ಒಂದು ಲೀಟರ್ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ? ಇಲ್ಲಿದೆ ಉತ್ಪಾದಕರ ಪ್ರಾಮಾಣಿಕ ಅನಿಸಿಕೆ

Production cost of 100% pure coconut oil: ಮಾರುಕಟ್ಟೆಯಲ್ಲಿ ನೂರಕ್ಕೆ ನೂರು ಶುದ್ಧ ಎಂದು ಕೊಬ್ಬರಿ ಎಣ್ಣೆ ಮಾರಲಾಗುತ್ತದೆ. ಆದರೆ, ಇವು ಶುದ್ಧ ಅಲ್ಲ ಎಂದು ಮಹಿಳೆಯೊಬ್ಬಳು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಇದೇ ವೇಳೆ ಕೊಬ್ಬರಿ ಎಣ್ಣೆ ತಯಾರಕರೊಬ್ಬರು, ಶುದ್ಧ ಎಣ್ಣೆ ತಯಾರಿಸಲು ಎಷ್ಟು ವೆಚ್ಚ ಆಗುತ್ತದೆ ಎನ್ನುವ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಲೀಟರ್​ಗೆ 400 ರೂಗಿಂತ ಒಳಗೆ ಮಾರಲಾಗುವ ಕೊಬ್ಬರಿ ಎಣ್ಣೆ ಶುದ್ಧವಾಗಿರುವುದಿಲ್ಲ.

ಒಂದು ಲೀಟರ್ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ? ಇಲ್ಲಿದೆ ಉತ್ಪಾದಕರ ಪ್ರಾಮಾಣಿಕ ಅನಿಸಿಕೆ
ಕೊಬ್ಬರಿ ಎಣ್ಣೆ

Updated on: Nov 11, 2025 | 4:29 PM

ಬೆಂಗಳೂರು, ನವೆಂಬರ್ 11: ಮಹಿಳೆಯೊಬ್ಬರು ಮಾರುಕಟ್ಟೆಯಲ್ಲಿ ಮಾರಲಾಗುವ ಕೊಬ್ಬರಿ ಎಣ್ಣೆ (coconut oil) ನೂರಕ್ಕೆ ನೂರು ಶುದ್ಧವಲ್ಲ ಎಂದು ವಿವರಿಸುವ ವಿಡಿಯೋವೊಂದು ವೈರಲ್ ಆಗಿದೆ. ಎಕ್ಸ್​ನಲ್ಲಿ ಹಾಕಲಾಗಿರುವ ಈ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಕೆಲ ಉದ್ದಿಮೆದಾರರು ಕೂಡ ಸ್ಪಂದಿಸಿದ್ದು, ಕಲಬೆರಕೆ ಇಲ್ಲದ ಕೊಬ್ಬರಿ ಎಣ್ಣೆ ತಯಾರಿಕೆಗೆ ಎಷ್ಟು ಖರ್ಚಾಗುತ್ತದೆ ಎನ್ನುವ ವಾಸ್ತವ ಸಂಗತಿಯ ಮಾಹಿತಿ ನೀಡಿದ್ದಾರೆ.

ಅಂಬರೀಷ್ ಬಾಳಿಗ ಅವರು ಕೊಬ್ಬರಿ ಎಣ್ಣೆ ತಯಾರಿಸುವ ಘಟಕ ಹೊಂದಿದ್ದಾರೆ. ಪರಿಶುದ್ಧ ಕೊಬ್ಬರಿ ಎಣ್ಣೆ ತಯಾರಿಸಲು ಬಹಳ ವೆಚ್ಚವಾಗುತ್ತದೆ. ಮಾರುಕಟ್ಟೆಯಲ್ಲಿ ಇತರ ಕೊಬ್ಬರಿ ಎಣ್ಣೆಗಳ ಮಧ್ಯದಲ್ಲಿ ಅದನ್ನು ಮಾರುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸಿದ್ದಾರೆ.

ಕೊಬ್ಬರಿ ಎಣ್ಣೆ ತಯಾರಿಸಲು ಎಷ್ಟು ವೆಚ್ಚ ಆಗುತ್ತದೆ ಎಂಬುದನ್ನು ಹೀಗೆ ವಿವರಿಸಿದ್ದಾರೆ:

  • ಕೊಬ್ಬರಿ ಬೆಲೆ ಕಿಲೋಗೆ 240 ರೂ
  • ಕೊಬ್ಬರಿ ಎಣ್ಣೆಗೆ ಕನ್ವರ್ಷನ್ ರೇಟ್: ಶೇ. 65
  • ಒಂದು ಲೀಟರ್ ಕೊಬ್ಬರಿ ಎಣ್ಣೆ ತಯಾರಿಕೆಗೆ 370 ರೂ ವೆಚ್ಚ

ಇದನ್ನೂ ಓದಿ: ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ನಿರ್ಮಿಸಲಿರುವ ಅದಾನಿ ಗ್ರೂಪ್; ಇದು ಯಾಕೆ ಮುಖ್ಯ?

ಇಲ್ಲಿ ಕನ್ವರ್ಷನ್ ರೇಟ್ ಎಂದರೆ ಒಂದು ಕಿಲೋ ಕೊಬ್ಬರಿಯಿಂದ ಎಷ್ಟು ಎಣ್ಣೆ ಸಿಗುತ್ತದೆ ಎಂದಾಗುತ್ತದೆ. ಶೇ. 65 ಕನ್ವರ್ಷ್ ರೇಟ್ ಎಂದರೆ 1 ಕಿಲೋ ಕೊಬ್ಬರಿಯಿಂದ 650 ಎಂಎಲ್ ಎಣ್ಣೆ ಸಿಗುತ್ತದೆ. ಇತರ ವೆಚ್ಚಗಳನ್ನು ಸೇರಿಸಿದರೆ 390-400 ರೂ ಆಗುತ್ತದೆ. ದೊಡ್ಡ ಬ್ರ್ಯಾಂಡ್​ನ ಕಂಪನಿಗಳು ಮಾಡುವ ಮಾರ್ಕೆಟಿಂಗ್ ಮತ್ತು ಜಾಹೀರಾತು ವೆಚ್ಚ ಸೇರಿಸಿದರೆ ಬೆಲೆ ಇನ್ನೂ ಅಧಿಕ ಆಗುತ್ತದೆ. ಅಂಬರೀಷ್ ಬಾಳಿಗ ಪ್ರಕಾರ ಒಂದು ಲೀಟರ್ ಕೊಬ್ಬರಿ ಎಣ್ಣೆಯನ್ನು 400 ರೂಗಿಂತ ಕಡಿಮೆ ಬೆಲೆಗೆ ಯಾರೂ ಮಾರಲು ಸಾಧ್ಯ ಇಲ್ಲ. ಆ ಬೆಲೆಗೆ ಮಾರುತ್ತಿದ್ದಾರೆಂದರೆ ಅದರ ಪರಿಶುದ್ಧತೆ ಎಷ್ಟಿರಬಹುದು ಎಂದು ಊಹಿಸಬಹುದು.

ಕೊಬ್ಬರಿ ಎಣ್ಣೆ ತಯಾರಿಕೆಯ ಉದ್ದಿಮೆಯಲ್ಲಿರುವ ಕಬೀರ್ ಎನ್ನುವ ಮತ್ತೊಬ್ಬ ವ್ಯಕ್ತಿ ಕೂಡ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಇವರು ಮರದ ಗಾಣ ಬಳಸಿ ಕೊಬ್ಬರಿ ಎಣ್ಣೆ ತಯಾರಿಸುತ್ತಾರೆ. ಇವರ ಪ್ರಕಾರ 700 ರೂಗಿಂತ ಕಡಿಮೆ ಬೆಲೆಗೆ ಆರ್ಗ್ಯಾನಿಕ್ ಕೊಬ್ಬರಿ ಎಣ್ಣೆ ಮಾರಲು ಸಾಧ್ಯ ಇಲ್ಲವಂತೆ.

ಇದನ್ನೂ ಓದಿ: ಸಕ್ಕರೆ ಉತ್ಪಾದನೆ ಶೇ. 16ರಷ್ಟು ಏರಿಕೆ ಸಾಧ್ಯತೆ; ಮಹಾರಾಷ್ಟ್ರ, ಕರ್ನಾಟಕದಲ್ಲಿ ಹೆಚ್ಚು ಹೆಚ್ಚಳ ನಿರೀಕ್ಷೆ

ವೈರಲ್ ವಿಡಿಯೋದಲ್ಲಿ ಆ ಮಹಿಳೆ ಹೇಳಿದ್ದಿದು…

ಎಕ್ಸ್​ನಲ್ಲಿ ಪೋಸ್ಟ್ ಆದ ವಿಡಿಯೋದಲ್ಲಿ ಮಹಿಳೆಯು ಅಂಗಡಿಯಿಂದ ಪ್ಯಾರಚೂಟ್ ಬ್ರ್ಯಾಂಡ್​ನ ಕೊಬ್ಬರಿಯನ್ನು ತೆಗೆದುಕೊಂಡು ಅದರ ಶುದ್ಧತೆಯನ್ನು ಪರಿಶೀಲಿಸಿದ್ದಾರೆ. ಬಾಟಲ್​ನಲ್ಲಿ ನೂರಕ್ಕೆ ನೂರು ಶುದ್ಧ ಕೊಬ್ಬರಿ ಎಣ್ಣೆ ಎಂದು ಬರೆದಿದೆ. ಆದರೆ, ಲೇಬಲ್​ನಲ್ಲಿ ಕೊಬ್ಬರಿ ಎಣ್ಣೆ ಶೇ. 79.4 ಎಂದು ಬರೆದಿದೆ. ಅದಕ್ಕೆ ಬೇರೆ ವೆಜಿಟಬಲ್ ಆಯಿಲ್ ಬೆರೆಸಲಾಗಿದೆ. ಕಂಪನಿಯವರು ಶುದ್ಧ ಕೊಬ್ಬರಿ ಎಣ್ಣೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮೋಸ ಹೋಗಬೇಡಿ ಎಂದು ಆ ಮಹಿಳೆ ವಿಡಿಯೋದಲ್ಲಿ ಎಚ್ಚರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ