Bitcoin: ಬಿಟ್​ಕಾಯಿನ್ ಮೌಲ್ಯ 67 ಸಾವಿರ ಡಾಲರ್​ನೊಂದಿಗೆ ಸಾರ್ವಕಾಲಿಕ ಗರಿಷ್ಠ; ಡಿಸೆಂಬರ್ ಹೊತ್ತಿಗೆ 1 ಲಕ್ಷ ಡಾಲರ್ ಸಾಧ್ಯತೆ

| Updated By: Srinivas Mata

Updated on: Oct 21, 2021 | 5:25 PM

ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್ ಬುಧವಾರ ರಾತ್ರಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 67,236 ಅಮೆರಿಕನ್ ಡಾಲರ್ ತಲುಪಿದೆ. ನ್ಯೂಯಾರ್ಕ್ ವಿನಿಮಯ ಕೇಂದ್ರದಲ್ಲಿ ಬಿಟ್​ಕಾಯಿನ್ ಇಟಿಎಫ್​ ಆರಂಭವಾದ ಒಂದು ದಿನದ ನಂತರ ಈ ಬೆಳವಣಿಗೆ ಆಗಿದೆ.

Bitcoin: ಬಿಟ್​ಕಾಯಿನ್ ಮೌಲ್ಯ 67 ಸಾವಿರ ಡಾಲರ್​ನೊಂದಿಗೆ ಸಾರ್ವಕಾಲಿಕ ಗರಿಷ್ಠ; ಡಿಸೆಂಬರ್ ಹೊತ್ತಿಗೆ 1 ಲಕ್ಷ ಡಾಲರ್ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us on

ವಿಶ್ವದ ಬೆಲೆಬಾಳುವ ಕ್ರಿಪ್ಟೋಕರೆನ್ಸಿ ಆದ ಬಿಟ್​ಕಾಯಿನ್ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (NYSE) ಮೊದಲ ಯುಎಸ್ ಬಿಟ್‌ಕಾಯಿನ್ ಫ್ಯೂಚರ್ಸ್-ಆಧಾರಿತ ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್ (ETF) ಆರಂಭಿಸಿದ ಒಂದು ದಿನದ ನಂತರ, ಅಂದರೆ ಬುಧವಾರ ರಾತ್ರಿ 8.24ಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 67,276 ಡಾಲರ್​ಗೆ ಏರಿತು. ಕ್ರಿಪ್ಟೋ ಹೂಡಿಕೆದಾರರು ಇಟಿಎಫ್‌ಗಳಿಗಾಗಿ ಯುಎಸ್ ನಿಯಂತ್ರಕರಿಂದ ಅನುಮೋದನೆಯನ್ನು ಎದುರು ನೋಡುತ್ತಿದ್ದರು. ಈ ಕ್ರಮದಿಂದಾಗಿ ಹೂಡಿಕೆಗಳನ್ನು ಡಿಜಿಟಲ್ ಸ್ವತ್ತುಗಳಾಗಿ ವಿಸ್ತರಿಸುವ ನಿರೀಕ್ಷೆಯಿದೆ. ಇಟಿಎಫ್ ಪ್ರೊಶೇರ್ಸ್ ಬಿಟ್‌ಕಾಯಿನ್ ಸ್ಟ್ರಾಟಜಿ ಈ ಬಗೆಯ ಮೊದಲ ಫಂಡ್​ ಆಗಿದ್ದು, ಮಂಗಳವಾರ ಟಿಕ್ಕರ್ BITO ಹೆಸರಿನ ಅಡಿಯಲ್ಲಿ ಪದಾರ್ಪಣೆ ಮಾಡಿದೆ. CoinGecko ಡೇಟಾ ಪ್ರಕಾರ, ಏಪ್ರಿಲ್ 14, 2021ರಂದು 63,576 ಡಾಲರ್ ತಲುಪಿದ್ದು, ಬಿಟ್​ಕಾಯಿನ್​ನ ಹಿಂದಿನ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿತ್ತು. ಅದಾಗಿ ಆರು ತಿಂಗಳ ನಂತರ ಬಿಟ್ ಕಾಯಿನ್ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿತು.

ಎರಡನೇ ಇಟಿಎಫ್ ವಾಲ್ಕಿರಿ ಬಿಟ್ ಕಾಯಿನ್ ಸ್ಟ್ರಾಟಜಿ ಫಂಡ್ ಶುಕ್ರವಾರ ನಾಸ್ಡಾಕ್ ಎಕ್ಸ್ ಚೇಂಜ್​ನಲ್ಲಿ ಆರಂಭಗೊಳ್ಳಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಬಿಟಿಎಫ್ ಟಿಕ್ಕರ್ ಅಡಿಯಲ್ಲಿ ಇಟಿಎಫ್ ವಹಿವಾಟು ಮಾಡುತ್ತದೆ. ಈ ವರದಿ ಆಗುವ ಹೊತ್ತಿಗೆ ಬಿಟ್ ಕಾಯಿನ್ 66,291 ಡಾಲರ್​ಗೆ ವಹಿವಾಟು ಮಾಡುತ್ತಿತ್ತು. “ಬಿಟ್ ಕಾಯಿನ್ 67 ಸಾವಿರ ಡಾಲರ್ ಗಡಿ ಮುಟ್ಟಲು ಪ್ರಮುಖ ಕಾರಣ ಇಟಿಎಫ್ ವಹಿವಾಟು. ಇಟಿಎಫ್‌ಗಳ ಮೂಲಕ ಕಾರ್ಪೊರೇಟ್‌ಗಳು (ಕ್ರಿಪ್ಟೋಗಳಲ್ಲಿ) ಹೂಡಿಕೆ ಮಾಡುವುದನ್ನು ತುಂಬಾ ಸರಳವಾಗಿಸುತ್ತದೆ ಮತ್ತು ಅವರು ಭೌತಿಕ ಸೆಕ್ಯೂರಿಟಿಯೊಂದಿಗೆ ವ್ಯವಹರಿಸುವ ಅಗತ್ಯವಿಲ್ಲ. ನಿಖರವಾದ ಹೊಸ ಗರಿಷ್ಠ ಏನೆಂದು ತಿಳಿದ ನಂತರ, ಬಿಟ್‌ಕಾಯಿನ್ ಬೆಲೆಯಲ್ಲಿ ಈಗಲೂ ಶೇ 50ರಷ್ಟು ಇಳಿಕೆ ಸಾಧ್ಯವಿದೆ. ಆದರೆ ಡಿಸೆಂಬರ್ ಅಂತ್ಯದ ವೇಳೆಗೆ ಬಿಟ್‌ಕಾಯಿನ್ 1 ಲಕ್ಷ ಡಾಲರ್ ಗಡಿಯನ್ನು ತಲುಪುವ ಸಾಧ್ಯತೆಯಿದೆ. 2013 ಮತ್ತು 2017ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಈ ರೀತಿಯ ವೇಗವನ್ನು ನಾವು ನೋಡಿದ್ದೇವೆ. ಹಾಗಾಗಿ, ಡಿಸೆಂಬರ್ ಮಧ್ಯದ ವೇಳೆಗೆ ನಿಜವಾದ ಗರಿಷ್ಠ ಎತ್ತರವನ್ನು ಏರಬಹುದು,” ಎಂದು ಯುನಿಕಾಯಿನ್ ಸಿಇಒ ಮತ್ತು ಸಹ-ಸಂಸ್ಥಾಪಕ ಸಾತ್ವಿಕ್ ವಿಶ್ವನಾಥ್ ಅವರು ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಬಿಟ್‌ಕಾಯಿನ್‌ನಲ್ಲಿ ಬೆಲೆ ಏರಿಳಿತದ ಹೊರತಾಗಿಯೂ ಕ್ರಿಪ್ಟೋಕರೆನ್ಸಿ ಈ ವರ್ಷ ಜನವರಿ 1ರಂದು 29,022 ಡಾಲರ್ ಮಟ್ಟದಿಂದ ಶೇ 130ರಷ್ಟು ಬೆಳೆದಿದೆ. ಬೆಲೆ ಏರಿಕೆ ಕಾರಣಕ್ಕೆ ಕಳೆದ ಎರಡು ವಾರಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆ ಬಂಡವಾಳ ಕೂಡ 2.4 ಟ್ರಿಲಿಯನ್ ಡಾಲರ್‌ನಿಂದ 2.7 ಟ್ರಿಲಿಯನ್ ಡಾಲರ್‌ಗೆ ಏರಿದೆ.

“ಈ ವರ್ಷ ಬಿಟ್ ಕಾಯಿನ್ ಖಂಡಿತವಾಗಿಯೂ 1 ಲಕ್ಷ ಡಾಲರ್ ಮುಟ್ಟುತ್ತದೆ. ಆದರೆ ಆ ಸಂಖ್ಯೆಯನ್ನು ತಲುಪುವ ಮುನ್ನ ಅದು ಕುಸಿತವನ್ನು ನೋಡುತ್ತದೆ. ಇಟಿಎಫ್ ಮೂಲಕ ಜನರು ಸುಲಭವಾಗಿ ಬಿಟ್ ಕಾಯಿನ್​ನಲ್ಲಿ ಹೂಡಿಕೆ ಮಾಡಬಹುದು. ಇಟಿಎಫ್ ವಹಿವಾಟು ಆರಂಭ ಆಗುತ್ತಿದ್ದಂತೆ ಹೂಡಿಕೆದಾರರಲ್ಲದವರು ಕೂಡ ಹೂಡಿಕೆ ಮಾಡಲು ಆರಂಭಿಸಿದ್ದಾರೆ ಮತ್ತು ಹೊಸ ಹಣ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಬಿಟ್‌ಕಾಯಿನ್ ಬೆಲೆ ಏರಿಕೆಯಾಗಿದೆ. ಜಾಗತಿಕವಾಗಿ ಹೂಡಿಕೆ ಮಾಡಲು ಸಹ ಇದನ್ನು ತೆರೆಯಲಾಗಿರುವುದರಿಂದ ಕ್ರಿಪ್ಟೋ ಮಾರುಕಟ್ಟೆಯು ಸಾಕಷ್ಟು ಹೂಡಿಕೆಗಳನ್ನು ಕಾಣುತ್ತದೆ,” ಎಂದು ಕ್ರಿಪ್ಟೋಕರೆನ್ಸಿ ಯುನೈಟೆಡ್ ಫಾರ್ಮರ್ಸ್ ಫೈನಾನ್ಸ್ (ಯುಎಫ್‌ಎಫ್) ಸಹ-ಸಂಸ್ಥಾಪಕ ಸಂತೋಷ್ ಭಂಡಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: Bitcoin ETF: ನ್ಯೂ ಯಾರ್ಕ್ ವಿನಿಮಯ ಕೇಂದ್ರದಲ್ಲಿ ಬಿಟ್​ಕಾಯಿನ್ ಇಟಿಎಫ್​ ವಹಿವಾಟು ಶುರು