ಮುಂಬೈ, ಡಿಸೆಂಬರ್ 18: ಮುಂದಿನ ವರ್ಷಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅದ್ವಿತೀಯ ಬೆಳವಣಿಗೆಯ ಘಟ್ಟ. ನೂರು ಮಂದಿ ಮಾಡುವ ಕೆಲಸವನ್ನು ಎಐ ಟೆಕ್ನಾಲಜಿ ಮೂಲಕ ಒಬ್ಬರೇ ಮಾಡಬಹುದು. ಸಾಕಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬಂತಹ ಸುದ್ದಿ ಕೆಲವಾರು ತಿಂಗಳುಗಳಿಂದ ದಟ್ಟವಾಗಿ ಹಬ್ಬುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಟೆಕ್ ಮಹೀಂದ್ರದ ನಿರ್ಗಮಿತ ಸಿಇಒ ಸಿ.ಪಿ. ಗುರ್ನಾನಿ (CP Gurnani) ಅವರು, ಎಐ ಟೆಕ್ನಾಲಜಿಯಿಂದ (AI Technology) ಉದ್ಯೋಗನಷ್ಟ ಆಗುತ್ತದೆ ಎಂದು ಭಯ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.
ಜನರೇಟಿವ್ ಎಐ ಟೆಕ್ನಾಲಜಿಯಿಂದ ಉದ್ಯೋಗನಷ್ಟ ಆಗುವುದಕ್ಕಿಂತ ಹೆಚ್ಚು ಉದ್ಯೋಗಸೃಷ್ಟಿ ಆಗುತ್ತದೆ ಎಂದು ಗುರ್ನಾನಿ ಹೇಳಿದ್ದಾರೆ. ‘ಜನರೇಟಿವ್ ಎಐನ ಉಪಯೋಗಗಳನ್ನು ಇನ್ನೂ ನಿರ್ದಿಷ್ಟಪಡಿಸಲಾಗುತ್ತಿದೆ. ಅಂದರೆ ಭವಿಷ್ಯದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಅವಕಾಶ ಇದೆ ಎಂದರ್ಥ. ಎಐನಿಂದ ಸಾಧ್ಯತೆಗಳೇನು ಎಂಬುದು ಈಗ ಶುರುವಾಗುತ್ತಿದೆ. ಮುಂದಿನ ದಿನಗಳಲ್ಲಿ ನಾವು ಹೆಚ್ಚೆಚ್ಚು ಕಾಣಲಿದ್ದೇವೆ,’ ಎಂದು ಟೆಕ್ ಮಹೀಂದ್ರ ಮಾಜಿ ಸಿಇಒ ತಿಳಿಸಿದ್ದಾರೆ.
ಇದನ್ನೂ ಓದಿ: Business Idea: ಕಡಿಮೆ ಬಂಡವಾಳದಲ್ಲಿ ಸ್ಕ್ರಬ್ಬರ್ ಫ್ಯಾಕ್ಟರಿ ಆರಂಭಿಸಿ; ಲಕ್ಷಾಂತರ ರೂ ಆದಾಯಮೂಲ ಸೃಷ್ಟಿಸಿ
ಉದ್ಯಮ ವಲಯದ ಕೆಲವು ಸಿಇಒಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಮೂರನೇ ಒಂದು ಭಾಗದಷ್ಟು ಉದ್ಯೋಗಗಳು ಹೋಗುವ ಸಾಧ್ಯತೆ ಬಗ್ಗೆ ಮಾತನಾಡಿರುವುದಿದೆ. ಟೆಕ್ ಮಹೀಂದ್ರದ ಗುರ್ನಾನಿ ಅಭಿಪ್ರಾಯ ಇದಕ್ಕೆ ಭಿನ್ನವಾಗಿದೆ. ಕೌಶಲ್ಯವಂತ ಉದ್ಯೋಗಿಗಳ ಕೆಲಸ ಕಿತ್ತುಕೊಳ್ಳಲು ಆಗುವುದಿಲ್ಲ ಎನ್ನುವ ನಾರಾಯಣಮೂರ್ತಿ ಮತ್ತಿತರ ವಾದವನ್ನು ಸಮರ್ಥಿಸಿದ್ದಾರೆ.
‘ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಮಾರುಕಟ್ಟೆ ಬೆಳೆಯುತ್ತದೆ’ ಎಂದು ಹೇಳಿರುವ ಸಿ.ಪಿ. ಗುರ್ನಾನಿ, ‘ಬದಲಾಗುತ್ತಿರುವ ಜಗತ್ತಿಗೆ ಎಂಜಿನಿಯರುಗಳು ಹೊಂದಿಕೊಳ್ಳಬೇಕು. ಹೊಸ ಕೌಶಲ್ಯಗಳನ್ನು ಸ್ವತಂತ್ರವಾಗಿ ಕಲಿಯಲು ಸಮಯ ವಿನಿಯೋಗ ಮಾಡಬೇಕು. ಇನ್ಫೋಸಿಸ್ ಅಥವಾ ಟೆಕ್ ಮಹೀಂದ್ರ ಕಂಪನಿಗಳಂತೆ ಲರ್ನಿಂಗ್ ಕ್ಯಾಂಪಸ್ಗಳನ್ನು ಸ್ಥಾಪಿಸುವ ದಿನಗಳು ಮುಗಿದವು’ ಎಂದು ಕರೆ ನೀಡಿದ್ದಾರೆ.
ಸಿ.ಪಿ. ಗುರ್ನಾನಿ ಅವರು ಸುದೀರ್ಘ ಕಾಲ ಟೆಕ್ ಮಹೀಂದ್ರದಲ್ಲಿ ಸಿಇಒ ಆಗಿದ್ದವರು. ಡಿಸೆಂಬರ್ 19ಕ್ಕೆ ಅವರು ನಿರ್ಗಮಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ