LPG ಸಿಲಿಂಡರ್​ಗೆ 50 ರೂಪಾಯಿ ಹೆಚ್ಚಳವಾಯ್ತು; ವಿಮಾನ ಇಂಧನ ಬೆಲೆಯೂ ಏರಿಕೆ

| Updated By: ಸಾಧು ಶ್ರೀನಾಥ್​

Updated on: Dec 16, 2020 | 5:23 PM

ಸಬ್ಸಿಡಿ ರಹಿತ 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆ ₹644ರಿಂದ ₹694ಕ್ಕೇರಿದೆ. ಜುಲೈ ತಿಂಗಳಲ್ಲಿ ₹594 ಆಗಿದ್ದ ಸಿಲಿಂಡರ್ ಬೆಲೆ ಡಿಸೆಂಬರ್ 1ರಂದು  ₹50 ಏರಿಕೆ ಆಗಿತ್ತು.

LPG ಸಿಲಿಂಡರ್​ಗೆ 50 ರೂಪಾಯಿ ಹೆಚ್ಚಳವಾಯ್ತು; ವಿಮಾನ ಇಂಧನ ಬೆಲೆಯೂ ಏರಿಕೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಬುಧವಾರ ಎಲ್​ಪಿಜಿ ಸಿಲಿಂಡರ್ ದರ ₹50 ಏರಿಕೆಯಾಗಿದೆ. ತಿಂಗಳಲ್ಲಿ ಎರಡನೇ ಬಾರಿ ಅಡುಗೆ ಅನಿಲ ಬೆಲೆ ಏರಿಕೆ ಕಂಡಿದ್ದು, ವಿಮಾನ ಇಂಧನ ಬೆಲೆ ಶೇ. 6.3ರಷ್ಟು ಏರಿಕೆಯಾಗಿದೆ.

ಸಬ್ಸಿಡಿ ರಹಿತ 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆ ₹644ರಿಂದ ₹694ಕ್ಕೇರಿದೆ. ಜುಲೈ ತಿಂಗಳಲ್ಲಿ ₹594 ಆಗಿದ್ದ ಸಿಲಿಂಡರ್ ಬೆಲೆ ಡಿಸೆಂಬರ್ 1ರಂದು  ₹50 ಏರಿಕೆ ಆಗಿತ್ತು. ಸಬ್ಸಿಡಿ ಹೊಂದಿದ ಎಲ್​ಪಿಜಿ ಸಿಲಿಂಡರ್ ಕೂಡಾ ಇದೇ ಬೆಲೆಯಲ್ಲಿ ಮಾರಾಟವಾಗುತ್ತಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಮತ್ತು ರೀಫಿಲ್ ದರ ಏರಿಕೆಯಾದ ಕಾರಣ ಮೇ ತಿಂಗಳಿನಿಂದ ಗ್ರಾಹಕರಿಗೆ ಸಬ್ಸಿಡಿ ಸಿಕ್ಕಿರಲಿಲ್ಲ.

ದೆಹಲಿಯಲ್ಲಿ ಜೂನ್ 2019ರಲ್ಲಿ ಅಡುಗೆ ಸಬ್ಸಿಡಿ ಇರುವ ಎಲ್​ಪಿಜಿ ಸಿಲಿಂಡರ್ ಬೆಲೆ ₹497 ಆಗಿತ್ತು. ಆನಂತರ ಇಲ್ಲಿಯವರೆಗೆ ₹147 ಏರಿಕೆಯಾಗಿದೆ. ಆದಾಗ್ಯೂ, ಅನಿಲ ದರ ಹೆಚ್ಚಾಗಿರುವಾಗ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ಪಾವತಿಸಬೇಕಾಗುತ್ತದೆ. 15 ದಿನಗಳಿಗೊಮ್ಮೆ ಎಲ್ ಪಿಜಿ ದರವನ್ನು ಪರಿಷ್ಕರಿಸಲಾಗುತ್ತದೆ.

ಜೆಟ್ ಇಂಧನ ದರ ಏರಿಕೆ

ಜೆಟ್ ಇಂಧನ ದರವು 6.3 ಶೇ ಏರಿಕೆ ಆಗಿದೆ. ಅಂದರೆ ಕಿಲೊ ಲೀಟರ್​ಗೆ₹2,941.5. ದೆಹಲಿಯಲ್ಲಿ ಜೆಟ್ ಇಂಧನ ಬೆಲೆ ಕಿಲೋ ಲೀಟರ್​ಗೆ ₹49, 161.16 ಆಗಿದೆ. ಈ ತಿಂಗಳಲ್ಲಿ ಎರಡನೇ ಬಾರಿ ದರ ಏರಿಕೆಯಾಗಿದೆ.

ಎಲ್​ಪಿಜಿ ಸಿಲಿಂಡರ್​ಗೆ ಬೆಲೆ ಏರಿಕೆಯಾಗುವುದರ ಜತೆಗೆ 5 ಕೆಜಿ ಬಾಟಲ್ ಬೆಲೆ ₹18 ಮತ್ತು 19 ಕೆಜಿ ಸಿಲಿಂಡರ್ ಬೆಲೆ ₹36.50 ಏರಿಕೆಯಾಗಿದೆ.

ಭಾರತದಲ್ಲಿ ಗೃಹೋಪಯೋಗಕ್ಕಾಗಿ ವರ್ಷಕ್ಕೆ ಗರಿಷ್ಠ 12 ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಸಬ್ಸಿಡಿ ದರದಲ್ಲಿ ಅವಕಾಶವಿದೆ. ಸಿಲಿಂಡರ್‌ಗಳನ್ನು ಖರೀದಿಸುವ ಸಮಯದಲ್ಲಿ ಪೂರ್ಣ ಬೆಲೆಗೆ ಖರೀದಿಸಬೇಕಾಗುತ್ತದೆ ಮತ್ತು ಸಬ್ಸಿಡಿಯನ್ನು ಸರ್ಕಾರವು ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ.

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್​ಗೆ ಈಗ ಕೋಲ್ಕತ್ತಾದಲ್ಲಿ ₹720.50 ಮುಂಬೈಯಲ್ಲಿ ₹694 ಮತ್ತು ಚೆನ್ನೈನಲ್ಲಿ ₹710 ಆಗಿದೆ. ಬೆಂಗಳೂರಿನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ ₹697 ಆಗಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ ಪ್ರಮಾಣವನ್ನು ಅವಲಂಬಿಸಿ ದರಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.