ನವದೆಹಲಿ, ಫೆಬ್ರುವರಿ 13: ಕಳೆದ ಎರಡು ವರ್ಷದಲ್ಲಿ ನಡೆದ ಅಚ್ಚರಿ ವಿದ್ಯಮಾನಗಳಲ್ಲಿ ಇಲಾನ್ ಮಸ್ಕ್ (Elon Musk) ಅವರು ಟ್ವಿಟ್ಟರ್ ಖರೀದಿ ಮಾಡಿದ್ದೂ ಒಂದು. ಲಾಭವೇ ಇಲ್ಲದ ಒಂದು ಸೋಷಿಯಲ್ ಮೀಡಿಯಾ ತಾಣವನ್ನು ಲಕ್ಷಾಂತರ ಕೋಟಿ ರೂ ಕೊಟ್ಟು ಖರೀದಿಸಿದ್ದು ಯಾಕೆ ಎನ್ನುವ ಪ್ರಶ್ನೆ ಬಹುತೇಕ ಪ್ರತಿಯೊಬ್ಬರನ್ನೂ ಕಾಡುತ್ತಿತ್ತು. ಮೊನ್ನೆ ಬಂದ ಒಂದು ವರದಿ ಈ ಬೆಳವಣಿಗೆ ಹಿಂದಿನ ಕಾರಣ ಬಿಚ್ಚಿಟ್ಟಿದೆ. ತನ್ನ ಪ್ರೈವೇಟ್ ಜೆಟ್ ಅನ್ನು ಟ್ರ್ಯಾಕ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಟ್ವಿಟ್ಟರ್ ಅಕೌಂಟ್ ಅನ್ನು ತೆಗೆದುಹಾಕಲು ನಿರಾಕರಿಸಿದ ಆ ಒಂದು ಘಟನೆ ಇಲಾನ್ ಮಸ್ಕ್ ಅವರನ್ನು ರೊಚ್ಚಿಗೆಬ್ಬಿಸಿತ್ತು. ಪ್ರತೀಕಾರದ ಕ್ರಮವಾಗಿ ಅವರು ಇಡೀ ಟ್ವಿಟ್ಟರ್ ಅನ್ನೇ ಸ್ವಾಹ ಮಾಡಿದರು. ನಷ್ಟದ ಮೇಲೆ ನಷ್ಟ ಕಾಣುತ್ತಿದ್ದ ಟ್ವಿಟ್ಟರ್ ಅನ್ನು 3.4 ಲಕ್ಷ ಕೋಟಿ ರೂ ತೆತ್ತು ಖರೀದಿಸಿದರು. ಒಂದು ರೀತಿಯಲ್ಲಿ ಇಲಿ ಹಿಡಿಯಲು ಗುಡ್ಡವನ್ನೇ ಕೊರೆದಂತಹ ಪರಿಸ್ಥಿತಿ ಇಲಾನ್ ಮಸ್ಕ್ ಅವರದ್ದಾಗಿತ್ತು.
ಬ್ಲೂಮ್ಬರ್ಗ್ನ ಕರ್ಟ್ ವ್ಯಾಗ್ನರ್ ಅವರು ಟ್ವಿಟ್ಟರ್ ಖರೀದಿ ಪ್ರಸಂಗದ ಕುರಿತೇ ‘ಬ್ಯಾಟಲ್ ಫಾರ್ ದಿ ಬರ್ಡ್’ (Battle for the bird) ಎಂಬ ಪುಸ್ತಕ ಬರೆದಿದ್ದಾರೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ಈ ಪುಸ್ತಕದಲ್ಲಿ ಬಹಳ ರೋಚಕ ಪ್ರಸಂಗಗಳ ವಿವರಣೆ ಇದೆ ಎನ್ನಲಾಗಿದೆ.
ಅಮೆರಿಕದ ಜ್ಯಾಕ್ ಸ್ವೀನೀ (Jack Sweeney) ಎಂಬ ಪ್ರೋಗ್ರಾಮರ್ ಇಲಾನ್ ಮಸ್ಕ್ ಅವರ ಜಾಡು ಹಿಡಿಯುವುದನ್ನೇ ಕಾಯಕ ಮಾಡಿಕೊಂಡಂತಿತ್ತು. ಮಸ್ಕ್ ಅವರ ಪ್ರೈವೇಟ್ ಜೆಟ್ ಎಲ್ಲೆಲ್ಲಿ ಹೋಗುತ್ತದೆ ಎಲ್ಲವನ್ನೂ ಇವರು ಟ್ರ್ಯಾಕ್ ಮಾಡುತ್ತಿದ್ದರು. ‘ಇಲಾನ್ಜೆಟ್’ (ElonJet) ಎನ್ನುವ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಎಲ್ಲವನ್ನೂ ಅಪ್ಡೇಟ್ ಮಾಡುತ್ತಿದ್ದರು. ಆಗ ಇಲಾನ್ ಮಸ್ಕ್ ಈ ಖಾತೆಯನ್ನು ನಿಲ್ಲಿಸುವಂತೆ ಟ್ವಿಟ್ಟರ್ಗೆ ಮಾಡಿದ ಮನವಿಗೆ ಸರಿಯಾದ ಸ್ಪಂದನೆ ಸಿಗಲಿಲ್ಲ.
ಇದನ್ನೂ ಓದಿ: ರಿಲಾಯನ್ಸ್ ಇಂಡಸ್ಟ್ರೀಸ್, 20 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್ ಪಡೆದ ಮೊದಲ ಭಾರತೀಯ ಕಂಪನಿ
ಇದರಿಂದ ರೊಚ್ಚಿಗೆದ್ದ ಇಲಾನ್ ಮಸ್ಕ್ ಹಂತ ಹಂತವಾಗಿ ಟ್ವಿಟ್ಟರ್ ಷೇರುಗಳನ್ನು ಖರೀದಿಸತೊಡಗಿದರು. ನಂತರ ಟ್ವಿಟ್ಟರ್ ಖರೀದಿ ಮಾಡುವ ಮಟ್ಟಕ್ಕೆ ಹೋದರು. ಎಲ್ಲವೂ ಕೂಡ ಕೆಲವೇ ತಿಂಗಳ ಅಂತರದಲ್ಲಿ ಘಟಿಸಿ ಹೋಯಿತು. ಒಮ್ಮೆಯೂ ಲಾಭ ತರದ ಟ್ವಿಟ್ಟರ್ ಅನ್ನು ಖರೀದಿಸಲು ಮಸ್ಕ್ 3.39 ಲಕ್ಷ ಕೋಟಿ ರೂ ವ್ಯಯಿಸಿದರು.
ತಾನು ಹೇಳಿದ ಅಕೌಂಟ್ ಅನ್ನು ತೆಗೆಯದ್ದಕ್ಕೆ ಅವರು ಮೊದಲ ಆಕ್ರೋಶ ಇದ್ದದ್ದು ಸಿಇಒ ಪರಾಗ್ ಅಗರ್ವಾಲ್ ಮೇಲೆ. ಟ್ವಿಟ್ಟರ್ ಖರೀದಿಸಿದ ಬಳಿಕ ಅವರು ಮಾಡಿದ ಮೊದಲ ಕೆಲಸವೆಂದರೆ ಸಿಇಒ ಸೇರಿದಂತೆ ಟಾಪ್ ಎಕ್ಸಿಕ್ಯೂಟಿವ್ಗಳನ್ನು ಕೆಲಸದಿಂದ ತೆಗೆದುಹಾಕಿದ್ದರು. ಜೊತೆಗೆ ಬಹಳಷ್ಟು ಉದ್ಯೋಗಿಗಳಿಗೂ ಕೆಲಸ ಹೋಯಿತು.
ಟ್ವಿಟ್ಟರ್ ಖರೀದಿ ಮಾಡಿದ ಬಳಿಕ ಅಕೌಂಟ್ ಮುಚ್ಚುವಂತೆ ಸ್ವತಃ ಜ್ಯಾಕ್ ಸ್ವೀನೀ ಅವರಿಗೆ ಇಲಾನ್ ಮಸ್ಕ್ 5,000 ಡಾಲರ್ ಆಫರ್ ಕೊಟ್ಟರು. ಆದರೆ ತನಗೆ 50,000 ಡಾಲರ್ ಬೇಕು ಎಂದು ಸ್ವೀನಿ ಪಟ್ಟು ಹಿಡಿದರು. ಬಳಿಕ ಜ್ಯಾಕ್ ಸ್ವೀನಿ ಅವರ ಇಲಾನ್ಜೆಟ್ ಅಕೌಂಟ್ ಅನ್ನು ಮಸ್ಕ್ ಮುಚ್ಚಿಸಿದರು. ಆದರೆ, ಸ್ವೀನಿ ಬೇರೆ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಟ್ರ್ಯಾಕಿಂಗ್ ಕೈಂಕರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ: ರಷ್ಯಾ ಯುದ್ಧಕ್ಕೆ ಸಹಾಯ; ಭಾರತದ್ದೂ ಸೇರಿ 20ಕ್ಕೂ ಹೆಚ್ಚು ಕಂಪನಿಗಳಿಗೆ ವ್ಯಾಪಾರ ನಿರ್ಬಂಧಕ್ಕೆ ಯೂರೋಪ್ ಯೋಜನೆ
ಕರ್ಟ್ ವ್ಯಾಗ್ನರ್ ಬರೆದಿರುವ ‘ಬ್ಯಾಟಲ್ ಫಾರ್ ದಿ ಬರ್ಡ್’ ಪುಸ್ತಕ ಫೆಬ್ರುವರಿ 20ರಂದು ಬಿಡುಗಡೆ ಆಗಲಿದೆ. ಅಲ್ಲಿಯವರೆಗೆ ಪ್ರಚಾರಕ್ಕಾಗಿ ಪುಸ್ತಕದ ಕೆಲ ಆಸಕ್ತಿಕರ ವಿಷಯಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲಾಗುತ್ತಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ