
ನವದೆಹಲಿ, ನವೆಂಬರ್ 6: ಉದ್ಯಮಿ ಅನಿಲ್ ಅಂಬಾನಿ (Anil Ambani) ಅವರಿಗೆ ಜಾರಿ ನಿರ್ದೇಶನಾಲಯದಿಂದ ಮತ್ತೊಮ್ಮೆ ಸಮನ್ಸ್ ಕೊಡಲಾಗಿದೆ. ಫೆಮಾ ಅಡಿಗೆ ಬರುವ ಪ್ರಕರಣವೊಂದರ ತನಿಖೆ ನಡೆಯುತ್ತಿದ್ದು, ಈ ಸಂಬಂಧ, ನವೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅಂಬಾನಿಗೆ ಸಮನ್ಸ್ ಕೊಡಲಾಗಿದೆ. ಮುಕೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಹಾಗೂ ಅವರ ರಿಲಾಯನ್ಸ್ ಗ್ರೂಪ್ನ ವಿರುದ್ಧ ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ (FEMA- Foreign Exchange Management Act) ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಇಡಿ ತನಿಖೆ ನಡೆಸುತ್ತಿದೆ.
ಬ್ಯಾಂಕ್ ಸಾಲಗಳನ್ನು ಅಕ್ರಮವಾಗಿ ವರ್ಗಾಯಿಸಿರುವ ಗಂಭೀರ ಆರೋಪ ಅನಿಲ್ ಅಂಬಾನಿ ಹಾಗೂ ಅವರ ಸಂಸ್ಥೆಗಳ ಮೇಲೆ ಇದೆ. ಎಸ್ಬಿಐ, ಯೆಸ್ ಬ್ಯಾಂಕ್, ಐಡಿಬಿಐ ಮೊದಲಾದ ಬ್ಯಾಂಕುಗಳಿಂದ ಪಡೆದ ಸಾಲವನ್ನು ಉದ್ದೇಶಿತ ಕೆಲಸಗಳಿಗೆ ಬಳಸದೇ ನಕಲಿ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿ ವಂಚಿಸಿದ ಆರೋಪಗಳಿವೆ. ಒಟ್ಟು 17,000 ಕೋಟಿ ರೂ ಸಾಲ ವಂಚನೆ ನಡೆದಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಇದನ್ನೂ ಓದಿ: ಕೇವಲ 30 ರೂಗೆ ರಾಕೆಟ್ ಸರ್ವಿಸ್; ಚೆನ್ನೈ ಕಂಪನಿಯಿಂದ ಮರುಬಳಕೆಯ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕಾರ
ಬ್ಯಾಂಕ್ ಸಾಲಗಳ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿಗೆ ಸೇರಿದ ಒಟ್ಟು 7,500 ಕೋಟಿ ರೂ ಮೊತ್ತದ ಅಸ್ತಿಪಾಸ್ತಿಗಳನ್ನು ಜಫ್ತಿ ಮಾಡಿದೆ. ಪಿಎಂಎಲ್ಎ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿವೆ.
ಈಗ ನವೆಂಬರ್ 14ಕ್ಕೆ ವಿಚಾರಣೆಗೆ ಹಾಜರಾಗುವಂತೆ ಅನಿಲ್ ಅಂಬಾನಿಗೆ ಸಮನ್ಸ್ ನೀಡಲಾಗಿರುವುದು ಫೆಮಾ ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜನವರಿಯಲ್ಲಿ ಭಾರತದ ಗಗನಯಾನ ಮಿಷನ್; ಮಾನವ ಬದಲು ವ್ಯೋಮಿತ್ರ ಪ್ರಯಾಣ
ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯು ತನಗೆ ನೀಡಲಾಗಿದ್ದ ರಸ್ತೆ ನಿರ್ಮಾಣ ಗುತ್ತಿಗೆಯನ್ನು ಬೇರೆ ಸಂಸ್ಥೆಗೆ ಉಪಗುತ್ತಿಗೆ ಕೊಟ್ಟಿತ್ತು. ಇದರಲ್ಲಿ ವಿದೇಶೀ ವಿನಿಮಯ ನಿರ್ವಹಣಾ ಕಾಯ್ದೆಯ ನಿಯಮಗಳನ್ನು ಪಾಲಿಸದೆ ಅಕ್ರಮ ಎಸಗಲಾಗಿದೆ. 38 ಕೋಟಿ ರೂ ಅಕ್ರಮ ನಡೆದಿದೆ ಎಂಬುದು ತನಿಖೆ ವೇಳೆ ಕಂಡು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಲು ಅಂಬಾನಿಗೆ ಸಮನ್ಸ್ ಕೊಡಲಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ