ನವದೆಹಲಿ: ಒಪೆಕ್ ರಾಷ್ಟ್ರಗಳ ಗುಂಪು (OPEC Nations) ಕಚ್ಛಾ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ್ದರೂ ತೈಲ ಬೆಲೆ ಕುಸಿತ ತಡೆಯಲು ಸಾಧ್ಯವಾಗಿಲ್ಲ. ಜಾಗತಿಕವಾಗಿ ಮನೆಮಾಡಿರುವ ಆರ್ಥಿಕ ಅನಿಶ್ಚಿತತೆಯ ಕಾರಣದಿಂದ ಏಪ್ರಿಲ್ 24, ಸೋಮವಾರದಂದು ಕಚ್ಛಾ ತೈಲ ಬೆಲೆಗಳು (Crude Oil Prices) ಇಳಿಕೆ ಕಂಡಿವೆ. ಜಾಗತಿಕವಾಗಿ ಪ್ರಮುಖ ದೇಶಗಳಲ್ಲಿ ಬಡ್ಡಿ ದರ ಹೆಚ್ಚುತ್ತಿರುವುದು, ಆರ್ಥಿಕತೆಯ ವೇಗ ಮಂದಗೊಂಡಿರುವುದು ಕಚ್ಛಾ ತೈಲ ಮಾರುಕಟ್ಟೆಯಲ್ಲಿ ನಿರುತ್ಸಾಹಕ್ಕೆ ಕಾರಣವಾಗಿರುವುದು ತಿಳಿದುಬಂದಿದೆ. ಬ್ರೆಂಟ್ ಕ್ರೂಡ್ ಮಾರುಕಟ್ಟೆ ಮತ್ತು ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕ್ರ್ಯೂಡ್ ಮಾರುಕಟ್ಟೆ ಎರಡರಲ್ಲೂ ಕಚ್ಛಾ ತೈಲ ಬೆಲೆ ಶೇ. 1ರಷ್ಟು ಕುಸಿತ ಕಂಡಿದೆ. ಇದು ಭಾರತದ ಪೆಟ್ರೋಲ್ ದರಗಳ ಇಳಿಕೆಗೆ ಎಡೆ ಮಾಡಿಕೊಡುವ ನಿರೀಕ್ಷೆ ಇದೆ. ಆದಾಗ್ಯೂ ಈ ಕ್ಯಾಲೆಂಡರ್ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬ್ರೆಂಟ್ ಕ್ರ್ಯೂಡ್ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚುವ ನಿರೀಕ್ಷೆಯಂತೂ ಇದೆ.
ವಿಶ್ವದ ಪ್ರಮುಖ ಕಚ್ಛಾ ತೈಲ ಮಾರುಕಟ್ಟೆ ಬೆಲೆ ಸೂಚಕಗಳಾದ ಡಬ್ಲ್ಯೂಟಿಐ ಕ್ರ್ಯೂಡ್ ಮತ್ತು ಬ್ರೆಂಟ್ ಕ್ರ್ಯೂಡ್ ಇಂಡೆಕ್ಸ್ನಲ್ಲಿ ಶೇ. 1ಕ್ಕಿಂತಲೂ ಹೆಚ್ಚು ಬೆಲೆ ಕುಸಿತವಾಗಿದೆ. ಡಬ್ಲ್ಯೂಟಿಐ ಕ್ರ್ಯೂಡ್ನಲ್ಲಿ ಒಂದು ಬ್ಯಾರಲ್ ತೈಲಕ್ಕೆ 76.97 ಡಾಲರ್ ಬೆಲೆ ಇದೆ. ಇನ್ನು, ಬ್ರೆಂಟ್ ಕ್ರ್ಯೂಡ್ನಲ್ಲಿ ಬ್ಯಾರಲ್ಗೆ 80.76 ಡಾಲರ್ ಬೆಲೆ ಇದೆ. ಒಕೆಪ್ ಬ್ಯಾಸ್ಕೆಟ್ನಲ್ಲಿ ಹೆಚ್ಚಿನ ಬೆಲೆ ವ್ಯತ್ಯಯವಾಗಿಲ್ಲ. ಮುರಬನ್ ಕ್ರ್ಯೂಡ್ ಇಂಡೆಕ್ಸ್ನಲ್ಲಿ ಕಚ್ಛಾ ತೈಲ ಬೆಲೆ ಶೇ. 1.22ರಷ್ಟು ಹೆಚ್ಚಾಗಿದೆ. ಅಲ್ಲೀಗ ಒಂದು ಬ್ಯಾರಲ್ ತೈಲಕ್ಕೆ 81.56 ಡಾಲರ್ ಬೆಲೆ ಇದೆ.
ಇದನ್ನೂ ಓದಿ: Green Bond: ಗ್ರೀನ್ ಬಾಂಡ್ ಎಂದರೇನು? ಇದರ ಜನಪ್ರಿಯತೆ ಹೆಚ್ಚುತ್ತಿರುವುದೇಕೆ? ಇದರಿಂದ ಏನು ಅನುಕೂಲ?
ಡಬ್ಲ್ಯೂಟಿಐ ಮತ್ತು ಬ್ರೆಂಟ್ ಕ್ರ್ಯೂಡ್ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದಲೂ ಬೆಲೆ ಇಳಿಮುಖದಲ್ಲಿದೆ. ಇಲ್ಲಿ ಶೇ. 5ಕ್ಕಿಂತ ಹೆಚ್ಚು ಬೆಲೆ ಇಳಿಕೆ ಆಗಿದೆ. ಅಮೆರಿಕದಲ್ಲಿ ಪೆಟ್ರೋಲ್ಗೆ ಬೇಡಿಕೆ ಕಡಿಮೆ ಆಗಿರುವುದು ಈ ಬೆಲೆ ಕುಸಿತಕ್ಕೆ ಒಂದು ಕಾರಣ. ಅಮೆರಿಕದಲ್ಲಿ ಪೆಟ್ರೋಲ್ಗೆ ಬೇಡಿಕೆ ಕಡಿಮೆ ಆಗಿರುವುದು ಆ ದೇಶದ ಆರ್ಥಿಕ ಅನಾರೋಗ್ಯದ ಸೂಚಕ ಎಂದು ಪರಿಗಣಿಸಲಾಗುತ್ತಿದೆ. ಅಮೆರಿಕದ ಆರ್ಥಿಕ ಆರೋಗ್ಯ ಹದಗೆಟ್ಟರೆ ಅದು ಜಾಗತಿಕ ಹಿಂಜರಿತಕ್ಕೆ ಎಡೆ ಮಾಡಿಕೊಟ್ಟಂತೆಯೇ.
ಗಣನೆಗೆ ಬರುತ್ತಿರುವುದು ಇವಷ್ಟೇ ಅಂಶಗಳಲ್ಲ, ವಿಶ್ವದ ಪ್ರಮುಖ ದೇಶಗಳಲ್ಲಿನ ಸೆಂಟ್ರಲ್ ಬ್ಯಾಂಕುಗಳು ಬಡ್ಡಿ ದರ ಹೆಚ್ಚಿಸುವ ನಿರ್ಧಾರಕ್ಕೆ ಬರಬಹುದು ಎಂಬ ಸುದ್ದಿ ಇದೆ. ಹಣದುಬ್ಬರ ಅಂದುಕೊಂಡಷ್ಟು ಸುಲಭವಾಗಿ ಹತೋಟಿಗೆ ಬರುತ್ತಿಲ್ಲದಿರುವುದರಿಂದ ಬಡ್ಡಿ ದರ ಇನ್ನಷ್ಟು ಹೆಚ್ಚಿಸುವುದು ಅನಿವಾರ್ಯ ಎನ್ನಲಾಗಿದೆ. ಮೇ ಮೊದಲ ವಾರದಲ್ಲಿ ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ದೇಶಗಳ ಸೆಂಟ್ರಲ್ ಬ್ಯಾಂಕುಗಳ ಮುಖ್ಯಸ್ಥರು ಸಭೆ ಸೇರಲಿದ್ದು, ಬಡ್ಡಿ ಹೆಚ್ಚಿಸುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದರ ಜೊತೆಗೆ ಕೋವಿಡ್ ಬಳಿಕ ಚೀನಾದ ಆರ್ಥಿಕ ಚೇತರಿಕೆಯ ಹಾದಿಯಲ್ಲಿ ಎಡರುತೊಡರುಗಳು ಸಾಕಷ್ಟಿವೆ. ಇದೂ ಕೂಡ ತೈಲ ಮಾರುಕಟ್ಟೆಯಲ್ಲಿ ನಿರುತ್ಸಾಹ ಹೆಚ್ಚಲು ಕಾರಣವಾಗಿರಬಹುದು.
ಚೀನಾ ಅರ್ಥಿಕತೆಯ ಅನಿಶ್ಚಿತತೆ ಏನೇ ಇರಲಿ, ಆ ದೇಶವು ರಷ್ಯಾ ಮತ್ತು ಸೌದಿಯಿಂದ ದಾಖಲೆ ಪ್ರಮಾಣದಲ್ಲಿ ಕಚ್ಛಾ ತೈಲವನ್ನು ಖರೀದಿಸಿರುವುದು ತಜ್ಞರ ಗಮನ ಸೆಳೆದಿದೆ. ಚೀನಾದಲ್ಲಿ ತೈಲಕ್ಕೆ ಬೇಡಿಕೆ ಹೆಚ್ಚಲಿದ್ದು ಇದರಿಂದ ತೈಲ ಬೆಲೆ ಹೆಚ್ಚುವ ನಿರೀಕ್ಷೆ ಇದೆ. ನ್ಯಾಷನಲ್ ಆಸ್ಟ್ರೇಲಿಯಾ ಬ್ಯಾಂಕ್ನ ಅನಾಲಿಸ್ಟ್ಗಳ ಪ್ರಕಾರ ಎರಡನೇ ತ್ರೈಮಾಸಿಕ ಅವಧಿಯ ಅಂತ್ಯದಲ್ಲಿ (ಜೂನ್) ಬ್ರೆಂಟ್ ಕ್ರ್ಯೂಡ್ ಇಂಡೆಕ್ಸ್ನಲ್ಲಿ ಒಂದು ಬ್ಯಾರಲ್ ತೈಲಕ್ಕೆ 92 ಡಾಲರ್ ಬೆಲೆ ಮುಟ್ಟಬಹುದು.
Published On - 10:53 am, Mon, 24 April 23