
ವಾಷಿಂಗ್ಟನ್, ಮೇ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಟ್ಯಾರಿಫ್ ಗುಮ್ಮ ಮತ್ತೆ ಎರಗಿ ಬಂದಿದೆ. ಈ ಬಾರಿ ಅಮೆರಿಕದ ಕಂಪನಿಯತ್ತ ಈ ಗುಮ್ಮ ನುಗ್ಗಿದೆ. ಭಾರತದಲ್ಲಿ ತಯಾರಿಸಲಾದ ಆ್ಯಪಲ್ ಫೋನ್ಗಳ ಮೇಲೆ ಶೇ. 25ರಷ್ಟು ತೆರಿಗೆ (tariffs) ಹಾಕುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ತಯಾರಿಸಿದರೂ 25 ಪ್ರತಿಶತದಷ್ಟು ಆಮದು ಸುಂಕ ಕಟ್ಟಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷರು ಬೆದರಿಸಿದ್ದಾರೆ. ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್ಫಾರ್ಮ್ನಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ಎಕ್ಸ್ನಲ್ಲೂ ಟ್ರಂಪ್ ಈ ವಿಚಾರ ಪ್ರಕಟಿಸಿದ್ದಾರೆ.
‘ಅಮೆರಿಕದಲ್ಲಿ ಮಾರಾಟವಾಗುವ ಐಫೋನ್ಗಳು ಅಮೆರಿಕದಲ್ಲೇ ತಯಾರಾಗಬೇಕು. ಭಾರತದಲ್ಲಾಗಲೀ ಮತ್ತೆಲ್ಲಿಯಾಗಲೀ ಅದು ತಯಾರಾಗಿದ್ದರೆ ಆ್ಯಪಲ್ ಕಂಪನಿಯು ಅಮೆರಿಕಕ್ಕೆ ಕನಿಷ್ಠ ಶೇ. 25ರಷ್ಟು ಟ್ಯಾರಿಫ್ ಕಟ್ಟಬೇಕಾಗುತ್ತದೆ’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ಆರ್ಬಿಐನಿಂದ 2.70 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಸಾರ್ವಕಾಲಿಕ ಗರಿಷ್ಠ ಮೊತ್ತ
ಈ ಹಿಂದೆಯೂ ಅಮೆರಿಕ ಅಧ್ಯಕ್ಷರು ಆ್ಯಪಲ್ನ ಐಫೋನ್ ವಿಚಾರವಾಗಿ ತಮ್ಮ ಈ ನಿಲುವನ್ನು ಅನೇಕ ಬಾರಿ ಜಾಹೀರುಗೊಳಿಸಿದ್ದಿದೆ. ಹೀಗಾಗಿ, ಅವರ ಈ ಹೇಳಿಕೆ ಅನಿರೀಕ್ಷಿತವಲ್ಲ. ಆದಾಗ್ಯೂ ಕೂಡ ಆ್ಯಪಲ್ ಕಂಪನಿ ಭಾರತದಲ್ಲಿ ಹೂಡಿಕೆ ಮಾಡುವ ಅಚಲ ನಿಲುವನ್ನು ಮುಂದುವರಿಸಿದೆ.
ಆ್ಯಪಲ್ ಕಂಪನಿಯ ಅತಿ ಜನಪ್ರಿಯ ಉತ್ಪನ್ನಗಳಲ್ಲಿ ಐಫೋನ್ ಮೊದಲು ಬರುತ್ತದೆ. ಅಮೆರಿಕದಲ್ಲಿ ಒಂದು ವರ್ಷದಲ್ಲಿ ಆರು ಕೋಟಿ ಐಫೋನ್ಗಳನ್ನು ಮಾರಲಾಗುತ್ತದೆ. ಇದರಲ್ಲಿ ಶೇ. 80ರಷ್ಟು ಫೋನ್ಗಳು ಚೀನಾದಲ್ಲಿ ನಿರ್ಮಾಣ ಆಗುತ್ತಿವೆ. ಭಾರತದಲ್ಲಿ ಇತ್ತೀಚೆಗೆ ಐಫೋನ್ ತಯಾರಿಕೆ ಹೆಚ್ಚಿಸಲಾಗುತ್ತಿದೆ. ಹೆಚ್ಚಿನ ಮೇಡ್ ಇನ್ ಇಂಡಿಯಾ ಐಫೋನ್ಗಳನ್ನು ಅಮೆರಿಕದ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ.
ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಬೆಳೆಯಬೇಕು, ಉದ್ಯೋಗ ಸೃಷ್ಟಿ ಅಧಿಕ ಆಗಬೇಕು. ಇದು ಡೊನಾಲ್ಡ್ ಟ್ರಂಪ್ ಅವರ ಉದ್ದೇಶ. ಈ ನಿಟ್ಟಿನಲ್ಲಿ ಅವರು ಐಫೋನ್ ತಯಾರಿಕೆಯನ್ನು ಅಮೆರಿಕಕ್ಕೆ ತರಲು ಹರಸಾಹಸ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ಫೋನ್ ತಯಾರಿಸುವುದಾದರೆ ಕಾರ್ಮಿಕ ವೆಚ್ಚ ಅಧಿಕವಾಗುತ್ತದೆ. ಈ ಕಾರಣಕ್ಕೆ ಆ್ಯಪಲ್ ಕಂಪನಿಯು ತನ್ನ ಉತ್ಪನ್ನಗಳ ತಯಾರಿಕೆಯನ್ನು ಚೀನಾದಲ್ಲಿ ಮಾಡುತ್ತಿತ್ತು. 2020ರ ಬಳಿಕ ಚೀನಾದಿಂದ ಆಚೆ ತಯಾರಿಕಾ ಕಾರ್ಯವನ್ನು ವಿಸ್ತರಿಸುತ್ತಿದೆ. ಇದರಲ್ಲಿ ಭಾರತವನ್ನು ಪ್ರಮುಖವಾಗಿ ಆಯ್ದುಕೊಂಡಿದೆ.
ಇದನ್ನೂ ಓದಿ: ಪಾಕಿಸ್ತಾನದ ಮಿತ್ರನಾದರೂ ಭಾರತವನ್ನು ಎದುರುಹಾಕಿಕೊಳ್ಳುವಷ್ಟು ದಡ್ಡನಲ್ಲ ಚೀನಾ; ಯಾಕೆ ಹೀಗೆ?
ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಬೆದರಿಕೆಗೆ ಬಗ್ಗೆ ಆ್ಯಪಲ್ ಕಂಪನಿ ತನ್ನ ಮ್ಯಾನುಫ್ಯಾಕ್ಚರಿಂಗ್ ಕಾರ್ಯವನ್ನು ಅಮೆರಿಕಕ್ಕೆ ವರ್ಗಾಯಿಸಿಬಿಟ್ಟರೆ ಭಾರತಕ್ಕೆ ನಷ್ಟವಾಗಬಹುದು. ಆ್ಯಪಲ್ ದೆಸೆಯಿಂದ ಭಾರತದಲ್ಲಿ ಸ್ಮಾರ್ಟ್ಫೋನ್ ತಯಾರಿಕೆಯ ಕೆಲಸ ಬಹಳ ಭರ್ಜರಿಯಾಗಿ ನಡೆಯುತ್ತಿದೆ. ಭಾರತದಿಂದ ಅತಿಹೆಚ್ಚು ರಫ್ತಾಗುವ ಸರಕುಗಳಲ್ಲಿ ಸ್ಮಾರ್ಟ್ಫೋನ್ ಮೊದಲ ಸ್ಥಾನ ಪಡೆದಿದೆ. ಹೀಗಾಗಿ, ಭಾರತಕ್ಕೆ ಟ್ರಂಪ್ ನಿರ್ಧಾರ ಬಹಳ ಪರಿಣಾಮ ಬೀರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ