ಅಟಲ್ ಪೆನ್ಷನ್ ಯೋಜನೆ: ಸದಸ್ಯರ ಸಂಖ್ಯೆ 7.65 ಲಕ್ಷಕ್ಕೆ ಏರಿಕೆ; ಯಾರಿಗೆ ಲಾಭ ಈ ಪಿಂಚಣಿ? ಇಲ್ಲಿದೆ ಮಾಹಿತಿ
Atal Pension Yojana updates: ಅಟಲ್ ಪೆನ್ಷನ್ ಯೋಜನೆಯಲ್ಲಿ ಸಬ್ಸ್ಕ್ರೈಬರ್ಸ್ ಸಂಖ್ಯೆ ಏಪ್ರಿಲ್ವರೆಗೆ 7.65 ಲಕ್ಷದಷ್ಟಾಗಿದೆ. ಸ್ಕೀಮ್ನಲ್ಲಿರುವ ಶೇಖರಣೆಯಾಗಿರುವ ನಿಧಿ 45,974 ಕೋಟಿ ರೂ. 18ರಿಂದ 40 ವರ್ಷದೊಳಗಿನ ವಯಸ್ಸಿನ, ಮತ್ತು ತೆರಿಗೆ ಪಾವತಿದಾರರಲ್ಲದವರು ಅಟಲ್ ಪೆನ್ಷನ್ ಸ್ಕೀಮ್ ಪಡೆಯಬಹುದು. 60 ವರ್ಷದವರೆಗೆ ಪ್ರೀಮಿಯಮ್ ಕಟ್ಟಲು ಅವಕಾಶ ಇದೆ. ಆ ಬಳಿಕ 1,000 ರೂನಿಂದ 5,000 ರೂವರೆಗೆ ಮಾಸಿಕ ಪಿಂಚಣಿ ಸಿಗುತ್ತಾ ಹೋಗುತ್ತದೆ.

ನವದೆಹಲಿ, ಮೇ 16: ಕೇಂದ್ರ ಸರ್ಕಾರ ನಡೆಸುವ ಕೆಲ ಪ್ರಮುಖ ರಿಟೈರ್ಮೆಂಟ್ ಸ್ಕೀಮ್ಗಳಲ್ಲಿ ಅಟಲ್ ಪೆನ್ಷನ್ ಯೋಜನೆಯೂ (APY- Atal Pension Yojana) ಒಂದು. ಇದರ ಸಬ್ಸ್ಕ್ರೈಬರ್ಸ್ ಸಂಖ್ಯೆ 2025ರ ಏಪ್ರಿಲ್ವರೆಗೆ 7.65 ಲಕ್ಷಕ್ಕೇರಿದೆ. ಪಿಂಚಣಿ ನಿಧಿಯಲ್ಲಿರುವ ಒಟ್ಟು ಮೊತ್ತ 45,974.67 ಲಕ್ಷ ಕೋಟಿ ರೂನಷ್ಟಿದೆ. ಒಟ್ಟಾರೆ ಸಬ್ಸ್ಕ್ರೈಬರ್ಗಳಲ್ಲಿ ಶೇ. 48ರಷ್ಟು ಮಹಿಳೆಯರಿರುವುದು ವಿಶೇಷ. 2015ರ ಮೇ 9ರಂದು ಆರಂಭವಾದ ಅಟಲ್ ಪೆನ್ಷನ್ ಯೋಜನೆಯಲ್ಲಿ ಬಹಳ ಸುಲಭ ಹಾಗು ಕಡಿಮೆ ಕಂತುಗಳನ್ನು ಕಟ್ಟಲು ಅವಕಾಶ ಇದೆ. ಸರ್ಕಾರದಿಂದಲೂ ಕೊಡುಗೆ ಇರುತ್ತದೆ.
ಅಟಲ್ ಪೆನ್ಷನ್ ಯೋಜನೆ ವಿವರ
ಅಟಲ್ ಪೆನ್ಷನ್ ಯೋಜನೆ ಅಥವಾ ಎಪಿವೈ ಎಂಬುದು ರಿಟೈರ್ಮೆಂಟ್ ಸೇವಿಂಗ್ ಸ್ಕೀಮ್. 18ರಿಂದ 40 ವರ್ಷದೊಳಗಿನ ವಯಸ್ಸಿನವರು ಈ ಯೋಜನೆ ಆರಂಭಿಸಲು ಅರ್ಹರಿರುತ್ತಾರೆ. ಆದರೆ, ಆದಾಯ ತೆರಿಗೆ ಕಟ್ಟುತ್ತಿರುವ ವರ್ಗದವರಿಗೆ ಈ ಸ್ಕೀಮ್ ಲಭ್ಯ ಇರುವುದಿಲ್ಲ.
ಎಪಿವೈ: ಎಷ್ಟು ಕಟ್ಟಬೇಕು, ಎಷ್ಟು ಪಿಂಚಣಿ ಸಿಗುತ್ತದೆ?
ತಿಂಗಳಿಗೆ 42 ರೂನಿಂದ ಆರಂಭವಾಗಿ 1,454 ರೂವರೆಗೆ ಹಣ ಕಟ್ಟಲು ಅವಕಾಶ ಇದೆ. ಕನಿಷ್ಠ ಹೂಡಿಕೆ ಅವಧಿ 20 ವರ್ಷ ಇದ್ದರೆ, ಗರಿಷ್ಠ ಹೂಡಿಕೆ ಅವಧಿ 42 ವರ್ಷ. ಆದರೆ, 60ನೇ ವಯಸ್ಸಿನವರೆಗೂ ಮಾತ್ರ ಪ್ರೀಮಿಯಮ್ ಕಟ್ಟಬಹುದು.
60 ವರ್ಷವಾದ ಬಳಿಕ ಪೆನ್ಷನ್ ಅವಧಿ ಶುರುವಾಗುತ್ತದೆ. 1,000 ರೂನಿಂದ ಹಿಡಿದು 5,000 ರೂವರೆಗೆ ಮಾಸಿಕ ಪಿಂಚಣಿ ಸಿಗುತ್ತದೆ.
ಇದನ್ನೂ ಓದಿ: ಪರ್ಸನಲ್ ಲೋನ್: ಮೇಲ್ನೋಟಕ್ಕೆ ಗೊತ್ತಾಗದ ಶುಲ್ಕಗಳು ಹಲವು; ನೀವು ತಿಳಿದಿರಬೇಕಾದ ಸಂಗತಿಗಳಿವು..
1,000 ರೂ ಪಿಂಚಣಿ ಪಡೆಯಲು ಎಷ್ಟು ಕಟ್ಟಬೇಕು?
ನೀವು 18 ವರ್ಷ ವಯಸ್ಸಾದ ಬಳಿಕ ಎಪಿವೈನಲ್ಲಿ ಹೂಡಿಕೆ ಆರಂಭಿಸಿದರೆ, ತಿಂಗಳಿಗೆ ಕೇವಲ 42 ರೂ ಕಟ್ಟಬೇಕು. ಈ ರೀತಿ 60ನೇ ವಯಸ್ಸಿನವರೆಗೂ ಕಟ್ಟಿದರೆ ಆ ಬಳಿಕ ತಿಂಗಳಿಗೆ 1,000 ರೂ ಪಿಂಚಣಿ ಸಿಗುತ್ತಾ ಹೋಗುತ್ತದೆ.
2,000 ರೂ ಪಿಂಚಣಿ ಬೇಕೆಂದರೆ ತಿಂಗಳಿಗೆ ಕನಿಷ್ಠ 84 ರೂ ಕಟ್ಟಬೇಕು. ಐದು ಸಾವಿರ ರೂ ಪಿಂಚಣಿ ಸಿಗಬೇಕೆಂದರೆ ತಿಂಗಳಿಗೆ 210 ರೂ ಅನ್ನು 42 ವರ್ಷ ಕಾಲ ಕಟ್ಟಿಕೊಂಡು ಹೋಗಬೇಕು.
ಹೂಡಿಕೆ ಪ್ರವೇಶದ ವಯಸ್ಸು ಹೆಚ್ಚಿದ್ದಾಗ…
ನೀವು ಹೂಡಿಕೆ ಆರಂಭಿಸುವ ವಯಸ್ಸು ಹೆಚ್ಚು ಇದ್ದಲ್ಲಿ, ಅಂದರೆ ಉದಾಹರಣೆಗೆ 40ನೇ ವಯಸ್ಸಿನಲ್ಲಿ ನೀವು ಹೂಡಿಕೆ ಆರಂಭಿಸಿದರೆ, ಆಗ 1,000 ರೂ ಪಿಂಚಣಿ ಪಡೆಯಲು ತಿಂಗಳಿಗೆ 291 ರೂ ಕಟ್ಟಬೇಕಾಗುತ್ತದೆ. 5,000 ರೂ ಪಿಂಚಣಿ ಪಡೆಯಲು 1,454 ರೂ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ:
ಸರ್ಕಾರದ ಕೊಡುಗೆಯೂ ಇರುತ್ತದೆ…
ಇಪಿಎಫ್ನಲ್ಲಿ ಸರ್ಕಾರವು ಬಡ್ಡಿ ಹಣ ಕೊಡುವ ರೀತಿಯಲ್ಲಿ ಅಟಲ್ ಪೆನ್ಷನ್ ಯೋಜನೆಯಲ್ಲೂ ಸರ್ಕಾರದ ಕೊಡುಗೆ ಇರುತ್ತದೆ. ಸದಸ್ಯರ ಒಂದು ವರ್ಷದ ಹೂಡಿಕೆ ಮೊತ್ತದ ಶೇ. 50ರಷ್ಟು ಹಣವನ್ನು ಸರ್ಕಾರ ನೀಡಬಹುದು. ಆದರೆ, ಸರ್ಕಾರದ ಕೊಡುಗೆ ಒಂದು ವರ್ಷದಲ್ಲಿ 1,000 ರೂ ಮೀರುವುದಿಲ್ಲ. ಅಂದರೆ, ಎಪಿವೈನಲ್ಲಿ ನಿಮ್ಮ ವಾರ್ಷಿಕ ಹೂಡಿಕೆಯು 3,000 ರೂ ಇದ್ದಲ್ಲಿ ಸರ್ಕಾರ 1,500 ರೂ ನೀಡುವುದಿಲ್ಲ. 1,000 ರೂ ಕೊಡುಗೆಗೆ ಸೀಮಿತವಾಗಿರುತ್ತದೆ.
ಎಪಿವೈ: ಹೇಗೆ ಪಡೆಯುವುದು?
ಅಟಲ್ ಪೆನ್ಷನ್ ಯೋಜನೆಯನ್ನು ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗಳಲ್ಲಿ ಪಡೆಯಬಹುದು. ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ಅಕೌಂಟ್ ಇದ್ದರೆ ಸಾಕು. ನೀವು 1,000 ರೂನಿಂದ 5,000 ರೂವರೆಗೆ ಐದು ರೀತಿಯ ಪಿಂಚಣಿ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಪ್ರೀಮಿಯಮ್ ನಿಗದಿ ಮಾಡಲಾಗುತ್ತದೆ. ಬ್ಯಾಂಕ್ ಖಾತೆಯಿಂದ ಆಟೊಡೆಬಿಟ್ ಆಯ್ಕೆ ಮಾಡಿಕೊಂಡರೆ ತನ್ನಂತಾನೆ ಹಣ ಕಡಿತವಾಗುತ್ತಾ ಹೋಗುತ್ತದೆ. ನೀವು ತಿಂಗಳಿಗೆ ಬೇಕಾದರೂ ಕಟ್ಟಬಹುದು, ಮೂರು ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ಅಥವಾ ವಾರ್ಷಿಕವಾಗಿಯೋ ಕಟ್ಟುವ ಆಯ್ಕೆಗಳಿರುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








