ಹೂಡಿಕೆಯ ಬಗ್ಗೆ ಯಾರನ್ನೇ ಸಲಹೆ ಕೇಳಿದರೂ ಹೇಳುವ ಮೊದಲ ಮಾತು, ‘ವೈವಿಧ್ಯತೆ ಇರಲಿ. ಎಲ್ಲ ಹಣವನ್ನೂ ಒಂದೇ ಕಡೆ ಹಾಕಬೇಡಿ’. ಮ್ಯೂಚುವಲ್ ಫಂಡ್ಗಳ ವಿಚಾರದಲ್ಲಿಯೂ ಅಷ್ಟೇ. ನಿಮ್ಮ ಗುರಿಗೆ ತಕ್ಕಂತೆ ಈಕ್ವಿಟಿ, ಡೆಟ್, ಗೋಲ್ಡ್- ಹೀಗೆ ವೈವಿಧ್ಯಮಯ ಆಯ್ಕೆಗಳ ಹದವರಿತ ಮಿಶ್ರಣದ ಪೋರ್ಟ್ಫೋಲಿಯೊ ರೂಪಿಸಿಕೊಳ್ಳಿ ಎಂದು ಎಲ್ಲರೂ ಹೇಳುತ್ತಾರೆ.
ವೈವಿಧ್ಯತೆಯು ಅತಿಯಾದರೆ ಅದೂ ಒಂದು ಮಿತಿಯೂ ಆಗಿಬಿಡುತ್ತದೆ. ಇದೇ ಕಾರಣಕ್ಕೆ ಕೆಲವರು ಮ್ಯೂಚುವಲ್ ಫಂಡ್ಗಳಿಂದ ದೂರ ಉಳಿದು, ಸ್ವತಃ ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಹಲವು ಸೆಕ್ಟರ್ಗಳ ನೂರಾರು ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಡೈವರ್ಸಿಫೈಡ್ ಫಂಡ್ಗಳು ನಿರೀಕ್ಷಿತ ಗ್ರೋತ್ ಕೊಡಲಾರವು ಎಂಬುದು ಇಂಥವರ ಆಕ್ಷೇಪ. ಸ್ವತಃ ಷೇರುಗಳ ಖರೀದಿ-ಮಾರಾಟ ನಿರ್ವಹಿಸಲು ಮುಂದಾಗುವ ಇಂಥವರು, ಸಮಯ ಕೊರತೆಯೂ ಸೇರಿದಂತೆ ಹತ್ತಾರು ಕಾರಣಗಳಿಂದ ಹಲವು ಬಾರಿ ನಷ್ಟ ಅನುಭವಿಸುತ್ತಾರೆ.
ಅತಿವೈವಿಧ್ಯದ ಮಿತಿಯನ್ನು ಮೀರುವ ಉದ್ದೇಶದಿಂದಲೇ ರೂಪುಗೊಂಡಿದ್ದು ಫೋಕಸ್ಡ್ ಮ್ಯೂಚುವಲ್ ಫಂಡ್. ಇಂಥ ಫಂಡ್ಗಳು ಸಾಮಾನ್ಯವಾಗಿ 20ರಿಂದ 30 ಕಂಪನಿಗಳಿಗಷ್ಟೇ ಹೂಡಿಕೆಯನ್ನು ಮಿತಗೊಳಿಸುತ್ತವೆ. ಹೆಚ್ಚು ಕಂಪನಿಗಳಲ್ಲಿ ಹೂಡಿಕೆ ಮಾಡಬಾರದು ಎಂಬ ಷರತ್ತಿಗೆ ಅನುಗುಣವಾಗಿಯೇ ಫಂಡ್ ಮ್ಯಾನೇಜರ್ ಮತ್ತು ಫಂಡ್ಹೌಸ್ನ ಸಂಶೋಧನಾ ತಂಡ ಕಾರ್ಯನಿರ್ವಹಿಸುವುದರಿಂದ ಹೂಡಿಕೆದಾರರಿಗೆ ಸಾಮಾನ್ಯವಾಗಿ ಷೇರುಪೇಟೆಯ ಸೂಚ್ಯಂಕಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಾಭ ಗಳಿಕೆಯ ಸಾಧ್ಯತೆಗಳು ಇರುತ್ತವೆ.
ಆದರೆ ಇದರಲ್ಲಿಯೂ ಅಪಾಯ ಇಲ್ಲ ಎಂದಲ್ಲ. ಇಂಥ ಫಂಡ್ಗಳಲ್ಲಿ ಮಾರುಕಟ್ಟೆ ಪರಿಸ್ಥಿತಿಯ ಜೊತೆಗೆ ಫಂಡ್ ಮ್ಯಾನೇಜರ್ ನಿರ್ಧಾರದ ಮೇಲೆ ಹೂಡಿಕೆಯ ಪ್ರತಿಫಲ ಅವಲಂಬಿತವಾಗಿರುತ್ತದೆ. ಎಲ್ಲವೂ ಚೆನ್ನಾಗಿದ್ದರೆ ಸರಿ, ಆದರೆ ಆರ್ಥಿಕತೆ ಕುಸಿತ ಮುನ್ನೋಟ ಅಥವಾ ಬೇರೆ ಕಾರಣಗಳಿಂದ ಷೇರುಪೇಟೆ ಕುಸಿಯಲು ಆರಂಭಿಸಿದರೆ ಇಂಥ ಫಂಡ್ಗಳು ಅಗ್ನಿಪರೀಕ್ಷೆಯನ್ನೇ ಎದುರಿಸುತ್ತವೆ.
ಏಕೆಂದರೆ ಡೈವರ್ಸಿಫೈಡ್ ಫಂಡ್ಗಳಲ್ಲಿ ನೂರಾರು ಕಂಪನಿಗಳಲ್ಲಿ ಹೂಡಿಕೆ ಹಂಚಿಹೋಗಿರುತ್ತದೆ. ಹೀಗಾಗಿ ಮಾರುಕಟ್ಟೆಯ ಲಾಭ ಅಥವಾ ನಷ್ಟವು ಅಲ್ಲಿ ಪ್ರತಿಫಲಿತವಾಗುತ್ತದೆ. ಆದರೆ ಫೋಕಸ್ಡ್ ಫಂಡ್ಗಳಲ್ಲಿ ಕೆಲವೇ ಕಂಪನಿಗಳಲ್ಲಿ ಹೂಡಿಕೆ ನಡೆಯುವುದರಿಂದ ಬೇರೆಯದೇ ಲೆಕ್ಕಾಚಾರ ಚಾಲ್ತಿಯಲ್ಲಿರುತ್ತದೆ. ನಷ್ಟದ ಪ್ರಮಾಣವೂ ಹೆಚ್ಚಾಗಬಹುದಾ ಅಪಾಯ ಇರುತ್ತದೆ.
ಹೀಗಾಗಿಯೇ ಕನಿಷ್ಠ ಒಂದು ಆರ್ಥಿಕ ಆವರ್ತದಷ್ಟು (5 ವರ್ಷ) ಹೂಡಿಕೆ ಅವಧಿಯಿದ್ದರೆ ಮಾತ್ರ ಫೋಕಸ್ಡ್ ಫಂಡ್ಗಳಲ್ಲಿ ಹೂಡಿಕೆ ಮಾಡಿ ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಸಲಹೆ ಮಾಡುತ್ತಾರೆ. 30 ವರ್ಷಕ್ಕೂ ಒಳಗಿರುವವರು ಮತ್ತು ಹೂಡಿಕೆ ಮಾಡಿ ಪ್ರತಿಫಲಕ್ಕಾಗಿ ಕಾಯುತ್ತೇವೆ ಎಂಬ ಮನಸ್ಥಿತಿ ಹೊಂದಿರುವವರಿಗೆ ಇದು ಹೇಳಿ ಮಾಡಿಸಿದ್ದು.
1ರಿಂದ 3 ವರ್ಷದ ಅವಧಿಯಲ್ಲಿ ಅತ್ಯುತ್ತಮ ಫೋಕಸ್ಡ್ ಫಂಡ್ಗಳ ಪಟ್ಟಿಯಲ್ಲಿ ಐಐಎಫ್ಎಲ್ ಫೋಕಸ್ಡ್ ಈಕ್ವಿಟಿ, ಎಸ್ಬಿಐ ಫೋಕಸ್ಡ್ ಈಕ್ವಿಟಿ, ಕ್ವಾಂಟ್ ಫೋಕಸ್ಡ್, ಆ್ಯಕ್ಸಿಸ್ ಫೋಕಸ್ಡ್ ಫಂಡ್ಗಳು ಮುಂಚೂಣಿಯಲ್ಲಿವೆ ಎಂದು ‘ಗ್ರೂ’ ಜಾಲತಾಣ ತಿಳಿಸುತ್ತದೆ.
(ಗಮನಿಸಿ: ಮ್ಯೂಚುವಲ್ ಫಂಡ್ಗಳ ಹೂಡಿಕೆ ಷೇರುಪೇಟೆ ಏರಿಳಿತಗಳ ಪ್ರಭಾವಕ್ಕೆ ಒಳಪಡುತ್ತವೆ. ಫಂಡ್ ಸಂಬಂಧಿಸಿದ ಎಲ್ಲ ಮಾಹಿತಿ ತಿಳಿದುಕೊಂಡೇ ಹೂಡಿಕೆ ನಿರ್ಧಾರ ಮಾಡಿ. ಈ ಲೇಖನದ ಮೂಲಕ ಯಾವುದೇ ಫಂಡ್ನಲ್ಲಿ ಹೂಡಿಕೆ ಮಾಡಬೇಕು ಎಂದು ಟಿವಿ9 ಕನ್ನಡ ಡಿಜಿಟಲ್ ಶಿಫಾರಸು ಮಾಡುತ್ತಿಲ್ಲ)
(Consumers showing interest for investments in focused mutual funds)
ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್ ಎನ್ಎಫ್ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?
ಇದನ್ನೂ ಓದಿ: How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್