ಹಳೆಯ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಅಕೌಂಟ್ ಮುಚ್ಚುವ ಮುನ್ನ ಈ ಅಂಶಗಳು ತಿಳಿದಿರಿ
Things to remember before closing old bank account: ಇವತ್ತು ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ. ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ಗಳನ್ನು ಪರಿಶೀಲಿಸುತ್ತವೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ, ಸಾಲದ ಬಳಕೆ ಎಷ್ಟು ವರ್ಷಗಳಿಂದ ನಡೆಯುತ್ತಾ ಬಂದಿದೆ ಎಂಬುದನ್ನು ಕ್ರೆಡಿಟ್ ರಿಪೋರ್ಟ್ನಲ್ಲಿ ತಿಳಿಯಬಹುದು. ನಿಮ್ಮ ಕ್ರೆಡಿಟ್ ಹಿಸ್ಟರಿ ದೀರ್ಘ ಇದ್ದಷ್ಟೂ ನಿಮ್ಮ ಮೇಲಿನ ನಂಬಿಕೆ ದೃಢವಾಗುತ್ತಾ ಹೋಗುತ್ತದೆ.

ಈಗ ಬಹಳಷ್ಟು ಬ್ಯಾಂಕುಗಳು ಸೇವಿಂಗ್ಸ್ ಅಕೌಂಟ್ಗಳನ್ನು ತೆರೆಯಲು ಒಳ್ಳೊಳ್ಳೆಯ ಆಫರ್ ಕೊಡುತ್ತವೆ. ನೀವು ಆ ಆಫರ್ಗಳಿಗೆ ಆಕರ್ಷಿತರಾಗಿ ಹೊಸ ಎಸ್ಬಿ ಅಕೌಂಟ್ಗಳನ್ನು ತೆರೆಯುತ್ತೀರಿ. ಹಳೆಯ ಅಕೌಂಟ್ (Old bank account) ಬಳಸುವುದನ್ನು ಬಿಟ್ಟುಬಿಡುತ್ತೀರಿ. ಅಥವಾ ಹೊಸ ಕೆಲಸಕ್ಕೆ ಸೇರಿದಾಗ ಅಲ್ಲಿಗೆ ಅಗತ್ಯ ಇರುವ ಬ್ಯಾಂಕ್ ಅಕೌಂಟ್ ಮಾಡಿಸಬಹುದು. ಆಗಲೂ ಕೂಡ ಹಳೆಯ ಬ್ಯಾಂಕ್ ಖಾತೆಯನ್ನು ನೀವು ನಿಲ್ಲಿಸಿಬಿಡಬಹುದು. ಆದರೆ, ನೀವು ಬಹಳ ವರ್ಷಗಳಿಂದ ಬಳಸುತ್ತಾ ಬರುತ್ತಿರುವ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚುವ ಮುನ್ನ ತುಸು ಯೋಚಿಸಿ. ನಿಮ್ಮ ಕ್ರೆಡಿಟ್ ಹಿಸ್ಟರಿ ತುಸು ಮೊಟಕುಗೊಳ್ಳಬಹುದು. ಇದರಿಂದ ಕ್ರೆಡಿಟ್ ಸ್ಕೋರ್ಗೆ ತುಸು ಹಿನ್ನಡೆಯಾಗಬಹುದು.
ಹಳೆಯ ಅಕೌಂಟ್ ಮುಚ್ಚುವುದರಿಂದ ಏನು ಸಮಸ್ಯೆ?
ಬೇರೆ ಬೇರೆ ಬ್ಯಾಂಕುಗಳಿಂದ ನೀವು ಎಷ್ಟೇ ಸಾಲ ಮಾಡಿದರೂ ಅವೆಲ್ಲವೂ ಕೂಡ ನಿಮ್ಮ ಪ್ಯಾನ್ ನಂಬರ್ಗೆ ಲಿಂಕ್ ಆಗಿರುತ್ತವೆ. ಹೀಗಾಗಿ, ಸಾಲ ತೀರಿಸುವಿಕೆಯ ನಿಮ್ಮ ವರ್ತನೆ ಸದಾ ಕಾಲಕ್ಕೂ ಅಚ್ಚಳಿಯದೇ ಇರುತ್ತದೆ. ಆದರೆ, ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ನೀವು ಖಾಯಂ ಆಗಿ ಮುಚ್ಚಿಬಿಟ್ಟರೆ ನಿಮ್ಮ ಕ್ರೆಡಿಟ್ ಹಿಸ್ಟರಿ ಮೊಟಕುಗೊಳ್ಳಬಹುದು.
ಅದರಲ್ಲೂ, ಬಹಳ ವರ್ಷಗಳಿಂದ ನಿಯಮಿತವಾಗಿ ಬಳಸುತ್ತಾ ಬರುತ್ತಿರುವ ಕ್ರೆಡಿಟ್ ಕಾರ್ಡ್ ಅನ್ನು ಸಾಧ್ಯವಾದಷ್ಟೂ ಉಳಿಸಿಕೊಳ್ಳಲು ಯತ್ನಿಸಿ. ಅದಕ್ಕೆ ವಾರ್ಷಿಕ ಶುಲ್ಕ ಅಧಿಕ ಇತ್ತು ಎನಿಸಿದಲ್ಲಿ ಬ್ಯಾಂಕ್ ಜೊತೆ ಮಾತನಾಡಿ, ಆ್ಯನುಯಲ್ ಫೀ ಕಡಿಮೆ ಮಾಡುವಂತೆ ಮನವಿ ಮಾಡಿ. ಸಾಧ್ಯವಾದಷ್ಟೂ ಹಳೆಯ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮುಂದುವರಿಸಲು ಆದ್ಯತೆ ಕೊಡಿ.
ಇದನ್ನೂ ಓದಿ: ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ
ಹೀಗೆ ಮಾಡಿದಾಗ ನಿಮ್ಮ ಕ್ರೆಡಿಟ್ ಹಿಸ್ಟರಿ ಬಹಳ ಉದ್ದವಾಗಿರುತ್ತದೆ. ನೀವು ಸಾಲಕ್ಕೆ ಅರ್ಜಿ ಹಾಕಿದಾಗ ಬ್ಯಾಂಕುಗಳಿಗೆ ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸ ಮೂಡುತ್ತದೆ. ಕಡಿಮೆ ಬಡ್ಡಿದರಕ್ಕೆ ಹೆಚ್ಚಿನ ಮೊತ್ತದ ಸಾಲ ಪಡೆಯಲು ಸಾಧ್ಯವಾಗುತ್ತದೆ.
ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಇತರ ವಿಧಾನಗಳು
ನೀವು ನಿಮ್ಮ ಕ್ರೆಡಿಟ್ ಕಾರ್ಡ್ನಲ್ಲಿ ನಿಗದಿಯಾಗಿರುವ ಕ್ರೆಡಿಟ್ ಲಿಮಿಟ್ ಅನ್ನು ಪೂರ್ಣವಾಗಿ ಬಳಸುತ್ತಿದ್ದರೆ ಆಗ ಹೆಚ್ಚುವರಿ ಕಾರ್ಡ್ಗಳನ್ನು ಪಡೆಯುವ ಅಗತ್ಯತೆ ಇದೆ ಎಂದರ್ಥ. ನಿಮ್ಮ ಎಲ್ಲಾ ಕ್ರೆಡಿಟ್ ಕಾರ್ಡ್ ಸೇರಿ ಇರುವ ಒಟ್ಟು ಕ್ರೆಡಿಟ್ ಲಿಮಿಟ್ನ ಶೇ. 30ಕ್ಕಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸದಂತೆ ನೋಡಿಕೊಳ್ಳಿ. ಇದರಿಂದ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ
ನೀವು ನಾಲ್ಕೈದು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಅವೆಲ್ಲವನ್ನೂ ಸಾಧ್ಯವಾದರೆ ಆ್ಯಕ್ಟಿವ್ ಆಗಿಡಿ. ಆದರೆ, ಸೀಮಿತ ಪ್ರಮಾಣದಲ್ಲಿ ಅವುಗಳನ್ನು ಬಳಸಿರಿ. ಹಾಗೆಯೇ, ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನೂ ಸಕಾಲಕ್ಕೆ ಕಟ್ಟುತ್ತಾ ಹೋಗಿ. ಇದರಿಂದ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ.
ಇದನ್ನೂ ಓದಿ: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ
ಇಎಂಐ ತಪ್ಪಿಸದಿರಿ…
ನೀವು ಬ್ಯಾಂಕ್ನಲ್ಲಿ ಸಾಲ ಪಡೆದಾಗ ಯಾವುದೇ ತಿಂಗಳ ಕಂತನ್ನು ಕಟ್ಟಲು ಮರೆಯಬೇಡಿ. ಒಂದು ತಿಂಗಳು ನೀವು ಒಂದು ದಿನ ತಡವಾಗಿ ಇಎಂಐ ಕಟ್ಟಿದರೂ ಅದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಈಗ ಇಎಂಐ ಪಾವತಿ ಆಟೊಮ್ಯಾಟಿಕ್ ಇರುತ್ತದೆ. ಆದರೆ, ಅಕೌಂಟ್ನಲ್ಲಿ ಆ ದಿನಕ್ಕೆ ಅಷ್ಟು ಹಣ ಇಲ್ಲದಿದ್ದರೆ ಇಎಂಐ ಪಾವತಿ ಫೇಲ್ಡ್ ಎಂದು ಬರುತ್ತದೆ. ಹೀಗಾಗಿ, ಇಎಂಐ ದಿನ ಹತ್ತಿರ ಇದ್ದಂತೆ ಅಕೌಂಟ್ನಲ್ಲಿ ಸಾವಶ್ಯ ಹಣ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Wed, 16 April 25