Bajaj FinServ: ದೀರ್ಘಾವಧಿ ಹೂಡಿಕೆಗೆ ಈಗ ಕಾಲ ಸನ್ನಿಹಿತ: ಬಜಾಜ್ ಫಿನ್ಸರ್ವ್ ಎಎಂಸಿಯ ನಿಮೇಶ್ ಚಂದನ್ ಸಲಹೆ
Bajaj Finserv AMC: Invest Now in India's Resilient Market: ಸದ್ಯ ಮಾರುಕಟ್ಟೆಯ ಕೆಟ್ಟ ಕಾಲವೆಲ್ಲಾ ಹೊರಟುಹೋಗಿದೆ. ಇನ್ನೇನಿದ್ದರೂ ಬುಲ್ ರನ್ ಎಂದು ಬಜಾಜ್ ಫಿನ್ಸರ್ವ್ ಎಎಂಸಿಯ ಸಿಐಒ ನಿಮೇಶ್ ಚಂದನ್ ಹೇಳಿದ್ದಾರೆ. ಅವರು ಜಾಗತಿಕ ಉದ್ವಿಗ್ನತೆಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ಬಲವಾಗಿದೆ ಎಂದು ಹೇಳಿದ್ದಾರೆ. ದೀರ್ಘಕಾಲೀನ ಹೂಡಿಕೆಗೆ ಇದು ಉತ್ತಮ ಸಮಯ ಎಂದು ಅವರು ಸಲಹೆ ನೀಡಿದ್ದಾರೆ. ಮಾರುಕಟ್ಟೆ ಏರಿಳಿತಗಳನ್ನು ಲೆಕ್ಕಿಸದೆ, ಗುಣಮಟ್ಟದ ಷೇರುಗಳನ್ನು ಆಯ್ಕೆ ಮಾಡುವುದು ಮುಖ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಬೆಂಗಳೂರು, ಮೇ 22: ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಆರ್ಥಿಕ ಅನಿಶ್ಚಿತತೆಯಂತಹ ಜಾಗತಿಕ ಸವಾಲುಗಳಿದ್ದರೂ ಸಹ ಭಾರತದ ಆರ್ಥಿಕತೆಯು ಪ್ರಬಲವಾಗಿದೆ. ಹೂಡಿಕೆದಾರರಿಗೆ ಹಲವಾರು ಅನುಕೂಲಕರ ಅವಕಾಶಗಳನ್ನು ಇದು ಕಲ್ಪಿಸುತ್ತಲೇ ಇದೆ. ಪ್ರಸಕ್ತ ಸಮಯವು ದೀರ್ಘಾವಧಿ ಹೂಡಿಕೆ ಅರಂಭಿಸಲು ಹೇಳಿ ಮಾಡಿಸಿದ್ದಾಗಿದೆ ಎಂದು ಬಜಾಜ್ ಫಿನ್‌ಸರ್ವ್ ಎಎಂಸಿ ಸಂಸ್ಥೆಯ ನಿಮೇಶ್ ಚಂದನ್ (Bajaj FinServ CIO Nimesh Chandan) ಸಲಹೆ ನೀಡಿದ್ದಾರೆ. ಸದ್ಯದ ಜಾಗತಿಕ ಸಂಘರ್ಷಗಳು ಮತ್ತು ಪ್ರತಿಸುಂಕಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಕರಿನೆರಳು ಬೀರಿದ್ದರೂ, ಭಾರತದ ಪ್ರಬಲ ಆರ್ಥಿಕ ಮೂಲಭೂತ ಅಂಶಗಳು ಏರಿಳಿತಗಳನ್ನು ಎದುರಿಸಲು ಸಹಾಯ ಮಾಡಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನ ಸ್ಥಿತಿಯಿಂದಾಗಿ ಇತ್ತೀಚಿಗೆ ಭಾರತೀಯ ಮಾರುಕಟ್ಟೆಗಳಲ್ಲಿ ತೀವ್ರ ಏರಿಳಿತವಾಗಿದೆ. ಆದರೂ ಇದು ಭಾರತದ ದೀರ್ಘಕಾಲೀನ ಆರ್ಥಿಕ ಮೂಲಭೂತ ಅಂಶಗಳನ್ನು ಬದಲಾಯಿಸಿಲ್ಲ. ಹೂಡಿಕೆದಾರರು ಈ ತಾತ್ಕಾಲಿಕ ಅಡೆತಡೆಗಳಿಗೆ ಹೆದರಿ ತಮ್ಮ ಹೂಡಿಕೆಯನ್ನು ಕೈಚೆಲ್ಲುವ ನಿರ್ಧಾರ ಮಾಡುವ ಬದಲು, ಗುಣಮಟ್ಟದ ಷೇರುಗಳನ್ನು ಗುರುತಿಸಿ ಸಂಗ್ರಹಿಸಲು ಈ ಸಮಯವನ್ನು ಸದುಪಯೋಗಿಸಿಕೊಳ್ಳಬಹುದು ಎಂಬುದು ನಿಮೇಶ್ ಚಂದನ್ ಅವರ ಸಲಹೆ.
ಇದನ್ನೂ ಓದಿ: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ…! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು
ಮಾರುಕಟ್ಟೆ ಏರಿಳಿತದ ಸಮಯದಲ್ಲಿ ಹೂಡಿಕೆದಾರರು ಭಯಭೀತರಾಗಬಾರದು. ಈ ಏರಿಳಿತವು ಹೂಡಿಕೆಗೆ ಪೂರಕ ವಾತಾವರಣ ಕಲ್ಪಿಸುತ್ತದೆ. ಅದರಲ್ಲೂ ವಿಶೇಷವಾಗಿ ದೀರ್ಘಾವಧಿಯ ಗುರಿಗಳಿಗಾಗಿ ಇದು ಉತ್ತಮ ಅವಕಾಶ. ಪ್ರಬಲ ಆಂತರಿಕ ಬೇಡಿಕೆ ಮತ್ತು ಆರ್ಥಿಕ ನೀತಿಗಳಿಂದಾಗಿ ಭಾರತೀಯ ಆರ್ಥಿಕತೆಯು ಉತ್ತಮವಾಗಿ ಬೆಳೆಯುವ ನಿರೀಕ್ಷೆಯಿದೆ. ಪ್ರಮುಖ ಕಂಪನಿಗಳ ಆದಾಯ ಮತ್ತು ಲಾಭ ಕಳೆದ ವರ್ಷಕ್ಕಿಂತ ಸುಧಾರಿಸುವ ಸಾಧ್ಯತೆಯಿದೆ. ಈ ಸಕಾರಾತ್ಮಕ ದೃಷ್ಟಿಕೋನವು ಕಾಲಾನಂತರದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಅವಧಿಯು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಷೇರುಗಳನ್ನು ಖರೀದಿಸುವ ಅವಕಾಶ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ನಿಫ್ಟಿ ಸದ್ಯ ಆಕರ್ಷಕ ಸ್ಥಿತಿಯಲ್ಲಿ…
ಬಜಾಜ್ ಫಿನ್‌ಸರ್ವ್ ಎಎಂಸಿ ಯ ಆಂತರಿಕ ಸಂಶೋಧನೆಯ ಪ್ರಕಾರ, ನಿಫ್ಟಿ50 ಸೂಚ್ಯಂಕದ ನಿಜವಾದ ಮೌಲ್ಯ ಸುಮಾರು 25,500 ಅಂಕ ಎಂದು ಸೂಚಿಸುತ್ತದೆ. ಮಾರುಕಟ್ಟೆ ಈ ಮಟ್ಟಕ್ಕಿಂತ ಗಣನೀಯವಾಗಿ ಕೆಳಗಿಳಿದರೆ, ಅದು ಹೂಡಿಕೆಗೆ ಉತ್ತಮ ಅವಕಾಶ ಎಂದು ಪರಿಗಣಿಸಬಹುದು. ಸದ್ಯ ನಿಫ್ಟಿ ಸೂಚ್ಯಂಕ 24,500-24,600 ಅಂಕಗಳ ಮಟ್ಟದಲ್ಲಿದೆ.
ಐಟಿ ಬಿಟ್ಟು ಉಳಿದ ಸೆಕ್ಟರ್ಗಳ ಮೇಲೆ ಹೆಚ್ಚಿನ ನಿರೀಕ್ಷೆ
ಗಮನಿಸಬೇಕಾದ ಪ್ರಮುಖ ವಲಯಗಳಲ್ಲಿ ಬಿಎಫ್ಎಸ್ಐ (ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ) ಸೇರಿವೆ. ದಿನಸಿವಸ್ತುಗಳಿಂದ ಹಿಡಿದು ರಿಯಲ್ ಎಸ್ಟೇಟ್‌ವರೆಗೆ ಎಲ್ಲದರ ಮೇಲೆ ಬಹಳ ನಿರೀಕ್ಷೆ ಇದೆ. ಐಟಿ ಕ್ಷೇತ್ರ ಸ್ವಲ್ಪ ಮಂಕಾಗಬಹುದು ಎಂಬುದನ್ನು ಬಿಟ್ಟರೆ ಇತರ ಎಲ್ಲಾ ವಲಯಗಳೂ ಉತ್ತಮ ಬೆಳವಣಿಗೆ ಕಾಣುವ ಸಾಧ್ಯತೆ ಇದೆ ಎಂದೆನ್ನುತ್ತಾರೆ ಬಜಾಜ್ ಫಿನ್ಸರ್ವ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಎಕ್ಸಿಕ್ಯೂಟಿವ್.
ಇದನ್ನೂ ಓದಿ: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ
ಜಗತ್ತು ಅನಿಶ್ಚಿತವಾಗಿದ್ದರೂ ಭಾರತೀಯ ಮಾರುಕಟ್ಟೆಗಳು ಜಾಣ ಮತ್ತು ತಾಳ್ಮೆಯ ಹೂಡಿಕೆದಾರರಿಗೆ ಉತ್ತಮ ಅವಕಾಶಗಳನ್ನು ತೋರಿಸುತ್ತವೆ. ತಮ್ಮ ಹಣವನ್ನು ಬೆಳೆಸಲು ಬಯಸುವ ರೀಟೇಲ್ ಹೂಡಿಕೆದಾರರು ಈಗಲೇ ಮಾರುಕಟ್ಟೆಗೆ ಪ್ರವೇಶಿಸುವುದನ್ನು ಪರಿಗಣಿಸಬೇಕು. ಆದರೆ, ಎಚ್ಚರಿಕೆಯಿಂದ ಹೂಡಿಕೆ ಮಾಡಲು ಈಗ ಸಮಯವಾಗಿದೆ ಎಂದು ನಿಮೇಶ್ ಚಂದನ್ ತಿಳಿಸಿದ್ದಾರೆ.
ನಿಮೇಶ್ ಚಂದನ್ ಅವರು ಬಜಾಜ್ ಫಿನ್ಸರ್ವ್ ಎಎಂಸಿಯ ಚೀಫ್ ಇನ್ವೆಸ್ಟ್ಮೆಂಟ್ ಆಫೀಸರ್ ಆಗಿದ್ದಾರೆ. ಇವರು ಎರಡು ಬಿಲಿಯನ್ ಡಾಲರ್ ಮೊತ್ತದ ಹೂಡಿಕೆಗಳನ್ನು ನಿಭಾಯಿಸುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








