ಹೊಸ ಜಿಎಸ್ಟಿ ದರ: ಚಿನ್ನ ಮೇಲೇನು ಪರಿಣಾಮ? ಇಲ್ಲಿದೆ ಚಿನ್ನಕ್ಕಿರುವ ವಿವಿಧ ತೆರಿಗೆ ದರ
GST rates on Gold and Silver: ಸರಕು ಮತ್ತು ಸೇವಾ ತೆರಿಗೆಯನ್ನು ಸರ್ಕಾರ ಸರಳೀಕರಿಸಿದೆ. ಬಹುತೇಕ ಸರಕುಗಳು ಶೇ. 5 ಮತ್ತು ಶೇ. 18ರ ಜಿಎಸ್ಟಿ ಸ್ಲ್ಯಾಬ್ಗಳಿಗೆ ಬರುತ್ತವೆ. ತಂಬಾಕು, ಆಲ್ಕೋಹಾಲ್ ಇತ್ಯಾದಿ ಅನಾರೋಗ್ಯಕಾರಕ ವಸ್ತುಗಳಿಗೆ ಶೇ. 40ರಷ್ಟು ಸಿನ್ ಟ್ಯಾಕ್ಸ್ ಹಾಕಲಾಗುತ್ತದೆ. ಇದೇ ವೇಳೆ, ಚಿನ್ನದ ಮೇಲೆ ಜಿಎಸ್ಟಿ ದರ ಎಷ್ಟಿದೆ? ಇದರಲ್ಲಿ ಕಡಿಮೆ ಆಗುತ್ತದಾ ಎನ್ನುವ ಮಾಹಿತಿ ಇಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 4: ಸರ್ಕಾರ ಜಿಎಸ್ಟಿ (GST rationalization) ಸಿಸ್ಟಂ ಅನ್ನು ಸರಳೀಕರಿಸಿದೆ. ನಾಲ್ಕು ಇದ್ದ ಟ್ಯಾಕ್ಸ್ ಸ್ಲ್ಯಾಬ್ಗಳನ್ನು ಎರಡಕ್ಕೆ ಇಳಿಸಲಾಗಿದೆ. ಶೇ. 12 ಮತ್ತು ಶೇ. 28 ಸ್ಲ್ಯಾಬ್ ಅನ್ನು ಹಿಂಪಡೆಯಲಾಗಿದೆ. ಶೇ. 5 ಮತ್ತು ಶೇ. 18ರ ಸ್ಲಾಬ್ ರೇಟ್ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಹೆಚ್ಚಿನ ಸರಕುಗಳ ಮೇಲೆ ಜಿಎಸ್ಟಿ ದರ ಕಡಿಮೆಗೊಳ್ಳಲಿದೆ. ಸೆಪ್ಟೆಂಬರ್ 22ರಿಂದ ಹೊಸ ದರಗಳು ಜಾರಿಗೆ ಬರುತ್ತವೆ. ಇದೇ ವೇಳೆ, ಚಿನ್ನದ (Gold) ಮೇಲೆ ಜಿಎಸ್ಟಿ ದರದಲ್ಲಿ ಬದಲಾವಣೆ ಆಗುತ್ತಿದೆಯಾ?
ಚಿನ್ನಕ್ಕೆ ಜಿಎಸ್ಟಿ ಸ್ಲ್ಯಾಬ್ ಅನ್ವಯ ಆಗುವುದಿಲ್ಲ. ಅದಕ್ಕೆ ಪ್ರತ್ಯೇಕ ಜಿಎಸ್ಟಿ ದರ ಇದೆ. ಶೇ. 3ರಷ್ಟು ಜಿಎಸ್ಟಿಯನ್ನು ಚಿನ್ನದ ಮೇಲೆ ವಿಧಿಸಲಾಗುತ್ತಿದೆ. ಹೊಸ ಜಿಎಸ್ಟಿ ಸಿಸ್ಟಂನಲ್ಲೂ ಇದೇ ಸ್ಥಿತಿ ಇರಲಿದೆ. ಅಂದರೆ, ಶೇ. 3ರಷ್ಟು ಜಿಎಸ್ಟಿ ದರವೇ ಮುಂದುವರಿಯುತ್ತದೆ.
ಚಿನ್ನ ಮಾತ್ರವಲ್ಲ, ಬೆಳ್ಳಿ ವಸ್ತುಗಳ ಮೇಲೂ ಶೇ. 3ರಷ್ಟು ಜಿಎಸ್ಟಿ ಅನ್ವಯ ಆಗುತ್ತದೆ. ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳಿಗೆ ಇರುವ ಮೇಕಿಂಗ್ ಚಾರ್ಜ್ಗಳ ಮೇಲೆ ಶೇ. 5ರಷ್ಟು ಜಿಎಸ್ಟಿ ಅನ್ವಯ ಆಗುತ್ತದೆ.
ಇದನ್ನೂ ಓದಿ: ಸೆ. 22ರಿಂದ ಇನ್ಷೂರೆನ್ಸ್ಗೆ ಜಿಎಸ್ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?
ಉದಾಹರಣೆಗೆ, ನೀವು 10 ಗ್ರಾಮ್ ತೂಕದ ಚಿನ್ನದ ಒಡವೆ ಖರೀದಿಸುತ್ತೀರಿ. ಇವತ್ತಿನ 22 ಕ್ಯಾರಟ್ ಚಿನ್ನದ ಬೆಲೆ 9,795 ರೂ ಇದೆ. ಈ ಒಡವೆಗೆ ಮೇಕಿಂಗ್ ಚಾರ್ಜ್ ಶೇ. 10 ಇದೆ ಎಂದಿಟ್ಟುಕೊಂಡರೆ ನಿಮ್ಮ ಒಡವೆ ಖರೀದಿ ಬೆಲೆ ಇಂತಿರುತ್ತದೆ:
- 10 ಗ್ರಾಮ್ ಚಿನ್ನದ ಬೆಲೆ: 97,950 ರೂ
- ಶೇ. 3 ಜಿಎಸ್ಟಿ: 2,937 ರೂ
- ಮೇಕಿಂಗ್ ಚಾರ್ಜ್: 9,795 ರೂ
- ಮೇಕಿಂಗ್ ಚಾರ್ಜ್ ಮೇಲೆ ಶೇ. 5 ಜಿಎಸ್ಟಿ: 490 ರೂ
ಅಲ್ಲಿಗೆ ವೇಸ್ಟೇಜ್ ಚಾರ್ಜ್ ಹೊರತುಪಡಿಸಿ, ನಿಮ್ಮ ಆಭರಣದ ಖರೀದಿ ಬೆಲೆ 1,11,172 ರೂ ಆಗುತ್ತದೆ. ನೀವು ಆಭರಣ ತೆಗೆದುಕೊಂಡರೆ ಮೇಕಿಂಗ್ ಚಾರ್ಜ್ ಇರುತ್ತದೆ. ಒಂದು ವೇಳೆ, ಗೋಲ್ಡ್ ಬಿಸ್ಕತ್, ಗೋಲ್ಡ್ ಕಾಯಿನ್ ಇತ್ಯಾದಿ 24 ಕ್ಯಾರಟ್ ಚಿನ್ನ ಖರೀದಿಸಿದರೆ ಜಿಎಸ್ಟಿ ದರ ಶೇ. 3 ಮಾತ್ರವೇ ಇರುತ್ತದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಚಿನ್ನ ಕೊಂಡರೂ ಶೇ. 3 ಜಿಎಸ್ಟಿ ಅನ್ವಯ ಆಗುತ್ತದೆ.
ಇದನ್ನೂ ಓದಿ: Gold Rate Today Bangalore: ಚಿನ್ನದ ಬೆಲೆಯಲ್ಲಿ 10 ರೂ ಇಳಿಕೆ; ಬೆಳ್ಳಿ ಬೆಲೆ ಯಥಾಸ್ಥಿತಿ
ಶೇ. 12ರಿಂದ ಶೇ. 5ಕ್ಕೆ ಜಿಎಸ್ಟಿ ದರ ಇಳಿಯಲಿರುವ ವಸ್ತುಗಳು
ಹಾಲು, ಮೊಸರು, ತುಪ್ಪ, ಡ್ರೈಫ್ರೂಟ್ಸ್, ಜ್ಯೂಸ್, ಐಸ್ಕ್ರೀಮ್, ಶಾಂಪೂ, ಟೂತ್ಪೇಸ್ಟ್, ಸೋಪು, ವಿವಿಧ ವೈದ್ಯಕೀಯ ಉಪಕರಣಗಳು, ಬೊಂಬೆ, ಹ್ಯಾಂಡ್ಬ್ಯಾಗ್, ಕಾರ್ಪೆಟ್, ಪಂಪ್ಸೆಟ್, ಸ್ಪ್ರಿಂಕ್ಲರ್, ಸೋಲಾರ್ ಪೆನಲ್ ಹೀಗೆ ನಾನಾ ಗೃಹ ಬಳಕೆ, ಕೃಷಿ ಬಳಕೆ, ವೈದ್ಯಕೀಯ ಬಳಕೆ, ಕರಕುಶಲ ವಸ್ತುಗಳ ಮೇಲೆ ಜಿಎಸ್ಟಿಯನ್ನು ಶೇ. 5ಕ್ಕೆ ಇಳಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




