Rich tips: ಆಸ್ತಿ ಮಾರಲ್ಲ, ಸಾಲ ಬಿಡಲ್ಲ… ಶ್ರೀಮಂತರ ಟ್ರಿಕ್ಸ್ ಹೀಗಿರುತ್ತೆ ನೋಡಿ
How rich people use loans to avoid taxes: ಶ್ರೀಮಂತರು ಹೆಚ್ಚು ಟ್ಯಾಕ್ಸ್ ಕಟ್ಟೋದಿಲ್ಲ ಎಂದು ಇತ್ತೀಚೆಗೆ ಒಂದು ವರದಿ ಬೆಳಕು ಚೆಲ್ಲಿತ್ತು. ಶೇ. 20 ಕ್ಯಾಪಿಟಲ್ ಗೇನ್ ಟ್ಯಾಕ್ಸ್, ಶೇ. 30ಕ್ಕೂ ಹೆಚ್ಚು ಇನ್ಕಮ್ ಟ್ಯಾಕ್ಸ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಹಣವಂತರಿಗೆ ಮಾರ್ಗೋಪಾಯಗಳಿವೆ. ಅದರಲ್ಲಿ ಸಾಲ ಒಂದು. ಆಸ್ತಿ ಮಾರಿದರೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಅದರ ಬದಲು ಸಾಲ ಮಾಡಿ ಆ ಹಣವನ್ನು ಬೇರೆ ಹೂಡಿಕೆಗಳಿಗೆ ಉಪಯೋಗಿಸಬಹುದು.

ಶ್ರೀಮಂತರ ಕೆಲ ಹಣಕಾಸು ಸ್ಥಿತಿ ನೋಡಿ ಅಚ್ಚರಿ ಎನಿಸಬಹುದು. ಇವರ ಸಾಲ (debt) ಮೈತುಂಬ ಇರುತ್ತದೆ, ಆದರೂ ತಲೆ ಕೆಡಿಸಿಕೊಳ್ಳೋದಿಲ್ಲ. ಹೊಸ ಹೊಸ ಸಾಲ ಮಾಡುತ್ತಲೇ ಇರುತ್ತಾರೆ, ಆಸ್ತಿಪಾಸ್ತಿ ಖರೀದಿಸುತ್ತಲೇ ಇರುತ್ತಾರೆ. ಹೇಗಪ್ಪಾ ಇವರು ಸಾಲದಲ್ಲಿ ಬದುಕುತ್ತಾರೆ ಎಂದನಿಸಬಹುದು. ಆದರೆ, ಶ್ರೀಮಂತರ ಟ್ರಿಕ್ಸ್ ಇರೋದು ಅಲ್ಲೇ. ಅದು ಸಿಕ್ಕಾಪಟ್ಟೆ ಇರುವ ಟ್ಯಾಕ್ಸ್ ಅನ್ನು ತಪ್ಪಿಸಿಕೊಳ್ಳಲು ಅವರು ಮಾಡುವ ತಂತ್ರ ಅದು.
ಸಾಮಾನ್ಯವಾಗಿ, ವಸ್ತುವನ್ನು ಕಡಿಮೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರುವುದು ಬ್ಯುಸಿನೆಸ್. ನೀವು ಹೆಚ್ಚು ಲಾಭ ಮಾಡಿದರೆ ಅದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕು, ಆದಾಯ ತೆರಿಗೆ ಕಟ್ಟಬೇಕು. ಇದನ್ನು ಉಳಿಸಲು ಶ್ರೀಮಂತರು ಬೇರೆ ತಂತ್ರ ಉಪಯೋಗಿಸುತ್ತಾರೆ.
‘ಕಡಿಮೆ ಬೆಲೆಗೆ ಆಸ್ತಿ ಖರೀದಿಸಿರಿ. ದೊಡ್ಡ ಮೊತ್ತದ ಸಾಲ ಪಡೆಯಿರಿ. ಆ ಆಸ್ತಿಯನ್ನು ಎಂದೂ ಮಾರದಿರಿ’. ಈ ಮೂರು ಅಂಶಗಳನ್ನು ಶ್ರೀಮಂತರು ಪಾಲಿಸುತ್ತಾರೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯನ್ನು ನಂಬಬೇಕಾ? ಹೂಡಿಕೆ ಹೇಗಿರಬೇಕು? ಇಲ್ಲಿದೆ 7 ಟಿಪ್ಸ್
ಈ ಸೂತ್ರ ಹೇಗೆ ಕೆಲಸ ಮಾಡುತ್ತದೆ?
ಸರಳವಾಗಿ ಹೇಳುವುದಾದರೆ, ನೀವು ಆಸ್ತಿ ಖರೀದಿಸುತ್ತೀರಿ. ಆ ಆಸ್ತಿಯ ಬೆಲೆ ಹೆಚ್ಚಾದಾಗ ಅದನ್ನು ಮಾರುವ ಬದಲು, ಅದನ್ನು ಅಡವಿಟ್ಟು ಆ ಆಸ್ತಿ ಮೌಲ್ಯದಷ್ಟು ಸಾಲ ಪಡೆಯಿರಿ. ಆ ಸಾಲ ಹಣದಿಂದ ರೆಗ್ಯುಲರ್ ಇನ್ಕಮ್ ತರಬಲ್ಲ ಇತರ ಹೂಡಿಕೆಗಳಿಗೆ ಉಪಯೋಗಿಸಿ. ಅದರಿಂದ ಬರುವ ಹಣವನ್ನು ಸಾಲ ತೀರಿಸಲು ಉಪಯೋಗಿಸಬಹುದು.
ಇಲ್ಲಿ ಶ್ರೀಮಂತರ ಹೂಡಿಕೆಗಳನ್ನು ಮಾರುವುದಿಲ್ಲ. ಹೂಡಿಕೆಗಳಿಗಾಗಿ ಮಾಡಿದ್ದ ಸಾಲಕ್ಕೆ ಸಮಾನವಾದ ಲೈಫ್ ಇನ್ಷೂರೆನ್ಸ್ ಪಾಲಿಸಿ ಮಾಡಿಸುತ್ತಾರೆ. ಅವರು ಸತ್ತ ಬಳಿಕ ಆ ಇನ್ಷೂರೆನ್ಸ್ ಹಣವೇ ಸಾಲ ತೀರಿಸುತ್ತದೆ. ಆಸ್ತಿಪಾಸ್ತಿಗಳು ಯಾವ ತೆರಿಗೆ ಇಲ್ಲದೇ ಮುಂದಿನ ಪೀಳಿಗೆಗೆ ವರ್ಗಾವಣೆ ಆಗುತ್ತದೆ.
ಇದನ್ನೂ ಓದಿ: ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ
ಈ ಯಾವ ಹಂತದಲ್ಲೂ ಶ್ರೀಮಂತರು ತೆರಿಗೆಯನ್ನೇ ಕಟ್ಟುವುದಿಲ್ಲ. ಇಲ್ಲಿ ಸಾಲಕ್ಕೆ ಯಾವ ತೆರಿಗೆ ಇರುವುದಿಲ್ಲ ಎನ್ನುವುದು ಮೂಲಭೂತವಾದ ಸಂಗತಿ. ಶ್ರೀಮಂತರು ಮೈತುಂಬ ಸಾಲ ಇದ್ದರೂ ಶ್ರೀಮಂತರಾಗಿಯೇ ಇರುತ್ತಾರೆ. ಇತ್ತೀಚೆಗೆ ಬಂದ ವರದಿಯೊಂದರ ಪ್ರಕಾರ, ಶ್ರೀಮಂತರು ಹೆಚ್ಚು ಶ್ರೀಮಂತರಾದಷ್ಟೂ ತೆರಿಗೆ ಕಟ್ಟುವುದು ಕಡಿಮೆ ಆಗುತ್ತಾ ಹೋಗುತ್ತದಂತೆ. ಬಹುಶಃ ಇಲ್ಲಿ ಮೇಲೆ ಹೇಳಿದ ಟ್ರಿಕ್ಸ್ ಅನ್ನು ಸಿರಿವಂತರು ಉಪಯೋಗಿಸುತ್ತಿರಬಹುದು. ಸರ್ಕಾರ ಚಾಪೆ ಕೆಳಗೆ ತೂರಿದರೆ ಇವರು ರಂಗೋಲಿ ಕೆಳಗೇ ತೂರಬಹುದು.
ಇಲ್ಲಿ ಮೇಲೆ ತಿಳಿಸಿದ್ದು ಒಂದು ವರ್ಗದವರ ವಾದ. ಆದರೆ, ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಬೆಳೆಯುವುದನ್ನು ಲೆಕ್ಕ ಹಾಕಿ ಆ ಬಳಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ