ನವದೆಹಲಿ, ಫೆಬ್ರುವರಿ 11: ಉದ್ಯೋಗಿ ಭವಿಷ್ಯ ನಿಧಿ ಅಥವಾ ಪಿಎಫ್ ಸೌಲಭ್ಯ (EPF) ಇರುವ ಉದ್ಯೋಗಿಗಳಿಗೆ ಖುಷಿ ಸುದ್ದಿ ಇದು. ಇಪಿಎಫ್ಒಗೆ ಬಡ್ಡಿದರ ಇನ್ನಷ್ಟು ಹೆಚ್ಚಿಸಲಾಗಿದೆ. 2023-24ರ ಸಾಲಿನ ವರ್ಷದಲ್ಲಿ ಇಪಿಎಫ್ ಠೇವಣಿಗಳಿಗೆ (deposits) ಬಡ್ಡಿದರವನ್ನು ಶೇ. 8.25ಕ್ಕೆ ನಿಗದಿ ಮಾಡಲಾಗಿದೆ. ಹಿಂದಿನ ವರ್ಷದಲ್ಲಿ, ಅಂದರೆ 2022-23ರ ಸಾಲಿನ ವರ್ಷಕ್ಕೆ ಇಪಿಎಫ್ ಬಡ್ಡಿದರ ಶೇ. 8.15ಕ್ಕೆ ನಿಗದಿ ಮಾಡಲಾಗಿದೆ. 2023-24ಕ್ಕೆ ನಿಗದಿ ಮಾಡಲಾಗಿರುವ ಶೇ. 8.25 ಬಡ್ಡಿದರ ಕಳೆದ ಮೂರು ವರ್ಷದಲ್ಲೇ ಗರಿಷ್ಠ ದರವಾಗಿದೆ.
ನಿನ್ನೆ ಶನಿವಾರ ಫೆ. 10ರಂದು ನಡೆದ ಇಪಿಎಫ್ಒನ ಕೇಂದ್ರೀಯ ಟ್ರಸ್ಟೀ ಮಂಡಳಿಯ (ಸಿಬಿಟಿ) 235ನೇ ಸಭೆಯಲ್ಲಿ ಬಡ್ಡಿದರ ಪರಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿಕೆ ನೀಡಿದೆ. ಕೇಂದ್ರ ಕಾನೂನು ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸದ್ಯ ಇಪಿಎಫ್ಒ ನಿಗದಿ ಮಾಡಲಾಗಿರುವ ಈ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯದಿಂದ ಅನುಮೋದನೆ ದೊರೆತ ಬಳಿಕ ಸರ್ಕಾರೀ ಗೆಜೆಟ್ನಲ್ಲಿ ಅಧಿಕೃತವಾಗಿ ನೋಟಿಫೈ ಮಾಡಲಾಗುತ್ತದೆ. ಅದಾದ ಬಳಿಕ ಇಪಿಎಫ್ ಸದಸ್ಯರ ಖಾತೆಗಳಿಗೆ ಬಡ್ಡಿಹಣ ಜಮೆಯಾಗುತ್ತದೆ. ಯಾವಾಗ ಬೇಕಾದರೂ ಹಣ ಜಮೆ ಆಗಬಹುದು. ಸದ್ಯ ಆರು ಕೋಟಿಗೂ ಹೆಚ್ಚು ಇಪಿಎಫ್ ಖಾತೆಗಳಿವೆ.
ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 5 ಬಿಲಿಯನ್ ಡಾಲರ್ನಷ್ಟು ಹೆಚ್ಚಳ
ಕಾರ್ಮಿಕ ಸಚಿವಾಲಯ ನೀಡಿರುವ ಹೇಳಿಕೆ ಪ್ರಕಾರ 2023-24ರ ವರ್ಷ ಸಾಲಿನಲ್ಲಿ ಇಪಿಎಫ್ನ ಠೇವಣಿಗಳ ಮೊತ್ತ 13 ಲಕ್ಷ ಕೋಟಿ ರೂ ಇದೆ. ಸದಸ್ಯರ ಈ ಠೇವಣಿಗಳಿಗೆ ಒಟ್ಟು 1,07,000 ರೂ ಹಣವನ್ನು ಇಪಿಎಫ್ಒ ಸಂದಾಯ ಮಾಡಲು ನಿರ್ಧರಿಸಲಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಇಪಿಎಫ್ ಠೇವಣಿಗಳ ಮೊತ್ತ 11.03 ಲಕ್ಷ ಕೋಟಿ ರೂ ಇತ್ತು. ಅದಕ್ಕೆ 91,151.66 ಕೋಟಿ ರೂ ಬಡ್ಡಿಹಣ ಹಾಕಲಾಗಿತ್ತು. 2023-24ರ ಸಾಲಿನಲ್ಲಿ ಹಾಕಲಾಗಿರುವ ಬಡ್ಡಿ ಹಣ ಇದುವರೆಗಿನ ಗರಿಷ್ಠ ಮೊತ್ತ ಎನಿಸಿದೆ.
ಇಪಿಎಫ್ಒದಲ್ಲಿರುವ ಬಡ್ಡಿಹಣ ಸಾಮಾನ್ಯವಾಗಿ ಬೇರೆ ಉಳಿತಾಯ ಸ್ಕೀಮ್ಗಳಿಗಿಂತ ಹೆಚ್ಚು ಇರುತ್ತದೆ. ಇದಕ್ಕೆ ಕಾರಣ, ಇಪಿಎಫ್ಒ ತನ್ನಲ್ಲಿರುವ ಠೇವಣಿ ಹಣವನ್ನು ಇಟಿಎಫ್ ಫಂಡ್ ಇತ್ಯಾದಿ ಸೂಕ್ತ ಹೂಡಿಕೆಗಳಿಗೆ ವಿನಿಯೋಗಿಸುತ್ತದೆ. ಇದರಿಂದ ಸಿಗುವ ಆದಾಯಕ್ಕೆ ಅನುಗುಣವಾಗಿ ಆ ವರ್ಷದ ಬಡ್ಡಿಹಣ ನಿಗದಿ ಮಾಡಲಾಗುತ್ತದೆ.
ಇದನ್ನೂ ಓದಿ: ಬಿಟ್ಸಿಲಾವನ್ನು ಖರೀದಿಸಿದ ಪೇಟಿಎಂ ಇ-ಕಾಮರ್ಸ್; ಹೆಸರೂ ಕೂಡ ಪೈ ಪ್ಲಾಟ್ಫಾರ್ಮ್ಸ್ ಎಂದು ಬದಲು
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ