ಇನ್ನೈದು ವರ್ಷದಲ್ಲಿ ಬೆಂಗಳೂರಲ್ಲಿ 23 ಲಕ್ಷ ಎಲೆಕ್ಟ್ರಿಕ್ ವಾಹನಗಳು; ಎಷ್ಟು ಚಾರ್ಜಿಂಗ್ ಸ್ಟೇಷನ್ಸ್ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ

|

Updated on: Nov 15, 2024 | 4:04 PM

Electric vehicles and infrastructure for Bengaluru: ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ಇ-ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಿಸ್ಟೆಪ್ ಸಂಸ್ಥೆಯ ಅಧ್ಯಯನ ವರದಿ ಪ್ರಕಾರ 2030ರೊಳಗೆ ಬೆಂಗಳೂರಿನಲ್ಲಿ ಇ-ವಾಹನಗಳ ಸಂಖ್ಯೆ 23 ಲಕ್ಷಕ್ಕೆ ಏರಲಿದೆ. ಇದಕ್ಕೆ ಎಷ್ಟು ವಿದ್ಯುತ್ ಅಗತ್ಯ ಇದೆ, ಎಷ್ಟು ಚಾರ್ಜಿಂಗ್ ಸ್ಟೇಷನ್ಸ್ ಬೇಕು ಇತ್ಯಾದಿಯನ್ನು ಸಿಸ್ಟೆಪ್ ಅಂದಾಜು ಮಾಡಿದೆ.

ಇನ್ನೈದು ವರ್ಷದಲ್ಲಿ ಬೆಂಗಳೂರಲ್ಲಿ 23 ಲಕ್ಷ ಎಲೆಕ್ಟ್ರಿಕ್ ವಾಹನಗಳು; ಎಷ್ಟು ಚಾರ್ಜಿಂಗ್ ಸ್ಟೇಷನ್ಸ್ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ
ಚಾರ್ಜಿಂಗ್ ಸ್ಟೇಷನ್​
Follow us on

ಬೆಂಗಳೂರು, ನವೆಂಬರ್ 15: ಕಡಿಮೆ ವಾಲಿನ್ಯ, ಕಡಿಮೆ ಸಂಚಾರ ವೆಚ್ಚದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳು ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚೆಚ್ಚು ಜನಪ್ರಿಯತೆ ಹೊಂದುತ್ತಿವೆ. ಹೆಚ್ಚೆಚ್ಚು ಜನರು ಇವಿಗಳನ್ನು ಖರೀದಿಸುತ್ತಿದ್ದಾರೆ. ಇದೇ ಖರೀದಿ ಭರಾಟೆ ಮುಂದುವರಿದಲ್ಲಿ ಇನ್ನೈದು ವರ್ಷದಲ್ಲಿ, ಅಂದರೆ 2030ರೊಳಗೆ ಬೆಂಗಳೂರಿನಲ್ಲಿ 23 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಇರಲಿವೆ. ಆದರೆ, ಎಲೆಕ್ಟ್ರಿಕ್ ವಾಹನಗಳು ಬ್ಯಾಟರಿಗಳಿಂದ ಶಕ್ತಿ ಪಡೆಯುತ್ತವೆ. ಈ ಬ್ಯಾಟರಿಗಳಿಗೆ ಚಾರ್ಜಿಂಗ್ ಅಗತ್ಯ. ಪೆಟ್ರೋಲ್, ಡೀಸೆಲ್ ಗಾಡಿಗಳಿಗೆ ಪೆಟ್ರೋಲ್ ಬಂಕ್​ಗಳಿಂದ ಇಂಧನ ತುಂಬುವಂತೆ, ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮಾಡಲು ಚಾರ್ಜಿಂಗ್ ಸ್ಟೇಷನ್ ಅಗತ್ಯ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಈ ಮೂಲಸೌಕರ್ಯಗಳು ಸಮರ್ಪಕವಾಗಿರಬೇಕು.

ಸಿಸ್ಟೆಪ್ (CSTEP- Center for Study of Science, Technology and Policy) ಎನ್ನುವ ಚಿಂತನ ವೇದಿಕೆ ಸಂಸ್ಥೆಯು ಒಂದು ಅಧ್ಯಯನ ಮಾಡಿದ್ದು, 2030ರೊಳಗೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳು ಎಷ್ಟು ಹೆಚ್ಚಾಗಬಹುದು, ಅವಕ್ಕೆ ಚಾರ್ಜಿಂಗ್ ಸ್ಟೇಷನ್, ವಿದ್ಯುತ್ ಸರಬರಾಜು ಇತ್ಯಾದಿ ಮೂಲಸೌಕರ್ಯಗಳು ಎಷ್ಟು ಬೇಕಾಗಬಹುದು ಎಂಬುದನ್ನು ಅಂದಾಜು ಮಾಡಿದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸಖತ್ ವಾಹನ ಸಂಚಾರ; ನಿರೀಕ್ಷೆಮೀರಿಸಿದ ಅಕ್ಟೋಬರ್ ಟೋಲ್ ಕಲೆಕ್ಷನ್

‘ಬೆಂಗಳೂರು 2030: ಇವಿ ಚಾರ್ಜಿಂಗ್ ಡಿಮ್ಯಾಂಡ್ ಅಂಡ್ ಇನ್​ಫ್ರಾಸ್ಟ್ರಕ್ಚರ್’ ಎನ್ನುವ ಈ ಅಧ್ಯಯನ ವರದಿ ಪ್ರಕಾರ 2030ರೊಳಗೆ 36,000ಕ್ಕೂ ಹೆಚ್ಚು ಪಬ್ಲಿಕ್ ಚಾರ್ಜರ್ ಗನ್​ಗಳ ಅಗತ್ಯ ಬೀಳುತ್ತದೆ. 2023ರಲ್ಲಿ ಇದ್ದ ಚಾರ್ಜರ್ ಗನ್​ಗಳಿಗಿಂತ 25 ಪಟ್ಟು ಹೆಚ್ಚು ಗನ್​​ಗಳು ಬೇಕಾಗುತ್ತದಂತೆ.

ಬೆಂಗಳೂರಿನ ವಿವಿಧೆಡೆ ಚಾರ್ಜಿಂಗ್ ಸ್ಟೇಷನ್​ಗಳ ಅಗತ್ಯ ಬರಬಹುದಾದ 400 ಸ್ಥಳಗಳನ್ನು ಈ ಅಧ್ಯಯನವು ಗುರುತಿಸಿದೆ. ಅಂದರೆ, ನಗರದಲ್ಲಿ 2030ರೊಳಗೆ 400 ಚಾರ್ಜಿಂಗ್ ಸ್ಟೇಷನ್​ಗಳ ಸ್ತಾಪನೆ ಆಗಬೇಕಾಗುತ್ತದೆ. ಇದಕ್ಕೆ ಬೇಕಾಗುವ ಭೂಮಿ 141 ಎಕರೆಯಷ್ಟಿರಬಹುದು. ನಗರದೊಳಗೆ ಇಷ್ಟೊಂದು ಎಕರೆ ಭೂಮಿಯನ್ನು ಬಳಸುವುದು ಸಾಮಾನ್ಯ ಸಂಗತಿಯಲ್ಲ.

ಇದನ್ನೂ ಓದಿ: Layoffs: 17,000 ಮಂದಿಯನ್ನು ಕೆಲಸದಿಂದ ತೆಗೆಯುತ್ತಿರುವ ಬೋಯಿಂಗ್

ಈ 400 ಚಾರ್ಜಿಂಗ್ ಸ್ಟೇಷನ್​ಗಳಲ್ಲಿ 23 ಲಕ್ಷ ವಾಹನಗಳ ಚಾರ್ಜಿಂಗ್​ಗೆ ಎಷ್ಟು ವಿದ್ಯುತ್ ಬೇಕಾಗಬಹುದು ಎಂಬುದನ್ನೂ ಸಿಸ್ಟೆಪ್ ವರದಿಯಲ್ಲಿ ಅಂದಾಜಿಸಲಾಗಿದೆ. ಅದರ ಪ್ರಕಾರ ಒಂದು ವರ್ಷಕ್ಕೆ 3.3ರಿಂದ 4.1 ಬಿಯುನಷ್ಟು ವಿದ್ಯುತ್ ಬೇಕಾಗುತ್ತದೆ. ಬಿಯು ಎಂದರೆ ಬಿಲಿಯನ್ ಯುನಿಟ್. ಅಂದರೆ, ಒಂದು ಬಿಯು ಎಂದರೆ ನೂರು ಕೋಟಿ ಯುನಿಟ್. ಇದು ನಗರದ ಒಟ್ಟಾರೆ ವಿದ್ಯುತ್ ಅಗತ್ಯದ ಶೇ. 7ರಿಂದ 9ರಷ್ಟಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ