Black Money: ಸ್ವಿಸ್ ಬ್ಯಾಂಕಲ್ಲಿ ಕಪ್ಪು ಹಣ ಇಟ್ಟು ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರಾ ಧನಿಕರು?

|

Updated on: Mar 20, 2023 | 12:30 PM

Credit Suisse Special Story: ಸ್ವಿಟ್ಜರ್​ಲೆಂಡ್​ನ ಬಹುತೇಕ ಎಲ್ಲಾ ಬ್ಯಾಂಕುಗಳೂ ಕಪ್ಪು ಹಣಗಳ ನೆಲೆವೀಡಾಗಿರುವುದು ಜಗಜ್ಜಾಹೀರಾಗಿರುವ ಸಂಗತಿ. ಅದರಲ್ಲೂ ಕ್ರೆಡಿಟ್ ಸ್ವೀಸ್ ರಹಸ್ಯ ಪಾಲನೆಯಲ್ಲಿ ಹೆಸರುವಾಸಿ. ಈಗ ಕಪ್ಪು ಹಣ ಇಟ್ಟವರ ಗತಿ ಏನು?

Black Money: ಸ್ವಿಸ್ ಬ್ಯಾಂಕಲ್ಲಿ ಕಪ್ಪು ಹಣ ಇಟ್ಟು ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರಾ ಧನಿಕರು?
ಕ್ರೆಡಿಟ್ ಸ್ವೀಸ್
Follow us on

ನವದೆಹಲಿ: ಸ್ವಿಟ್ಜರ್​ಲೆಂಡ್​ನ ಎರಡನೇ ಅತಿದೊಡ್ಡ ಬ್ಯಾಂಕ್ ಅಗಿದ್ದ ಮತ್ತು ಜಾಗತಿಕ ಬ್ಯಾಂಕಿಂಗ್ ದೈತ್ಯರಲ್ಲಿ ಒಂದೆನಿಸಿದ್ದ ಕ್ರೆಡಿಟ್ ಸ್ವೀಸ್ ಗ್ರೂಪ್ ಎಜಿ (Credit Suisse Group AG) ಪತನಗೊಂಡಿರುವುದು ಬ್ಯಾಂಕಿಂಗ್ ವಲಯವನ್ನೇ ಬೆಚ್ಚಿಬೀಳಿಸಿದೆ. ಅದಕ್ಕಿಂತಲೂ ಹೆಚ್ಚು ಬೆಚ್ಚಿರುವುದು ಕಪ್ಪುಹಣ ಧನಿಕರು. ಕ್ರೆಡಿಟ್ ಸ್ವೀಸ್​ನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಇರುವ ಶಂಕೆ ಇದೆ. ಸ್ವಿಟ್ಜರ್​ಲೆಂಡ್​ನ ಬಹುತೇಕ ಎಲ್ಲಾ ಬ್ಯಾಂಕುಗಳೂ ಕಪ್ಪು ಹಣಗಳ ನೆಲೆವೀಡಾಗಿರುವುದು ಜಗಜ್ಜಾಹೀರಾಗಿರುವ ಸಂಗತಿ. ಅದರಲ್ಲೂ ಕ್ರೆಡಿಟ್ ಸ್ವೀಸ್ ರಹಸ್ಯ ಪಾಲನೆಯಲ್ಲಿ ಹೆಸರುವಾಸಿ. ಅದರಲ್ಲಿರುವ ಖಾತೆದಾರರ ಹೆಸರು ಮತ್ತವರ ಠೇವಣಿ ಬಗ್ಗೆ ಯಾರಿಗೂ ಅದು ಬಹಿರಂಗಗೊಳಿಸದೇ ಮಾಹಿತಿಯನ್ನು ರಹಸ್ಯವಾಗಿಟ್ಟುಕೊಳ್ಳುತ್ತಾ ಬಂದಿತ್ತು. ಇದೀಗ ಈ ಬ್ಯಾಂಕು ಪತನಗೊಂಡಿರುವುದು ಬಹಳ ಮಂದಿಗೆ ತಮ್ಮ ಕಪ್ಪುಹಣ ಹಾಗೇ ಸುಮ್ಮನೆ ಮಾಯವಾಗಿಬಿಡುತ್ತೇನೋ ಎಂದು ಕಂಗಾಲಾಗಿದ್ದಾರೆ. ಭಾರತದಲ್ಲಿ ತೆರಿಗೆಗಳ್ಳತನ ಮಾಡಿ ಕ್ರೆಡಿಟ್ ಸ್ವೀಸ್​ನಲ್ಲಿ ಹಣ ಶೇಖರಿಸಿಟ್ಟವರು ಅದೆಷ್ಟು ಇರಬಹುದು ಎಂಬುದಕ್ಕೆ ಅಧಿಕೃತ ಲೆಕ್ಕ ಇಲ್ಲ. ಇದೆ ಎನ್ನುವುದಕ್ಕೆ ಆಧಾರವೂ ಇಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಅಧಿಕೃತ ಮಾಹಿತಿ ಹೊರಬಂದರೂ ಬಂದೀತು.

ಇನ್ನು, ಕ್ರೆಡಿಟ್ ಸ್ವೀಸ್ ಬ್ಯಾಂಕ್​ನ ಪತನದ ವಿಚಾರಕ್ಕೆ ಬರುವುದಾದರೆ ಸ್ವಿಟ್ಚರ್​ಲೆಂಡ್​ನ ಇನ್ನೊಂದು ಬ್ಯಾಂಕ್ ಯುಬಿಎಸ್ ಗ್ರೂಪ್ ಎಜಿ ಇದೀಗ ಕ್ರೆಡಿಟ್ ಸ್ವೀಸ್ ಅನ್ನು ಖರೀದಿಸಲು ಒಪ್ಪಿಕೊಂಡಿದೆ. ಕೇವಲ 3.25 ಬಿಲಿಯನ್ ಡಾಲರ್ (ಸುಮಾರು 27 ಸಾವಿರ ಕೋಟಿ ರುಪಾಯಿ) ಮೊತ್ತಕ್ಕೆ ಡೀಲ್ ಆಗಿದೆ. ಇದರಲ್ಲಿ ಕ್ರೆಡಿಟ್ ಸ್ವೀಸ್​ನ ಎಲ್ಲಾ ಷೇರುಗಳನ್ನು ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಬೆಲೆಗೆ ಯುಬಿಎಸ್ ಖರೀದಿ ಮಾಡಲಿದೆ.

ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ಪರಿಣಾಮವಾಗಿ ಕ್ರೆಡಿಟ್ ಸ್ವಿಸ್ ಕುಸಿಯಿತು ಎಂದು ಯಾರಾದರೂ ಹೇಳಿದರೆ ಅದು ಅರ್ಧಸತ್ಯ ಮಾತ್ರ. ಕ್ರೆಡಿಟ್ ಸ್ವೀಸ್ ಪತನಕ್ಕೆ ಮುನ್ನುಡಿ ಬರೆದದ್ದು ಎಸ್​ವಿಬಿ ಘಟನೆ ಎಂಬುದು ನಿಜ. ಸಂಕಷ್ಟದಲ್ಲಿದ್ದ ಕ್ರೆಡಿಟ್ ಸ್ವೀಸ್​ಗೆ ಇನ್ನಷ್ಟು ಬಂಡವಾಳ ತುಂಬಲು ಸೌದಿ ನ್ಯಾಷನಲ್ ಬ್ಯಾಂಕ್ ನಿರಾಕರಿಸಿದಾಗ ಪತನ ದಿಢೀರ್ ಪತನ ಆರಂಭವಾಯಿತು. ಠೇವಣಿದಾರರು, ಹೂಡಿಕೆದಾರರು ಕ್ರೆಡಿಟ್ ಸ್ವೀಸ್​ನಿಂದ ಹಣ ಹಿಂಪಡೆಯಲು ಮುಂದಾಗಿದ್ದು ದುರಂತ ತಡೆಯಲು ಕಷ್ಟಸಾಧ್ಯವಾಗಿಸಿತು. ಸ್ವಿಸ್ ನ್ಯಾಷನಲ್ ಬ್ಯಾಂಕ್ 54 ಬಿಲಿಯನ್ ಹಣಕಾಸು ನೆರವು ಒದಗಿಸುವುದಾಗಿ ರಾತ್ರೋರಾತ್ರಿ ಭರವಸೆ ನೀಡಿದರೂ ಏನು ಪ್ರಯೋಜನ ಆಗಲಿಲ್ಲ. ಆಗ ಸ್ವಿಟ್ಚರ್​ಲೆಂಡ್​ನ ಅಧಿಕಾರಿಗಳು ಕೂತು ಚರ್ಚಿಸಿ ಯುಬಿಎಸ್ ಬ್ಯಾಂಕನ್ನು ಕ್ರೆಡಿಟ್ ಸ್ವೀಸ್ ರಕ್ಷಣೆಗೆ ಅಖಾಡಕ್ಕೆ ಇಳಿಸಿದರು.

ಕ್ರೆಡಿಟ್ ಸ್ವೀಸ್ ಪತನದ ಆರಂಭ ಬಹಳ ಹಿಂದಿನದ್ದು

ತೆರಿಗೆ ಸ್ವರ್ಗ ಎನಿಸಿರುವ ಸ್ವಿಟ್ಚರ್​ಲೆಂಡ್​ನಲ್ಲಿ ಬ್ಯಾಂಕುಗಳಿಗೆ ಕಠಿಣ ನಿಯಮಗಳಿಲ್ಲ. ಹೀಗಾಗಿ, ಜಗತ್ತಿನಾದ್ಯಂತ ತೆರಿಗೆಗಳ್ಳರಿಗೆ ಈ ಬ್ಯಾಂಕುಗಳು ಆವಾಸಸ್ಥಾನ. ಹೇರಳವಾದ ಸಂಪತ್ತು ಮತ್ತು ಬಂಡವಾಳ ಇಲ್ಲಿಯ ಬ್ಯಾಂಕುಗಳಲ್ಲಿವೆ. ಕ್ರೆಡಿಟ್ ಸ್ವೀಸ್ 166 ವರ್ಷಗಳಷ್ಟು ಹಳೆಯ ಬ್ಯಾಂಕು ಮತ್ತು ಸ್ವಿಟ್ಚರ್​ಲೆಂಡ್​ನ ಎರಡನೇ ಅತಿದೊಡ್ಡ ಬ್ಯಾಂಕು. ಇದು 1 ಟ್ರಿಲಿಯನ್ ಡಾಲರ್ (ಸುಮಾರು 82 ಲಕ್ಷ ಕೋಟಿ ರುಪಾಯಿ) ಸಂಪತ್ತು ಹೊಂದಿದ್ದ ಕಂಪನಿ. ಸ್ವಿಟ್ಚರ್​ಲೆಂಡ್ ದೇಶದ ಆರ್ಥಿಕತೆಗೆ ಉಸಿರು ತುಂಬುತ್ತಿದ್ದ ಬ್ಯಾಂಕಿದು. ಒಂದು ವಿಚಾರ ಗೊತ್ತಿರಲಿ, ಕ್ರೆಡಿಟ್ ಸ್ವೀಸ್ ಮತ್ತು ಯುಬಿಎಸ್ ಈ ಎರಡು ಬ್ಯಾಂಕುಗಳು ಸೇರಿ ಒಟ್ಟು ಹೊಂದಿದ್ದ ಆಸ್ತಿಯು ಸ್ವಿಟ್ಚರ್​ಲೆಂಡ್​ನ ಒಟ್ಟಾರೆ ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಎಂದೆನ್ನಲಾಗುತ್ತಿತ್ತು.

ಇದನ್ನೂ ಓದಿBank Crisis: ಅಮೆರಿಕದಲ್ಲಿ ಶೀತವಾದರೆ ಭಾರತಕ್ಕೆ ನೆಗಡಿ ಆಗಲೇಬೇಕಾ? ಅಲ್ಲಿ ಬ್ಯಾಂಕ್ ಬಿದ್ದರೆ ಇಲ್ಲಿ ಭಯಬೀಳಬೇಕಾ? ವಾಸ್ತವ ಸ್ಥಿತಿ ಏನು?

ಇಂತಿಪ್ಪ ಕ್ರೆಡಿಟ್ ಸ್ವೀಸ್ ಕಳೆದ ಕೆಲ ವರ್ಷಗಳಿಂದ ಗಣನೀಯವಾಗಿ ಕುಸಿಯುತ್ತಾ ಬಂದಿದೆ. 1 ಟ್ರಿಲಿಯನ್ ಡಾಲರ್ ಇದ್ದ ಇದರ ಆಸ್ತಿ ಮೌಲ್ಯ 580 ಬಿಲಿಯನ್ ಡಾಲರ್ (ಸುಮಾರು 51 ಲಕ್ಷ ಕೋಟಿ ರುಪಾಯಿ) ಮಟ್ಟಕ್ಕೆ ಇಳಿಯಿತು.

ಇತ್ತೀಚಿನ ವರ್ಷಗಳಲ್ಲಿ ಕ್ರೆಡಿಟ್ ಸ್ವೀಸ್​ನಲ್ಲಿ ಮ್ಯಾನೇಜ್ಮೆಂಟ್ ಸಮಸ್ಯೆ ಬಹಳವಾಗಿ ಕಾಡುತ್ತಾ ಬಂದಿತ್ತು ಎಂದು ವರದಿಗಳು ಹೇಳುತ್ತವೆ. ಉನ್ನತ ಮಟ್ಟದಲ್ಲಿ ಮ್ಯಾನೇಜ್ಮೆಂಟ್​ಗಳ ನಿರಂತರ ಬದಲಾವಣೆಯು ಕ್ರೆಡಿಟ್ ಸ್ವೀಸ್​ಗೆ ಪ್ರತೀ ಬಾರಿಯೂ ಮರ್ಮಾಘಾತ ಕೊಡುತ್ತಾ ಹೋಗಿತ್ತು. ಹಣಕಾಸು ಬಿಕ್ಕಟ್ಟು ತಲೆದೋರುವ ಮುಂಚೆ ನಳನಳಿಸುತ್ತಿದ್ದ ಅದರ ಷೇರುಗಳು ಇದೀಗ ಶೇ. 95ರಷ್ಟು ಕುಸಿತ ಕಂಡಿತು ಎನ್ನುವುದೇ ಅದೆಂಥ ದೊಡ್ಡ ವಿಘಟನೆಯಾಗಿತ್ತು ಎಂಬುದನ್ನು ಅಂದಾಜಿಸಬಹುದು. ಇತ್ತೀಚೆಗೆ ನಡೆಸಿದ ಮೌಲ್ಯಮಾಪನದಲ್ಲಿ ಕ್ರೆಡಿಟ್ ಸ್ವೀಸ್ ಮೌಲ್ಯ 7.4 ಬಿಲಿಯನ್ ಸ್ವಿಸ್ ಫ್ರಾಂಕ್ (ಸುಮಾರು 65 ಸಾವಿರ ಕೋಟಿ ರು) ಎಂದು ಗಣಿಸಲಾಯಿತು. ಅಂತಿಮವಾಗಿ ಯುಬಿಎಸ್ ಸಂಸ್ಥೆ ಈ ಮೌಲ್ಯದ ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಕ್ರೆಡಿಟ್ ಸ್ವೀಸ್ ಅನ್ನು ಬಗಲಿಗೆ ಏರಿಸಿಕೊಂಡಿದೆ.

ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪು ಹಣ ಶೇಖರಣೆ ನಿಜವಾ?

ಸ್ವಿಸ್ ಬ್ಯಾಂಕು ಹೆಸರು ಭಾರತದಲ್ಲಿ ಬಹಳ ಜನಜನಿತವಾಗಿದೆ. ಕಪ್ಪು ಹಣ ಎಂದಾಗ ಮೊದಲಿಗೆ ಬರುವ ಹೆಸರೇ ಸ್ವಿಸ್ ಬ್ಯಾಂಕು. ಒಂದು ಕಾಲದಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಲಕ್ಷಲಕ್ಷ ಕೋಟಿ ಯಷ್ಟು ಕಪ್ಪು ಹಣವನ್ನು ಇಟ್ಟಿದ್ದಾರೆ ಎನ್ನಲಾಗುತ್ತಿತ್ತು. ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನ, ಸ್ವಿಸ್ ಬ್ಯಾಂಕಲ್ಲಿ ಇಡಲಾಗಿರುವ ಕಪ್ಪುಹಣವನ್ನು ವಾಪಸ್ ತರುವುದಾಗಿ ಘಂಟಾಘೋಷವಾಗಿ ಹೇಳಿದ್ದರು. ಆದರೆ, ವಾಸ್ತವದಲ್ಲಿ ಅಂಥದ್ದು ಪತ್ತೆಯಾಗಿದ್ದು ತೀರಾ ಕಡಿಮೆ. ಸ್ವಿಸ್ ಬ್ಯಾಂಕಲ್ಲಿ ಇರುವ ಭಾರತೀಯರ ಖಾತೆಗಳ ಬಗ್ಗೆ ಮಾಹಿತಿ ಪಡೆಯಲು ಭಾರತ ಸರ್ಕಾರ ಸ್ವಿಟ್ಚರ್​ಲೆಂಡ್ ಸರ್ಕಾರವನ್ನು ಒಪ್ಪಿಸಿತಾದರೂ ಲೆಕ್ಕ ಸಿಕ್ಕಿದ್ದು ನಿರೀಕ್ಷೆಗಿಂತ ಬಹಳ ಕಡಿಮೆ. ಕೆಲವೇ ಸಾವಿರ ಕೋಟಿ ರುಪಾಯಿಯಷ್ಟು ಮೊತ್ತದ ಹಣವನ್ನು ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇರಿಸಿರುವುದು ಗೊತ್ತಾಗಿದೆ.

ಇದನ್ನೂ ಓದಿCredit Suisse: ಜಾಗತಿಕ ಬ್ಯಾಂಕಿಂಗ್ ದೈತ್ಯ ಕ್ರೆಡಿಟ್ ಸ್ವೀಸ್ ಪತನ ಸಾಧ್ಯತೆ; ಭಾರತಕ್ಕೆ ತಲೆನೋವಾಗುತ್ತಾ ಈ ಸ್ವಿಸ್ ಬ್ಯಾಂಕ್? ವಾಸ್ತವ ಪರಿಸ್ಥಿತಿ ಹೇಗಿದೆ?

ಅದೇನೇ ಇರಲಿ, ಸ್ವಿಟ್ಚರ್​ಲೆಂಡ್​ನ ಆರ್ಥಿಕತೆಯ ಜೀವನಾಡಿಯಾದ ಬ್ಯಾಂಕುಗಳು ತಮ್ಮ ಖಾತೆದಾರರ ಮಾಹಿತಿಯನ್ನು ಬಹಿರಂಗಪಡಿಸುತ್ತವೆಂದು ನಿರೀಕ್ಷಿಸುವುದು ಕಷ್ಟವೇ. ಅದರಲ್ಲೂ ಕ್ರೆಡಿಟ್ ಸ್ವೀಸ್ ಬಹಳ ರಹಸ್ಯ ಕಾಪಾಡುತ್ತಿದ್ದ ಬ್ಯಾಂಕು. ಅರಬ್ ಮತ್ತು ರಷ್ಯನ್ ಸಾಹುಕಾರರು ಮತ್ತು ಉದ್ಯಮಿಗಳು ತಮ್ಮ ಹೇರಳವಾದ ಹಣ ಶೇಖರಣೆ ಮಾಡಲು ಕ್ರೆಡಿಟ್ ಸ್ವೀಸ್ ಪ್ರಶಸ್ತ ಜಾಗವಾಗಿತ್ತೆನ್ನಲಾಗಿದೆ.

ವರದಿಗಾರರ ಗುಂಪು ಬಹಿರಂಗಪಡಿಸಿದ ಕ್ರೆಡಿಟ್ ಸ್ವೀಸ್ ರಹಸ್ಯ

ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ವರದಿಗಾರರ ಗುಂಪೊಂದು ಕ್ರೆಡಿಟ್ ಸ್ವೀಸ್​ನಲ್ಲಿ 18 ಸಾವಿರಕ್ಕೂ ಹೆಚ್ಚು ವಿದೇಶೀಯರ ಖಾತೆಗಳನ್ನು ಬಹಿರಂಗಪಡಿಸಿತ್ತು. ಇದು ಸ್ಯಾಂಪಲ್ ಮಾತ್ರ. ಇನ್ನೂ ಬಹಳಷ್ಟು ವಿದೇಶೀ ಗ್ರಾಹಕರ ವಿವರಗಳು ಗೌಪ್ಯವಾಗಿವೆ ಎಂಧು ಓಸಿಸಿಆರ್​ಪಿ ಗುಂಪು ಹೇಳಿತ್ತು.

ಇದನ್ನೂ ಓದಿEconomic Crisis: ಫೋರೆಕ್ಸ್ ರಿಸರ್ವ್ ಮತ್ತೆ ಕುಸಿತ; ವಿನಾಶದತ್ತ ಆರ್ಥಿಕತೆ- ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

ಕ್ರೆಡಿಟ್ ಸ್ವೀಸ್ ಈ ಆರೋಪವನ್ನು ಬಲವಾಗಿ ತಳ್ಳಿಹಾಕಿದ್ದು ಹೌದು. ದಶಕಗಳ ಹಿಂದೆ ಕಾನೂನು ನೀತಿ ನಿಯಮಗಳು ಬದಲಾಗಿದ್ದ ಸಂದರ್ಭದಲ್ಲಿ ವಿದೇಶಿಗರಿಂದ ಠೇವಣಿಗಳನ್ನು ಪಡೆದಿದ್ದು ಹೌದು. ಆದರೆ, ಈಗ ಪರಿಸ್ಥಿತಿ ಬೇರೆ ಇದೆ. ಈಗ ಮಾಡಿರುವ ಆರೋಪಗಳು ಆಧಾರರಹಿತವಾಗಿರುವಂಥವು ಎಂದು ಕ್ರೆಡಿಟ್ ಸ್ವೀಸ್ ಹೇಳಿತ್ತು.

ಕಪ್ಪು ಹಣದ ಮಾಹಿತಿ ಗೌಪ್ಯವಾಗಿಯೇ ಉಳಿದುಕೊಂಡರೂ, ಕ್ರೆಡಿಟ್ ಸ್ವೀಸ್ ಗ್ರೂಪ್ ಎಜಿ ಪತನಗೊಂಡಿರುವುದು ಮಾತ್ರ ಸತ್ಯವಾಗಿದೆ. ಕ್ರೆಡಿಟ್ ಸ್ವೀಸ್​ನಲ್ಲಿ ಹಾಗೊಂದು ವೇಳೆ ತೆರಿಗೆಗಳ್ಳರು ಹಣವನ್ನು ಇರಿಸಿದ್ದೇ ಆದಲ್ಲಿ ಅವರ ಹಣ ಏನಾಗುತ್ತದೆ? ಯುಬಿಎಸ್ ಬ್ಯಾಂಕು ಕ್ರೆಡಿಟ್ ಸ್ವೀಸ್ ಖಾತೆಗಳನ್ನು ಮುಂದುವರಿಸಿಕೊಂಡು ಹೋಗುತ್ತಾ? ಕಪ್ಪು ಹಣ ಶೇಖರಣೆ ಹಾಗೇ ಮುಂದುವರಿಯುತ್ತಾ? ಸ್ವಿಸ್ ಬ್ಯಾಂಕುಗಳ ಪ್ರಾಬಲ್ಯ ಇರುವುದೇ ಇಂಥ ಕಪ್ಪು ಹಣ ಶೇಖರಣೆಯಲ್ಲಿ. ಹೀಗಾಗಿ, ಠೇವಣಿದಾರರ ಹಣವನ್ನು ಉಳಿಸಿ, ವಿದೇಶೀ ಸಿರಿವಂತರ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನವಂತೂ ನಡೆಯಲಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ