ಕಮರ್ಷಿಯಲ್ ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ನಿಂದ ಪ್ರಧಾನಿ ಮೋದಿಗೆ ಪತ್ರ
ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್ ಉದ್ಯಮ ನಷ್ಟದ ಸುಳಿಗೆ ಸಿಲುಕಿದ್ದು, ಬೆಲೆ ಕಡಿತಕ್ಕೆ ಆಗ್ರಹಿಸಿದೆ. ಅಲ್ಲದೆ, ಈ ಬಗ್ಗೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. ಇತ್ತೀಚಿನ 993 ರೂ. ಬೆಲೆ ಏರಿಕೆಯು ಹೋಟೆಲ್ ಮಾಲೀಕರ ನಿದ್ದೆಗೆಡಿಸಿದೆ.
ಬೆಂಗಳೂರು, ಮೇ 2: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ದರ ಏರಿಕೆಯಿಂದ ಕಂಗೆಟ್ಟಿರುವ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ಬೆಲೆ ಇಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಮೇ 1 ರಂದು ಬರೋಬ್ಬರಿ 993 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ದರ ಏರಿಕೆಯಿಂದಾಗಿ ಹೋಟೆಲ್ ನಡೆಸುವುದೇ ಅಸಾಧ್ಯವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಸಿಲಿಂಡರ್ ಬೆಲೆ ಹೆಚ್ಚಾದಾಗ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ, ದರ ಏರಿಸದಿದ್ದರೆ ಮಾಲೀಕರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಈ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಅನೇಕ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ.
ತಮ್ಮ ಸಮಸ್ಯೆಗಳನ್ನು ವೈಯಕ್ತಿಕವಾಗಿ ಹೇಳಿಕೊಳ್ಳಲು ಪ್ರಧಾನಿಯವರು ಒಂದು ಅವಕಾಶ ನೀಡಬೇಕು ಮತ್ತು ತಕ್ಷಣವೇ ವಾಣಿಜ್ಯ ಗ್ಯಾಸ್ ದರವನ್ನು ಇಳಿಸಿ ಹೋಟೆಲ್ ಉದ್ಯಮವನ್ನು ಉಳಿಸಬೇಕು ಎಂದು ಬೆಂಗಳೂರು ಹೋಟೆಲ್ ಒಕ್ಕೂಟ ಪತ್ರದ ಮೂಲಕ ವಿನಂತಿಸಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

