
ನವದೆಹಲಿ, ಜೂನ್ 1: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ದೇಶದಲ್ಲಿ ಮತ್ತೆ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ (Commercial LPG cylinder) ಎಲ್ಪಿಜಿ ಸಿಲಿಂಡರ್ಗಳ ಬೆಲೆ 42 ರೂ. ಹೆಚ್ಚಳವಾಗಿದೆ. ಪರಿಷ್ಕೃತ ದರ ಇಂದಿನಿಂದಲೇ (ಜೂನ್ 1) ಅಸ್ತಿತ್ವಕ್ಕೆ ಬಂದಿದೆ. ಈ ಪರಿಷ್ಕರಣೆಯೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ರಿಟೇಲ್ ದರ 3,113.50 ರೂ.ಗೆ ಏರಿಕೆಯಾಗಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಉದ್ಯಮಗಳಿಗೆ ಈ ದರ ಏರಿಕೆ ಇನ್ನಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.
ಸದ್ಯ ಕೋಲ್ಕತ್ತಾದಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 53.50 ರೂ. ಹೆಚ್ಚಳವಾಗಿದ್ದು, 3,255.50 ಕ್ಕೆ ತಲುಪಿದೆ. ಇದರೊಂದಿಗೆ, 5 ಕೆಜಿ ತೂಕದ ಫ್ರೀ ಟ್ರೇಡ್ ಎಲ್ಪಿಜಿ (FTL) ಸಿಲಿಂಡರ್ಗಳ ಬೆಲೆಯನ್ನೂ ಸಹ 11 ರೂ.ನಷ್ಟು ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಇದರ ನೂತನ ದರ 821.50 ರೂ. ಆಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಆದರೆ, ಸಾಮಾನ್ಯ ಜನರು ಬಳಸುವ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ 46 ರೂ. ಏರಿಕೆಯಾಗಿ, 3,198 ರೂ.ಗೆ ತಲುಪಿದೆ. ಕಳೆದ ತಿಂಗಳು ಕಮರ್ಷಿಯಲ್ ಸಿಲಿಂಡರ್ ದರ 991 ರೂ. ಏರಿಕೆ ಆಗಿ 3,152 ರೂ. ಆಗಿತ್ತು. ಸದ್ಯ ಬೆಂಗಳೂರಿನಲ್ಲಿ ಗೃಹಬಳಕೆ ಸಿಲಿಂಡರ್ ಬೆಲೆ 915.50 ರೂಪಾಯಿ ಇದೆ.
ಮೇ 1 ರಂದು ಸಹ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಅತ್ಯಂತ ಹೆಚ್ಚು, ಅಂದರೆ ಬರೋಬ್ಬರಿ 993 ರೂ.ನಷ್ಟು ದರ ಹೆಚ್ಚಳ ಮಾಡಿದ್ದವು. ಆ ನಂತರ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 3,152 ರೂ.ಗೆ ತಲುಪಿತ್ತು.
ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಅಗತ್ಯ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳನ್ನು ಕಾಯ್ದುಕೊಳ್ಳಲು ಸರ್ಕಾರ ನಿರಂತರ ಶ್ರಮಿಸುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಕನಿಷ್ಠ 30 ದಿನಗಳ ಕಾಲ ದೇಶದಲ್ಲಿ ಎಲ್ಪಿಜಿ ದಾಸ್ತಾನು ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಇಂಧನ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.
ಪ್ರಸ್ತುತ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ದಾಸ್ತಾನು ಸಮರ್ಪಕವಾಗಿದ್ದು, ರಿಫೈನರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶೀಯವಾಗಿ ಎಲ್ಪಿಜಿ ಉತ್ಪಾದನೆಯು ದಿನಕ್ಕೆ ದಾಖಲೆಯ 90 ಡಿಎಂಟಿ (DMT) ತಲುಪಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ನಿಂದ ಪ್ರಧಾನಿ ಮೋದಿಗೆ ಪತ್ರ
ಪೆಟ್ರೋಲ್, ಡೀಸೆಲ್, ಎಲ್ಪಿಜಿ ಕಳ್ಳಸಾಗಣೆ, ಅಕ್ರಮ ಮಾರಾಟ ಇತ್ಯಾದಿಗಳನ್ನು ತಡೆಯಲು ಕಳೆದ ನಾಲ್ಕು ದಿನಗಳಲ್ಲಿ ದೇಶಾದ್ಯಂತ ಎಲ್ಪಿಜಿ ವಿತರಣಾ ಕೇಂದ್ರಗಳ ಮೇಲೆ ಒಟ್ಟು 6,500 ಕಡೆ ದಾಳಿಗಳನ್ನು ನಡೆಸಲಾಗಿದ್ದು, 5 ಎಫ್ಐಆರ್ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ಹಾಗೆಯೇ, 900ಕ್ಕೂ ಹೆಚ್ಚು ಕಡೆ ಪೆಟ್ರೋಲ್ ಬಂಕ್ಗಳಲ್ಲಿ ನಡೆದ ತಪಾಸಣೆಗಳ ವೇಳೆ 417 ಲೀಟರ್ ಪೆಟ್ರೋಲ್ ಹಾಗೂ 75,715 ಲೀಟರ್ ಡೀಸೆಲ್ ಜಪ್ತಿ ಮಾಡಲಾಗಿದ್ದು, 12 ಎಫ್ಐಆರ್ ದಾಖಲಿಸಿ 15 ಜನರನ್ನು ಜೈಲಿಗಟ್ಟಲಾಗಿದೆ. ಪ್ರಸ್ತುತ ದೇಶದಲ್ಲಿ ನಿತ್ಯ 72 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಬೇಡಿಕೆ ಇದ್ದು, ದೇಶೀಯ ರಿಫೈನರಿಗಳು 50 ರಿಂದ 52 ಸಾವಿರ ಮೆಟ್ರಿಕ್ ಟನ್ ಉತ್ಪಾದಿಸುತ್ತಿವೆ. ಪೂರೈಕೆ ನಿರ್ವಹಣೆಯನ್ನು ಉತ್ತಮಗೊಳಿಸಿದ್ದರಿಂದ ಗ್ಯಾಸ್ ಬ್ಯಾಕ್ಲಾಗ್ ಅವಧಿಯನ್ನು 4.5 ದಿನಗಳಿಗೆ ಇಳಿಸಲಾಗಿದೆ ಎಂದು ಸುಜಾತಾ ಶರ್ಮಾ ವಿವರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:48 am, Mon, 1 June 26