AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡ ಲೂಸರ್​..! ಭಾರತ ಬಿಟ್ಟು ಚೀನಾ ಹಿಡಿದುಕೊಂಡಿದ್ದಕ್ಕೆ ಇಲಾನ್ ಮಸ್ಕ್​ರನ್ನು ಟೀಕಿಸಿದ ಅಮೆರಿಕನ್ ಉದ್ಯಮಿ ವಿವೇಕ್ ವಾಧವ

US Enterpreneur Vivek Wadhwa Warns Elon Musk on China: ಕಳೆದ ತಿಂಗಳು ಭಾರತಕ್ಕೆ ಬರಬೇಕಿದ್ದ ಇಲಾನ್ ಮಸ್ಕ್ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿ ಚೀನಾಗೆ ಹಾರಿ ಹೋಗಿದ್ದರು. ಟೆಸ್ಲಾದ ತುರ್ತು ಕಾರ್ಯಗಳ ನಿಮಿತ್ತ ಭಾರತ ಭೇಟಿಯನ್ನು ರದ್ದು ಮಾಡುತ್ತಿರುವುದಾಗಿ ಮಸ್ಕ್ ಹೇಳಿದ್ದರು. ಟೆಸ್ಲಾ ಮುಖ್ಯಸ್ಥರ ಈ ನಡೆಯನ್ನು ಅಮೆರಿಕನ್ ಭಾರತೀಯ ಉದ್ಯಮಿ ಮತ್ತು ಬರಹಗಾರ ವಿವೇಕ್ ವಾಧವಾ ಕಟುವಾಗಿ ಟೀಕಿಸಿದ್ದಾರೆ. ಚೀನಾದವರು ದೋಚುತ್ತಾರೆ ಎಂದು ನಾನು ಹೇಳಿದರೂ ಕೇಳದೇ ಹೋಗಿರುವ ಮಸ್ಕ್ ಮುಂದೆ ಭಾರೀ ನಷ್ಟ ಅನುಭವಿಸುತ್ತಾರೆ ಎಂದು ವಿವೇಕ್ ಎಚ್ಚರಿಸಿದ್ದಾರೆ.

ದೊಡ್ಡ ಲೂಸರ್​..! ಭಾರತ ಬಿಟ್ಟು ಚೀನಾ ಹಿಡಿದುಕೊಂಡಿದ್ದಕ್ಕೆ ಇಲಾನ್ ಮಸ್ಕ್​ರನ್ನು ಟೀಕಿಸಿದ ಅಮೆರಿಕನ್ ಉದ್ಯಮಿ ವಿವೇಕ್ ವಾಧವ
ಇಲಾನ್ ಮಸ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2024 | 12:17 PM

Share

ನ್ಯೂಯಾರ್ಕ್, ಮೇ 17: ಭಾರತದ ಬದಲು ಚೀನಾದಲ್ಲಿ ಟೆಸ್ಲಾ ಕಾರು ಫ್ಯಾಕ್ಟರಿ ಸ್ಥಾಪಿಸುವ ಇಲಾನ್ ಮಸ್ಕ್ ನಿರ್ಧಾರವನ್ನು ಅಮೆರಿಕನ್ ಬರಹಗಾರ ಮತ್ತು ಉದ್ಯಮಿ ವಿವೇಕ್ ವಾಧವಾ (Vivek Wadhwa) ಕಟುವಾಗಿ ಟೀಕಿಸಿದ್ದಾರೆ. ಇಲಾನ್ ತಮ್ಮ ಈ ನಡೆಯಿಂದಾಗಿ ಭವಿಷ್ಯದಲ್ಲಿ ಬಹಳಷ್ಟು ಕಳೆದುಕೊಳ್ಳಲಿದ್ದಾರೆ ಎಂದು ಅವರ ಎಚ್ಚರಿಸಿದ್ದಾರೆ. ಟೆಸ್ಲಾದಿಂದ ಹಿಡಿದು ಎಕ್ಸ್​ವರೆಗೆ ಹಲವು ಕಂಪನಿಗಳ ಒಡೆಯರಾಗಿರುವ ಇಲಾನ್ ಮಸ್ಕ್ ಭಾರತಕ್ಕೆ ಬಂದು ಪ್ರಧಾನಿಗಳನ್ನು ಭೇಟಿ ಮಾಡಿ ತಮ್ಮ ಹೂಡಿಕೆಗಳನ್ನು ಘೋಷಿಸಬೇಕಿತ್ತು. ಕೊನೆಯ ಕ್ಷಣದಲ್ಲಿ ಅವರು ಭಾರತ ಬಿಟ್ಟು ಚೀನಾ ಕಡೆ ಹೊರಟುಹೋದರು. ಬಹಳ ಜನರಿಗೆ ಇದು ಅಚ್ಚರಿಯ ನಡೆಯಾಗಿತ್ತು.

‘ಕೆಲ ವರ್ಷಗಳ ಹಿಂದೆ ಅವರಿಗೆ ಕಳುಹಿಸಿದ ಇಮೇಲ್​ನಲ್ಲಿ ಚೀನಾ ವಿಚಾರ ಪ್ರಸ್ತಾಪಿಸಿದ್ದೆ. ಚೀನಾದಲ್ಲಿ ಹೂಡಿಕೆ ಮಾಡುವುದರಿಂದ ಇರುವ ಅಪಾಯಗಳ ಬಗ್ಗೆ ಎಚ್ಚರಿಸಿದ್ದೆ. ಚೀನಾದವರು ನಿಮ್ಮನ್ನು ದೋಚುತ್ತಾರೆ. ನಿಮ್ಮ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸುವಂತೆ ಒತ್ತಾಯಿಸಿದ್ದೆ. ನಾನು ಹೇಳಿದಂತೆ ಅವರು ಭಾರತಕ್ಕೆ ಟೆಸ್ಲಾ ಮ್ಯಾನುಫ್ಯಾಕ್ಚರಿಂಗ್ ಅನ್ನು ಶಿಫ್ಟ್ ಮಾಡಿದ್ದರೆ ಇಷ್ಟರಲ್ಲಿ ಮಾರುಕಟ್ಟೆ ಪ್ರಾಬಲ್ಯ ಸಾಧಿಸಬಹುದಿತ್ತು,’ ಎಂದು ವಿವೇಕ್ ವಾಧವಾ ಹೇಳಿದ್ದಾರೆ.

ಇದನ್ನೂ ಓದಿ: Forbes 30 Under 30 List: ಫೋರ್ಬ್ಸ್ ಪಟ್ಟಿಯಲ್ಲಿ ಮಿಂಚುತ್ತಿರುವ ಭಾರತೀಯ ಯುವ ಉದ್ಯಮಿಗಳು

ಏಪ್ರಿಲ್ 22ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲಾನ್ ಮಸ್ಕ್ ಭೇಟಿ ಆಗುವುದಿತ್ತು. ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ 3 ಬಿಲಿಯನ್ ಡಾಲರ್ ಹೂಡಿಕೆಯನ್ನು ಘೋಷಿಸಲು ಅವರು ಅಣಿಯಾಗಿದ್ದರು. ಆದರೆ, ನೋಡನೋಡುತ್ತಿದ್ದಂತೆಯೇ ಅವರು ಟೆಸ್ಲಾದ ತುರ್ತು ವಿಚಾರಗಳು ಇರುವುದರಿಂದ ಭಾರತ ಭೇಟಿ ರದ್ದು ಮಾಡುತ್ತಿರುವುದಾಗಿ ತಿಳಿಸಿ, ಚೀನಾ ಕಡೆ ಹಾರಿದ್ದರು. ಅಲ್ಲಿ ಚೀನಾ ಸರ್ಕಾರ ಟೆಸ್ಲಾಗೆ ಒಂದಷ್ಟು ವಿನಾಯಿತಿ ಕೊಟ್ಟಿದೆ.

ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳು ಚೀನಾದಲ್ಲಿ ತಯಾರಾಗುತ್ತಿವೆಯಾದರೂ ಅಲ್ಲಿ ಈಗ ಚೀನೀ ಕಂಪನಿಗಳ ಪೈಪೋಟಿ ಹೆಚ್ಚಾಗಿದೆ. ಟೆಸ್ಲಾ ಈಗ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ನಂಬರ್ ಒನ್ ಆಗಿ ಉಳಿದಿಲ್ಲ. ಚೀನಾದ ಆಟೊಮೊಬೈಲ್ ಕಂಪನಿಗಳ ಜೊತೆ ಪೈಪೋಟಿ ನಡೆಸುವುದು ಬಹಳ ಕಷ್ಟ ಎಂದು ಇತ್ತೀಚೆಗಷ್ಟೇ ಮಸ್ಕ್ ಒಪ್ಪಿಕೊಂಡಿದ್ದು ಇದೆ. ಆದರೂ ಅವರು ಭಾರತೀಯ ಮಾರುಕಟ್ಟೆಯನ್ನು ಗಂಭೀರವಾಗಿ ತೆಗೆದುಕೊಂಡಂತಿಲ್ಲ.

ಇದನ್ನೂ ಓದಿ: ಈ ಹಣಕಾಸು ವರ್ಷದಲ್ಲೇ 4 ಟ್ರಿಲಿಯನ್ ಡಾಲರ್ ಆರ್ಥಿಕತೆ; ಶೀಘ್ರದಲ್ಲೇ ಜಪಾನ್ ಹಿಂದಿಕ್ಕಲಿದೆ ಭಾರತ: ಸಂಜೀವ್ ಸಾನ್ಯಾಲ್

ಟೆಸ್ಲಾ ಕಂಪನಿ ತನ್ನ ಕಾರಿನಲ್ಲಿ ಸ್ವಯಂಚಾಲನೆಯ ತಂತ್ರಜ್ಞಾನವನ್ನು ಸುಧಾರಿಸಲು ಗಮನ ಕೊಡುತ್ತಿದ್ದಾರೆ. ಇಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂ ಅನ್ನು ಟೆಸ್ಲಾ ಅಭಿವೃದ್ಧಿಪಡಿಸಿದೆ. ಕ್ಯಾಮರಾ, ಸೆನ್ಸಾರ್, ಆ್ಯಕ್ಚುಯೇಟರ್ಸ್ ಇತ್ಯಾದಿಯನ್ನು ಬಳಸಿ ರಸ್ತೆಯಲ್ಲಿ ಕಾರು ಓಡಿಸುವಾಗ ಅಪಘಾತಗಳಾಗದ ಹಾಗೆ ಇವರು ಚಾಲಕರಿಗೆ ಎಚ್ಚರಿಸುವ ಮೂಲಕ ಸಹಾಯ ಮಾಡುತ್ತವೆ. ಇಂಥ ಫೀಚರ್ ಇರುವ ಟೆಸ್ಲಾ ಕಾರುಗಳನ್ನು ವಿಶ್ವದ ಅತಿದೊಡ್ಡ ವಾಹನ ಮಾರುಕಟ್ಟೆಯಾದ ಚೀನಾದಲ್ಲಿ ಬಿಡುಗಡೆ ಮಾಡಲು ಇಲಾನ್ ಮಸ್ಕ್ ಅಣಿಗೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ