ಪ್ರಾಜೆಕ್ಟ್ ಕುಶ; ಭಾರತದ ಸ್ವಂತ ಡಿಫೆನ್ಸ್ ಸಿಸ್ಟಂ; ಅಮರಿಕದ ಥಾಡ್ ಅನ್ನೂ ಮೀರಿಸುತ್ತೆ ಇದು
India's indigenous alternative to Russia's S-400 system: ವಿಶ್ವದ ಬಲಿಷ್ಠ ಡಿಫೆನ್ಸ್ ಸಿಸ್ಟಂ ಎನಿಸಬಲ್ಲ, ಮತ್ತು ರಷ್ಯಾದ ಎಸ್-400 ಸಿಸ್ಟಂಗೆ ಪರ್ಯಾಯವೆನಿಸಬಹುದಾದ ಪ್ರಾಜೆಕ್ಟ್ ಕುಶ ಸಿದ್ಧವಾಗುತ್ತಿದೆ. ಡಿಆರ್ಡಿಒ ಜೊತೆ ಈ ಪ್ರಾಜೆಕ್ಟ್ಗೆ ಬೆಂಗಳೂರಿನ ಬಿಇಎಲ್ ಡೆವಲಪ್ಮೆಂಟ್ ಪಾರ್ಟ್ನರ್ ಆಗಿದೆ. 40,000 ಕೋಟಿ ರೂ ಯೋಜನೆಯ ಆರ್ಡರ್ ಪಡೆಯುವ ನಿರೀಕ್ಷೆಯಲ್ಲಿ ಬಿಇಎಲ್ ಇದೆ.

ಬೆಂಗಳೂರು, ಮೇ 22: ಆಪರೇಷನ್ ಸಿಂದೂರದ ಬಳಿಕ ಭಾರತದ ಮಿಲಿಟರಿ ಸಾಮರ್ಥ್ಯ ಜಗತ್ತಿನ ಹಲವರ ಗಮನ ಸೆಳೆದಿದೆ. ಡಿಫೆನ್ಸ್ ಕ್ಷೇತ್ರದಲ್ಲಿ ಭಾರತದ ಒಂದೊಂದು ಹೆಜ್ಜೆಯನ್ನೂ ಗಮನದಿಂದ ನೋಡಲಾಗುತ್ತಿದೆ. ಈ ಮಧ್ಯೆ ಭಾರತ ಹಿಂದೆಂದಿಗಿಂತ ವೇಗವಾಗಿ ಡಿಫೆನ್ಸ್ ಪ್ರಾಜೆಕ್ಟ್ಗಳನ್ನು ನಡೆಸಲು ಮುಂದಾಗಿದೆ. ಪ್ರಾಜೆಕ್ಟ್ ಕುಶವನ್ನು (Project Kusha) ಬೇಗನೇ ಕಾರ್ಯಗತಗೊಳಿಸುವ ಸಾಧ್ಯತೆ ಇದೆ. ಆಪರೇಷನ್ ಸಿಂದೂರದಲ್ಲಿ (Operation Sindoor) ಭಾರತದ ವಾಯು ರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಷ್ಯಾ ನಿರ್ಮಿತ ಎಸ್-400 ಡಿಫೆನ್ಸ್ ಸಿಸ್ಟಂಗೆ ಪರ್ಯಾಯವಾಗಿ ತಯಾರಾಗುತ್ತಿರುವುದೇ ಪ್ರಾಜೆಕ್ಟ್ ಕುಶ. ಡಿಆರ್ಡಿಒ ಈ ಪ್ರಾಜೆಕ್ಟ್ ಕುಶದ ಮೂಲ ನಿರ್ಮಾತೃ. ಬಿಇಎಲ್ ಕೂಡ ಈ ಪ್ರಾಜೆಕ್ಟ್ನಲ್ಲಿ ಡಿಆರ್ಡಿಒ ಜೊತೆ ಇದೆ. ಈ ಯೋಜನೆಯಲ್ಲಿ ಡಿಆರ್ಡಿಒಗೆ ಬಿಇಎಲ್ ಡೆವಲಪ್ಮೆಂಟ್ ಪಾರ್ಟ್ನರ್ ಆಗಿದೆ. ಪ್ರಾಜೆಕ್ಟ್ ಕುಶ ಸಂಬಂಧ ಬಿಇಎಲ್ 40,000 ಕೋಟಿ ರೂ ಆರ್ಡರ್ನ ನಿರೀಕ್ಷೆಯಲ್ಲಿದೆ.
ಏನಿದು ಪ್ರಾಜೆಕ್ಟ್ ಕುಶ?
ಕುಶ ಎನ್ನುವುದು ರಾಮಾಯಣದಲ್ಲಿ ಬರುವ ರಾಮನ ಇಬ್ಬರು ಮಕ್ಕಳಲ್ಲಿ ಒಬ್ಬನ ಹೆಸರು. ಯುದ್ಧದಲ್ಲಿ, ಬಿಲ್ವಿದ್ಯೆಯಲ್ಲಿ ಸ್ವಂತ ಅಪ್ಪನನ್ನೇ ಸೋಲಿಸಿದ ಕುಶ. ಭಾರತದ ಬಲಿಷ್ಠ ಏರ್ ಡಿಫೆನ್ಸ್ ಸಿಸ್ಟಂಗೆ ಈ ಹೆಸರು ಇಡಲಾಗಿದೆ.
ರಷ್ಯಾದ ಎಸ್-400 ಏರ್ ಡಿಫೆನ್ಸ್ಗೆ ಪರ್ಯಾಯವಾಗಿ ಪ್ರಾಜೆಕ್ಟ್ ಕುಶ ರೂಪಿಸಲಾಗುತ್ತಿದೆ. ಎಸ್-400 ಸಿಸ್ಟಂ ದೂರ ಶ್ರೇಣಿಯ ಗುರಿ ಮೇಲೆ ಆಕ್ರಮಣ ಮಾಡಬಲ್ಲುದು. 400 ಕಿಮೀವರೆಗಿನ ಶ್ರೇಣಿ ಇರುತ್ತದೆ. ನಾಲ್ಕು ರೀತಿಯ ಕ್ಷಿಪಣಿಗಳು ಈ ಸಿಸ್ಟಂನಲ್ಲಿ ಇರುತ್ತವೆ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ಗೂ ಬಗ್ಗಲ್ಲ, ಪಾಕ್ ಯುದ್ಧಕ್ಕೂ ಜಗ್ಗಲ್ಲ ಭಾರತದ ಆರ್ಥಿಕತೆ: ಮೂಡೀಸ್ ಹೊಗಳಲು ಏನು ಕಾರಣ?
ಕುಶ ಸಿಸ್ಟಂ ಕೂಡ 350 ಕಿಮೀ ದೂರದ ರೇಂಜ್ನಲ್ಲಿ ಇರುತ್ತದೆ. ಇದರಲ್ಲಿ ಮೂರು ರೀತಿ ಕ್ಷಿಪಣಿಗಳನ್ನು ಒಳಗೊಂಡಿರಲಾಗುತ್ತದೆ. ಈ ಮೂರು ಕೂಡ 150 ಕಿಮೀ, 250 ಕಿಮೀ ಮತ್ತು 350 ಕಿಮೀ ಶ್ರೇಣಿಯ ಸಾಮರ್ಥ್ಯದವಾಗಿರುತ್ತವೆ.
2022ರಲ್ಲೇ ಪ್ರಾಜೆಕ್ಟ್ ಕುಶಗೆ ಅನುಮೋದನೆ…
ಕೇಂದ್ರ ಸರ್ಕಾರವು 2022ರಲ್ಲೇ ಪ್ರಾಜೆಕ್ಟ್ ಕುಶಾಗೆ ಅನುಮೋದನೆ ನೀಡಿದೆ. ಒಟ್ಟು 8 ಸ್ಕ್ವಾಡ್ರಾನ್ಗಳಿಗೆ ಕುಶ ಸಿಸ್ಟಂ ಅಳವಡಿಸಲು ನಿರ್ಧರಿಸಲಾಗಿದೆ. ಡಿಆರ್ಡಿಒದಿಂದ ಪ್ರೋಟೋಟೈಪ್ ಸಿದ್ಧವಾಗುತ್ತಿದೆ. ರಾಡಾರ್, ಇಂಟರ್ಸೆಪ್ಟರ್ ಹಾಗು ಇನ್ನೂ ಹಲವು ಸಬ್ಸಿಸ್ಟಂಗಳನ್ನು ಅದರ ವಿವಿಧ ಲ್ಯಾಬ್ಗಳಲ್ಲಿ ತಯಾರಿಸಲಾಗುತ್ತಿದೆ. ಬಿಇಎಲ್ ಕೂಡ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಈಗ ಸಿಸ್ಟಂ ಇಂಟಿಗ್ರೇಶನ್ ಕೆಲಸ ಆಗಬೇಕಿದೆ. ಆ ಜವಾಬ್ದಾರಿ ಬಿಇಎಲ್ಗೆ ಸಿಗುತ್ತದೆ.
ಮುಂದಿನ ಒಂದು ಅಥವಾ ಒಂದೂವರೆ ವರ್ಷದೊಳಗೆ ಕುಶ ಸಿಸ್ಟಂನ ಪ್ರೋಟೋಟೈಪ್ ಸಿದ್ಧವಾಗಲಿದೆ. ಅದಾದ ಬಳಿಕ ಕಠಿಣತಮ ಪರೀಕ್ಷೆಗಳು ನಡೆಯಲಿವೆ. ಅದು ಯಶಸ್ವಿಯಾದ ಬಳಿಕ ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ. 2028ರೊಳಗೆ ಇವೆಲ್ಲವೂ ಮುಗಿಯುವ ನಿರೀಕ್ಷೆ ಇದೆ.
ಇದನ್ನು ಓದಿ: ಆಪರೇಷನ್ ಸಿಂದೂರದ ಬಳಿಕ ಭಾರತದ ಡಿಫೆನ್ಸ್ ಶಕ್ತಿ ಮೇಲೆ ಜಗತ್ತಿನ ಕಣ್ಣು; ಯುದ್ಧವಿಮಾನ ತಯಾರಿಕೆಯಲ್ಲೂ ಪಳಗುತ್ತಿದೆ ಭಾರತ
ರಷ್ಯಾದ ಎಸ್-400 ಖರೀದಿ ಯಾಕಿಲ್ಲ…?
ರಷ್ಯಾದ ಎಸ್-400 ಟ್ರಯಂಫ್ ಸಿಸ್ಟಂಗಳ ಐದು ಸ್ಕ್ವಾಡ್ರಾನ್ಗಳಿಗೆ ಭಾರತ ಆರ್ಡರ್ ಕೊಟ್ಟಿತ್ತು. ಈ ಪೈಕಿ ಮೂರು ಸ್ಕ್ವಾಡ್ರಾನ್ಗಳನ್ನು ರಷ್ಯಾ ಸರಬರಾಜು ಮಾಡಿದೆ. ಆದರೆ, 2021ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧಕ್ಕೆ ಹೋದ್ದರಿಂದ ಉಳಿದ ಎರಡು ಸ್ಕ್ವಾಡ್ರನ್ಗಳನ್ನು ನೀಡುವುದು ವಿಳಂಬವಾಗಿದೆ. ನಮ್ಮ ರಕ್ಷಣೆಗೆ ಇನ್ನೊಂದು ದೇಶವನ್ನು ನೆಚ್ಚಿಕೊಳ್ಳುವ ಬದಲು ಸ್ವಂತವಾಗಿ ಡಿಫೆನ್ಸ್ ಸಿಸ್ಟಂ ಅಭಿವೃದ್ಧಿಪಡಿಸಬೇಕೆಂಬ ಆಲೋಚನೆಯಲ್ಲಿ ಪ್ರಾಜೆಕ್ಟ್ ಕುಶಗೆ ಸರ್ಕಾರ 2022ರಲ್ಲಿ ಅನುಮೋದನೆ ಕೊಟ್ಟಿತು.
ಭಾರತದ ರಕ್ಷಣಾ ಕೋಟೆಯಲ್ಲಿ ಮೂರು ಪದರಗಳು…
ಭಾರತದ ಏರ್ ಡಿಫೆನ್ಸ್ ಸಿಸ್ಟಂ ಸದ್ಯ ಮೂರು ಪದರಗಳನ್ನು ಒಳಗೊಂಡಿದೆ. ಕಿರುಶ್ರೇಣಿ, ಮಧ್ಯಮ ಶ್ರೇಣಿ ಮತ್ತು ದೂರ ಶ್ರೇಣಿ ಸಿಸ್ಟಂಗಳಿವೆ. ಆಕಾಶ್, ಎಂಆರ್ಎಸ್ಎಂ ಮತ್ತು ಎಸ್-400 ಸಿಸ್ಟಂಗಳು ಪ್ರತ್ಯೇಕವಾಗಿ ಈ ಮೂರು ಶ್ರೇಣಿಗಳ ಜವಾಬ್ದಾರಿ ನಿಭಾಯಿಸುತ್ತವೆ. ಈಗ ಕುಶ ಸಿದ್ಧವಾದರೆ ಅದು ದೂರ ಶ್ರೇಣಿಯ ಗುರಿಗಳಿಗೆ ಮುಡಿಪಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ