ನವದೆಹಲಿ, ಫೆಬ್ರವರಿ 1: ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG Commercial Cylinder) ಗ್ರಾಹಕರಿಗೆ ಸರ್ಕಾರ ಶಾಕ್ ನೀಡಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ 14 ರೂಪಾಯಿ ಏರಿಕೆ ಮಾಡಲಾಗಿದೆ. ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (Gas Cylinder price Hike) ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪರಿಷ್ಕೃತ ಬೆಲೆ ಇಂದಿನಿಂದ (ಫೆಬ್ರವರಿ 1) ಅನ್ವಯವಾಗಲಿದೆ. ಕಳೆದ ತಿಂಗಳು ಕೂಡ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತುಸು ಹೆಚ್ಚಳ ಮಾಡಿದ್ದವು.
ಬೆಲೆ ಹೆಚ್ಚಳದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1769.50 ರೂ. ತಲುಪಿದೆ. ಕೋಲ್ಕತ್ತಾದಲ್ಲಿ 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1887.00 ರೂ.ಗೆ ತಲುಪಿದೆ. ಮುಂಬೈನಲ್ಲಿ 1723.50 ರೂ., ಚೆನ್ನೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1937 ರೂ.ಗೆ ತಲುಪಿದೆ.
ಕಳೆದ ಮೂರು ವರ್ಷಗಳಲ್ಲಿ ಗೃಹಬಳಕೆಯ ಸಿಲಿಂಡರ್ ಗಳ ದರ 17 ಬಾರಿ ಬದಲಾಗಿದ್ದು, ವಾಣಿಜ್ಯ ಸಿಲಿಂಡರ್‌ಗಳ ದರ ಬಹುತೇಕ ಪ್ರತಿ ತಿಂಗಳು ಬದಲಾಗುತ್ತಿದೆ. ಈ ಬದಲಾವಣೆಗಳಿಂದಾಗಿ, ಕೆಲವೊಮ್ಮೆ ಗ್ರಾಹಕರಿಗೆ ಪ್ರಯೋಜನವಾದರೆ ಇನ್ನು ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಐಒಸಿ ಅಂಕಿಅಂಶಗಳ ಪ್ರಕಾರ, ಜನವರಿ 1, 2021 ರಂದು ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,349 ರೂ ಇತ್ತು. ಅಂದಿನಿಂದ ಸುಮಾರು 50 ಬಾರಿ ದರ ಪರಿಷ್ಕರಣೆಯಾಗಿದೆ.
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಸತತ 6ನೇ ಬಾರಿ ಯಾವುದೇ ಬದಲಾವಣೆಯಾಗಿಲ್ಲ. ಆಗಸ್ಟ್ 30 ರಂದು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕೊನೆಯ ಬಾರಿ ಬದಲಾವಣೆ ಮಾಡಲಾಗಿತ್ತು. ಅಂಕಿಅಂಶಗಳ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 903 ರೂ., ಕೋಲ್ಕತ್ತಾದಲ್ಲಿ 929 ರೂ., ಮುಂಬೈಯಲ್ಲಿ 902.50 ರೂ., ಚೆನ್ನೈನಲ್ಲಿ 918.50 ರೂ. ಇದೆ.
ಇದನ್ನೂ ಓದಿ: ನೋಯ್ಡಾ, ಗುರುಗ್ರಾಮದಲ್ಲಿ ಪೆಟ್ರೋಲ್ ದುಬಾರಿ
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ ಮೊದಲನೆಯ ದಿನ ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸುತ್ತವೆ.
ಇತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:42 am, Thu, 1 February 24