ದೊಡ್ಡ ವಾಹನಗಳಿಗೆ ಟ್ಯಾಕ್ಸ್ ಶೇ. 40ಕ್ಕೆ ಹೆಚ್ಚಾದರೂ ಬೆಲೆಯಲ್ಲಿ ಇಳಿಕೆ; ಹೇಗಿದೆ ವಾಹನಗಳ ಮೇಲೆ ಹೊಸ ಜಿಎಸ್ಟಿ ದರ?
Luxury cars, SUVs to cost lesser despite 40% sin tax, know how: ಕೇಂದ್ರ ಸರ್ಕಾರ ಸೆಪ್ಟೆಂಬರ್ 22ರಿಂದ ಹೊಸ ಜಿಎಸ್ಟಿ ಸಿಸ್ಟಂ ತರಲಿದೆ. ಶೇ. 5 ಮತ್ತು ಶೇ. 18 ಜಿಎಸ್ಟಿ ಹಾಗೂ ಶೇ. 40 ಸಿನ್ ಟ್ಯಾಕ್ಸ್ ವ್ಯವಸ್ಥೆ ಇರಲಿದೆ. ಹೆಚ್ಚಿನ ವಾಹನಗಳ ಬೆಲೆಯಲ್ಲಿ ಇಳಿಮುಖವಾಗಲಿದ್ದು, ಆಟೊಮೊಬೈಲ್ ಉದ್ಯಮಕ್ಕೆ ಭರ್ಜರಿ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ನವದೆಹಲಿ, ಸೆಪ್ಟೆಂಬರ್ 4: ಜಿಎಸ್ಟಿ ಟ್ಯಾಕ್ಸ್ ಸಿಸ್ಟಂನಲ್ಲಿ ಗಮನಾರ್ಹವೆನಿಸುವ ಸುಧಾರಣೆ ತರಲಾಗಿದೆ. ಶೇ. 5 ಮತ್ತು ಶೇ. 18 ಟ್ಯಾಕ್ಸ್ ದರಗಳನ್ನು (GST) ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಐಷಾರಾಮಿ ಹಾಗೂ ಅನಾರೋಗ್ಯಕರ ವಸ್ತು ಮತ್ತು ಸೇವೆಗಳಿಗೆ ಶೇ. 40ರಷ್ಟು ಸಿನ್ ಟ್ಯಾಕ್ಸ್ ಹಾಕಲಾಗಿದೆ. ಇದು ಕೇಂದ್ರ ಸರ್ಕಾರ ಸೆಪ್ಟೆಂಬರ್ 22ರಿಂದ ಜಾರಿ ಮಾಡಲಿರುವ ಜಿಎಸ್ಟಿ 2.0 ಸಿಸ್ಟಂ. ಈ ಹೊಸ ಜಿಎಸ್ಟಿ ಪರಿಷ್ಕರಣೆಯಲ್ಲಿ ಅನೇಕ ಸರಕುಗಳಿಗೆ ಟ್ಯಾಕ್ಸ್ ಕಡಿಮೆ ಆಗಲಿದೆ. ಹಲವು ವಾಹನಗಳಿಗೂ ಜಿಎಸ್ಟಿ ತಗ್ಗಲಿದ್ದು, ಪರಿಣಾಮವಾಗಿ ಬೆಲೆ ಕಡಿಮೆ ಆಗುತ್ತದೆ.
ಒಟ್ಟಾರೆ ವಾಹನಗಳ ಮೇಲೆ ಮೂರು ರೀತಿಯ ಜಿಎಸ್ಟಿ ಹಾಕಲಾಗುತ್ತದೆ. ಶೇ. 5, ಶೇ. 18 ಮತ್ತು ಶೇ. 40 ಟ್ಯಾಕ್ಸ್ ದರಗಳಿವೆ. ಈ ಪೈಕಿ ಎಲೆಕ್ಟ್ರಿಕ್ ವಾಹನಗಳಿಗೆ ಶೇ. 5 ಜಿಎಸ್ಟಿ ಇರುತ್ತದೆ. ಈ ಮುಂಚೆ ಹೆಚ್ಚಿನ ವಾಹನಗಳಿಗೆ ಶೇ. 28ರಷ್ಟು ಜಿಎಸ್ಟಿ ಇತ್ತು. ಇದರಲ್ಲಿ ಹಲವಕ್ಕೆ ಜಿಎಸ್ಟಿ ಶೇ. 18ಕ್ಕೆ ಇಳಿದಿದೆ. ಇನ್ನೂ ಹಲವಕ್ಕೆ ಜಿಎಸ್ಟಿ ಶೇ. 40ಕ್ಕೆ ಏರಲಿದೆ.
ಕಾರುಗಳಿಗೆ ಮಾನದಂಡ: 1,500 ಸಿಸಿ, 4 ಮೀಟರ್ ಉದ್ದ
ಕಾರುಗಳಾದರೆ ಎಂಜಿನ್ನ ಶಕ್ತಿ ಮತ್ತು ವಾಹನದ ಉದ್ದ ಹಾಗೂ ಎತ್ತರದ ಪ್ರಕಾರ ಜಿಎಸ್ಟಿ ದರ ಹಾಕಲಾಗುತ್ತದೆ. 1,500 ಸಿಸಿಗಿಂತ ಕಡಿಮೆ ಇರುವ ಮತ್ತು ಉದ್ದ 4 ಮೀಟರ್ಗಿಂತ ಕಡಿಮೆ ಇರುವ ಹಾಗೂ ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂಗಿಂತ ಕಡಿಮೆ ಇರುವ ಕಾರುಗಳಿಗೆ ಜಿಎಸ್ಟಿಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಸಲಾಗಿದೆ.
ಇದನ್ನೂ ಓದಿ: ಹೊಸ ಜಿಎಸ್ಟಿ ದರ: ಚಿನ್ನ ಮೇಲೇನು ಪರಿಣಾಮ? ಇಲ್ಲಿದೆ ಚಿನ್ನಕ್ಕಿರುವ ವಿವಿಧ ತೆರಿಗೆ ದರ
ಮೇಲೆ ತಿಳಿಸಿದ ಮಾನದಂಡ ಇರುವ ಲಕ್ಷುರಿ ಕಾರುಗಳು, ಎಸ್ಯುವಿ ಇತ್ಯಾದಿ ಕಾರುಗಳು ಶೇ. 40ರ ಸಿನ್ ಟ್ಯಾಕ್ಸ್ ವಿಭಾಗಕ್ಕೆ ಸೇರುತ್ತವೆ.
ಟ್ಯಾಕ್ಸ್ ದರ ಶೇ. 40ಕ್ಕೆ ಏರಿದರೂ ಲಕ್ಸುರಿ ಕಾರುಗಳ ಬೆಲೆಯಲ್ಲಿ ಇಳಿಕೆ
ಕುತೂಹಲ ಎಂದರೆ ಎಸ್ಯುವಿ ಹಾಗು ಲಕ್ಷುರಿ ಕಾರುಗಳಿಗೆ ಜಿಎಸ್ಟಿಯನ್ನು ಶೇ. 28ರಿಂದ ಶೇ. 40ಕ್ಕೆ ಏರಿಸಲಾಗುತ್ತದೆಯಾದರೂ, ವಾಸ್ತವವಾಗಿ ಅವುಗಳ ನೈಜ ಮಾರಾಟ ಬೆಲೆ ಕಡಿಮೆ ಆಗುತ್ತದೆ.
ಉದಾಹರಣೆಗೆ, ಲಕ್ಷುರಿ ಕಾರುಗಳಿಗೆ ಸದ್ಯ ಶೇ. 28ರಷ್ಟು ಜಿಎಸ್ಟಿ ಇದೆ. ಇದರ ಜೊತೆಗೆ ಶೇ. 20-22ರಷ್ಟು ಕಾಂಪೆನ್ಸೇಷನ್ ಸೆಸ್ ಹಾಕಲಾಗುತ್ತದೆ. ಅಲ್ಲಿಗೆ ಒಟ್ಟು ಟ್ಯಾಕ್ಸ್ ಶೇ 50 ಅಥವಾ ಅದಕ್ಕಿಂತಲೂ ಹೆಚ್ಚು. ಆದರೆ, ಹೊಸ ಜಿಎಸ್ಟಿ ಸಿಸ್ಟಂ ಪ್ರಕಾರ ಕಾಂಪೆನ್ಸೇಶನ್ ಸೆಸ್ ಇರುವುದಿಲ್ಲ. ಕೇವಲ ಶೇ. 40ರಷ್ಟು ಸಿನ್ ಟ್ಯಾಕ್ಸ್ ಇರುತ್ತದೆ. ಅಂದರೆ, ಲಕ್ಷುರಿ ಕಾರು, ಎಸ್ಯುವಿ, ಎಂಯುವಿ ಇತ್ಯಾದಿ ದೊಡ್ಡ ಕಾರುಗಳಿಗೆ ತೆರಿಗೆ ಕಡಿಮೆಗೊಳ್ಳುತ್ತದೆ.
ದ್ವಿಚಕ್ರ ವಾಹನಗಳಿಗೆ ಹೇಗೆ?
ದ್ವಿಚಕ್ರ ವಾಹನಗಳಾದರೆ ಸದ್ಯ ಶೇ. 28ರಷ್ಟು ಜಿಎಸ್ಟಿ ಇದೆ. ಈ ಪೈಕಿ 350 ಸಿಸಿವರೆಗಿನ ಬೈಕುಗಳಿಗೆ ಜಿಎಸ್ಟಿ ಶೇ. 18ಕ್ಕೆ ಇಳಿಯುತ್ತದೆ. 350 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕುಗಳಿಗೆ ಶೇ. 40 ಟ್ಯಾಕ್ಸ್ ಇರುತ್ತದೆ.
ಇದನ್ನೂ ಓದಿ: ಸೆ. 22ರಿಂದ ಇನ್ಷೂರೆನ್ಸ್ಗೆ ಜಿಎಸ್ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?
ಕಮರ್ಷಿಯಲ್ ವಾಹನಗಳ ಬೆಲೆ ಇಳಿಕೆ
ಕಮರ್ಷಿಯಲ್ ವಾಹನಗಳ ಮೇಲಿನ ಜಿಎಸ್ಟಿ ಶೇ. 28ರಿಂದ ಶೇ. 18ಕ್ಕೆ ಇಳಿಯುತ್ತದೆ. ಇದರಿಂದ ಬಸ್ಸು, ಟ್ರಕ್ ಇತ್ಯಾದಿ ವಾಹನಗಳ ಬೆಲೆ ಕಡಿಮೆ ಆಗಲಿದೆ.
ಇದೇ ವೇಳೆ, ಎಲೆಕ್ಟ್ರಿಕ್ ವಾಹನಗಳಿಗೆ ಜಿಎಸ್ಟಿ ದರ ಶೇ. 5ರಲ್ಲಿ ಮುಂದುವರಿಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




