PIL: 2,000 ರೂ ನೋಟು ಹಿಂಪಡೆಯುವ ಆರ್​ಬಿಐ ನಿರ್ಧಾರಕ್ಕೆ ಆಕ್ಷೇಪಣೆ; ದೆಹಲಿ ಹೈಕೋರ್ಟ್​ನಲ್ಲಿ ಪಿಐಎಲ್ ವಜಾ

|

Updated on: Jul 03, 2023 | 12:27 PM

Delhi HD Dismisses PIL: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ಆರ್​ಬಿಐಗೆ ಇಲ್ಲ ಎಂದು ರಜನೀಶ್ ಭಾಸ್ಕರ್ ಗುಪ್ತಾ ಎಂಬುವವರು ಸಲ್ಲಿಸಿದ್ದ ಪಿಐಎಲ್ ಅನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

PIL: 2,000 ರೂ ನೋಟು ಹಿಂಪಡೆಯುವ ಆರ್​ಬಿಐ ನಿರ್ಧಾರಕ್ಕೆ ಆಕ್ಷೇಪಣೆ; ದೆಹಲಿ ಹೈಕೋರ್ಟ್​ನಲ್ಲಿ ಪಿಐಎಲ್ ವಜಾ
ದೆಹಲಿ ಹೈಕೋರ್ಟ್
Follow us on

ನವದೆಹಲಿ: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು (Rs 2000 Note) ಚಲಾವಣೆಯಿಂದ ಹಿಂಪಡೆಯುವ ಆರ್​ಬಿಐ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL- Public Interest Litigation) ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ದೆಹಲಿ ಮುಖ್ಯ ನ್ಯಾಯಾಧೀಶ ಸತೀಶ್ ಚಂದ್ರ ಶರ್ಮಾ, ನ್ಯಾ| ಸುಬ್ರಮಣಿಯಮ್ ಪ್ರಸಾದ್ ಅವರಿದ್ದ ಉಚ್ಚ ನ್ಯಾಯಪೀಠ ಈ ತೀರ್ಪು ನೀಡಿದೆ. ರಜನೀಶ್ ಭಾಸ್ಕರ್ ಗುಪ್ತಾ ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿ ಮೇ 30ರಂದು ತೀರ್ಪು ಕಾಯ್ದಿರಿಸಿತ್ತು.

ಕೇಂದ್ರಕ್ಕೆ ಅಧಿಕಾರ ಇದೆ, ಆರ್​ಬಿಐಗಲ್ಲ ಎಂದು ಅರ್ಜಿದಾರರ ವಾದ

2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಆರ್​ಬಿಐ ತೆಗೆದುಕೊಂಡಿದ್ದು ತಪ್ಪು. 1934ರ ಆರ್​ಬಿಐ ಕಾಯ್ದೆಯ ಸೆಕ್ಷನ್ 24(2) ಕಾನೂನು ಪ್ರಕಾರ ಆರ್​ಬಿಐಗೆ ಆ ಅಧಿಕಾರ ಇಲ್ಲ. ನೋಟುಗಳನ್ನು ಹಿಂಪಡೆಯುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕಿತ್ತು. ಹೀಗಾಗಿ, ನೋಟು ಹಿಂಪಡೆಯುವ ಕ್ರಮವನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿದಾರ ರಜನೀಶ್ ಭಾಸ್ಕರ್ ಗುಪ್ತಾ ವಾದಿಸಿದ್ದರು.

ಇದನ್ನೂ ಓದಿAnand Mahindra: ಆ ಒಂದು ಕಾರು ಇಲ್ಲದೇ ಹೋಗಿದ್ದರೆ ನಾನಿಷ್ಟರಲ್ಲಿ ಕಂಪನಿ ಬಿಟ್ಟುಹೋಗಬೇಕಿತ್ತು: ಆನಂದ್ ಮಹೀಂದ್ರ

ಆದರೆ, ಎರಡು ಸಾವಿರ ರೂ ನೋಟುಗಳನ್ನು ತಾನು ನಿಷೇಧಿಸಿಲ್ಲ, ಕೇವಲ ಚಲಾವಣೆಯಿಂದ ಮಾತ್ರ ಹಿಂಪಡೆದಿದ್ದೇವೆ. ಇದು ಕರೆನ್ಸಿ ನಿರ್ವಹಣೆ ಮತ್ತು ಆರ್ಥಿಕ ನೀತಿಯ ಒಂದು ಭಾಗವಾಗಿ ತೆಗೆದುಕೊಳ್ಳಲಾದ ಕ್ರಮವಾಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿವಾದಿಸಿತ್ತು. ಅಂತಿಮವಾಗಿ, ದೆಹಲಿ ಹೈಕೋರ್ಟ್ ನ್ಯಾಯಪೀಠವು ಆರ್​ಬಿಐ ವಾದ ಪುರಸ್ಕರಿಸಿ, ಪಿಐಎಲ್ ಅನ್ನು ವಜಾಗೊಳಿಸಲು ನಿರ್ಧರಿಸಿತ್ತು.

ಇದನ್ನೂ ಓದಿTata AIA: ವಾಟ್ಸಾಪ್, ಯುಪಿಐ ಮೂಲಕ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ: ಟಾಟಾ ಎಐಎ ಗ್ರಾಹಕರಿಗೆ ಹೊಸ ಅನುಕೂಲ

ಜೂನ್ 29 ಹಿಂದೆ ಮತ್ತೊಂದು ಅರ್ಜಿ ವಜಾಗೊಳಿಸಿತ್ತು ದೆಹಲಿ ಹೈಕೋರ್ಟ್

2,000 ರೂ ಮುಖಬೆಲೆಯ ನೋಟುಗಳನ್ನು ಆರ್​ಬಿಐ ಚಲಾವಣೆಯಿಂದ ಹಿಂಪಡೆದುಕೊಂಡಾಗ, ಎಸ್​ಬಿಐ ಈ ನೋಟುಗಳ ವಿನಿಮಯಕ್ಕೆ ಯಾವ ದಾಖಲೆಗಳನ್ನು ಕೊಡಬೇಕಿಲ್ಲ ಎಂದು ಅಧಿಸೂಚನೆ ನೀಡಿತ್ತು. ಇದು ಭ್ರಷ್ಟಾಚಾರ ವಿರೋಧಿ ಕಾನೂನುಗಳಿಗೆ ವಿರುದ್ಧವಾದ ಕ್ರಮವಾಗಿತ್ತು ಎಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ದೆಹಲಿ ಹೈಕೋರ್ಟ್​ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ಆರ್​ಬಿಐ ಮತ್ತು ಎಸ್​ಬಿಐ ತೆಗೆದುಕೊಂಡ ಕ್ರಮ ನಾಗರಿಕರ ಅನುಕೂಲತೆಯ ಉದ್ದೇಶದಿಂದಾಗಿತ್ತು ಎಂದು ಹೇಳಿ ನ್ಯಾಯಾಲಯವು ಆ ಅರ್ಜಿಯನ್ನು ಜೂನ್ 29ರಂದು ವಜಾಗೊಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ