AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್‌ಟಿ ಪರಿಷ್ಕರಣೆಯ ಲಾಭ ನಷ್ಟದ ಲೆಕ್ಕಾಚಾರ: ರಾಜ್ಯಗಳಿಗೆ ನಿಜಕ್ಕೂ ಭಾರಿ ನಷ್ಟವೇ? ಕೇಂದ್ರ ಸರ್ಕಾರ, ತಜ್ಞರು ಹೇಳಿದ್ದಿಷ್ಟು

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಪರಿಷ್ಕರಣೆ ಮಾಡಿರುವುದರಿಂದ ರಾಜ್ಯಗಳಿಗೆ ನಷ್ಟವಾಗಲಿದೆ ಎಂದು ಕರ್ನಾಟಕ ಸೇರಿದಂತೆ 8 ರಾಜ್ಯ ಸರ್ಕಾರಗಳು ಕಳವಳ ವ್ಯಕ್ತಪಡಿಸಿವೆ. ಆದರೆ, ರಾಜ್ಯಗಳ ಗೊಂದಲಗಳಿಗೆ ತೆರೆ ಎಳೆದಿರುವ ಕೇಂದ್ರ ಸರ್ಕಾರ, ಜಿಎಸ್​ಟಿ ಸರಳೀಕರಣದಿಂದ ಲಾಭವೇ ಆಗುತ್ತದೆ ಎಂದಿದೆ. ಹಾಗಾದರೆ, ರಾಜ್ಯಗಳ ಕಳವಳ ಏನು? ಕೇಂದ್ರ ಸರ್ಕಾರ ಹೇಳಿದ್ದೇನು? ಇಲ್ಲಿದೆ ವಿವರ.

ಜಿಎಸ್‌ಟಿ ಪರಿಷ್ಕರಣೆಯ ಲಾಭ ನಷ್ಟದ ಲೆಕ್ಕಾಚಾರ: ರಾಜ್ಯಗಳಿಗೆ ನಿಜಕ್ಕೂ ಭಾರಿ ನಷ್ಟವೇ? ಕೇಂದ್ರ ಸರ್ಕಾರ, ತಜ್ಞರು ಹೇಳಿದ್ದಿಷ್ಟು
ಜಿಎಸ್‌ಟಿ ಪರಿಷ್ಕರಣೆ (ಸಾಂದರ್ಭಿಕ ಚಿತ್ರ)
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on:Sep 04, 2025 | 1:10 PM

Share

ಬೆಂಗಳೂರು, ಸೆಪ್ಟೆಂಬರ್ 4: ದಸರಾ ಹಬ್ಬಕ್ಕೆ ದೇಶದ ಜನರಿಗೆ ಕೇಂದ್ರ ಸರ್ಕಾರದಿಂದ ಧಮಾಕ ಸಿಕ್ಕಿದೆ. ದೀಪಾವಳಿಗೆ ಡಬಲ್ ಖುಷಿ ಸಿಕ್ಕಿದೆ. ನವರಾತ್ರಿಗೆ ನಯಾ ತೆರಿಗೆ ಜಾರಿಯಾಗುತ್ತಿದೆ. ದರ ಏರಿಕೆ ಬರೆಯಿಂದ ಬಸವಳಿದಿದ್ದ ಜನಾಸಾಮಾನ್ಯರಿಗೆ ಕೇಂದ್ರ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಜಿಎಸ್‌ಟಿಯಲ್ಲಿ (GST) ಭಾರೀ ಪರಿಷ್ಕರಣೆ ಮಾಡಲಾಗಿದ್ದು, ನಾಲ್ಕು ಸ್ಲ್ಯಾಬ್‌ಗಳನ್ನು 2 ಸ್ಲ್ಯಾಬ್‌ಗೆ ಇಳಿಸಲಾಗಿದೆ. ಸೆಪ್ಟಂಬರ್ 22 ರಿಂದ ಹೊಸ ತೆರಿಗೆ ಜಿಎಸ್‌ಟಿ ಸ್ಲ್ಯಾಬ್​ಗಳು ಜಾರಿಯಾಗಲಿವೆ. ಆದರೆ, ಜಿಎಸ್‌ಟಿ ಪರಿಷ್ಕರಣೆಯಿಂದ ರಾಜ್ಯಗಳಿಗೆ ಆಗಬಹುದಾದ ಲಾಭ ನಷ್ಟದ ಲೆಕ್ಕಾಚಾರ ಈಗ ಶುರುವಾಗಿದೆ.

ಜಿಎಸ್‌ಟಿ ಪರಿಷ್ಕರಣೆಯಿಂದ ರಾಜ್ಯಗಳ ಮೇಲೆ ಬೀಳುತ್ತಾ ಹೊಡೆತ?

ದೇಶದ ಪ್ರತಿಯೊಬ್ಬ ನಾಗರಿಕನೂ ಪರೋಕ್ಷವಾಗಿ ಕಟ್ಟುವ ತೆರಿಗೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ನೇತೃತ್ವದಲ್ಲಿ ಬುಧವಾರ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಅಳೆದು ತೂಗಿ ಜಿಎಸ್‌ಟಿ ಪರಿಷ್ಕರಣೆ ಮಾಡಲಾಗಿದೆ. ಶೇಕಡಾ 28 ರಷ್ಟು ತೆರಿಗೆಯನ್ನು ಶೇ 18ಕ್ಕೆ ಇಳಿಸಲಾಗಿದೆ. ಹಾಗೆಯೇ ಶೇಕಡಾ 18 ಮತ್ತು 12ರ ತೆರಿಗೆಯನ್ನು ಶೇಕಡಾ 5ಕ್ಕೆ ಇಳಿಸಲಾಗಿದೆ. ಸಭೆಯಲ್ಲಿ ರಾಜ್ಯಗಳ ಅಭಿಪ್ರಾಯ ಪಡೆದು ಈ ನಿರ್ಧಾರ ಮಾಡಲಾಗಿದೆ. ಆದರೆ, ಹಲವು ರಾಜ್ಯಗಳು ನಷ್ಟದ ಬಗ್ಗೆ ಪ್ರಸ್ತಾಪಿಸಿವೆ. ಅಲ್ಲದೇ, ಕೇಂದ್ರಕ್ಕೆ ಮನವಿಗಳನ್ನು ಮಾಡಿವೆ.

ಜಿಎಸ್​​ಟಿ ಪರಿಷ್ಕರಣೆ: ರಾಜ್ಯಗಳ ವಾದವೇನು?

ಆದಾಯ ಕುಂಠಿತವಾಗುವ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ದಿಢೀರ್ ಜಿಎಸ್‌ಟಿ ಪರಿಷ್ಕರಣೆಯಿಂದ ರಾಜ್ಯಗಳಿಗೆ ಹೊಡೆತ ಬೀಳಬಹುದು. ರಾಜ್ಯಗಳ ಆದಾಯದ ಕುಂಠಿತವಾಗುತ್ತದೆ ಎಂದು ವಾದಿಸಿವೆ. ಉದಾಹರಣೆಗೆ; ಕರ್ನಾಟಕಕ್ಕೆ ಸುಮಾರು 15 ಸಾವಿರ ಕೋಟಿ ರೂ. ಆದಾಯದ ಕೊರತೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ರಾಜ್ಯಗಳು ಜಿಎಸ್‌ಟಿ ಪರಿಷ್ಕರಣೆಯನ್ನು ನೇರವಾಗಿ ವಿರೋಧಿಸಲು ಸಾಧ್ಯವಾಗದಿದ್ದರೂ, ಕೊರತೆ ಎಂದು ವಾದ ಮುಂದಿಟ್ಟಿವೆ. ಜೊತೆಗೆ ರಾಜ್ಯಗಳ ಆದಾಯಕ್ಕೆ ಕೇಂದ್ರ ಸರ್ಕಾರ ರಕ್ಷಣೆ ನೀಡಬೇಕು. ಜಿಎಸ್‌ಟಿ ಸರಳೀಕರಣದಿಂದ ಕಂಪನಿಗಳಿಗೆ ಲಾಭ ಆಗಬಾರದು. ಜಿಎಸ್‌ಟಿ ಸರಳೀಕರಣದ ಲಾಭ ನೇರವಾಗಿ ಗ್ರಾಹಕರಿಗೆ ತಲುಪಬೇಕು. ಜಿಎಸ್‌ಟಿ ಪರಿಷ್ಕರಣೆಯಿಂದ ದೈನಂದಿನ ಅಗತ್ಯ ವಸ್ತುಗಳ ಅಗ್ಗ ವಾಗಲಿವೆ. ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸಲಾಗುತ್ತದೆ. ಹೀಗಾಗಿ ಆದಾಯದ ಕೊರತೆ ಎದುರಿಸದಂತೆ ನೋಡಿಕೊಳ್ಳಲು ಪರಿಹಾರ ನೀಡಿ ಎಂದು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಬಿಜೆಪಿಯೇತರ ಆಡಳಿತದ ರಾಜ್ಯಗಳು ಆಗ್ರಹಿಸಿವೆ.

ರಾಜ್ಯಗಳ ಈ ವಾದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನೂ ನೀಡಿದ್ದು, ರಾಜ್ಯಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದಿದೆ.

ಜಿಎಸ್​ಟಿ ಪರಿಷ್ಕರಣೆ: ರಾಜ್ಯಗಳ ಆತಂಕಕ್ಕೆ ಕೇಂದ್ರ ಸರ್ಕಾರ ಹೇಳಿದ್ದೇನು?

ರಾಜ್ಯಗಳಿಗೆ ಆದಾಯದ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಮನವರಿಕೆ ಮಾಡಿದೆ. ಈ ಬಗ್ಗೆ ವಿವರಿಸಿರುವ ಕೇಂದ್ರ ಸರ್ಕಾರ, ದೇಶದ ಮಧ್ಯಮ ಮತ್ತು ಸಣ್ಣ ಗಾತ್ರದ ಉದ್ದಿಮೆಗಳಿಗೆ (MSMEಸೆಕ್ಟರ್‌) ಜಿಎಸ್​​ಟಿ ದರ ಇಳಿಕೆಯಿಂದ ಹೊಸ ಚೈತನ್ಯ ಸಿಗಲಿದೆ. ಇದರಿಂದಾಗಿ ದೇಶದೊಳಗೆ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಜನರಿಂದ ಖರೀದಿ ಮತ್ತು ಮಾರಾಟ ಹೆಚ್ಚಾಗುವುದರಿಂದ ಸಮಸ್ಯೆ ಇಲ್ಲ. ಇದರಿಂದ ದೇಶದಲ್ಲಿ ಆರ್ಥಿಕ ಚೇತರಿಕೆ ಕಾಣಲಿದೆ. ಇದು ರಾಜ್ಯಗಳ ಆದಾಯಕ್ಕೂ ಪೂರಕವಾಗಿರಲಿದೆ ಎಂದು ಸಮರ್ಥಿಸಿಕೊಂಡಿದೆ. ಆದಾಗ್ಯೂ, ಕೇಂದ್ರದ ಸ್ಪಷ್ಟನೆಯನ್ನು ಒಪ್ಪಲು ಸಿದ್ದವಿಲ್ಲದ ಸುಮಾರು 8 ರಾಜ್ಯಗಳು, ಆದಾಯದ ಕುಂಠಿತ ಎಂದು ಆಕ್ಷೇಪ ಎತ್ತಿವೆ.

ಜಿಎಸ್​ಟಿ ಕಡಿತದಿಂದ ರಾಜ್ಯಗಳಿಗೆ ನಷ್ಟವಾಗಲಿದೆಯೇ? ಆರ್ಥಿಕ ತಜ್ಞರು ಹೇಳುವುದೇನು?

ಆರ್ಥಿಕ ತಜ್ಞರು ಕೂಡಾ ಜಿಎಸ್​ಟಿ ದರ ಪರಿಷ್ಕರಣೆಯಿಂದ ರಾಜ್ಯಗಳಿಗೆ ಯಾವುದೇ ಸಮಸ್ಯೆಯಾಗಲಾರದು. ಆದಾಯದ ಕೊರತೆಯಾಗದು ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆರ್ಥಿಕ ತಜ್ಞ ಪ್ರೊ.ಎಸ್‌.ಆರ್‌.ಕೇಶವ್ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ರಾಜ್ಯಗಳಿಗೆ ಆದಾಯ ಕೊರತೆ ಆಗದು. ಖರೀದಿ ಹೆಚ್ಚಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ ಪರಿಷ್ಕರಣೆ; ಈ ವಸ್ತುಗಳಿಗೆ ನೀವಿನ್ನು ತೆರಿಗೆಯೇ ಪಾವತಿಸಬೇಕಿಲ್ಲ!

ಒಟ್ಟಿನಲ್ಲಿ, ಸೆಪ್ಟಂಬರ್ 22ರಿಂದ ನೂತನ ಜಿಎಸ್​​ಟಿ ಜಾರಿಯಾಗುತ್ತಿದ್ದು, ಲಾಭ ನಷ್ಟದ ಬಗ್ಗೆ ಲೆಕ್ಕಾಚಾರ ಜೋರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Thu, 4 September 25