತ್ಪನ್ನಗಳಿಗೆ ಅಬಕಾರಿ ಸುಂಕ ಮಾತ್ರವಲ್ಲ, ವ್ಯಾಟ್ ಇತ್ಯಾದಿ ಬೇರೆ ಬೇರೆ ಶುಲ್ಕಗಳನ್ನು ವಿಧಿಸಬಹುದು. ಹೀಗಾಗಿ, ಹೆಚ್ಚಿನ ರಾಜ್ಯ ಸರ್ಕಾರಗಳಿಗೆ ಮದ್ಯದಿಂದ ಸಿಗುವ ತೆರಿಗೆಯೇ ಪ್ರಮುಖ ಆದಾಯ ಮೂಲವಾಗಿರುತ್ತದೆ.

ಇದನ್ನೂ ಓದಿ: ಹೊಸ ಜಿಎಸ್​ಟಿ ದರ: ಚಿನ್ನ ಮೇಲೇನು ಪರಿಣಾಮ? ಇಲ್ಲಿದೆ ಚಿನ್ನಕ್ಕಿರುವ ವಿವಿಧ ತೆರಿಗೆ ದರ

ಈ ಕಾರಣಕ್ಕೆ ಕೇಂದ್ರ ಸರ್ಕಾರವು ಮದ್ಯವನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಪ್ರಯತ್ನ ಮಾಡಿಲ್ಲ. ಯಾವ ರಾಜ್ಯ ಸರ್ಕಾರ ಕೂಡ ಇದೂವರೆಗೂ ಈ ನಿಟ್ಟಿನಲ್ಲಿ ಪ್ರಸ್ತಾಪ ಕೂಡ ಮಾಡಿದ್ದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ