Forex: ಭಾರತದ ಫಾರೆಕ್ಸ್ ರಿಸರ್ವ್ಸ್ 5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಭಾರತದ ಫಾರೆಕ್ಸ್ ರಿಸರ್ವ್ಸ್ ಫೆ. 2ಕ್ಕೆ ಅಂತ್ಯಗೊಂಡ ವಾರದಲ್ಲಿ 622.469 ಬಿಲಿಯನ್ ಡಾಲರ್ ಮೊತ್ತ ಮುಟ್ಟಿದೆ. ಈ ಫಾರೆಕ್ಸ್ ಸಂಪತ್ತಿನಲ್ಲಿ ವಿದೇಶೀ ಕರೆನ್ಸಿ ಆಸ್ತಿಯಲ್ಲಿ ಗಣನೀಯ ಹೆಚ್ಚಳವಾಗಿದೆ. ಎಸ್​ಡಿಆರ್ ಕಡಿಮೆಯಾದರೂ ಒಟ್ಟಾರೆ ನಿಧಿ ಹೆಚ್ಚಾಗಿದೆ. 2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ನಿಧಿ 645 ಬಿಲಿಯನ್ ಡಾಲರ್ ತಲುಪಿತ್ತು.

Forex: ಭಾರತದ ಫಾರೆಕ್ಸ್ ರಿಸರ್ವ್ಸ್ 5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ
ಫಾರೆಕ್ಸ್ ರಿಸರ್ವ್ಸ್
Follow us
|

Updated on: Feb 11, 2024 | 7:00 AM

ನವದೆಹಲಿ, ಫೆಬ್ರುವರಿ 11: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ (forex reserves) ಮೊತ್ತ ಫೆಬ್ರುವರಿ 2ರಂದು ಅಂತ್ಯಗೊಂಡ ವಾರದಲ್ಲಿ 5.736 ಬಿಲಿಯನ್ ಡಾಲರ್​ನಷ್ಟು ಹೆಚ್ಚಳಗೊಂಡಿದೆ. ಈ ಮೂಲಕ 622.469 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿದೆ. ಹಿಂದಿನ ವಾರದಲ್ಲೂ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ 591 ಮಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿತ್ತು. ಅದಕ್ಕೂ ಹಿಂದಿನ ವಾರದಲ್ಲಿ ಫಾರೆಕ್ಸ್ ನಿಧಿಯಲ್ಲಿ ಸ್ವಲ್ಪ ಇಳಿಕೆಯಾಗಿತ್ತು. ಒಟ್ಟಾರೆ ಇತ್ತೀಚಿನ ಕೆಲ ತಿಂಗಳುಗಳಿಂದ ಫಾರೆಕ್ಸ್ ಸಂಪತ್ತು ಹೆಚ್ಚುತ್ತಿದೆ.

ಫೆಬ್ರುವರಿ 2ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ನಿಧಿಯಲ್ಲಿ ಆದ ಹೆಚ್ಚಳದಲ್ಲಿ ಫಾರೀನ್ ಕರೆನ್ಸಿ ಸಂಪತ್ತಿನ ಪಾಲು ಹೆಚ್ಚು. ಎಸ್​ಡಿಆರ್, ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಕಡಿಮೆ ಆದರೂ ಒಟ್ಟಾರೆ ಮೀಸಲು ನಿಧಿ ಗಣನೀಯವಾಗಿ ಏರಿಕೆ ಆಗಿದೆ.

ಭಾರತದ ಫಾರೆಕ್ಸ್ ಮೀಸಲು ನಿಧಿ (ಫೆ. 2ಕ್ಕೆ)

ಒಟ್ಟು ಮೀಸಲು ನಿಧಿ: 622.469 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ ಆಸ್ತಿ: 55.331 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 48.088 ಬಿಲಿಯನ್ ಡಾಲರ್
  • ಎಸ್​ಡಿಆರ್: 18.19 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿನ ಮೀಸಲು: 4.86 ಬಿಲಿಯನ್ ಡಾಲರ್

2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ನಿಧಿ 645 ಬಿಲಿಯನ್ ಡಾಲರ್ ಮುಟ್ಟಿತ್ತು. ಅದು ಈವರೆಗಿನ ಸರ್ವಾಧಿಕ ಮೊತ್ತ ಎನಿಸಿದೆ.

ಇದನ್ನೂ ಓದಿ: ಸೂರ್ಯೋದಯ್ ಸ್ಕೀಮ್: ಮನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತರಲು ಎಷ್ಟು ವೆಚ್ಚವಾಗುತ್ತೆ? ಇಲ್ಲಿದೆ ಡೀಟೇಲ್ಸ್

ಫಾರೆಕ್ಸ್ ರಿಸರ್ವ್ಸ್ ಎಂದರೇನು?

ಫಾರೆಕ್ಸ್ ರಿಸರ್ವ್ಸ್ ಅಂದರೆ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್. ವಿದೇಶೀ ವಿನಿಮಯ ಮೀಸಲು ನಿಧಿ. ತಮ್ಮ ದೇಶದ ಕರೆನ್ಸಿ ಮೌಲ್ಯ ಕುಸಿದರೆ ಅದಕ್ಕೆ ಬ್ಯಾಕಪ್ ಆಗಿ ಸೆಂಟ್ರಲ್ ಬ್ಯಾಂಕ್ ಒಂದಷ್ಟು ವಿದೇಶೀ ಕರೆನ್ಸಿ, ಚಿನ್ನ ಇತ್ಯಾದಿ ಆಸ್ತಿಗಳನ್ನು ಇಟ್ಟುಕೊಳ್ಳುತ್ತದೆ. ಈ ಆಸ್ತಿಯೇ ಫಾರೆಕ್ಸ್ ಮೀಸಲು ನಿಧಿ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಯುಎಸ್ ಡಾಲರ್ ಬಳಕೆ ಹೆಚ್ಚಿರುವುದರಿಂದ ಹೆಚ್ಚಿನ ದೇಶಗಳ ಫಾರೆಕ್ಸ್ ನಿಧಿಯಲ್ಲಿ ಅಮೆರಿಕದ ಡಾಲರ್ ಕರೆನ್ಸಿಯೇ ಅಧಿಕ ಇರುತ್ತದೆ. ಭಾರತದ ಫಾರೆಕ್ಸ್ ಮೀಸಲು ನಿಧಿಯಲ್ಲಿ ವಿದೇಶೀ ಕರೆನ್ಸಿಗಳ ಆಸ್ತಿ, ಚಿನ್ನದ ಸಂಗ್ರಹ, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಮತ್ತು ಐಎಂಎಫ್​ನೊಂದಿಗಿನ ನಿಧಿ ಇವಿಷ್ಟೂ ಇರುತ್ತದೆ. ಇವುಗಳಲ್ಲಿ ಬಹುಪಾಲು ವಿದೇಶೀ ಕರೆನ್ಸಿ ಆಸ್ತಿಯೇ ಇರುತ್ತದೆ. ವಿಶ್ವದಲ್ಲಿ ಅತಿಹೆಚ್ಚು ಫಾರೆಕ್ಸ್ ನಿಧಿ ಇರುವುದು ಚೀನಾದಲ್ಲಿ. 3.5 ಟ್ರಿಲಿಯನ್ ಡಾಲರ್​ನಷ್ಟು ಮೌಲ್ಯದ ಫಾರೆಕ್ಸ್ ನಿಧಿಯನ್ನು ಅದು ಹೊಂದಿದೆ. ಜಪಾನ್, ಸ್ವಿಟ್ಜರ್​ಲ್ಯಾಂಡ್ ಟಾಪ್-3ನಲ್ಲಿವೆ. ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ