
ನ್ಯೂಯಾರ್ಕ್, ಮೇ 17: ತನ್ನ ಮೂಗಿನ ನೇರಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಲಾನ್ ಮಸ್ಕ್ (Elon Musk) ಯಾರ ಮುಲಾಜೂ ಕೂಡ ನೋಡುವವರ ಪೈಕಿ ಅಲ್ಲ. ಇಲಾನ್ ಮಸ್ಕ್ ಟೆಸ್ಲಾ ಕಂಪನಿಯ ಸೂಪರ್ಚಾರ್ಜರ್ (Tesla Super charger) ತಂಡದ ಎಲ್ಲಾ ಸದಸ್ಯರನ್ನೂ ಫೈರ್ ಮಾಡಿದ್ದಾರೆ. ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಕೆಂದು ಸೂಪರ್ ಚಾರ್ಜರ್ ಟೀಮ್ನ ಮುಖ್ಯಸ್ಥೆಗೆ ಮಸ್ಕ್ ತಿಳಿಸಿದ್ದರಂತೆ. ಆ ಕೆಲಸ ಮಾಡಲು ಆಕೆ ನಿರಾಕರಿಸಿದ್ದಕ್ಕೆ ಇಡೀ ತಂಡವನ್ನೇ ಲೇ ಆಫ್ ಮಾಡಿದ್ದಾರೆ ಮಸ್ಕ್.
ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳಿಗೆ ಚಾರ್ಜಿಂಗ್ ಮಾಡುವ ಇನ್ಫ್ರಾಸ್ಟ್ರಕ್ಚರ್ ನಿರ್ಮಾಣದಲ್ಲಿ ಈ ತಂಡದ ಶ್ರಮ ಬಹಳ ಇದೆ. ಆದರೂ ಕೂಡ ಇಡೀ ತಂಡವನ್ನು ಹೊರ ಹಾಕುವಂತಹ ನಿರ್ಧಾರ ಇಲಾನ್ ಮಸ್ಕ್ ಅವರಂಥವರು ಮಾತ್ರವೇ ತೆಗೆದುಕೊಳ್ಳಬಹುದು. ಏಪ್ರಿಲ್ 29ರಂದು ಇಲಾನ್ ಮಸ್ಕ್ ತಮ್ಮ ಸಿಬ್ಬಂದಿಗೆ ಇಮೇಲ್ ಬರೆದು, ಟೆಸ್ಲಾದ ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಿದ ಇಡೀ ತಂಡವನ್ನು ವಿಸರ್ಜಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈಗ ಬಂದಿರುವ ವರದಿಗಳ ಪ್ರಕಾರ ಇಲಾನ್ ಮಸ್ಕ್ ಅವರು ಆ ತಂಡದ ಕೆಲ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡು ಮರುನೇಮಕ ಮಾಡಿಕೊಂಡಿದ್ದಾರೆ ಎಂದು ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ದೊಡ್ಡ ಲೂಸರ್..! ಭಾರತ ಬಿಟ್ಟು ಚೀನಾ ಹಿಡಿದುಕೊಂಡಿದ್ದಕ್ಕೆ ಇಲಾನ್ ಮಸ್ಕ್ರನ್ನು ಟೀಕಿಸಿದ ಅಮೆರಿಕನ್ ಉದ್ಯಮಿ ವಿವೇಕ್ ವಾಧವ
ಏಪ್ರಿಲ್ 28ರಂದು ಟೆಸ್ಲಾದ ಸೂಪರ್ಚಾರ್ಜರ್ ಟೀಮ್ನ ಮುಖ್ಯಸ್ಥೆ ರೆಬೆಕಾ ಟಿನುಚ್ಚಿ ಅವರನ್ನು ಇಲಾನ್ ಮಸ್ಕ್ ಭೇಟಿ ಮಾಡಿದ್ದರಂತೆ. ಒಂದಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಬೇಕೆಂದು ಅವರಿಗೆ ಮಸ್ಕ್ ಸೂಚಿಸಿದ್ದರು. ಈಗಾಗಲೇ ತಂಡದ ಶೇ. 15ರಿಂದ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಮತ್ತಷ್ಟು ಮಂದಿಯನ್ನು ತೆಗೆದುಹಾಕಲು ಆಗುವುದಿಲ್ಲ ಎಂದು ರೆಬೆಕಾ ಹೇಳಿದ್ದಾರೆ. ಇದಾಗಿ ಮರುದಿನವೇ ಇಲಾನ್ ಮಸ್ಕ್ ಏಕಾ ಏಕಿಯಾಗಿ ಇಡೀ ಸೂಪರ್ಚಾರ್ಜರ್ ಟೀಮ್ ಅನ್ನೇ ವಿಸರ್ಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಲೇ ಆಫ್ ಮಾಡುವುದರಲ್ಲಿ ಇಲಾನ್ ಮಸ್ಕ್ ಹೆಚ್ಚು ಕುಖ್ಯಾತರಾಗಿದ್ದಾರೆ. ಟ್ವಿಟ್ಟರ್ ಸಂಸ್ಥೆಯಲ್ಲಿ ಶೇ. 70ಕ್ಕೂ ಹೆಚ್ಚು ಉದ್ಯೋಗಗಳನ್ನು ಅವರು ಕೆಲಸದಿಂದ ತೆಗೆದುಹಾಕಿದ್ದರು. ಏಳು ಸಾವಿರಕ್ಕೂ ಹೆಚ್ಚು ಇದ್ದ ಉದ್ಯೋಗಿಗಳ ಸಂಖ್ಯೆ ಎರಡು ಸಾವಿರದ ಒಳಗೆ ಇಳಿದುಹೋಗಿತ್ತು.
ಇದನ್ನೂ ಓದಿ: ಹಕ್ಕಿ ಲೋಗೊ ಹೋಯ್ತು, ಈಗ ಟ್ವಿಟ್ಟರ್ ಯುಆರ್ಎಲ್ ಕೂಡ ಎಕ್ಸ್ ಆಗಿ ಬದಲಾಯ್ತು
ಹತ್ತಿರಹತ್ತಿರ ಒಂದೂವರೆ ಲಕ್ಷ ಉದ್ಯೋಗಿಗಳಿರುವ ಟೆಸ್ಲಾದಲ್ಲೂ ಅವರು ಒಂದು ಹಂತದಲ್ಲಿ ಶೆ. 20ರಷ್ಟು ಲೇ ಆಫ್ ಮಾಡಲು ಯೋಜಿಸಿದ್ದರು. ಅಂತಿಮವಾಗಿ ಶೇ. 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ